ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹವ್ಯಾಸ. ಅದೇ ಬದುಕಿನ ಘನ ಧ್ಯೇಯ ಎಂದೂ ನಂಬಿ ನಡೆವರು ಉಂಟು. ಕೆಲವರಿರುತ್ತಾರೆ, ನೋಡಲು ತೀರಾ ಸಾಧಾರಣ; ಎದ್ದು ಕಾಣುವ ಆಕಾರವೂ ಇರದ, ಜೋರಾದ ಉಡುಪೂ ತೊಡದ ವ್ಯಕ್ತಿಗಳು. ಆದರೆ, ಅಂತಹವರಲ್ಲಿ ವಿಶೇಷವಾದ ಹವ್ಯಾಸವೋ, ಜ್ಞಾನ ವಿಶೇಷವೋ ಇರುವುದೂ ಇದೆ. ಅದು ಅವರ ಹತ್ತಿರದ ಕೆಲವರಿಗೆ ಮಾತ್ರ ತಿಳಿದು ಬರುತ್ತದೆ. ಹೆಸರಘಟ್ಟ ರಸ್ತೆಯ ಕಿರ್ಲೋಸ್ಕರ್ ಬಡಾವಣೆಯ ವಿಭಿನ್ನ ವ್ಯಕ್ತಿಗಳ ನಡುವೆ ತೀರಾ ಭಿನ್ನವಾಗಿ ಪರಿಚಿತರಾದವರು ಬಾಲಕೃಷ್ಣ ಎಚ್.
ಬಾಲಕೃಷ್ಣ ಅವರಿಗೆ ಒಂದು ಮನೆ ಇದೆ, ಜೀವನಕ್ಕಾಗಿ ಬಾಡಿಗೆಯ ಆಧಾರವೂ ಇದೆ. ಆ ಮನೆಯ ಒಳಗೆ ಕಲಾತ್ಮಕ ಚೆಲುವೇನೂ ಕಾಣಲಾರದು. ಇಂತಹ ಮನೆಯಲ್ಲಿ ಅಡಗಿ ಕುಳಿತಿರುವ ಮೌಲಿಕತೆ ಇರುವುದು ಬಾಲಕೃಷ್ಣ ಅವರು ಜತನದಿಂದ ಕಾಪಿಟ್ಟುಕೊಂಡು ಬಂದಿರುವ ಪೆಟ್ಟಿಗೆಯಲ್ಲಿನ ಅಮೂಲ್ಯ ಸಂಗ್ರಹದಲ್ಲಿ. ಕೆಲವರು ಕಲಾತ್ಮಕ ವಸ್ತುಗಳನ್ನು, ಚಲಾವಣೆಯಲ್ಲಿ ಇಲ್ಲದ ನಾಣ್ಯ ಗಳನ್ನು ಕೂಡಿಟ್ಟುಕೊಳ್ಳಲು ಶ್ರಮಿಸುತ್ತಾರೆ. ಬಾಲಕೃಷ್ಣ ಈ ವಿರಳ ವರ್ಗಕ್ಕೆ ಸೇರಿದವರು. ಇವರಲ್ಲಿರುವುದು ತಾತ ಮುತ್ತಾತನ ಕಾಲದ ಕೆಲವು ಕಿಲುವು ಕಾಸುಗಳು, ಮಾಸಲು ಬಣ್ಣಕ್ಕೆ ತಿರುಗುತ್ತಿರುವ ಕೆಲವು ಕಾರ್ಡುಗಳು.
ಈ ಸವೆದ ನಾಣ್ಯಗಳಿಗೆ ಕಿರಾಣಿ ಅಂಗಡಿಯವನು ನಯಾ ಪೈ ಕಿಮ್ಮತ್ತನ್ನೂ ಕೊಡಲಾರ. ಆದರೂ, ಅವಕ್ಕೆ ಬೆಲೆ ದಕ್ಕುವುದು ಬೇರೆಯದೇ ಮಾರುಕಟ್ಟೆಯಲ್ಲಿ. ಬ್ರಿಟಿಷರು, ನವಾಬರ ಕಾಲದ, ಅದಕ್ಕೂ ಹಿಂದಿನ ಕಾಲಮಾನದ ಈ ನಾಣ್ಯಗಳ ಬೆಲೆ ಇತಿಹಾಸಕಾರರಿಗೆ, ನಾಣ್ಯ ಸಂಗ್ರಹಗಾರರಿಗೆ ಮಾತ್ರ ಅರ್ಥವಾಗುತ್ತದೆ. ಹಾಗೆಯೇ, ಶುಭಾಶಯ ಕಾರ್ಡುಗಳ ಹಿಂಬದಿಯಲ್ಲಿ ಯಾವುದೋ ಕಲಾವಿದ ಚಿತ್ರಿಸಿದ ಸುಂದರಿಯರ ವರ್ಣ ಚಿತ್ರಗಳ ಬೆಲೆ ಕಲಾ ರಸಿಕರಿಗೆ ಮಾತ್ರ ಸೀಮಿತವಾದುದು.
ಕಿರ್ಲೋಸ್ಕರ್ ಕಂಪೆನಿಯ ನಿವೃತ್ತ ಉದ್ಯೋಗಿಯಾದ ಬಾಲಕೃಷ್ಣ ಅವರಿಗೆ ಹಳೇ ಕಲಾಕೃತಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಗೀಳು ಬೆಳೆದದ್ದು ಅವರ ಶಾಲಾ ಓದಿನ ದಿನಗಳಲ್ಲೇ. ಮಲ್ಲೇಶ್ವರದ ಹೈಸ್ಕೂಲಿಗೆ ನಡೆದು ಹೋಗುತ್ತಿದ್ದಾಗ ಟಾಟಾ ಇನ್ಸ್‌ಟಿಟ್ಯೂಟ್ ಅವರಣದಲ್ಲಿ ಸಿಗುತ್ತಿದ್ದ ಆಕರ್ಷಕ ಬಣ್ಣದ ಗುಲಗಂಜಿ ಬೀಜಗಳನ್ನು ಬಾಲಕ ಸಹಜ ಕುತೂಹಲದಿಂದ ಆಯ್ದುಕೊಳ್ಳಲು ಹೋಗುತ್ತಿದ್ದಾಗ ಕಚೇರಿಗಳ ಹೊರಗೆ ಎಸೆದಿರುತ್ತಿದ್ದ ವಿದೇಶಿ ಲಕೋಟೆಗಳು, ಅಂಚೆ ಚೀಟಿಗಳನ್ನು ಹೆಕ್ಕಿ ಕೂಡಿಟ್ಟುಕೊಳ್ಳತೊಡಗಿದರು. ಕಸದ ಗುಡ್ಡೆಗಳಲ್ಲಿ ಅವರಿವರು ಎಸೆದ ಚಿತ್ತಾರವಿರುವ ಕಾರ್ಡುಗಳೂ ಇವರ ಕಪಾಟನ್ನು ಸೇರತೊಡಗಿದವು; ಹಾಗೆಯೇ, ಹಳೇ ನಾಣ್ಯಗಳೂ. ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗ, 1961ರಲ್ಲಿ ಕೋದಂಡರಾಮ ಪುರದ ಹಾದಿಬದಿ, ಮಳೆಯಿಂದ ಕೊಚ್ಚಿದ ಮಣ್ಣಿನಲ್ಲಿ ಕಂಡ ಅತಿ ಸಣ್ಣಗಿನ, ವಿಜಯ ಎಂಬ ಅಂಕಿತವಿರುವ ಶತಮಾನಗಳಷ್ಟು ಹಳೆಯದಾದ ವಿಶೇಷ ನಾಣ್ಯ ಇವರ ಸಂಗ್ರಹಾಸಕ್ತಿ ಕೆರಳಿಸಿದ ಮೊದಲ ವಸ್ತು ಎನ್ನಬಹುದು. ಚಾರಿತ್ರಿಕ ಮಹತ್ವದ್ದೆನಿಸುವ ಇದರ ಬೆಲೆಯನ್ನು ಕಂಡುಕೊಳ್ಳುವುದು ಸಾಮಾನ್ಯ ಜನರಿಂದ ಆಗದ ವಿಷಯ.
ಸದ್ದು ಗದ್ದಲವಿರದೆ ನಡೆವ ಇಂಥಾ ಸಂಗ್ರಹ ಕಾರ್ಯಗಳು ಸಾರ್ವಜನಿಕರ ಅಭಿನಂದನೆಗೆ ಯೋಗ್ಯವಾದುವು. ಸ್ಥಳೀಯ ಶಾಲೆಗಳು ಬಾಲಕೃಷ್ಣ ಅವರ ನಾಣ್ಯ, ಚಿತ್ರ ಸಂಗ್ರಹಗಳ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಇತಿಹಾಸದ, ಸಂಗ್ರಹ ಹವ್ಯಾಸಗಳ ಅರಿವನ್ನು ಮೂಡಿಸಬಹುದು.
(ಬಾಲಕೃಷ್ಣ ಅವರನ್ನು ಸಂಪರ್ಕಿಸಲು– 9742088691)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.