ಭಾದ್ರಪದ ಮಾಸ, ಹಬ್ಬಗಳ ಸಾಲು ಮುಗಿದು, ಮಹಾನವಮಿಯ ಸಂಭ್ರಮ ಆರಂಭವಾಗುವ ನಡುವೆ ಬೆಂಗಳೂರಿನಲ್ಲಿ ಸಾಹಿತ್ಯೋತ್ಸವದ ಸಡಗರ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದೇ 27ರಿಂದ 29ರವರೆಗೆ ಬೆಂಗಳೂರು ಸಾಹಿತ್ಯ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಆಯೋಜಕರಾದ ವಿಕ್ರಮ್ ಸಂಪತ್ ‘ಮೆಟ್ರೊ’ ಜೊತೆ ಮಾತನಾಡಿದ್ದಾರೆ.
ಸಾಹಿತ್ಯ ಉತ್ಸವಕ್ಕೆ ಸೆ.27, 28, 29ನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುವುದು?
ಯಾವುದೇ ಸಂಖ್ಯಾಶಾಸ್ತ್ರದ ಒಲವು ಈ ದಿನಗಳ ಹಿಂದಿಲ್ಲ. ಆದರೆ ಬೆಂಗಳೂರಿನ ಹವಾಮಾನ, ಹಬ್ಬಗಳ ಸಾಲು, ಪರೀಕ್ಷೆಯ ಒತ್ತಡ ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡು ಈ ದಿನಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ.
ಈ ಸಲದ ವಿಶೇಷವೇನು?
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲವೂ ಇಮ್ಮಡಿಯಾಗಿದೆ. ಪರ್ಯಾಯ ವೇದಿಕೆಗಳ ಸೃಷ್ಟಿಯಾಗಿದೆ. ಕಳೆದ ವರ್ಷ 60 ಜನ ಲೇಖಕರು ಪಾಲ್ಗೊಂಡಿದ್ದರು. ಈ ವರ್ಷ 120 ಜನ ಸಾಹಿತಿಗಳು ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳಿಗಾಗಿ ವಿಶೇಷ ವೇದಿಕೆಯನ್ನೇ ರೂಪಿಸಲಾಗಿದೆ. ಇವೆಲ್ಲವೂ ವಿಶೇಷ.
ಹಬ್ಬದಲ್ಲಿ ಪಾಲ್ಗೊಳ್ಳುವ ಲೇಖಕರು?
ಈ ಸಲ ಕನ್ನಡದೊಂದಿಗೆ ವಿಶ್ವ ಸಾಹಿತ್ಯವನ್ನೂ ಚರ್ಚೆಗೆ ತರಲಾಗುತ್ತಿದೆ. ಇರಾನ್, ಜರ್ಮನಿ, ಲಂಡನ್, ಪಾಕಿಸ್ತಾನದಿಂದಲೂ ಸಾಹಿತಿಗಳು ಆಗಮಿಸುತ್ತಿದ್ದಾರೆ. ಜೊತೆಗೆ ಕನ್ನಡದ ಸೊಗಡೂ ಇರಲಿ ಎಂಬುದು ನಮ್ಮಾಸೆಯಾಗಿತ್ತು. ಅದು ಈ ವರ್ಷ ಹದವಾಗಿ ಬೆರೆತಿದೆ ಎಂಬುದೇ ಸಂತಸದ ಸಂಗತಿ.
ಸಿನಿಮಾ ಮತ್ತು ಫ್ಯಾಶನ್‌ಗೆ ಸಂಬಂಧಿಸಿದ ಸಂಕಿರಣಗಳ ಉದ್ದೇಶ ಜನರನ್ನು ಸೆಳೆಯುವುದೇ?
ಇಲ್ಲ. ಸಿನಿಮಾಕ್ಕೆ ನೂರು ವರ್ಷ ತುಂಬಿರುವುದರಿಂದ ಹಾಗೂ ಫ್ಯಾಶನ್ ಲೋಕದತ್ತ ಜನರು ಕುತೂಹಲದ ದೃಷ್ಟಿ ಬೀರುತ್ತಿರುವುದರಿಂದ ಇವೆರಡೂ ವಿಷಯಗಳನ್ನೂ ಆರಿಸಿಕೊಳ್ಳಲಾಗಿದೆ. ಫ್ಯಾಶನ್ ಜಗತ್ತಿನ ಸಮಸ್ತ ಆಗುಹೋಗುಗಳನ್ನೂ ಬರವಣಿಗೆಯಲ್ಲಿ ದಾಖಲಿಸಿರುವ ಯುವ ವಿನ್ಯಾಸಕ ಹಾಗೂ ಬರಹಗಾರರೂ ಪಾಲ್ಗೊಳ್ಳುತ್ತಿದ್ದಾರೆ. ಗೋವಾ ಮೂಲದ ಈ ವಿನ್ಯಾಸಕರೊಂದಿಗೆ ಪ್ರಸಾದ್ ಬಿದಪ್ಪ ಅವರು ಸಂವಾದ ನಡೆಸಿಕೊಡಲಿದ್ದಾರೆ.
ಸಾಹಿತ್ಯ ಪ್ರೇಮಿಗಳಿಗಾಗಿ ಈ ಉತ್ಸವವನ್ನು ಆಯೋಜಿಸಲಾಗಿದೆಯೇ?
ಇದು ಸಾಹಿತ್ಯಾಸಕ್ತರನ್ನು ಸೆಳೆಯುವ ಉತ್ಸವವಾಗಿದೆ. ಅಷ್ಟೇ ಅಲ್ಲ, ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಸುವಂತೆ ಮಾಡುವ ಉತ್ಸವವಾಗಿದೆ. ಸಾಹಿತ್ಯ ಹಾಗೂ ಸಂಸ್ಕೃತಿಗೆ ಒಂದು ನಂಟಿರುವುದರಿಂದ ಮೊದಲ ದಿನ ವೀಣಾವಾದನದ ಕಛೇರಿ ಇದೆ. ಎರಡನೆಯ ದಿನ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲುವಾದನವಿದೆ. ಸಾಹಿತ್ಯ, ಸಂಗೀತ ಸಂಸ್ಕೃತಿಗಳ ಸಮ್ಮಿಲನ ಈ ಉತ್ಸವದಲ್ಲಿ ಆಗಲಿದೆ.
ಮಕ್ಕಳ ಕೂಟವನ್ನು ಬರೀ ಮನರಂಜನೆಗೆಂದು ರಚಿಸಲಾಗಿದೆಯೇ?
ಇಲ್ಲ. ಇಡೀ ಕುಟುಂಬದವರು ಬಂದರೂ ಒಂದಲ್ಲ ಒಂದು ವಯೋಮಾನದವರನ್ನು ಒಂದೊಂದು ವೇದಿಕೆ ಸೆಳೆಯಲಿದೆ. ಮಕ್ಕಳ ಕೂಟದಲ್ಲಿ ಜರ್ಮನ್ ಲೇಖಕ ಬಾಸ್ ಬಾಚರ್ ಕಾವ್ಯಕಮ್ಮಟ ನಡೆಸಿಕೊಡಲಿದ್ದಾರೆ. ಪ್ರಸೂನ್ ಜೋಷಿ ಹಾಗೂ ಗುಲ್ಜಾರ್ ಅವರೊಂದಿಗೆ ಸಂವಾದವಿದೆ. ಗುಲ್ಜಾರ್ ಅವರ ‘ಪೋಟ್ಲಿ ಬಾಬಾ ಕಿ ಕಹಾನಿ’, ‘ಅಲಿ ಬಾಬಾ ಔರ್ ಚಾಲೀಸ್ ಚೋರ್’ ಪುಸ್ತಕಗಳ ಬಿಡುಗಡೆಯೂ ಇದೆ. ಮಕ್ಕಳು ಭಾವೀ ಓದುಗರು. ಬರಹಗಾರರೂ ಅವರಲ್ಲಿರಬಹುದು. ಅವರಿಗೊಂದು ಸೂಕ್ತ ವೇದಿಕೆ ದೊರೆಯಲಿ ಎಂಬ ಕಾಳಜಿ.
ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಗಳ ಮಾರಾಟ ವ್ಯವಸ್ಥೆ ಹೇಗಿದೆ?
ಇಂಗ್ಲಿಷ್ ಪುಸ್ತಕಗಳ ಮಾರಾಟಕ್ಕಾಗಿ ಆಕ್ಸ್‌ಫರ್ಡ್ ಪುಸ್ತಕ ಮಳಿಗೆ ಇದೆ. ಕನ್ನಡಕ್ಕೆ ನವಕರ್ನಾಟಕ ಹಾಗೂ ಅಂಕಿತ ಪುಸ್ತಕ ಮಳಿಗೆಗಳಿವೆ.
ಎಲೆಕ್ಟ್ರಾನಿಕ್ ಸಿಟಿ ದೂರ ಅಲ್ಲವೇ?
ಬೆಂಗಳೂರಿನಲ್ಲಿ ಯಾವುದು ದೂರ ಅಲ್ಲ ಹೇಳಿ? ಈ ದಿಕ್ಕಿನಲ್ಲಿದ್ದವರಿಗೆ ಆ ದಿಕ್ಕು ಸದಾ ದೂರವೇ. ಆಸಕ್ತಿ ಇರುವವರು ಎಲ್ಲಿಗಾದರೂ ಬಂದೇ ಬರುತ್ತಾರೆ. ಎಲೆಕ್ಟ್ರಾನಿಕ್ ಸಿಟಿಗೆ ಪ್ರತಿದಿನ ಒಂದೂವರೆ ಲಕ್ಷದಷ್ಟು ಜನರು ಓಡಾಡುತ್ತಾರೆ. ಅವರಲ್ಲಿಯೂ ಆಸಕ್ತಿ ಹುಟ್ಟುವಂತೆ ಆಗಲಿ ಎಂದು ಈ ಸ್ಥಳವನ್ನು ಆಯ್ಕೆ ಮಾಡಿರುವುದು. ಕಳೆದ ವರ್ಷ ಜಯಮಹಲ್ ಎಕ್ಸ್‌ಟೆನ್ಶನ್‌ನಲ್ಲಿ ಏರ್ಪಡಿಸಿದಾಗ ದಕ್ಷಿಣ ಬೆಂಗಳೂರಿನವರೂ ಇದೇ ದೂರನ್ನು ಮುಂದಿರಿಸಿದ್ದರು. ಆದರೆ ಉತ್ಸವದಲ್ಲಿ ಪಾಲ್ಗೊಳ್ಳುವುದನ್ನು ಮರೆತಿರಲಿಲ್ಲ.
ಈ ಉತ್ಸವ ಆಯೋಜನೆಯ ಹಿಂದೆ ಎಷ್ಟು ತಿಂಗಳ ಶ್ರಮವಿದೆ?
ಶೈನಿ, ಆಂಥೊನಿ ಅವರೆಲ್ಲ ಅತಿಥಿಗಳೊಂದಿಗೆ ಮಾತನಾಡಿ, ಅವರ ಬರುವನ್ನು ನಿಗದಿಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಆರೇಳು ತಿಂಗಳ ಸತತ ಶ್ರಮ ಈ ಉತ್ಸವದ ಹಿಂದೆ ಇದೆ. ಮೂರು ದಿನಗಳ ಉತ್ಸವದಲ್ಲಿ ಬೆಂಗಳೂರಿಗರು ಸಂತೋಷದಿಂದ ಪಾಲ್ಗೊಂಡರೆ ಸಾರ್ಥಕ್ಯ ಕಂಡೀತು. ಸಾಹಿತ್ಯ ಸಂಗೀತ ಹಾಗೂ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವ ಸಂದರ್ಭ ಇದು.
-ಸಂದರ್ಶನ: ರಶ್ಮಿ ಎಸ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.