ADVERTISEMENT

ಬೀದಿಗೆ ಬಿದ್ದವರು!

ಡಾ.ಎನ್.ಅನಂತ ರಾಮನ್
Published 9 ಫೆಬ್ರುವರಿ 2014, 19:30 IST
Last Updated 9 ಫೆಬ್ರುವರಿ 2014, 19:30 IST
ಚಿತ್ರ: ಚಂದ್ರಹಾಸ ಕೋಟೆಕಾರ್
ಚಿತ್ರ: ಚಂದ್ರಹಾಸ ಕೋಟೆಕಾರ್   

ಹೌದು, ನಾವೆಲ್ಲಾ ಒಂದರ್ಥದಲ್ಲಿ ಬೀದಿಗೆ ಬಿದ್ದವರು– ಜೀವನದಲ್ಲಿ ಸರಿಯಾದ ಮಾರ್ಗದಲ್ಲಿ ಸಾಗದೇ ಅಡ್ಡದಾರಿಯನ್ನು ಹಿಡಿದವರನ್ನು ಈ ಮಾತಿನಿಂದ ಗುರುತಿಸಲಾಗುತ್ತದೆ. ನಾವೂ ಅಷ್ಟೇ, ಫುಟ್‌ಪಾತ್‌ನಲ್ಲಿ ನಡೆಯಬೇಕಾದ ನಾವು ಅಲ್ಲಿ ನಡೆಯಲು ಸಾಧ್ಯವಿಲ್ಲದೇ ಬೀದಿಯಲ್ಲಿ ನಡೆಯಬೇಕಾದ ಪರಿಸ್ಥಿತಿ ಬಂದಿದೆ. ಹಿಂದೆ ನಾವೆಲ್ಲರೂ ಸ್ನೇಹಿತರು ಹರಟೆ ಹೊಡೆಯುತ್ತಾ ಫುಟ್‌ಪಾತ್‌ ಮೇಲೆ ರಾಜರಂತೆ ನಡೆಯುತ್ತಿದ್ದೆವು.

ನಮ್ಮ ಬಡಾವಣೆಯಲ್ಲಿ ನಾನು ಒಬ್ಬನೇ ಫುಟ್‌ಪಾತಿನಲ್ಲಿ ಸಾಗುತ್ತಿದ್ದಾಗ ಹಿರಿಯ ಕವಿಗಳಾಗಿದ್ದ ಮಾಸ್ತಿಯವರು  ತಮ್ಮ ಕೊಡೆಯನ್ನು ಬಿಚ್ಚಿಕೊಂಡು ಬರುತ್ತಿದ್ದರು. ಅವರನ್ನು ಕಿರಿಯನಾದ ನಾನು ಮಾತನಾಡಿಸಿದಾಗ, ‘ನೀನು .... ಅವರ ಮಗನಲ್ಲವೇ, ಏನು ಓದುತ್ತಿದ್ದೀಯಾ!’ ಎಂದೆಲ್ಲಾ ಮಾತನಾಡಿಸಿ ಅವರ ಕೋಟಿನ ಜೇಬಿನಿಂದ ಚಾಕಲೇಟ್‌ಗಳನ್ನು ಕೊಡುತ್ತಿದ್ದರು. ಮನೆಗೆ ಬಂದು ನಾನು ನಮ್ಮ ತಂದೆಯವರಲ್ಲಿ ಕೇಳುತ್ತಿದ್ದೆ, ‘ಸದಾಕಾಲವೂ ಮಾಸ್ತಿಯವರು ತಮ್ಮ ಕೊಡೆಯನ್ನು ಏಕೆ ಬಿಚ್ಚಿಕೊಂಡು ನಡೆಯುತ್ತಾರೆ?’ ಆಗ ನನಗೆ ಬಂದ ಉತ್ತರವು ಹೀಗಿತ್ತು: ‘ಫುಟ್‌ಪಾತಿನ ಬದಿಗಳಲ್ಲಿದ್ದ ಸಾಲು ಮರಗಳ ಮೇಲಿಂದ ಹಕ್ಕಿಗಳ ಮಲವು ತಮ್ಮ ಬಟ್ಟೆಯ ಮೇಲೆ ಬೀಳದಂತೆ ಕೊಡೆಯನ್ನು ಬಿಡಿಸಿಕೊಂಡಿರುತ್ತಾರೆ’.

ಸದ್ಯ ಈಗ ನಮಗೆ ಮೇಲಿನ ಸಮಸ್ಯೆ ಇಲ್ಲ. ದಾರಿಹೋಕರಿಗೆ ಮರದ ಮೇಲಿನ ಹಕ್ಕಿಗಳು ಮಲವಿಸರ್ಜಿಸಬಾರದೆಂಬ ಸದುದ್ದೇಶದಿಂದ ಹೆಚ್ಚೂ ಕಡಿಮೆ ಎಲ್ಲಾ ಮರಗಳನ್ನು ಕಡಿದು ಹಾಕಿದ್ದಾರೆ! ಹಿಂದೆ ಫುಟ್‌ಪಾತ್‌ಗಳ ಮೇಲೆ ನಿರ್ಭಯವಾಗಿ ನಡೆಯುತ್ತಿದ್ದ ನಮಗೆ ಇಂದು ಅನೇಕ ಸಮಸ್ಯೆಗಳು ಎದಿರಾಗಿವೆ. ಮೊದಲನೆಯದು–ಫುಟ್‌ಪಾತನ್ನು ಆಕ್ರಮಿಸಿಕೊಂಡಿರುವ ವ್ಯಾಪಾರಿಗಳು. ಮತ್ತೊಂದು–ಫುಟ್‌ಪಾತಿನಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ದ್ವಿಚಕ್ರ ವಾಹನದವರು. ಒಮ್ಮೆ ನಾನು ಫುಟ್‌ಪಾತಿನಲ್ಲಿ ಸಾಗುತ್ತಿದ್ದಾಗ ಒಂದು ವಿದೇಶಿ ಹೋಟಲ್‌ನ ಹೊರಗೆ ಸ್ಕೂಟರ್‌, ಮೋಟಾರ್‌ ಬೈಕ್‌ ನಿಲ್ಲಿಸಿಕೊಂಡ ತರುಣ–ತರುಣಿಯರ ಗುಂಪೊಂದನ್ನು ಕಂಡೆ. ಅವರಲ್ಲಿ ಎಲ್ಲರೂ ತಮ್ಮ ಕಿವಿಗಳಿಗೆ ಮೊಬೈಲ್‌ ಸಿಕ್ಕಿಸಿಕೊಂಡು ಮಾತನಾಡುತ್ತಲೇ ಇದ್ದರು. ಒಬ್ಬ ಹುಡುಗಿ ಫುಟ್‌ಪಾತಿನಲ್ಲಿ ಅಡ್ಡವಾಗಿ ತನ್ನ ವಾಹನ ನಿಲ್ಲಿಸಿಕೊಂಡು, ಇಯರ್‌ಫೋನ್‌ ಹಾಕಿಕೊಂಡು ಮ್ಯೂಸಿಕ್‌ ಕೇಳುತ್ತಿದ್ದಳು. ನಾನು ಆಕೆಗೆ, ‘ಅಮ್ಮಾ ಸ್ಕೂಟರನ್ನು ಸ್ವಲ್ಪ ಪಕ್ಕಕ್ಕೆ ಹಾಕಿದರೆ ನನ್ನಂಥ ಪಾದಚಾರಿಗಳು ಸಾಗಬಹುದು’ ಎಂದೆ.

ಆಕೆ ತನ್ನ ಇಯರ್‌ಫೋನ್‌ ತೆಗೆದು, ನನ್ನನ್ನು ಕೆಕ್ಕರಿಸಿಕೊಂಡು ನೋಡುತ್ತಾ ‘ಏನ್ರೀ ನಾನು ನಿಮ್ಮ ಅಮ್ಮನ ತರಹ ಕಾಣಿಸ್ತೀನಾ. ಎಲ್ಲರೂ ಹೋಗೋ ಹಾಗೆ ನೀವು ರಸ್ತೇಲಿ ಹೋಗ್ರೀ’ ಎಂದಳು, ತನ್ನ ವಾಹನವನ್ನು ಪಕ್ಕಕ್ಕೆ ಸರಿಸದೆ. ‘ಆಯ್ತಮ್ಮ, ರೋಡ್‌ನಲ್ಲಿ ಎಷ್ಟೊಂದು ಟ್ರಾಫಿಕ್‌ ಇದೆ ನೋಡು. ರಸ್ತೇಲಿ ನಡೆದರೆ ವಾಹನದವರ ಕೈಲಿ ಬೈಸಿಕೊಳ್ಳಬೇಕು. ಒಂದು ವೇಳೆ ವಾಹನಕ್ಕೆ ಸಿಕ್ಕಿಹಾಕಿಕೊಂಡರೆ ನಾವು ಕೈಕಾಲುಗಳನ್ನು ಮುರಿದುಕೊಳ್ಳಬೇಕಾಗುತ್ತೆ’ ಎಂದೆ. ಇದು ಸಾಧಾರಣವಾಗಿ ಇಂದು ಕಾಣಬಹುದಾದ ಫುಟ್‌ಪಾತ್‌ ನಡಿಗೆಗಾರರ ಅನುಭವವಾಗಿರುತ್ತದೆ. ಮತ್ತೊಂದು ತಮಾಷೆಯನ್ನು ನಾನು ಕಂಡೆ. ಕಲ್ಲುಗಳನ್ನು ಸರಿಯಾಗಿ ಹಾಕದ ಫುಟ್‌ಪಾತ್‌ ಮೇಲೆ ನಡೆಯುವಾಗ ‘ದಡ್‌ ದಡ್‌’ ಎಂಬ ಶಬ್ದವು ಬರುತ್ತದೆ, ಎದುರುಗಡೆಯ ಫುಟ್‌ಪಾತಿನಲ್ಲೂ ಬೇರೆಯವರು ನಡೆಯುವಾಗ ಇಂಥದೇ ಶಬ್ದವು ಬರುತ್ತದೆ. ಫುಟ್‌ಪಾತಿನ ಮೇಲೆ ನಡೆಯುವ ನಾವು ರಸಿಕರಾಗಿದ್ದರೆ ಈ ಕಲ್ಲು ಚಪ್ಪಡಿಯಿಂದ ಹೊಮ್ಮುವ ಬೇರೆ ಬೇರೆ ಶಬ್ದಗಳು ಸಂಗೀತದ ‘ಸರಿಗಮ ಪದನಿಸ’ದಂತೆ ಕೇಳಿಬರುತ್ತವೆ! ಸರಿಯಾಗಿ ಹಾಕದ ಈ ಕಲ್ಲುಗಳ ಮಧ್ಯದಲ್ಲಿ ಕಾಲು ಸಿಕ್ಕಿಹಾಕಿಕೊಂಡರೆ ಅಥವಾ ಕಲ್ಲಿನ ಅಲುಗಾಟದಿಂದ ಮುಗ್ಗರಿಸಿಕೊಂಡು ಬಿದ್ದರೆ, ಅಂಥವರ ಚೀರಾಟವು ಆಲಾಪನೆಯೇ ಸರಿ!

ಮತ್ತೊಮ್ಮೆ ನಾನು ಫುಟ್‌ಪಾತಿನಲ್ಲಿ ಸಾಗುತ್ತಿದ್ದಾಗ, ಹಿಂದಿನಿಂದ ಬೈಕ್‌ ಮೇಲೆ ವೇಗವಾಗಿ ಬಂದ ಯುವಕ ನನ್ನ ಮೈಮೇಲೆ ಬಿಡುವಂತೆ ಬಂದ. ಇಂದಿನ ರಸ್ತೆಯಲ್ಲಿ ಕಾರು, ರಿಕ್ಷಾ ಮುಂತಾದ ವಾಹನಗಳು ತುಂಬಿರುವುದರಿಂದ ಬಹುತೇಕ ದ್ವಿಚಕ್ರ ವಾಹನದವರು ಫುಟ್‌ಪಾತಿನ ಮೇಲೆ ಸಾಗುತ್ತಾರೆ, ಅಂದು ಯಮಕಿಂಕರನಂತೆ ಬಂದ ಬೈಕ್‌ ಸವಾರ ನನಗೇ ಬುದ್ಧಿ ಹೇಳಿದ: ‘ಏನ್ರೀ ಅಂಕಲ್‌... ನಿಮ್ಮ ಪುಣ್ಯ ಉಳಕೊಂಡ್ರೀ, ಇಲ್ಲದಿದ್ರೆ ನನ್ನ ಬೈಕ್‌ಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಿರಿ. ವಾಕಿಂಗ್‌ ಮಾಡುವುದಕ್ಕೆ ನಿಮಗೆ ಫುಟ್‌ಪಾತೇ ಬೇಕಾ? ಮನೇಲಿ ತೆಪ್ಪಗೆ ಇದ್ದುಕೊಂಡು ವಾಕರ್‌ ಯಂತ್ರದ ಮೇಲೆ ನಡೆಯಿರಿ’.

ಹೌದು, ಅವನ ಮಾತು ನಿಜ. ಯಾವುದೇ ವಯಸ್ಸಿನವರಿಗಾಗಲೀ ನಡೆಯಲು ಇಂದು ಫುಟ್‌ಪಾತೂ ಇಲ್ಲ, ರಸ್ತೆಯೂ ಇಲ್ಲ, ಹಾಗಾದರೆ ನಮ್ಮ ಗತಿ ಏನು? ಇತ್ತೀಚಿಗೆ ಜವಾಬ್ದಾರಿ ಉಕ್ಕಿ ಒಬ್ಬ ಹಿರಿಯ ಅಧಿಕಾರಿಗಳು ಹೀಗೆಂದಿದ್ದರು: ‘ಫುಟ್‌ಪಾತಿನ ಮೇಲೆ ನಡೆಯುವವರನ್ನು ದೇವರೇ ಕಾಪಾಡಬೇಕು’!

ನಿಜ, ಪಾದಚಾರಿಗಳಾದ ನಮ್ಮನ್ನು ದೇವರೇ ಕಾಪಾಡಬೇಕು. ಹೇಗೂ ನಾವು ಬೀದಿಗೆ ಬಿದ್ದಿದ್ದಾಗಿದೆ. ನಾವು ಸುರಕ್ಷಿತವಾಗಿ ಮನೆಗೆ ವಾಪಸ್ಸು ಹೋದರೆ ಅದರ ಅರ್ಥ ನಮಗೆ ಇನ್ನೂ ಆಯುಷ್ಯವಿದೆ ಎಂದು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.