ಬೆಳಿಗ್ಗೆ ಎದ್ದು ಒಂದು ಲೋಟ ಹಾಲು ಕುಡಿಯಬೇಕು, ಸ್ಕೂಲ್‌ನಿಂದ ಬಂದ ಮೇಲೆ ಹೋಂ ವರ್ಕ್ ಮಾಡಬೇಕು, ರಾತ್ರಿ ಬೇಗ ಮಲಗಬೇಕು...
ಹೀಗೆಲ್ಲ ಶಿಸ್ತಿನ ಪಾಠ ಹೇಳುವ ಅಮ್ಮನನ್ನು ಕಂಡರೆ ಪುಟ್ಟಿಗೆ ಇಷ್ಟವೇ ಆಗುತ್ತಿರಲಿಲ್ಲ. ಆದರೆ ಅಪ್ಪ ಹಾಗಲ್ಲ. ಆಫೀಸಿನಿಂದ ಬಂದ ತಕ್ಷಣ ಎತ್ತಿ ಮುದ್ದಾಡುತ್ತಿದ್ದರು. ಏನು ಮಾಡಿದರೂ ಸಮರ್ಥಿಸಿಕೊಳ್ಳುತ್ತಿದ್ದರು.
ಒಂದು ಸಲ ಹೀಗಾಯಿತು ನೋಡಿ. ಅಪ್ಪ ಆಫೀಸಿನಿಂದ ಬಂದರೂ, ಪುಟ್ಟಿಯ ಹೋಂ ವರ್ಕ್ ಮುಗಿದಿರಲಿಲ್ಲ. ಪುಟ್ಟಿ ಹಾಗೆಯೇ ಎದ್ದು ಆಟಕ್ಕೆ ಓಡಿದಳು. ಅಮ್ಮನ ಕಣ್ಣು ಕೆಂಪಾಗಿತ್ತು.
‘ಬಂದು ಹೋಂ ವರ್ಕ್ ಮಾಡು’ ಎಂದು ಗದರಿಬಿಟ್ಟರು. ಕಣ್ಣಲ್ಲಿ ನೀರು ತುಂಬಿಕೊಂಡ ಪುಟ್ಟಿ ಪುಸ್ತಕಗಳನ್ನು ಬಿಸಾಡಿ, ರೂಂಗೆ ಹೋಗಿ ದಢ್ ಅಂತ ಬಾಗಿಲು ಹಾಕಿಕೊಂಡಳು. ಬಾಗಿಲ ಮೇಲಿದ್ದ ಅಮ್ಮನ ಚಿತ್ರ ಕೆಳಗೆ ಬಿತ್ತು. ಅಮ್ಮನಿಗೂ ಅಳು ಬಂತು.
‘ಅಮ್ಮನಿಲ್ಲದೆ ಮನೆಯಿಲ್ಲ ಅನ್ನೋದು ಪುಟ್ಟಿಗೆ ಇನ್ನೂ ಅರ್ಥವಾಗಿಲ್ಲ’ ಅಂತ ಅಪ್ಪನಿಗೆ ಅದೇ ಮೊದಲ ಬಾರಿಗೆ ಅನ್ನಿಸಿತು. ಅವರು ಮೆತ್ತಗೆ ಪುಟ್ಟಿಯ ಬಳಿಗೆ ಬಂದರು. ಅಷ್ಟು ಹೊತ್ತೂ ಅಳುತ್ತಿದ್ದ ಪುಟ್ಟಿ, ತಲೆದಿಂಬು ಒದ್ದೆ ಮಾಡಿದ್ದಳು.
ಪುಟ್ಟಿಯ ಕೈ ಹಿಡಿದು ಅಡುಗೆ ಮನೆಗೆ ಕರೆದೊಯ್ದರು. ಬಾಗಿಲು ಹಾಕಿದ್ದ ಕಪಾಟಿನಲ್ಲಿ ಮಂತ್ರದಂಡವೊಂದಿತ್ತು. ಅದನ್ನು ಹೆಂಡತಿಗೆ ಕೊಟ್ಟರು. ತಕ್ಷಣ ಪುಟ್ಟಿಯ ಅಮ್ಮ ಕನಸಿನಲ್ಲಷ್ಟೇ ನೋಡಲು ಸಾಧ್ಯವಿರುವ ರಾಜಕುಮಾರಿಯಷ್ಟು ಸುಂದರಿಯಾದರು.
ಆದರೆ ಅದೇ ಹೊತ್ತಿಗೆ ಮನೆ ತುಂಬಾ ಕಸ ತುಂಬಿಕೊಂಡಿತು. ಡೈನಿಂಗ್ ಟೇಬಲ್ ಮೇಲಿದ್ದ ಬೇಯಿಸಿದ್ದ ಅನ್ನ–ಪಲ್ಯಗಳು ವಾಪಸ್ ಅಕ್ಕಿ–ತರಕಾರಿಗಳಾದವು. ಪುಟ್ಟಿಯ ತಲೆಕೂದಲು ಕೆದರಿ ಹೋಗಿತ್ತು. ಪುಟ್ಟಿ ಕೊಳಕಿಯಂತೆ ಕಾಣಿಸುತ್ತಿದ್ದಳು. ಅಪ್ಪನ ಬಟ್ಟೆಗಳು ಮಾಸಿ ಹೋದವು. ಅವರು ವಿಪರೀತ ಸುಸ್ತಾದ ಹಾಗೆ ಕಾಣಿಸುತ್ತಿದ್ದರು. ಹಾಸಿಗೆ ಮೇಲಿದ್ದ ಬೆಡ್‌ಶೀಟ್– ತಲೆದಿಂಬು ಚೆಲ್ಲಾಪಿಲ್ಲಿಯಾಗಿತ್ತು.
ಮಗಳನ್ನು ಪ್ರೀತಿಯಿಂದ ನೋಡಿದ ಅಮ್ಮ ಮಂತ್ರದಂಡವನ್ನು ಮತ್ತೆ ಕಪಾಟಿನಲ್ಲಿಡಲು ಮುಂದಾದರು. ‘ಅಮ್ಮಾ ನೀನೆಷ್ಟು ಚೆನ್ನಾಗಿದ್ದೀ, ನೀನಿಷ್ಟು ಸುಂದರವಾಗಿರುತ್ತಿ ಅಂತ ನಾನು ಅಂದುಕೊಂಡೇ ಇರಲಿಲ್ಲ. ಪ್ಲೀಸ್ ಆ ಮಂತ್ರದಂಡ ಬಿಸಾಡಬೇಡ’ ಎಂದು ಪುಟ್ಟಿ ಗೋಗರೆದಳು.
‘ಅಯ್ಯೋ ಪುಟ್ಟಿ, ನೀನಗಾಗಿ– ನಿನ್ನಪ್ಪನಿಗಾಗಿ ನಾನು ಏನು ಬೇಕಾದರೂ ಬಿಸಾಡಲು ಸಿದ್ಧ. ನಾನು ಹೇಗಿದ್ದರೆ ಏನಂತೆ? ನೀನು ಚೆನ್ನಾಗಿರಬೇಕು– ನಿಮ್ಮಪ್ಪ ಖುಷಿಯಾಗಿರಬೇಕು’ ಎಂದು ಪುಟ್ಟಿಯ ಅಮ್ಮ ಮಂತ್ರದಂಡವನ್ನು ಕಪಾಟಿಗೆ ಸೇರಿಸಿದರು.
ಒಂದೇ ಕ್ಷಣ. ಅಮ್ಮನ ರಾಜಕುಮಾರಿಯ ವೇಷ ಮಾಯವಾಗಿತ್ತು. ಓರ್ವ ಸಾಧಾರಣ ಮಹಿಳೆ ಅಡುಗೆ ಮನೆಯಲ್ಲಿ ಮಗಳನ್ನು ತಬ್ಬಿಕೊಂಡಿದ್ದರು. ಆದರೆ ಮಗಳು ರಾಜಕುಮಾರಿಯಂತಾಗಿದ್ದಳು. ಅಪ್ಪ ಮಹಾರಾಜನಂತಾಗಿದ್ದರು.
***
ಇದು ಫಿಲಿಪ್ಪೀನ್ಸ್ ದೇಶದ ಮಾಧ್ಯಮಗಳಿಗೆಂದು ನೆಸ್ಲೆ ಕಂಪೆನಿ ಸಿದ್ಧಪಡಿಸಿದ್ದ A Mommy's Sacrifice ಹೆಸರಿನ ಜಾಹೀರಾತು. #DearMomThankYou ಎಂಬ ಟ್ಯಾಗ್‌ಲೈನ್‌ನೊಂದಿಗೆ ಮೇ 6ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದೆ. ಇಡೀ ವಿಶ್ವ ಈ ಜಾಹೀರಾತನ್ನು ಮೆಚ್ಚಿಕೊಂಡಿದೆ. 1.25 ಕೋಟಿ ಮಂದಿ ವಿಡಿಯೊ ವೀಕ್ಷಿಸಿದ್ದಾರೆ. ಲಕ್ಷಾಂತರ ಮಂದಿಯ ಭಾವಕೋಶವನ್ನೂ ಈ ಜಾಹೀರಾತು ಮೀಟಿದೆ.
‘ಅಮ್ಮ ಸದಾ ನನ್ನೊಂದಿಗೆ ಇರಬೇಕು’, ‘ಅಮ್ಮ ಎಂದು ನನ್ನಿಂದ ದೂರವಾಗಿ ಬಿಡುತ್ತಾಳೋ’, ‘ಜಾಹೀರಾತು ನೋಡಿದ ತಕ್ಷಣ ಅತ್ತುಬಿಟ್ಟೆ’ ಎಂದು ನೂರಾರು ಮಂದಿ ಕಮೆಂಟ್ ಬರೆದುಕೊಂಡಿದ್ದಾರೆ.
ವಾಣಿಜ್ಯ ಉದ್ದೇಶಕ್ಕಾಗಿ ರೂಪಿಸಿದ ಜಾಹೀರಾತು ತನ್ನ ಕಲಾತ್ಮಕ ಮತ್ತು ಸಾರ್ವಕಾಲಿಕ ಮೌಲ್ಯದಿಂದ ಹೇಗೆ ಸೀಮಿತ ವ್ಯಾಪ್ತಿಯನ್ನು ಮೀರಬಲ್ಲದು ಎಂಬುದಕ್ಕೆ ಇದು ಉತ್ತಮ ಉದಾಹರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.