ADVERTISEMENT

ಮಂಜು ವಾರಿಯರ್‌ ಜಮಾನಾ ಶುರು

ಹರಿಣಿ ನಾಯ್ಡು
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಮಂಜು ವಾರಿಯರ್‌
ಮಂಜು ವಾರಿಯರ್‌   

ಬಹಳ ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿದ್ದೀರಿ. ಹೇಗೆ ಅನಿಸುತ್ತಿದೆ?

ತುಂಬಾ ಖುಷಿಯಾಗ್ತಿದೆ. ಬರೋಬ್ಬರಿ 14 ವರ್ಷಗಳ ನಂತರ ಚಿತ್ರರಂಗಕ್ಕೆ ಮರಳಿದ್ದೇನೆ. ಆದರೆ ಇಷ್ಟೊಂದು ಆಪ್ತವಾಗಿ ಬರಮಾಡಿಕೊಳ್ಳುತ್ತಾರೆ ಎಂದು ಅಂದುಕೊಂಡಿರಲೇ ಇಲ್ಲ. ‘ಹೌ ಓಲ್ಡ್‌ ಆರ್‌ ಯೂ’ ಚಿತ್ರದಲ್ಲಿ ಪ್ರಮುಖ ಪಾತ್ರವೇ ಸಿಕ್ಕಿತು. ಬಹು ನಿರೀಕ್ಷೆಯ ಚಿತ್ರ ’ಒಡಿಯನ್‌’ನಲ್ಲಿಯೂ ಮಹತ್ವದ ಪಾತ್ರವನ್ನೇ ಮಾಡಿದ್ದೇನೆ.

‘ಒಡಿಯನ್‌’ ಬಗ್ಗೆ ಹೇಳಿ.

ADVERTISEMENT

ಅದು ಥ್ರಿಲ್ಲರ್‌ ಸಿನಿಮಾ. ಮೋಹನ್‌ಲಾಲ್‌ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಚಿತ್ರೀಕರಣದ ವೇಳೆ ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತೆ.

ನೃತ್ಯ ಮತ್ತು ನಟನೆಯಲ್ಲಿ ಯಾವುದಕ್ಕೆ ಆದ್ಯತೆ ಕೊಡುತ್ತೀರಿ?

ಎರಡಕ್ಕೂ. ಯಾಕೆಂದರೆ ನೃತ್ಯ ಮತ್ತು ನಟನೆ ನನ್ನ ಹೃದಯಕ್ಕೆ ಹತ್ತಿರವಾದ ಸಂಗತಿಗಳು. ಇವೆರಡೂ ನನ್ನ ಎರಡು ಕೈಗಳಿದ್ದಂತೆ. ಇಷ್ಟಕ್ಕೂ ಈಗ ನಾನೇನೂ ತುಂಬಾ ಬ್ಯುಸಿಯಾಗಿಲ್ಲ. ಹಾಗಾಗಿ ನೃತ್ಯಕ್ಕೂ, ನಟನೆಗೂ ಧಾರಾಳ ಸಮಯ ಕೊಡಬಲ್ಲೆ. ನಾನು ಅವಕಾಶಗಳಿಗಾಗಿ ಎದುರುನೋಡುತ್ತಿದ್ದೇನೆ. ಅದೃಷ್ಟವಶಾತ್‌, ‘ಒಡಿಯನ್‌’ ನಂತರ ಇನ್ನೂ ಕೆಲವು ಚಿತ್ರಗಳಿಗೆ ಸಹಿ ಮಾಡುವ ಸಾಧ್ಯತೆ ಇದೆ. ಮಾತುಕತೆ ನಡೆದಿದೆ. ನೋಡೋಣ...

ನಿಮ್ಮ ಕನಸು ಏನು?

ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಕನಸು. ಚಿತ್ರರಂಗದಲ್ಲಿ ಪುರುಷರಷ್ಟೇ ಮಹಿಳೆಯರೂ ಸಮನಾಗಿ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ತಮ್ಮ ಹಕ್ಕುಗಳಿಗಾಗಿ ದನಿ ಎತ್ತುವುದನ್ನೂ ಕಾಣುತ್ತಿದ್ದೇನೆ. ಇದು ಒಳ್ಳೆಯ ಬೆಳವಣಿಗೆ.

ನಿಮ್ಮಂತೆ ಬ್ರೇಕ್‌ ತೆಗೆದುಕೊಂಡು ನಟನೆಗೆ ಮರಳುವ ಹೆಣ್ಣು ಮಕ್ಕಳಿಗೆ ಏನು ಹೇಳಲು ಬಯಸುತ್ತೀರಿ?

ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ನೂರಕ್ಕೆ ನೂರು ಶುದ್ಧ ಮನಸ್ಸಿನಿಂದ ಕೆಲಸ ಮಾಡಿ. ಅವಕಾಶಗಳು ತಾವಾಗಿಯೇ ಒದಗಿಬರುತ್ತವೆ.

ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಚಿತ್ರೀಕರಣದ ಅನುಭವ ಹೇಗಿತ್ತು?

‘ಕಲ್ಯಾಣ್‌ ಜ್ಯುವೆಲರ್ಸ್‌’ನ ರಾಯಭಾರಿಯಾಗಿ ಅಮಿತಾಭ್‌ ಅವರೊಂದಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ. ನನ್ನ ಜೀವನದಲ್ಲಿ ಎಂದೂ ನಾನು ಅವರನ್ನು ಖುದ್ದು ಭೇಟಿಯಾಗಲು ಅಂತಹ ಅವಕಾಶ ಸಿಗುತ್ತಲೇ ಇರಲಿಲ್ಲವೇನೊ. ಆದರೆ ಜಾಹೀರಾತಿನ ಕಾರಣಕ್ಕಾದರೂ ಭೇಟಿಯಾದೆನಲ್ಲ ಎಂಬುದೇ ಖುಷಿ. ಚಿತ್ರೀಕರಣ ತುಂಬಾ ಸಲೀಸಾಗಿತ್ತು. ಭಾರತೀಯ ಚಿತ್ರರಂಗದ ಮೇರುನಟನೊಬ್ಬ ಎಲ್ಲರೊಂದಿಗೆ ಅಷ್ಟು ಆಪ್ತವಾಗಿ ಬೆರೆಯುತ್ತಾರೆಂದರೆ ನಂಬಲೂ ಸಾಧ್ಯವಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.