ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಶ್ರೀಶಕ್ತಿ ಆರಾಧಕರಾಗಿದ್ದು ಶ್ರೀವಿದ್ಯಾ ದೇವತೆಯನ್ನು ಒಲಿಸಿಕೊಂಡವರು. ತಾಂತ್ರಿಕ ಕ್ರಮದಲ್ಲಿ ಉಪಾಸನೆ ಮಾಡಬೇಕಾದ ಸಂಪ್ರದಾಯದಂತೆ ಶ್ರೀಕಮಲಾಂಬಾ ನವಾವರಣ ಕೃತಿಗಳನ್ನು ಅವರು ರಚಿಸಿದ್ದಾರೆ.
ಅಂತಹ ಹನ್ನೊಂದು ಕೃತಿಗುಚ್ಛದಲ್ಲಿ ತಂಜಾವೂರು ಜಿಲ್ಲೆಯ ಶ್ರೀಕಮಲಾಂಬಾ ದೇವಿಯ ಸ್ತುತಿಯನ್ನು ಮಾಡಲಾಗಿದೆ. ಅತ್ಯಂತ ಶಕ್ತಿಯುತವಾದ ಅಕ್ಷರಗಳು ಮತ್ತು ಪದಗಳು ಆ ಕೃತಿಗಳಲ್ಲಿ ತುಂಬಿಕೊಂಡಿವೆ.
ಆ ಗುಚ್ಛದಲ್ಲಿ ಒಂದು ಧ್ಯಾನ ಕೃತಿ (ತೋಡಿ), ಒಂಬತ್ತು ಆವರಣ ಕೃತಿಗಳು ಮತ್ತು ಶ್ರೀರಾಗದ ಒಂದು ಮಂಗಳ ಕೃತಿ ಅಡಕವಾಗಿದೆ. ರಾಗ, ಲಯ ಮತ್ತು ಸಾಹಿತ್ಯಿಕವಾಗಿ ಆ ಕೃತಿಗಳ ಮಹತ್ವವನ್ನು ದೀಕ್ಷಿತರು ಹೆಚ್ಚಿಸಿದ್ದಾರೆ.
ತೋಡಿ, ಆನಂದಭೈರವಿ, ಕಲ್ಯಾಣಿ, ಶಂಕರಾಭರಣ, ಭೈರವಿ, ಶ್ರೀ ಮುಂತಾದ ಸುಪರಿಚಿತ ರಾಗಗಳ ಬಳಕೆಯ ಜೊತೆಗೆ ಪುನ್ನಾಗವರಾಳಿ, ಆಹಿರಿ ಮತ್ತು ಘಂಟಾ ಅಂತಹ ಅಪೂರ್ವ ರಾಗಗಳನ್ನೂ ಬಳಸಲಾಗಿದೆ.
ಆದಿ, ರೂಪಕ, ಮಿಶ್ರ ಛಾಪುವಷ್ಟೇ ಅಲ್ಲದೆ ಅಟ್ಟ, ಝಂಪೆ, ತ್ರಿಪುಟ ಮತ್ತು ಏಕತಾಳಗಳ ಪ್ರಯೋಗವೂ ಆಗಿರುವುದು ವಿಶೇಷ. ಕಮಲಾಂಬಾ ಎಂಬ ಪದದೊಂದಿಗೆ ಆರಂಭವಾಗುವ ಆ ಕೃತಿಗಳಲ್ಲಿ ರಾಗ ಮುದ್ರೆ (ರಾಗಗಳ ಹೆಸರು)ಯೂ ಕೌಶಲ್ಯಪೂರ್ಣವಾಗಿ ಸಾಹಿತ್ಯದೊಂದಿಗೆ ಬೆರೆತುಕೊಂಡಿದೆ.
ಶ್ರೀಚಕ್ರದ ಭಾಗವಾಗಿರುವ ಒಂದೊಂದು ಆವರಣದ ವರ್ಣನೆಯನ್ನು ನವಾವರಣ ಕೃತಿಗಳು ಹೊಂದಿವೆ. ಹೀಗೆ ಧ್ಯಾನ ಮತ್ತು ತಾಂತ್ರಿಕ ಮಹತ್ವದ ಆ ಕೃತಿಗಳು ಕರ್ನಾಟಕ ಸಂಗೀತಕ್ಕೆ ಅತ್ಯಮೂಲ್ಯವಾದ ಕೊಡುಗೆಗಳಾಗಿವೆ. ಆ ನವಾವರಣ ಕೃತಿಗಳನ್ನು ಹಾಡಬೇಕಾದರೆ ಮೊದಲಿಗೆ ಗೌಳ ರಾಗದ `ಶ್ರೀ ಮಹಾಗಣಪತಿರವತುಮಾಂ' ಕೃತಿಯನ್ನು ಹಾಡುವುದು ವಾಡಿಕೆ.
ಅದಾದ ನಂತರ ಗುರು-ಕೃತಿಯಾದ `ಶ್ರೀಬಾಲಸುಬ್ಯಹ್ಮಣ್ಯಾಯ' (ಸುರುಟಿ ರಾಗ) ಹಾಡಿ ಧ್ಯಾನ ಕೃತಿಯೊಂದಿಗೆ ಮುಂದುವರೆದು ಮಂಗಳಕೃತಿಯೊಂದಿಗೆ ಸಮಾಪ್ತಗೊಳಿಸಲಾಗುವುದು.
ಇಂತಹ ಸತ್ವ-ತತ್ವ-ಮಹತ್ವದ ನವಾವರಣ ಕೃತಿಗಳ ಗಾಯನ ಸೀಡಿಯೊಂದನ್ನು ಶನಿವಾರದಂದು ಗಾಯನ ಸಮಾಜದ ಸಭಾಂಗಣದಲ್ಲಿ ಅನಾವರಣಗೊಳಿಸಲಾಯಿತು. ಹಿರಿಯ ಗಾಯಕ ಹಾಗೂ ಕಲಾಪೋಷಕ ಎನ್. ಅನಂತಪದ್ಮನಾಭರಾಯರ ಶ್ರೀ ಪರಿಮಳ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಅವರ ಶಿಷ್ಯೆ ಸುಮತಿಯವರು ವಿದ್ಯಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಸ್ತುತಪಡಿಸಿರುವ ಸೀಡಿಯು ವಿಶಿಷ್ಟವಾಗಿ ಮೂಡಿ ಬಂದಿದೆ. ಅನಂತಪದ್ಮನಾಭರಾಯರ ಮಾರ್ಗದರ್ಶನ ಮತ್ತು ಶಿಕ್ಷಣ ಫಲಪ್ರದವಾಗಿರುವುದು ಸಂತಸದ ವಿಷಯ.
ಸೀಡಿಯ ಬಿಡುಗಡೆಯ ನಂತರ ಪ್ರತಿಭಾವಂತ ಗಾಯಕಿ ಸುಮತಿ ಅವರು ನವಾವರಣ ಕೃತಿಗಳನ್ನು ಹಾಡಲು ಬೇಕಾದ ಘನತೆ ಮತ್ತು ಗಾಂಭೀರ್ಯಗಳಿಂದ ಅವುಗಳನ್ನು ಸೊಗಸಾಗಿ ಹಾಡಿದರು. ಪ್ರತಿಯೊಂದು ಪ್ರಸ್ತುತಿಯನ್ನೂ ಅವರು ತಮ್ಮ ಸೂಕ್ತವಾಗಿದ್ದ ಟಿಪ್ಪಣಿಗಳಿಂದ ಮತ್ತಷ್ಟು ಆಕರ್ಷಕಗೊಳಿಸಿದರು.
ಆನಂದ ವಿಶ್ವನಾಥನ್ ಅಯ್ಯರ್ (ಪಿಟೀಲು), ರಾಜಕುಮಾರ್ (ಮೃದಂಗ), ದಯಾನಂದ ಮೋಹಿತೆ (ಘಟ) ಮತ್ತು ಭೀಮಾಚಾರ್ (ಮೋರ್ಚಿಂಗ್) ಸಹಕಾರ ಉಪಯುಕ್ತವಾಗಿತ್ತು.
ಸುಳಾದಿಗಳ ಲೋಕಾರ್ಪಣೆ
ಹರಿದಾಸ ಸಾಹಿತ್ಯವು ಭಕ್ತಿ, ಸಮಾಜ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ಶ್ರೀಮಂತವಾಗಿ ಸಮೃದ್ಧಗೊಳಿಸಿದಷ್ಟೇ ಸಂಗೀತಕ್ಕೂ ಅದು ವಿಪುಲವಾದ ಕಾಣಿಕೆಯನ್ನು ನೀಡಿದೆ. ನಮ್ಮ ಹರಿದಾಸರು ಗೀತೆಗಳು, ವೃತ್ತ ನಾಮ, ಉಗಾಭೋಗ, ದಂಡಕ, ತ್ರಿಪದಿ, ಸಾಂಗತ್ಯ, ರಗಳೆ ಹೀಗೆ ಹಲವಾರು ರೀತಿಯ ರಚನೆಗಳನ್ನು ಮಾಡಿ ಭಗವಂತನ ಆರಾಧನೆ, ಸ್ತುತಿ ಹಾಗೂ ಪ್ರಾಪ್ತಿಗೆ ಸುಲಭೋಪಾಯಗಳನ್ನು ಒದಗಿಸಿದ್ದಾರೆ. ಹರಿಸರ್ವೋತ್ತಮತ್ವ, ದಶಾವತಾರ, ಶ್ರೀಹರಿಭಕ್ತಿ, ನವಧಾ ಭಕ್ತಿ ಹೀಗೆ ವೈವಿಧ್ಯಮಯವಾದ ಅಂಶಗಳನ್ನು ಹರಿದಾಸ ಸಾಹಿತ್ಯದಲ್ಲಿ ಬಣ್ಣಿಸಲಾಗಿದೆ.
ಅಂತಹುದೇ ಅತ್ಯಂತ ಪ್ರಮುಖ ಪ್ರಕಾರ ಸುಳಾದಿಗಳ ರಚನೆ. ಸುಳಾದಿಗಳೆಂದರೆ ಭಗವಂತನ ಪ್ರಾಪ್ತಿಗೆ ಸುಲಭದ ಹಾದಿ ಎಂದು ಅರ್ಥೈಸಬಹುದು. ಈ ಸುಳಾದಿಗಳು ಕೀರ್ತನೆಗಳಂತೆಯೇ ಇರುತ್ತವೆ.
ಆದರೆ ಅವುಗಳಲ್ಲಿ ಏಳು ಅಥವಾ ಎಂಟು ಭಾಗಗಳಿರುತ್ತವೆ. ಕೆಲವು ಸಾಮಾನ್ಯ ಸುಳಾದಿಗಳಾದರೆ ಅನೇಕ ಅಸಾಧಾರಣ ಹಾಗೂ ವಿಶಿಷ್ಟ ಸುಳಾದಿಗಳೂ ಇವೆ.
ಅವು ಒಂದೇ ರಾಗದಲ್ಲಿ ತಾಳದಲ್ಲಿ ಅಥವಾ ಬೇರೆ ಬೇರೆ ರಾಗಗಳು ಮತ್ತು ತಾಳಗಳಲ್ಲೂ ಲಭ್ಯವಾಗುತ್ತವೆ. ಪೌರಾಣಿಕ, ಭಕ್ತಿ ಪ್ರಧಾನ ಮತ್ತು ಮನೋವೈಜ್ಞಾನಿಕವಾಗಿಯೂ ನೀತಿ ಬೋಧಕವಾಗಿಯೂ ಅವು ಮೈತಳೆದಿವೆ.
ಸಂಗೀತಗಾರರಿಗೆ ಅದೊಂದು ಉತ್ತಮವಾದ ಸಾಮಗ್ರಿಯಾಗಬಲ್ಲದು. ಸಂಗೀತ ಕ್ಷೇತ್ರದಲ್ಲಿ ಅಗಾಧವಾಗಿರುವ ಅವುಗಳ ಬಗೆಗೆ ಸ್ವಲ್ಪ ಮಟ್ಟಿನ ಕೆಲಸವಾಗಿರುವುದು ಪ್ರಶಂಸಾರ್ಹ. ನೃತ್ಯ ಕ್ಷೇತ್ರದಲ್ಲೂ ಅವುಗಳ ಪ್ರತಿಪಾದನೆಯ ಒಂದೆರಡು ಪ್ರಯತ್ನಗಳು ನಡೆದಿವೆ. ಹಾಗಾಗಿ ಸುಳಾದಿಗಳ ಬಗೆಗೆ ಸಮಗ್ರ ಮಾಹಿತಿ ಮತ್ತು ವಿವರಗಳು ಒಂದೆಡೆ ಸಿಗುವಂತಾಗುವುದು ಸ್ವಾಗತಾರ್ಹ.
ಹರಿದಾಸ ಸಾಹಿತ್ಯಕ್ಕೇ ತಮ್ಮನ್ನು ಅರ್ಪಿಸಿಕೊಂಡಿರುವ ವಾಗ್ಮಿ ಮತ್ತು ಪ್ರಬುದ್ಧ ಲೇಖಕ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಇಂತಹ ಸಾಧನೆ ಮಾಡಿ ಹರಿದಾಸ ಸಾಹಿತ್ಯ, ಸಂಗೀತ ಮತ್ತು ನೃತ್ಯ ಕ್ಷೇತ್ರಗಳಿಗೆ ಉಪಕಾರವನ್ನು ಮಾಡಿದ್ದಾರೆ.
ಅವರು ಸಂಪಾದಿಸಿರುವ `ಹರಿದಾಸರ 101 ಅಪೂರ್ವ ಸುಳಾದಿಗಳು' ಜಯನಗರದ ಶ್ರೀಲಲಿತಾದೇವಿ ಟ್ರಸ್ಟ್‌ನ ನೆರವಿನಲ್ಲಿ ತಿರುಪತಿ ದೇವಾಲಯದ ದಾಸ ಸಾಹಿತ್ಯ ಯೋಜನೆಯ ವಿಶೇಷಾಧಿಕಾರಿ ಪಗಡಾಲಾ ಆನಂದ ತೀರ್ಥಾಚಾರ್ಯರಿಂದ ಬಿಡುಗಡೆಗೊಂಡಿತು.
ವಿವಿಧ ಹರಿದಾಸರ ವಿವಿಧ ಸುಳಾದಿಗಳು ಸುಮಾರು 392 ಪುಟಗಳ ಪುಸ್ತಕದಲ್ಲಿ ರಾಗ ತಾಳ ನಿರ್ದೇಶನ ಮತ್ತು ಅಕಾರಾದಿ ಸೂಚಿಯೊಂದಿಗೆ ಪ್ರಕಟಗೊಂಡಿವೆ.
ಅನನ್ಯ ಪ್ರತಿಭೆ
ಮೋಹಿನಿಯಾಟ್ಟಂ ಹಾಗೂ ಭರತನಾಟ್ಯದಲ್ಲಿ ಸಾಕಷ್ಟು ಪರಿಶ್ರಮ ಗಳಿಸಿ ಸ್ತುತ್ಯರ್ಹ ಸಾಧನೆಯನ್ನು ಮಾಡುತ್ತಿರುವ ಕಲಾವಿದೆ ರೇಖಾ ರಾಜು ಅವರು ಸೇವಾ ಸದನದಲ್ಲಿ ನಡೆದ ಅನನ್ಯ ನೃತ್ಯೋಲ್ಲಾಸದಲ್ಲಿ ಪ್ರತಿಭಾ ಪ್ರದರ್ಶನ ನಡೆಸಿದರು. ಅವರು ತಮ್ಮ ಕಾರ್ಯಕ್ರಮದ ಮೊದಲ ಭಾಗವನ್ನು ಮೋಹಿನಿಯಾಟ್ಟಂ ಹಾಗೂ ಉತ್ತರಾರ್ಧವನ್ನು ಭರತನಾಟ್ಯಕ್ಕೆ ಮೀಸಲಿಟ್ಟರು.
ಸಾಂಪ್ರದಾಯಿಕವಾದ ಚೊಲ್ಲುಕಟ್ಟಿ (ಕಾನಡಾ)ನೊಂದಿಗೆ ಮೋಹಿನಿಯಾಟ್ಟಂ ಪ್ರದರ್ಶನವನ್ನು ಅವರು ಆರಂಭಿಸಿದರು. ಆ ನೃತ್ಯದ ಪ್ರಧಾನ ಅಂಶಗಳಾದ ಬಾಗು, ಬಳುಕು, ಲಾಸ್ಯಮಯ ಹೆಜ್ಜೆಗಾರಿಕೆ ಹಾಗೂ ತಿರುವು, ವಿಳಂಬ ಲಯದ ಚಲನವಲನ ನೋಡುಗರ ಕಣ್ಣುಗಳನ್ನು ತುಂಬಿದವು. ನೃತ್ತ ಪ್ರಧಾನವಾದ ಚೊಲ್ಲುಕಟ್ಟನ್ನು ನಿರೂಪಿಸುವಾಗ ಅವರು ತೋರಿದ ಲಯಗಾರಿಕೆ ಮೆಚ್ಚಿಸಿತು.
`ಓಂ ನಮೋ ನಾರಾಯಣಾಯ' ಸುಮಧುರ ಕರ್ಣರಂಜಿನಿ ರಾಗದಲ್ಲಿದ್ದು ನಾರಾಯಣನ ಗುಣ ವಿಶೇಷಗಳು ರೇಖಾ ಅವರ ಸುಲಲಿತ ಅಭಿನಯದಲ್ಲಿ ಚಿತ್ರಿತಗೊಂಡವು. ಜಯದೇವನ ಅಷ್ಟಪದಿ (ಲಲಿತಲವಂಗ, ಹಿಂದೋಳ) ಪ್ರೌಢ ನಿರ್ವಹಣೆಯಿಂದ ಗಮನ ಸೆಳೆಯಿತು.
ರೇಖಾ ಅವರ ಶಿಷ್ಯೆಯರು ಮಹಾಗಣಪತಿಂ (ನಾಟ) ಮತ್ತು ಜತಿಸ್ವರ (ರಾಗಮಾಲಿಕೆ)ಗಳ ನಿರೂಪಣೆಯಲ್ಲಿ ಸಮೂಹ ಶಿಸ್ತು ಮತ್ತು ಶ್ಲಾಘನೀಯ ಲಯ ಗ್ರಹಿಕೆಯನ್ನು ಪ್ರದರ್ಶಿಸಿದರು. ನಂತರ ರಾಮಾಯಣ ಶಬ್ದವನ್ನು ವಿಸ್ತರಿಸಿದ ರೇಖಾ, ಭರತನಾಟ್ಯ ಮಾಧ್ಯಮದ ಸುಕ್ಷ್ಮಗಳನ್ನು ಹೊರಗೆಡಹಿದರು.
`ಬಾ ಬಾ ಶಂಕರ'ದ ಮಂಡನೆಯಲ್ಲಿ ಅವರ ಓಜಃಪೂರ್ಣ ಹಾಗೂ ರಭಸದ ಚಲನೆಗಳು ವಿಷಯ ವಸ್ತುವಿಗನುಸಾರವಾಗಿದ್ದು ಅವರ ಅಭಿನಯದಲ್ಲಿ ಶಂಕರನ ಹಿರಿಮೆ ಎದ್ದು ಕಂಡಿತು. `ಆಡಿಸಿದಳೆಶೋದ' (ಕಾಪಿ) ಆತ್ಮೀಯವಾಗಿ ಚಿತ್ರಿತಗೊಂಡಳು. ಮಿಥುನ್‌ಶಾಂ (ನಟುವಾಂಗ), ಆನಂದ್ (ಗಾಯನ), ಜನಾರ್ದನ (ಮೃದಂಗ) ಮತ್ತು ಮಹೇಶ್‌ಸ್ವಾಮಿ (ಕೊಳಲು) ಎರಡೂ ನೃತ್ಯ ಶೈಲಿಗಳ ಬೆಡಗನ್ನು ವರ್ಧಿಸುವಂತಹ ರೀತಿಯಲ್ಲಿ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.