ADVERTISEMENT

ಮಕ್ಕಳಿಗೆ ಚಂದ ಸಾಂಪ್ರದಾಯಿಕ ಉಡುಗೆ

ಸ್ಮಿತಾ ಶಿರೂರ
Published 13 ನವೆಂಬರ್ 2018, 19:45 IST
Last Updated 13 ನವೆಂಬರ್ 2018, 19:45 IST
ಫ್ಯಾಷನ್‌ ಷೋನಲ್ಲಿ ಮಕ್ಕಳ ಝಲಕ್‌   (ಸಂಗ್ರಹ ಚಿತ್ರ)
ಫ್ಯಾಷನ್‌ ಷೋನಲ್ಲಿ ಮಕ್ಕಳ ಝಲಕ್‌   (ಸಂಗ್ರಹ ಚಿತ್ರ)   

ಫ್ಯಾಷನ್‌ ಎನ್ನುವುದು ಪುಟ್ಟ ಮಕ್ಕಳನ್ನೂ ಬಿಟ್ಟಿಲ್ಲ. ಆದರೆ, ಇಲ್ಲಿ ಮಗು ಟ್ರೆಂಡಿಯಾಗಿರುವ ಉಡುಗೆಯನ್ನು ಹುಡುಕದಿದ್ದರೂ ಪೋಷಕರು ತಮ್ಮ ಮಗು ಹೊಸ ನಮೂನೆಯ ಉಡುಗೆಯನ್ನೇ ತೊಡಲಿ ಎಂದು ಬಯಸುತ್ತಾರೆ. ಹೀಗಾಗಿ ಮಕ್ಕಳ ವಸ್ತ್ರೋದ್ಯಮ ಭಾರಿ ಪ್ರಮಾಣದಲ್ಲಿ ಬೆಳೆದಿದೆ.

ನವನವೀನ ಮಾದರಿಯ ಟಿ–ಶರ್ಟ್‌, ಫ್ರಾಕ್‌, ಜಾಕೆಟ್‌, ಸ್ಕರ್ಟ್‌ಗಳು ಬಂದಿದ್ದರೂ ದೇಶದಲ್ಲಿ ಮಾತ್ರ ಮಾರಾಟ ಪ್ರಮಾಣದಲ್ಲಿ ಸಾಂಪ್ರದಾಯಿಕ ಉಡುಗೆಗಳೇ ನಂ.1 ಸ್ಥಾನದಲ್ಲಿವೆ. ಇದಕ್ಕೆ ಕಾರಣ ಈ ವಿಭಾಗದಲ್ಲಿ ಬಂದಿರುವ ವೈವಿಧ್ಯ ವಿನ್ಯಾಸಗಳು. ಅದು ನೀಡುವ ಗ್ರ್ಯಾಂಡ್‌ ಲುಕ್‌.

ಚೂಡಿದಾರ್‌, ಲಂಗ–ದಾವಣಿಗಳ ಹಳೆಯ ಮಾದರಿಗಳು ಕಡಿಮೆಯಾಗಿ ಹೊಸ ಮಾದರಿಗಳು ಹುಟ್ಟಿವೆ. ಝರಿ ಕುಸುರಿ, ಕಸೂತಿ, ಕುಂದಣ ಅಲಂಕಾರ, ಟಿಕಳಿ, ಮಣಿಗಳಿಂದ ಮಾಡಿದ ಚಿತ್ತಾರಗಳು ಮಕ್ಕಳ ದಿರಿಸುಗಳನ್ನು ಶ್ರೀಮಂತಗೊಳಿಸಿವೆ. ಅನಾರ್ಕಲಿ ಡ್ರೆಸ್‌ ಆಧುನಿಕ ಯುವತಿಯರ ಮನಗೆದ್ದಿರುವಂತೆಯೇ ಮಕ್ಕಳ ಮನಸ್ಸಿಗೂ ಲಗ್ಗೆಯಿಟ್ಟಿದೆ. ಹುಡುಗರಿಗೆ ಹಲವು ಬಣ್ಣಗಳಲ್ಲಿ ಪಂಚೆ–ಶೆರ್ವಾನಿಗಳು ಬಂದಿದ್ದು ತಂದೆ–ತಾಯಿಯರ ಮೆಚ್ಚುಗೆಗೆ ಪಾತ್ರವಾಗಿವೆ.

ADVERTISEMENT

ಒಟ್ಟು ವಸ್ತ್ರೋದ್ಯಮದಲ್ಲಿ ಶೇ 20ರಷ್ಟು ಪಾಲು ಹೊಂದಿರುವ ಮಕ್ಕಳ ಉಡುಗೆಯ ಮಾರಾಟ ಬರುವ ದಿನಗಳಲ್ಲಿ ಇನ್ನಷ್ಟು ಬೆಳೆಯುವ ನಿರೀಕ್ಷೆಯನ್ನು ಮಾರುಕಟ್ಟೆ ತಜ್ಞರು ವ್ಯಕ್ತಪಡಿಸುತ್ತಾರೆ. ಅಂತರರಾಷ್ಟ್ರೀಯ ಕಂಪನಿಗಳು ಪ್ರವೇಶಿಸಿರುವುದರಿಂದ ‘ಬ್ರ್ಯಾಂಡೆಡ್‌ ಬಟ್ಟೆ’ಗಳ ಮೋಹ ಮೊಳಕೆಯೊಡೆಯುತ್ತಿದೆ. ಉತ್ತಮ ಗುಣಮಟ್ಟ, ಅಂದದ ವಿನ್ಯಾಸ ಹಾಗೂ ಬೆಲೆಗೆ ತಕ್ಕಂಥ ಬಟ್ಟೆ ಎನ್ನುವುದು ಈ ಕಂಪನಿಗಳ ಪ್ರತಿಪಾದನೆ. ಟಿ–ಶರ್ಟ್‌ಗಳು, ಡೆನಿಮ್‌ ಪ್ಯಾಂಟ್‌, ಜಾಕೆಟ್‌ಗಳು, ಚಳಿಗಾಲದ ಉಡುಪುಗಳು, ಬೇಸಿಗೆ ದಿರಿಸುಗಳು ಹಾಗೂ ಕಾಲಕ್ಕೆ ತಕ್ಕಂಥ ವಸ್ತ್ರಗಳು ಇವುಗಳಲ್ಲಿ ಪ್ರಮುಖವಾಗಿವೆ.

ಅಂತರರಾಷ್ಟ್ರೀಯ ಕಂಪನಿಗಳೊಂದಿಗೆ ನೂರಾರು ದೇಸಿ ಖಾಸಗಿ ಕಂಪನಿಗಳೂ ಸ್ಥಾಪನೆಯಾಗಿದ್ದು ಮಕ್ಕಳ ಉಡುಪು ಉತ್ಪಾದನೆಯಲ್ಲಿ ಪೈಪೋಟಿ ನೀಡುತ್ತಿವೆ. ಮುಂದಿನ ದಿನಗಳಲ್ಲಿ ಡೆನಿಮ್‌ ವಸ್ತ್ರಗಳಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಮೆಟ್ರೊ ಸಿಟಿಗಳಲ್ಲಷ್ಟೇ ಅಲ್ಲದೇ ಹಳ್ಳಿ–ಹಳ್ಳಿಗಳಲ್ಲೂ ಈಗ ಟಿ.ವಿ, ಇಂಟರ್‌ನೆಟ್‌, ಫೇಸ್‌ಬುಕ್‌ ಹಾಗೂ ಸಾಮಾಜಿಕ ಜಾಲತಾಣಗಳ ಸಂಪರ್ಕ ಇರುವುದರಿಂದ ಫ್ಯಾಷನ್‌ ಎನ್ನುವುದು ಸರ್ವವ್ಯಾಪಿಯಾಗಿದೆ. ಚಲನಚಿತ್ರ, ಧಾರಾವಾಹಿಗಳೂ ಇಂಥ ಟ್ರೆಂಡ್‌ ಸೆಟ್‌ ಮಾಡುವಲ್ಲಿ ಸದಾ ಮುಂದಿರುತ್ತದೆ.

ಪಾರ್ಟಿ ವೇರ್‌, ವೆಡ್ಡಿಂಗ್‌ ವೇರ್‌, ವಿಂಟರ್‌ ವೇರ್‌ಗಳೂ ಮಕ್ಕಳ ಉಡುಪು ವಿಭಾಗಗಳಲ್ಲಿ ಇವೆ. ಪ್ರತಿ ಹಬ್ಬದ ಸೀಸನ್‌ಗೂ ವಿವಿಧ ಕಂಪನಿಗಳು ಹೊಸ ಬಗೆಯ ಡಿಸೈನ್‌ಗಳ ಉತ್ಪನ್ನಗಳನ್ನು ನೀಡುತ್ತಿವೆ. ಹೀಗಾಗಿ ಮಕ್ಕಳಿಗೆ ಎಷ್ಟು ಬಟ್ಟೆ ಖರೀದಿಸಿದರೂ ತಂದೆ–ತಾಯಿಗೆ ಸಮಾಧಾನ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.