ಬೆಳಿಗ್ಗೆ ಯಾಕಾದರೂ ಆಗುವುದೋ ಎಂದು ಮೈ ಮುರಿಯುತ್ತಾ ಬಿಸಿಲಿಗೆ ಕಾಯುತ್ತಾ ಕುಳಿತೆ. ಯಾರಾದರೂ ನಮ್ಮ ಮನೆ ಪ್ರವೇಶಿಸಿದರೆ ನನಗೆ ಭಯವಾಗುತ್ತದೆ. ಯಾರಾದರೂ ಬಂದು ನನ್ನನ್ನು ಹೊರಗೆ ತೆಗೆದುಕೊಂಡು ಹೋಗಿ, ಯಾವುದಾದರೂ ಮಾರ್ಗದಲ್ಲಿ ಓಡಾಡಲು ಬಿಡುತ್ತಾರೇನೋ ಎನ್ನುವ ಭೀತಿ. ಈ ದಿನ ನಾನು ಬೆಳಿಗ್ಗೆ ಎದ್ದ ಗಳಿಗೆ ಸರಿ ಇರಲಿಲ್ಲವೆನೋ? ಡಿಪೋದ ದಂಡಾಧಿಕಾರಿ ಕೆಎ01 ಎಫ್ 1117 ಅನ್ನು 13ರ ರೂಟಿಗೆ ಹಾಕಿ ಎಂದಾಗ ನನ್ನ ಪ್ರಾಣವೇ ಹೋದಂತಾಯಿತು.
ಬನಶಂಕರಿಯಿಂದ ಹೊರಟು ಶಿವಾಜಿನಗರ ತಲುಪುವ ಶಕ್ತಿ ನನ್ನಲ್ಲಿ ಇದೆಯೇ ಎಂದು. ಆದರೇನು ಮಾಡುವುದು, ನಾನು ಉಸಿರು ಬಿಡುವುದರೊಳಗೆ ಚಾಲಕ ಬಂದು ನನ್ನ ಮೇಲೆ ಕುಳಿತು ನನ್ನ ಕಿವಿಹಿಂಡಿ ಹೃದಯವನ್ನು ಚಾಲನೆಗೆ ತಂದ. ಢರ್ ಢರ್... ಬುಸ್... ಉಸ್ ಎನ್ನುತ್ತಾ ನಿಧಾನವಾಗಿ ಹೆಜ್ಜೆಯಿಡಲು ಆರಂಭಿಸಿದೆ. ನಾನು ಹೊರ ಹಾಕುತ್ತಿದ್ದ ಕೆಟ್ಟ ಗಾಳಿ ಸುತ್ತಲ ವಾತಾವರಣವನ್ನು ಕಲುಷಿತಗೊಳಿಸಿತು. ಜನರು ನನ್ನನ್ನು ನೋಡಿ ಛೀ .. ಥೂ ಎನ್ನುತ್ತಾ ದೂರ ಸರಿದರು. ಬಸ್ ನಿಲ್ದಾಣಕ್ಕೆ ತೆವಳುತ್ತಾ ಸಾಗಿದೆ. ನನ್ನ ನಂಬರ್ ನೋಡಿದಾಕ್ಷಣ ದನಗಳು ನುಗ್ಗುವಂತೆ ನನ್ನೊಳಗೆ ದಬದಬನೆ ಹತ್ತಿ, ನನ್ನ ಹರಿದ ಅಸನಗಳ ಮೇಲೆ ಕುಳಿತರು. ಇನ್ನಷ್ಟು ಜನ ಒತ್ತಿಕೊಂಡು ನಿಂತರು. ಅವರ ಭಾರಕ್ಕೆ ನಾನು ಕುಸಿಯುವೆನೋ ಎಂದೆನಿಸುತ್ತಿತ್ತು, ಈ ಜನರಿಗೆ ಬುದ್ಧಿ ಬೇಡವೆ, ನನಗೆ ವಯಸ್ಸಾಗಿದೆ, ನನ್ನ ಮೇಲೆ ಸವಾರಿ ಮಾಡಬಾರದು ಎಂಬ ಕನಿಕರವೂ ಇಲ್ಲವೇ ಎಂದೆನಿಸುತ್ತಿತ್ತು.
ನಿಧಾನವಾಗಿ ಬಸ್ ನಿಲ್ದಾಣ ಬಿಟ್ಟು ರಸ್ತೆಗಳಿದೆ. ನಾನು ಮಾಡುವ ಕೆಟ್ಟ ಶಬ್ದಕ್ಕೆ ನನ್ನ ಪ್ರಯಾಣಿಕರೆಲ್ಲಾ ಕಿವಿ ಮುಚ್ಚಿಕೊಂಡರು, ಕೆಲವು ಹುಡುಗರು ಕೇಕೆ ಹಾಕಿ ನಕ್ಕರು. ಚಾಲಕರಿಗೆ, ನಿರ್ವಾಹಕರಿಗೆ ಇಂಥ ಬಸ್ ಅನ್ನು ಯಾಕೆ ತಂದೀರಿ, ನಾವು ಶಿವಾಜಿನಗರ ಸೇರಿದಂತೆ, ಆಫೀಸಿಗೆ ತಡವಾಗುತ್ತದೆ, ಕಾಲೇಜಿಗೆ ತಡವಾಗುತ್ತದೆ ಎಂದು ತಲೆಗೊಂದರಂತೆ ಮಾತನಾಡ ತೊಡಗಿದರು. ನನಗೆ ತುಂಬಾ ಹಿಂಸೆಯಾಗತೊಡಗಿತು.
ನಾನು ಹರೆಯದಲ್ಲಿದ್ದಾಗ ಜನ ನನ್ನನ್ನು ಎಷ್ಟು ಹೊಗಳುತ್ತಿದ್ದರು. ಎಷ್ಟು ಜೋರಾಗಿ ಹೋಗುತ್ತಿದ್ದೆ, ನಿಮಿಷಕ್ಕೆ ಒಂದೊಂದು ನಿಲ್ದಾಣ ದಾಟಿದಾಗಲು ಕೇಕೆ ಹಾಕುತ್ತಿದ್ದ ಹುಡುಗರು ಈಗ ಬಯ್ಯುತ್ತಿದ್ದಾರಲ್ಲ ಎನಿಸಿತು, ಅವರು ಸಮಯ ಸಾಧಕರಲ್ಲವೇ ಅವರ ಸಮಯಕ್ಕೆ ಸರಿಯಾಗಿ ಅವರ ಜಾಗವನ್ನು ತಲುಪಿಸಿದರೆ ಸಾಕು, ಅಷ್ಟೆ ನನ್ನ ಅವರ ಸಂಬಂಧವಲ್ಲವೇ ಎನಿಸಿತು. ಒಂದೊಂದು ರಸ್ತೆಯ ಹಳ್ಳ ದಿನ್ನೆಗಳನ್ನು ಹತ್ತಿ ಇಳಿದಾಗಲೂ ನನ್ನ ಬೆನ್ನಮೂಳೆ ಮುರಿದಂತಹ ಅನುಭವವಾಗುತ್ತಿತ್ತು, ಚಾಲಕ ನನ್ನನ್ನು ಎಷ್ಟೇ ಒತ್ತಾಯಿಸಿದರೂ ನನಗೆ ಬಿರುಸಾಗಿ ಸಾಗುವ ಶಕ್ತಿ ಇಲ್ಲ.ಪ್ರಯಾಣಿಕರು ಶಾಪ ಹಾಕುತ್ತಿದ್ದರೆ ನನ್ನ ಕಷ್ಟ ಅವರಿಗೆ ಅರ್ಥವಾಗುತ್ತಿಲ್ಲವೇ ಎಂದು ಸಂಕಟವಾಗುತ್ತದೆ.
ಸುಮ್ಮನೆ ನನ್ನನ್ನು ಬಯ್ಯುವ ಬದಲು ಇವರೇ ನನಗೆ ಅಗ್ನಿಸ್ಪರ್ಶ ಮಾಡಬಾರದೆ ಎಂದೂ ಅನಿಸುತ್ತದೆ. ಆದರೆ ಈಗಿನ ಜನರಿಗೆ ಎಲ್ಲಿದೆ ಅಷ್ಟು ಧೈರ್ಯ ಎಂದು ಅವರ ಬಗ್ಗೆಯೂ ಮರುಕವುಂಟಾಗುತ್ತದೆ. ಇಷ್ಟೆಲ್ಲ ನೋವಿನ ಕಥೆ ಹೇಳುತ್ತಿರುವವರು ಯಾರು ಎಂದು ಕೊಂಡಿರಾ ನಾನು ಈ ದಿನ ಬೆಳಿಗ್ಗೆ 9 ಗಂಟೆಗೆ ಬನಶಂಕರಿಯಿಂದ ಶಿವಾಜಿನಗರಕ್ಕೆ ಬಂದ ರೂಟ್ ನಂಬರ್ 13 ಬಸ್. ನನ್ನ ಸಂಖ್ಯೆ ಕೆಎ01 ಎಫ್ ಎ 1117. ನನ್ನಂತೆ ಎಷ್ಟೋ ಮುದಿ ಬಸ್‌ಗಳು ಬಿಎಂಟಿಸಿಯಲ್ಲಿ ಇವೆ. ಬದಲಿ ಬಸ್‌ಗಳಾಗಿ ನಮ್ಮನ್ನು ಉಪಯೋಗಿಸುತ್ತಾರೆ, ನಮ್ಮ ಉಪಯೋಗಕ್ಕಿಂತ ನಮ್ಮಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಗ್ಗೆ ನಮಗೆ ಕನಿಕರ ಹೆಚ್ಚು. ಅಯ್ಯೋ ಪಾಪದ ಪ್ರಯಾಣಿಕರೇ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.