ಅದ್ದೆ ಗ್ರಾಮದ ನಿರಂತರ ಟ್ರಸ್‌್ಟ ಏಳನೇ ವರ್ಷದ ‘ಭೂಮಿಹಬ್ಬ’ ಆಚರಣೆಯನ್ನು ಏಪ್ರಿಲ್ 4 ರಂದು (ಶನಿವಾರ) ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಅದ್ದೆ–ಸುದೇನುಪುರ ಗೇಟ್ ಮಧ್ಯದಲ್ಲಿರುವ ದಿಣ್ಣೆ ಹೊಲದಲ್ಲಿ ಹಮ್ಮಿಕೊಂಡಿದೆ.
ಬೆಳಗ್ಗೆ 10ಕ್ಕೆ ನಡೆಯಲಿರುವ ಗ್ರಾಮೀಣ ಕ್ರೀಡಾಕೂಟದೊಂದಿಗೆ ಭೂಮಿ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಸಂಜೆ 5ಕ್ಕೆ ಗ್ರಾಮದೇವತೆಗಳಾದ ದುರ್ಗದಮ್ಮದೇವಿ, ಮುನೇಶ್ವರಸ್ವಾಮಿ, ಮೂರು ಮುಖದಮ್ಮ ದೇವಿ ಹಾಗೂ ಮಾರಮ್ಮ ತಾಯಿಯನ್ನು ಮೆರವಣಿಗೆ ಮೂಲಕ ಮುಖ್ಯ ವೇದಿಕೆಯ ಮುಂಭಾಗಕ್ಕೆ ತರಲಾಗುವುದು. ಸಂಜೆ 7.30ಕ್ಕೆ ಮುದ್ದೆ, ಕಾಳುಸಾರು, ಪಾಯಸ ಮತ್ತಿತರ ಹಳ್ಳಿಊಟದ ಸಹಭೋಜನ ಏರ್ಪಡಿಸಲಾಗಿದೆ.
ಸಂಜೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌ಮಟ್ಟು, ಜನವಾದಿ ಮಹಿಳಾ ಸಂಘಟನೆಯ ಡಾ.ಮೀನಾಕ್ಷಿ ಬಾಳಿ, ಚಿತ್ರನಟ ಚೇತನ್ ಭಾಗವಹಿಸಲಿದ್ದಾರೆ.
ಭೂಮಿಹಬ್ಬದಲ್ಲೊಂದು ಸರಳ ವಿವಾಹ
ಈ ವರ್ಷದ ಭೂಮಿಹಬ್ಬದಲ್ಲಿ ಕುವೆಂಪು ‘ಮಂತ್ರ ಮಾಂಗಲ್ಯ’ ರೀತಿಯಂತೆ ಅನಿಲ್ ಅದ್ದೆ ಹಾಗೂ ಅಪೂರ್ವ ಅವರ ವಿವಾಹ ನೆರವೇರುತ್ತಿರುವುದು ವಿಶೇಷ.
ಸಾಂಸ್ಕೃತಿಕ ಕಾರ್ಯಕ್ರಮ
ಗಾಯಕ ಅಪ್ಪಗೆರೆ ತಿಮ್ಮರಾಜು, ದೇವನಹಳ್ಳಿಯ ಜಾನಪದ ಕಲಾತಂಡ, ಚಿಕ್ಕಬಳ್ಳಾಪುರದ ಇಂಡಿಯಾ ಫೋಕ್ ತಮಟೆ ತಂಡ, ಚಿಕ್ಕಬಳ್ಳಾಪುರದ ಅನನ್ಯ ಕಲಾರಂಗ ವೇದಿಕೆ ಹಾಗೂ ಹೊಯ್ಸಳ ಜಾನಪದ ಕಲಾಸಂಘ ತಂಡಗಳು ನೆಲ, ಜಲ ಮತ್ತು ಸಂಸ್ಕೃತಿಯ ಕುರಿತ ಗೀತೆಗಳು ಹಾಗೂ ನೃತ್ಯಗಳನ್ನು ಪ್ರಸ್ತುತಪಡಿಸಲಿವೆ.
‘ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿರುವ ನಾವು, ನಮ್ಮ ನೆಲ–ಜಲ, ಸಂಸ್ಕೃತಿ, ಆಚರಣೆಗಳನ್ನು ಮರೆಯುತ್ತಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಹಬ್ಬಗಳು, ಕ್ರೀಡೆಗಳು ಆಚರಣೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರತಿವರ್ಷ ಸುತ್ತಮುತ್ತಲ ಗ್ರಾಮಗಳ ಯುವಕರು ಹಾಗೂ ಮುಖಂಡರ ಸಹಕಾರದಿಂದ ಭೂಮಿಹಬ್ಬವನ್ನು ಆಚರಿಸಿಕೊಡು ಬರಲಾಗುತ್ತಿದೆ’ ಎಂದು ಟ್ರಸ್‌್ಟನ ಅಧ್ಯಕ್ಷ ಮಂಜುನಾಥ ಅದ್ದೆ ತಿಳಿಸಿದ್ದಾರೆ.
ಮಾಹಿತಿಗೆ–94484 65233.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.