ತಮ್ಮ ಪ್ರಬುದ್ಧ ಸಂಗೀತ ಜ್ಞಾನದ ಮೂಲಕ ಸಂಗೀತ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿದವರು ಪ್ರಭಾ ಅತ್ರೆ. ಸಂಗೀತವನ್ನು ಕಲೆಯಾಗಿ ಮಾತ್ರವಲ್ಲ, ಜ್ಞಾನದ ಮೂಲವಾಗಿಯೂ ಕಂಡುಕೊಂಡ ಅಪರೂಪದ ಕಲಾವಿದೆ ಅವರು. ಇತ್ತೀಚೆಗೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಭೂಮಿಜಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾನಲಹರಿ ಹರಿಸಲು ಬಂದಿದ್ದರು. ಈ ವೇಳೆ ತಮ್ಮ ಸಂಗೀತ ಪಯಣದ ಕುರಿತು ಅವರು ಹಂಚಿಕೊಂಡ ಮಾತಿನ ಹರಿವು ಇಲ್ಲಿದೆ.
*ಸಂಗೀತ ಕುಟುಂಬದ ಹಿನ್ನೆಲೆ ನಿಮ್ಮದಲ್ಲ, ಆದಾಗ್ಯೂ ಸಂಗೀತ ಸಂಗಾತಿಯಾದುದು ಹೇಗೆ?
ಆಕಸ್ಮಿಕ. ನನ್ನ ಜೀವನದಲ್ಲಿ ಸಂಗೀತ ಸೇರಿಕೊಳ್ಳಲು ನನ್ನ ತಾಯಿಯ ಅನಾರೋಗ್ಯ ಕಾರಣವಾಯಿತು. ಅಮ್ಮನ ಮನಸ್ಸನ್ನು ಪ್ರಸನ್ನಗೊಳಿಸಲು ಯಾವುದಾದರೂ ಸಂಗೀತ ತರಗತಿಗೆ ಸೇರಿಸುವಂತೆ ನನ್ನ ತಂದೆಗೆ ಯಾರೊ ಸಲಹೆ ಕೊಟ್ಟಿದ್ದರು. ಅಮ್ಮನಿಗೆ ಹಾರ್ಮೋನಿಯಂ ಹೇಳಿಕೊಡಲು ಶಿಕ್ಷಕರೊಬ್ಬರನ್ನು ನೇಮಕ ಮಾಡಲಾಯಿತು. ಕೆಲವೇ ದಿನಗಳಲ್ಲಿ ಅಮ್ಮ ತನಗೆ ಈ ಹಾರ್ಮೋನಿಯಂ ಕಲಿಯಲು ಸಾಧ್ಯವೇ ಇಲ್ಲ ಎಂದರು. ಶಿಕ್ಷಕರಿಗೆ ಬೇಡ ಎಂದು ಹೇಳಲಾಗದೇ ಅಮ್ಮನ ಜಾಗದಲ್ಲಿ ನನ್ನನ್ನು ಒಯ್ದು ಕೂರಿಸಿದರು.
*ನಂತರದ ಸಂಗೀತ ಪಯಣ ಹೇಗೆ ಸಾಗಿತು?
ಆಗ ಪುಣೆಯಲ್ಲಿ ಸಂಗೀತದ ದೊಡ್ಡ ಪರಂಪರೆಯೇ ಇತ್ತು. ಆರಂಭದಲ್ಲಿ ವಿಜಯ್ ಕರಂದಿಕರ್ ಅವರಲ್ಲಿ ಶಾಸ್ತ್ರೀಯ ಸಂಗೀತ ಕಲಿತೆ. ನಂತರ ಕಿರಾಣಾ ಘರಾಣೆಯ ಪ್ರಸಿದ್ಧ ಸಂಗೀತಗಾರ ಸುರೇಶ್‌ಬಾಬು ಮಾನೆ ಮತ್ತು ಹೀರಾಬಾಯಿ ಬಡೋದೇಕರ್ ಬಳಿಗೆ ಹೋದೆ. 1960ರಲ್ಲಿ ನಾಗ್ಪುರದ ಆಕಾಶವಾಣಿ ಕೇಂದ್ರದಲ್ಲಿ ಕೆಲಸಕ್ಕೆ ಸೇರಿದ ಮೇಲೆ ನನ್ನ ಸಂಗೀತಕ್ಕೆ ಹೊಸದೊಂದು ಪ್ರಪಂಚವೇ ತೆರೆದುಕೊಂಡಂತಾಯಿತು.
*ನಿಮ್ಮ ಪ್ರೀತಿಯ ರಾಗ ಯಾವುದು? ಯಾಕೆ?
ನನಗೆ ಯಮನ್, ಭೈರವ್ ರೀತಿಯ ಮೂಲ (ಜನಕ/ಸ್ವಯಂಭು) ರಾಗಗಳು ಹೆಚ್ಚು ಪ್ರಿಯ. ಅದರಲ್ಲೂ ಯಮನ್ ರಾಗದೊಂದಿಗೆ ಬಾಲ್ಯದ ಸವಿ ನೆನಪುಗಳು ಬೆರೆತುಕೊಂಡಿವೆ. ಮೊಟ್ಟ ಮೊದಲು ಕಲಿತ ರಾಗ ಅದು.
*‘ಸರಗಮ್’ ಪಿಎಚ್.ಡಿ. ಅಧ್ಯಯನಕ್ಕೆ ಪ್ರೇರಣೆ ಆಗಿದ್ದು ಹೇಗೆ?
ಅದರ ಶ್ರೇಯಸ್ಸು ನಮ್ಮ ಸಂಗೀತ ವಿಮರ್ಶಕರಿಗೆ ಸಲ್ಲಬೇಕು. 1960ರ ಸುಮಾರಿಗೆ ನಾನು ನನ್ನ ಕಾರ್ಯಕ್ರಮಗಳಲ್ಲಿ ಸರಗಮ್ ಬಳಸಲು ಶುರು ಮಾಡಿದಾಗ ಮಹಾರಾಷ್ಟ್ರದ ಕೆಲವು ವಿಮರ್ಶಕರು ಹಾಗೂ ವಿದ್ವಾಂಸರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಸರಗಮ್‌ನ ವಿವಿಧ ಮಗ್ಗಲು, ಅದರ ಮೂಲ, ವಿಕಾಸ, ಸಂಗೀತಾಭ್ಯಾಸದಲ್ಲಿ ಅದರ ಉಪಯುಕ್ತತೆ, ಸಂಗೀತ ಪ್ರದರ್ಶನವನ್ನು ಶ್ರೀಮಂತಗೊಳಿಸುವ ಅದರ ಒಟ್ಟಾರೆ ಅಭಿವ್ಯಕ್ತಿ, ಸರಗಮ್ ಪ್ರಸ್ತುತಿಯಲ್ಲಿನ ವಿವಿಧ ಶೈಲಿಗಳು, ವಿವಿಧ ಪ್ರಕಾರಗಳಿಗೆ ಒಗ್ಗಿಕೊಳ್ಳುವ ಅದರ ಕ್ಷಮತೆ ಇತ್ಯಾದಿ ಬೇರೆ ಬೇರೆ ಅಂಶಗಳ ಬಗೆಗೆ ಚಿಂತನೆಗೈಯುವಂತೆ ಮಾಡಿದವರು ಅವರೇ, ಇದೇ ಪಿಎಚ್.ಡಿಗೆ ಪ್ರೇರಣೆ ಆಯಿತು.
*ಸರಗಮ್‌ನ ಮೇಲೆ ವಿಮರ್ಶಕರ ಮುನಿಸೇಕೆ?
ಅದು ಅವರಿಗೇ ಗೊತ್ತು. ಸಂಗೀತ ಸಾಮಗ್ರಿಗಳಲ್ಲಿ ಆಲಾಪ್, ತಾನ್, ಬೋಲ್‌ಗಳಂತೆಯೇ ಸರಗಮ್‌ಗೆ ತನ್ನದೇ ಆದ ವ್ಯಕ್ತಿತ್ವವಿದೆ, ಕರ್ತವ್ಯವಿದೆ, ಅಸ್ತಿತ್ವವಿದೆ, ವಿಶಿಷ್ಟ ಪರಿಣಾಮವಿದೆ; ಸರಗಮ್ ಸ್ವತಃ ಒಂದು ಶುದ್ಧ ಸಂಗೀತ ಸಾಮಗ್ರಿ ಎನ್ನುವುದನ್ನು ಅರಿಯಲು ಈ ಸಂಗೀತಗಾರರು, ಟೀಕಾಕಾರರು ವಿಫಲರಾಗಿದ್ದಾರೆ ಎನ್ನುವುದೇ ನನ್ನ ವಿವರಣೆ. ಸರಗಮ್‌ನ್ನು ವಿಚಾರಪೂರ್ವಕವಾಗಿ, ಸೌಂದರ್ಯಪೂರ್ವಕವಾಗಿ ಹಾಡಬೇಕು ಇಲ್ಲವೆ ಅದು ರಸಹೀನ. ಇದು ಸರಗಮ್‌ನ ಒಂದು ಮಿತಿ ಅಷ್ಟೆ. ಸಂಗೀತಗಾರರ ಮಿತಿ ಅಲ್ಲ. ಅಲ್ಲದೇ, ಸರಗಮ್ ಹಾಡುವುದು, ಬಿಡುವುದು ಪ್ರತಿಯೊಬ್ಬ ಸಂಗೀತಗಾರನ ಇಚ್ಛೆಗೆ ಬಿಟ್ಟಿದ್ದು. ಸರಗಮ್ ಬಳಕೆಯ ವಿರೋಧ ನಿಲ್ಲಬೇಕು ಅಷ್ಟೆ.
*ಸಂಗೀತಗಾರರು ಬೇರೆ ದೇಶಗಳ ಸಂಗೀತವನ್ನು ಪರಿಚಯಿಸಿಕೊಳ್ಳಬೇಕಾದ ಅಗತ್ಯವಿದೆಯೇ?
ಹೌದು, ತಾಂತ್ರಿಕ ಯುಗ ಸತತವಾಗಿ ನಮ್ಮನ್ನು ಹತ್ತಿರ ಹತ್ತಿರ ತರುತ್ತಿದೆ. ಆದ್ದರಿಂದ ಇತ್ತೀಚಿನ ವರ್ಷಗಳಲ್ಲಿ ನಮ್ಮ ಆಸಕ್ತಿಗಳು ಹೆಚ್ಚು ಹೆಚ್ಚು ಅಂತರರಾಷ್ಟ್ರೀಯ ವ್ಯಾಪ್ತಿ ಪಡೆದಿವೆ. ಆರಾಮವಾಗಿ ಮತ್ತು ಉತ್ತಮವಾಗಿ ಬದುಕಲಲ್ಲದೆ, ಅನನ್ಯತೆ ಉಳಿಸಿಕೊಂಡು ಬದುಕುಳಿಯಲು, ಪರಸ್ಪರರನ್ನು ಅರಿತುಕೊಳ್ಳಲು ಬೇರೆ ಬೇರೆ ದೇಶಗಳ ಸಂಗೀತ ಆಲಿಸುವುದು ನಮ್ಮ ಸಂಗೀತದ ಚಿಂತನೆ, ಸೃಜನಶೀಲತೆಗೆ ಸ್ಫೂರ್ತಿ ನೀಡುತ್ತದೆ.
*ಶಾಸ್ತ್ರೀಯ, ಕರ್ನಾಟಕ, ಸುಗಮ ಸಂಗೀತಗಳ ನಡುವೆ ಗಜಲ್‌ನ ಮಹತ್ವವೇನು?
ಶಾಸ್ತ್ರೀಯ ಮತ್ತು ಸುಗಮ ಸಂಗೀತ ಎರಡೂ ಒಂದಕ್ಕೊಂದು ಪೂರಕ. ಶಾಸ್ತ್ರೀಯ ಸಂಗೀತದಲ್ಲಿ ನಿಯಮಗಳ ಚೌಕಟ್ಟಿನಲ್ಲಿ ಇದ್ದುಕೊಂಡೂ ಸ್ವತಂತ್ರ ವಿಚಾರಕ್ಕೆ ಮತ್ತು ರಾಗ ಪ್ರಸ್ತುತಿಯಲ್ಲಿ ನಾವೀನ್ಯಕ್ಕೆ, ವೈಯಕ್ತಿಕ ಅಭಿವ್ಯಕ್ತಿಗೆ ವಿಪುಲ ಅವಕಾಶವಿದೆ. ಸುಗಮ ಪ್ರಭೇದಗಳಲ್ಲಿ ಶಬ್ದಗಳು ಮತ್ತು ಭಾವನಾತ್ಮಕ ವಸ್ತು ಕಟ್ಟಿಹಾಕುತ್ತವೆ. ಗಜಲ್ ಗಾಯನದಲ್ಲಿ ಕಾವ್ಯ ಮುಖ್ಯವಾಗುತ್ತದೆ. ಆ ಕಾವ್ಯದಲ್ಲಿನ ಆಕೃತಿ, ಅರ್ಥ ಎರಡೂ ಸಶಕ್ತವಾಗಿರುತ್ತವೆ. ಈಗ ಕಾರ್ಯಕ್ರಮಗಳಲ್ಲಿ ಗಜಲ್ ಹಾಡುವುದನ್ನು ಬಿಟ್ಟರೂ ಮನೆಯಲ್ಲಿ, ಖಾಸಗಿ ಮೆಹಫಿಲ್‌ಗಳಲ್ಲಿ ಗಜಲ್ ಹಾಡುತ್ತೇನೆ.
*ಫ್ಯೂಷನ್–ಚಲನಚಿತ್ರ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯ?
ಸಂಗೀತದ ಸಂದರ್ಭದಲ್ಲಿ ವಿಭಿನ್ನ ಸಂಸ್ಕೃತಿಗಳು ಒಟ್ಟಿಗೆ ಬಂದ ಪರಿಣಾಮವಾಗಿ ನಿರ್ಮಿತಗೊಂಡ ಬೇರೆಯ, ಹೊಸ ಸಂಗೀತ ಪ್ರಕಾರ ಫ್ಯೂಷನ್ ಸಂಗೀತ. ಭಾರತೀಯ ಚಲನಚಿತ್ರ ಸಂಗೀತ ಫ್ಯೂಷನ್ ಪರಿಕಲ್ಪನೆಯನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೆ. ನನ್ನ ಪ್ರಕಾರ ಸಂಗೀತದಲ್ಲಿ ಎರಡೇ ವಿಧ- ಒಳ್ಳೆಯದು ಮತ್ತು ಕೆಟ್ಟದ್ದು. ನಿಮಗೆ ಗೊತ್ತಿರುವಂತೆ ಎಲ್ಲ ಶಾಸ್ತ್ರೀಯ ಸಂಗೀತ ಒಳ್ಳೆಯದಾಗಿರುವುದಿಲ್ಲ. ಅದರಂತೆಯೇ, ಎಲ್ಲ ಚಲನಚಿತ್ರ ಸಂಗೀತವೂ ಕೆಟ್ಟದ್ದಲ್ಲ.
*ಪಾಪ್, ಡಿಸ್ಕೊ ತರಹದ ಅಬ್ಬರದ ಸಂಗೀತದ ಬಗ್ಗೆ ಏನು ಹೇಳುವಿರಿ?
ನಿಜ, ಪಾಪ್ ಮತ್ತು ಡಿಸ್ಕೊ ಸಂಗೀತ ಅಬ್ಬರವೆನಿಸುತ್ತದೆ; ಕೆಲವೊಮ್ಮೆ ಕರ್ಕಶ ಕೂಡ. ಆದರದು ಶ್ರೀಸಾಮಾನ್ಯನನ್ನು ಸಂಗೀತದತ್ತ ತಿರುಗಿಸಿದೆ. ಕಾಲಕ್ರಮೇಣ, ಈ ಪ್ರಕಾರವೂ ಪಕ್ವಗೊಂಡು ಜನರಿಗೆ ನಾದ ಮತ್ತು ಲಯದ ಸೌಂದರ್ಯದ ಅರಿವು ಮೂಡಿಸಬಹುದು.
*ಇಂದು ಹೊಸ ರಾಗಗಳನ್ನು ರಚಿಸುವ ಕಲಾವಿದರ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಿದೆ. ರಾಗಗಳ ಅಷ್ಟು ಅವಶ್ಯಕತೆ ಇದೆಯೆ?
ನಮ್ಮಲ್ಲಿ ಪಾರಂಪಾರಿಕ ರಾಗಗಳ, ಮತ್ತು ಅವುಗಳಲ್ಲಿನ ಬಂದಿಶ್‌ಗಳ ದೊಡ್ಡ ಭಂಡಾರವಿದೆ. ಆದಾಗ್ಯೂ ಕಲಾವಿದನ ಸೃಜನಶೀಲತೆಯೂ ಸಹ ಸತತವಾಗಿ ಹೊಸತನದ ಶೋಧದಲ್ಲಿರುತ್ತದೆ. ಕಲಾವಿದನಿಗೆ ಅನೇಕ ಬಾರಿ ಹೊಸತೇನನ್ನೋ ಸಾದರೀಕರಿಸಬೇಕೆನ್ನುವ ಬಯಕೆ ಇರುತ್ತದೆ. ಹಾಗಾಗಿ ಪ್ರತಿ ತಲೆಮಾರಿನ ಕಲಾವಿದರು ಹೊಸ ರಾಗಗಳನ್ನು ರಚಿಸಿದ್ದಾರೆ. ನಾನು ಕೂಡ ಅನೇಕ ಹೊಸ ರಾಗಗಳನ್ನು ರಚಿಸಿದ್ದೇನೆ.
*ಇಂದಿನ ಕಲಾವಿದರು ಪಾರಂಪರಿಕ ರಾಗಗಳ ಮತ್ತು ಬಂದಿಶ್‌ಗಳ ಪ್ರಸ್ತುತಿಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾರೆ ಎನ್ನುವ ಮಾತಿದೆಯಲ್ಲ?
ಅಭಿವ್ಯಕ್ತಿ ಸ್ವಾತಂತ್ರ್ಯದ ಚಳವಳಿ ಶಾಸ್ತ್ರೀಯ ಸಂಗೀತ ಕ್ಷೇತ್ರವನ್ನೂ ಹೊಕ್ಕಿದೆ. ಹೀಗಾಗಿ ಇಂದು ಯಾವುದೇ ರೀತಿಯ ನಿಯಮ, ಕಟ್ಟುಪಾಡು ಉಳಿದಿಲ್ಲ. ಯಾರು ಯಾರನ್ನು ವಿಚಾರಿಸಲು ಸಾಧ್ಯ? ಕೇಳುವವರಾರು ಮತ್ತು ಏಕೆ ಕೇಳುವರು? ಕೆಲವು ಕಲಾವಿದರು ರಾಗದ ಚಲನೆ ಮತ್ತು ಅದರ ನಿಯಮಗಳಿಂದ ಹಿಡಿದು ಅತಿ ಸ್ವಾತಂತ್ರ್ಯ ತೆಗೆದುಕೊಳ್ಳುತ್ತಾರೆ. ಅಂತಹ ಸಂದರ್ಭದಲ್ಲಿ ಆ ರಾಗದ ಹೆಸರಿನ ಹಿಂದೆ ‘ಮುಕ್ತ’ ಎಂಬ ಶಬ್ದ ಜೋಡಿಸಬೇಕೆಂದು ನನ್ನ ಅಭಿಪ್ರಾಯ.
*ದೀಪಕ್ ರಾಗ ಹಾಡಿದಾಗ ದೀಪ ಹತ್ತುತ್ತದೆ, ಮಲ್ಹಾರ ಹಾಡಿದಾಗ ಮಳೆ ಬರುತ್ತದೆ... ಇಂತಹ ಕಥೆಗಳನ್ನು ನೀವು ಸಮರ್ಥಿಸುತ್ತೀರಾ?
ನಾದದಲ್ಲಿ ಖಂಡಿತವಾಗಿಯೂ ಶಕ್ತಿ ಇದೆ. ಮನಸ್ಸಿನ, ನಿಸರ್ಗದ ಮೇಲೆ ಅದರ ಪರಿಣಾಮ ಕಂಡುಬರುತ್ತದೆ. ಹಿಂದಿನ ಸಂಗೀತ ಸಾಧಕರಲ್ಲಿ ಬಹುಶಃ ಅಂತಹ ಶಕ್ತಿ ಇದ್ದಿರಬಹುದು. ಭವಿಷ್ಯದಲ್ಲಿ ನಾದದ ವಿಶಿಷ್ಟ ಸಂಯೋಗದಿಂದ ಮಳೆ ಬೀಳಲೂಬಹುದು. ಆದರೆ ಸದ್ಯಕ್ಕಂತೂ ಕಲಾವಿದರು ಹಾಡಿ ಮಳೆ ತಂದದ್ದು, ದೀಪ ಹೊತ್ತಿಸಿದ್ದು ನಾನು ನೋಡಿಲ್ಲ. ಆ ಪ್ರಯತ್ನವನ್ನೂ ನಾನು ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.