ADVERTISEMENT

ಮಳೆ ನಿಂತು ಹೋದ ಮೇಲೆ...

ಸುಮನಾ ಕೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ಮಳೆ ನಿಂತು ಹೋದ ಮೇಲೆ...
ಮಳೆ ನಿಂತು ಹೋದ ಮೇಲೆ...   

ನೆನೆಯುತ್ತ ನೆನೆಸುವ ಮಳೆ!

ಧರೆಗೆ ಬೆವರಿಳಿಸುವವರಿಗೆ ಮಳೆಯೆಂದರೆ ಮಣ್ಣಿನ ಘಮ. ಮಳೆಯೆಂದರೆ ಜೀವದಾಸರೆ. ನೆನೆಯುತ್ತ ಎಲ್ಲರನ್ನೂ ನೆನೆಯುವ ನೆನಪಿನೋಕುಳಿಯ ಸಿಂಚನ.

ಇಳಿಸಂಜೆಯಲ್ಲಿ ಮಳೆಬಂದು ನಿಂತಾಗ ಮರದ ಕೆಳಗೆ ನಿಂತ ಸಂಗಾತಿಯ ಹೃದಯವೆಲ್ಲ ಹಸಿರು. ಆಗಾಗ ಹುಡುಗನ ಹಣೆಯ ಮೇಲಿನ ಹನಿಗಳ ಒರೆಸುವಾಸೆ ಹುಡುಗಿಗೆ. ಹುಡುಗಿಯ ತೆರೆದ ಬೆನ್ನಿನ ಮೇಲಿನ ಹನಿಗಳ ತುಟಿಯಿಂದ ಸವರುವಾಸೆ ಹುಡುಗನಿಗೆ.

ADVERTISEMENT

ರಾತ್ರಿಯಿಡೀ ಬಂದುನಿಂತ ಮಳೆಗೆ ಹಸಿರ ಹುಲ್ಲ ಮೇಲೆ ಮಂಜಿನಹನಿಯ ದೃಷ್ಟಿಬೊಟ್ಟು. ಅಮ್ಮನ ಮೂಗುತಿಯ ಮಿಂಚನ್ನೇ ನೆನಪಿಸುತ್ತದೆ.

ಮಳೆಯೆಂದರೆ ಮನೆಯ ತಾರಸಿಯಿಂದ ಬೀಳುವ ಹನಿಗಳ ಶಬ್ದ. ಬೊಗಸೆತುಂಬಿ, ಮೊಣಕೈಗುಂಟ ಇಳಿದು ಮೂಡಿಸುವ ಪುಳಕ. ಮಳೆಯೆಂದರೆ ಮನೆಯೊಳಗಿನ ಮಗುವನಿನಂತೆ. ಆಗಾಗ ಕಾಡುವ, ನಮ್ಮೊಳಗೆ ಆಡುವ, ನಮ್ಮ ಕಣ್ಣಿಂದಲೇ ಎಲ್ಲೆಡೆ ಇಣುಕುವ ನಮ್ಮ ಮಗುವಿನಂತೆ.

ಬೆಂಗಳೂರಿನ ಮಳೆಯೇಕೆ ಹಾಗಿಲ್ಲ? ಕಸವೆಂಬ ರಾಕ್ಷಸ ಮಲಗೆದ್ದು ಉಗಿದಂತೆ, ಕಸ ಹಾಸಿ ಹೊದ್ದು ಮರಿ ರಾಕ್ಷಸ ದಾಪುಗಾಲು ಹಾಕಿ ಗುಂಡಿ ಮೂಡಿಸಿ ಹೋಗುವ ಪುಟ್ಟಪಿಶಾಚಿ! ಮಳೆ ಅನುಭವಿಸಲು ಬಿಡಿ... ಒಳ್ಳೆ ರಸ್ತೆ ಕೊಡಿ!!

–ರಶ್ಮಿ ಎಸ್‌

**

ಮಳೆ ಬಂದ್ರೆ ರಸ್ತೆ ಬದಿಯೇ ಕಾಯಬೇಕು

ನನಗೆ ಚಿಕ್ಕಂದಿನಿಂದಲೂ ಮಳೆ, ಮಳೆಗಾಲ ಅಂದ್ರೆ ತುಂಬಾ ಇಷ್ಟ. ಆದರೆ ನನ್ನ ವೃತ್ತಿಯಿಂದಾಗಿ ಮಳೆ ಬರುತ್ತದೆ ಎಂದರೆ ಈಗ ಭಯ ಆರಂಭವಾಗುತ್ತದೆ. ನಾನು ನೀಲಗಿರಿಯಲ್ಲಿ ಉತ್ಪನ್ನಗಳ ಪ್ರೊಮೊಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತೇನೆ. ನಾನು ನಗರದ ಬೇರೆ ಬೇರೆ ಸ್ಟೋರ್‌ಗಳಿಗೆ ಹೋಗಿ ಭೇಟಿ ನೀಡಬೇಕು. ದ್ವಿಚಕ್ರವಾಹನದಲ್ಲಿ ಹೋಗುತ್ತೇನೆ.

ಶನಿವಾರ ಜೋರು ಮಳೆಗೆ ರಸ್ತೆ ತುಂಬಾ ನೀರು. ಹಳ್ಳಗಳೂ ಗೊತ್ತಾಗುತ್ತಿರಲಿಲ್ಲ. ಕೆಲ ಕಡೆಗಳ ರಸ್ತೆಗಳು ಪರಿಚಯ ಇರಲ್ಲ. ಆಗ ರಸ್ತೆಯಲ್ಲಿ ನೀರಿದ್ದಾಗ ಮುಂದಕ್ಕೆ ಹೋಗೋಕೆ ಆಗಲ್ಲ. ಮಳೆ ನಿರು ಇಳಿಯುವವರೆಗೂ ಕಾದು ಮುಂದಕ್ಕೆ ಹೋದೆ. ಒಂದರ್ಧ ಗಂಟೆ ಸಮಯ ಹಾಳಾಯ್ತು.

–ದಿವ್ಯಾ, ವಿನಾಯಕನಗರ

**

ಅಟೋನೇ ಸಿಗಲಿಲ್ಲ

ಮತದಾನ ಮಾಡಲು ನಾನು ಊರಿಗೆ ಶುಕ್ರವಾರ ಸಂಜೆ ಹೊರಟಿದ್ದೆ. ರಾತ್ರಿ 9 ಗಂಟೆಗೆ ಬಸ್. ನಾನು ಸೀಟು ಮೊದಲೇ ಬುಕ್‌ ಮಾಡಿಕೊಂಡಿದ್ದೆ. ನನ್ನ ಇಬ್ಬರು ಗೆಳತಿಯರಿಗೆ ಕೊನೆಕ್ಷಣದಲ್ಲಿ ರಜೆ ಸಿಕ್ಕಿದ್ದರಿಂದ ಬಸ್‌ ಬುಕ್‌ ಮಾಡಿರಲಿಲ್ಲ. ಆಫೀಸಿನಿಂದ ಸಂಜೆ ರೂಮಿಗೆ ಹೊರಟಾಗಲೇ ಮಳೆ ಆರಂಭವಾಗಿತ್ತು. ಸ್ವಲ್ಪ ಹೊತ್ತಿಗೆ ನಿಲ್ಲಬಹುದು ಎಂದು ಅಂದುಕೊಂಡಿದ್ದೇವು.

ಆದರೆ ಮಳೆ ಜೋರು ಸುರಿಯುತ್ತಿತ್ತೇ ವಿನಃ ಕಡಿಮೆಯಾಗುತ್ತಿರಲಿಲ್ಲ. ರೂಮಿಗೆ ತಲುಪಿದ್ದು 7.30ಕ್ಕೆ. ಬ್ಯಾಗ್‌ ತೆಗೆದುಕೊಂಡು ಮೂರು ಜನ ಅಟೋಗೆ ಕಾದೆವು. ಅಟೋ, ಕ್ಯಾಬ್‌ ಯಾವುದೂ ಸಿಗುತ್ತಿರಲಿಲ್ಲ. ಅರ್ಧ ಗಂಟೆ ಮೇಲೆ ಅಟೋ ಸಿಕ್ಕಿತು.

ಜೋರು ಗುಡುಗು, ಮಿಂಚು ಜೊತೆಗೆ ಅಲ್ಲಲ್ಲಿ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಅಂತೂ 8.45 ಹೊತ್ತಿಗೆ ನಿಲ್ದಾಣ ತಲುಪಿದೆವು. ಅಲ್ಲಿ ನೋಡಿದರೆ ಚುನಾವಣೆ ಆಗಿದ್ದರಿಂದ ಎಲ್ಲಾ ಬಸ್‌ಗಳು ಭರ್ತಿ. ಕಡಿಮೆ ಸಂಖ್ಯೆಯ ಬಸ್‌ಗಳಿದ್ದವು. ಕಾದು ಕಾದು ಕೊನೆಗೆ ಸೀಟು ಅವರಿಗೆ ಸಿಕ್ಕಿತು.

–ಅಮೃತಾ, ಜಾಲಹಳ್ಳಿ

**

ಬೈಕ್‌ ಸ್ಕಿಡ್‌ ಆಗುವುದೇ ಜಾಸ್ತಿ

ಮಳೆ ಬಂದಾಗ ಬೈಕ್‌ನಲ್ಲಿ ಹೋಗುವಾಗ ಸ್ಕಿಡ್‌ ಆಗುವುದು ಜಾಸ್ತಿ. ಹಾಗಾಗಿ ತುಂಬ ಜಾಗ್ರತೆಯಿಂದ ಬೈಕ್‌ ಓಡಿಸಬೇಕು. ಬನಶಂಕರಿಯಲ್ಲಿ ಆಫೀಸ್‌, ಯಶವಂತಪುರದಲ್ಲಿ ರೂಮ್‌ ಇದೆ. ಶುಕ್ರವಾರ ಕೆಲಸ ಮುಗಿಸಿಕೊಂಡು ಮಳೆಗೆ ಹೊರಟೆ.

ರಸ್ತೆಯಲ್ಲಿ ನೀರು ನಿಂತು ಬೈಕ್‌ ಅರ್ಧ ಮುಳುಗಿತು. ಯಶವಂತಪುರದ ಮಾರ್ಗಬದಿಗಳಲ್ಲಿ ಮೇ ಫ್ಲವರ್‌ ಮರಗಳು ಜಾಸ್ತಿ. ಅದರ ರೆಂಬೆಗಳು ಮಳೆ ನೀರು ಹೀರಿಕೊಂಡು, ತುಂಬ ಭಾರ ತಡಿಯಕ್ಕಾಗಲ್ಲ.

ರೆಂಬೆಗಳು ತುಂಡಾಗಿ ಎಲ್ಲಿ ಮೈ ಮೇಲೆ ಬೀಳುತ್ತೋ ಎಂದು ಭಯ ಆಗುತ್ತಿರುತ್ತದೆ. ನನ್ನ ಕಣ್ಣೆದುರು ಕೆಲ ರೆಂಬೆಗಳು ರಸ್ತೆಗೆ ಬಿದ್ದವು. ನನಗೇನೂ ಅಪಾಯ ಆಗಿಲ್ಲ. ಬೆಂಗಳೂರಿನಲ್ಲಿ ಮಳೆ ಅಂದ್ರೆ ಖುಷಿಗಿಂತ ಭಯವೇ ಜಾಸ್ತಿ.

–ಆದರ್ಶ್‌ ಟಿ.ಎಸ್‌, ವಕೀಲ

**

ಜ್ವರದಿಂದ ಮಲಗಿದೆ

ಮೊನ್ನೆ ಸುರಿದ ಮೊದಲ ಮಳೆಗೆ ಮಣ್ಣಿನ ವಾಸನೆ, ಅಲ್ಲೆಲ್ಲೋ ಆಕಾಶದಲ್ಲಿ ಮೂಡುವ ಮಿಂಚಿನ ಚಿತ್ತಾರ, ಗುಡುಗಿನ ಸದ್ದು ಇವೆಲ್ಲವೂ ನನ್ನ ಬಾಲ್ಯವನ್ನು ಮತ್ತೊಮ್ಮೆ ನೆನೆಪಿಸಿತು. ಆದರೆ ಅದೇ ಸಮಯದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ನಾನು ಸಿಕ್ಕಿಹಾಕಿಕೊಂಡು ಕಂಗೆಟ್ಟಿದ್ದೆ.

ಸಂಜೆ ಏಳು ಗಂಟೆಯಿಂದ ಸುಮಾರು ಒಂದೂವರೆ ತಾಸು ರಸ್ತೆಯಲ್ಲೇ ಕಾಲ ಕಳೆಯುವ ಹಾಗಾಯಿತು. ಮರುದಿನದ ಜ್ವರ. ಮಳೆ ಎಂದರೆ ಖುಷಿ ಪಡುತ್ತಿದ್ದ ನನಗೆ ಈಗ ಮಳೆ ಬರುತ್ತೆ ಎಂಬ ಸೂಚನೆ ಭಯವನ್ನೇ ಉಂಟುಮಾಡುತ್ತದೆ.

ನಿತಿನ್‌, ಬೆಂಗಳೂರು

**

ಯಂತ್ರಗಳೂ ಮಳೆಗೆ ಹಾಳಾದವು

ನಾನು ಎಂಜಿನಿಯರ್ ಆಗಿ ಕೆಲಸ ಮಾಡ್ತಿದ್ದೀನಿ. ನಮ್ಮದು ಕಟ್ಟಡ ಕೆಲಸ ನಡೆಯುತ್ತಿತ್ತು. ಶುಕ್ರವಾರ ಸಡನ್ನಾಗಿ ಜೋರು ಮಳೆ. ಏನೂ ಮುನ್ನೆಚ್ಚರಿಕೆ ಕ್ರಮಗಳೂ ಇರಲಿಲ್ಲ. ಬೇಸ್‌ಮೆಂಟ್‌ನಲ್ಲಿದ್ದ ಸಿಮೆಂಟ್‌, ಯಂತ್ರಗಳು ಎಲ್ಲಾ ನೀರಿನಲ್ಲಿ ಮುಳುಗಿದವು. ಯಂತ್ರಗಳೂ ಹಾಳಾಗುವ ಸಾಧ್ಯತೆಗಳೂ ಇರುತ್ತವೆ. ನಮ್ಮ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡುವ ಭೂತದಂತೆ ಕಾಣುತ್ತದೆ ಬೆಂಗಳೂರಿನ ಮಳೆ.

–ಭರತ್‌ ಶ್ರೀನಿವಾಸಮೂರ್ತಿ, ಸೀ– ಮ್ಯಾಕ್ ಕಂಪೆನಿ, ಇಂದಿರಾನಗರ

**

ಬೈಕ್‌ ಓಡಿಸುವುದೇ ಹರಸಾಹಸ

ನನಗೆ ಮಳೆ ಬಂದ್ರೆ ಖುಷಿನೇ. ನಾನು ನೆಸ್ಲೆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನದು ಫೀಲ್ಡ್‌ ವರ್ಕ್‌ ಕೆಲಸ. ಒಂದೊಂದು ದಿನ ಒಂದೊಂದು ಕಡೆ ಹೋಗಬೇಕು. ಶುಕ್ರವಾರ ಸಂಜೆ ಜೋರು ಮಳೆಗೆ ನಾನು ಮೂಡಲಪಾಳ್ಯದಿಂದ ಕೆಲಸ ಮುಗಿಸಿ ವಾಪಾಸ್ಸಾಗುತ್ತಿದ್ದೆ. ಮಳೆಗೆ ಸಿಕ್ಕಿಹಾಕಿಕೊಂಡೆ.

ನಮ್ಮನೆ ರಾಮೋಹಳ್ಳಿಗೆ ಅಲ್ಲಿಂದ 10 ಕಿ.ಮೀ. ರಸ್ತೆ ತುಂಬಾ ನೀರು. ಹಳ್ಳ, ಮೋರಿ ಏನೂ ಕಾಣಲ್ಲ. ನಮ್ಮ ಕಡೆ ಟ್ರಾಫಿಕ್‌ ಸಿಗ್ನಲ್‌ಗಳಿಲ್ಲ. ಹಾಗಾಗಿ ಜಾಮ್‌ ಸಮಸ್ಯೆ ಆಗಲಿಲ್ಲ. ಆದರೆ ಮಳೆಗೆ ವಾಹನಗಳ ಓಡಾಟ ನಿಧಾನ ಆಗಿ, ನಾವು ಮನೆ ತಲುಪುವಷ್ಟರಲ್ಲಿ ಹೈರಾಣಾಗಿದ್ದೆ.

–ಗಿರೀಶ್‌ಕುಮಾರ್‌, ರಾಮೋಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.