ADVERTISEMENT

ರಂಗವಿಹಾರ ನಾಟಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
‘ಸದಾರಮೆ’ ನಾಟಕದ ದೃಶ್ಯ.
‘ಸದಾರಮೆ’ ನಾಟಕದ ದೃಶ್ಯ.   

ಆಧುನಿಕ ಕನ್ನಡ ರಂಗಭೂಮಿಯಲ್ಲಿ ವೃತ್ತಿಪರತೆಗೆ ತನ್ನ ನಿರಂತರ ಚಟುವಟಿಕೆಗಳ ಮೂಲಕ ಒಂದು ಪ್ರಮುಖ ಸ್ಥಾನವನ್ನು ಕಲ್ಪಿಸಿಕೊಡುವಲ್ಲಿ ಮೈಸೂರು ರಂಗಾಯಣದ ಪಾತ್ರ  ಅನನ್ಯವಾದುದು.

ಕರ್ನಾಟಕ ಸರ್ಕಾರದ ಅಧಿಕೃತ ವೃತ್ತಿ ನಾಟಕ ಕಂಪೆನಿಯಾಗಿ ರಂಗಭೀಷ್ಮ ಬಿ.ವಿ. ಕಾರಂತರ ಮಾರ್ಗದರ್ಶನದಲ್ಲಿ ಅಸ್ತಿತ್ವಕ್ಕೆ ಬಂದ ರಂಗಾಯಣ ಕಳೆದ 29 ವರ್ಷಗಳಿಂದ ನಿರಂತರವಾದ ರಂಗಚಟುವಟಿಕೆ ನಡೆಸುತ್ತಿದೆ.

ಈವರೆಗೆ ಬಿ.ವಿ.ಕಾರಂತ, ಸಿ.ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ, ಲಿಂಗದೇವರು ಹಳೇಮನೆ, ಡಾ.ಬಿ.ಜಯಶ್ರೀ, ಡಾ.ಬಿ.ವಿ.ರಾಜಾರಾಂ ಅವರು ನಿರ್ದೇಶಕರಾಗಿ ರಂಗಾಯಣವನ್ನು ಮುನ್ನಡೆಸಿದ್ದಾರೆ. ರಂಗಪ್ರದರ್ಶನಗಳ ಜೊತೆಗೆ ಸಮಕಾಲೀನ ಯುವ ಪ್ರತಿಭೆಗಳಿಗೆ ಹಾಗೂ ಮಕ್ಕಳಿಗೂ ರಂಗಾಯಣ ತನ್ನ ಚಟುವಟಿಕೆಗಳಲ್ಲಿ ಅವಕಾಶ ಕಲ್ಪಿಸಿ, ಕನ್ನಡ ರಂಗಚಳವಳಿಗೆ ಪ್ರಯೋಗಶೀಲತೆ ಹಾಗೂ ಕ್ರಿಯಾಶೀಲತೆಯನ್ನು ಧಾರೆ ಎರೆದಿದೆ.

ಪ್ರಸಕ್ತ ರಂಗಾಯಣದ ನಿರ್ದೇಶಕರಾಗಿ ಜನಾರ್ದನ (ಜನ್ನಿ) ಕಾರ್ಯಚಟುವಟಿಕೆ, ಜವಾಬ್ದಾರಿ ಹೊತ್ತು, ಉತ್ಸಾಹ ಹಾಗೂ ಕ್ರಿಯಾಶೀಲತೆಯಿಂದ ಮುನ್ನೆಡೆಸುತ್ತಿದ್ದಾರೆ. ಬಿ.ವಿ.ಕಾರಂತರಿಂದ ಜನ್ನಿ ಅವರವರೆಗೆ ರಂಗಾಯಣ ನಡೆದು ಬಂದ ದಾರಿಯನ್ನು ದಾಖಲಿಸುವ ಸಲುವಾಗಿ ರಂಗವಿಹಾರ ನಾಟಕೋತ್ಸವವನ್ನು ‘ಭಾಗವತರು’ ಸಾಂಸ್ಕೃತಿಕ ಸಂಘಟನೆ ಆಯೋಜಿಸಿದೆ.

ಕಳೆದ 15 ವರ್ಷಗಳಿಂದ ನಿರಂತರವಾಗಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು, ನಾಟಕೋತ್ಸವ, ಸಂಗೀತ ಸಮಾರಂಭಗಳನ್ನು ನಡೆಸಿರುವ ಭಾಗವತರು, ರಂಗಾಯಣದ ಈ ರಂಗವಿಹಾರ ನಾಟಕೋತ್ಸವವನ್ನು ಆಯೋಜಿಸಲು ಹೆಮ್ಮೆಪಡುತ್ತದೆ.

ಈ ಕೆಳಕಂಡ 5 ನಾಟಕಗಳನ್ನು ಈ ಉತ್ಸವಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಪ್ರದರ್ಶನಕ್ಕೆ ಮುನ್ನ ಪ್ರತಿ ದಿನ ಸಂಗೀತ ಕಾರ್ಯಕ್ರಮ, ವಿಚಾರ ಗೋಷ್ಠಿ, ರಂಗ ಶಿಬಿರದಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ರಂಗಾಯಣ ನಾಟಕೋತ್ಸವವನ್ನು ಕಳೆದ 29 ವರ್ಷಗಳಲ್ಲಿ ಮೊದಲನೇ ಬಾರಿಗೆ ಇತರೆ ಬೇರೆ ಸಂಸ್ಥೆಯ ಸಹಯೋಗದೊಂದಿಗೆ  ನಡೆಸುತ್ತಿರುವುದು ವಿಶೇಷವಾದ ಸಂಗತಿ.

ಭಾಗವತರು ಸಂಸ್ಥೆಯ ವತಿಯಿಂದ ಇದು 16ನೇ ನಾಟಕೋತ್ಸವ ಕಾರ್ಯಕ್ರಮವಾಗಿದ್ದು ಪ್ರತಿ ವರ್ಷ ಪ್ರಸಿದ್ದಿ ಸಾಹಿತಿಯ ಕುರಿತಂತೆ ಸಂವಾದ, ವಿಚಾರ ಸಂಕಿರಣ, ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಬರುತ್ತಿದೆ. ಈ ಸಂಸ್ಥೆಯಿಂದ 70–80ನೇ  ದಶಕಗಳ ನಾಟಕಗಳನ್ನು ಜನರಿಗೆ ಮತ್ತೆ ಸಿಗುವಂತೆ ಪುನರ್‌ರಚಿಸಲಾಗಿದೆ.

ರಂಗವಿಹಾರ ನಾಟಕೋತ್ಸವಕ್ಕೆ ಆಯ್ಕೆ ಮಾಡಿಕೊಡಿರುವ ನಾಟಕಗಳು ವಿಭಿನ್ನವಾದ ವಿಷಯಗಳನ್ನು ಹೊಂದಿರುವ ಸಾಧಾರಣ ಬದುಕಿನ ದುಃಖದ, ಅನಿರೀಕ್ಷಿತ, ಸುಂದರ ಮತ್ತು ದುರಂತಮಯ ಘಟನೆಗಳನ್ನು ಒಳಗೊಂಡಿರುವ ಕಥಾ ಹಂದರವಾಗಿದೆ.

ನಾಟಕಕಾರ ಪುಟ್ಟಣ್ಣಯ್ಯ ಅವರ ‘ಸದಾರಮೆ’ಯಲ್ಲಿ ಜಯಮ್ಮನವರದು ನಾಯಕಿಯ ಪಾತ್ರ. ಇದು ತುಂಬಾ ಗಂಭೀರವಾದ ಪಾತ್ರ. ಆದರೆ,  ನಾಯಕಿ ಕಳ್ಳನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾಳೆ. ಆಗ ಉಪಾಯವಾಗಿ ಆಕೆ ಕಳ್ಳನಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದನ್ನು ವಿಭಿನ್ನವಾಗಿ ರಚಿಸಿದ್ದಾರೆ.

ಶ್ರೀರಂಗರ ನಾಟಕಗಳಲ್ಲಿ ‘ಕತ್ತಲೆ–ಬೆಳಕು’ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದ್ದು  ಒಂದು ರೀತಿಯ ರೀತಿ–ನೀತಿಯ ಪದರಗಳಲ್ಲಿ ನಾಟಕ ಕ್ರಿಯೆಯ ಜೋಕಾಲಿಯಾಡುತ್ತಾ ಗುರಿಮುಟ್ಟುತ್ತದೆ.

ಜಯತೀರ್ಥ ಜೋಶಿಯವರ ‘ತಲೆದಂಡ’ ನಾಟಕವೂ  ಹನ್ನೆರಡನೆಯ ಶತಮಾನವು ಕರ್ನಾಟಕ ಇತಿಹಾಸದಲ್ಲಿ ಬಹಳ ಮಹತ್ವದ ಕಾಲ. ‘ವಚನಕಾರರಯುಗ’ ಎಂದೇ ಪ್ರಸಿದ್ಧವಾಗಿರುವ ಆ ಯುಗದ ಶರಣ ಚಳವಳಿ ಮತ್ತು ಅಂದಿನ ರಾಜಕೀಯ ವ್ಯವಸ್ಥೆಗಳ ನಡುವಿನ ಮುಖಾ ಮುಖಿಯಲ್ಲಿ ಅಧ್ಯಾತ್ಮ, ಅನುಭಾವ, ಸಮಾಜ ಸುಧಾರಣೆ ಹಾಗೂ ರಾಜಕಾರಣದ ಅನೇಕ ಮೂಲಭೂತ ಪ್ರಶ್ನೆಗಳು ಈ ನಾಟಕದಲ್ಲಿ ಹೊಚ್ಚ ಹೊಸದಾದ ಪ್ರಖರ ಬೆಳಕಿನಲ್ಲಿ ಚರ್ಚಿಸಲ್ಪಡುತ್ತವೆ.

ಯು.ಆರ್‌. ಅನಂತ ಮೂರ್ತಿ ಅವರು ರಚಿಸಿರುವ ಎಚ್‌. ಜನಾರ್ದನ್‌ ಅವರ ನಿರ್ದೇಶನದ ‘ಸಂಸ್ಕಾರ’ ಸಮಾಜದಲ್ಲಿ ಒಂದು ವಿಶಿಷ್ಟವಾದ ಸಂಚಲನವನ್ನುಂಟು ಮಾಡಿದಂತಹ ಹಾಗೂ ಅನೇಕ ಚರ್ಚೆಗಳಿಗೆ ಅವಕಾಶ ಮಾಡಿಕಟ್ಟಂತಹ  ಪ್ರಗತಿದಾಯಕ ನಾಟಕ.

ಗ್ರೀಕ್‌ನ ಪ್ರಸಿದ್ಧ ನಾಟಕಕಾರನಾದ ಶೇಕ್ಸ್‌ಪಿಯರ್‌ ರಚಿಸಿರುವ ‘ಜೂಲಿಯಸ್‌ ಸೀಜರ್‌’ ನಾಟಕವನ್ನು ಶೇಕ್ಸ್‌ಪಿಯರ್‌ ರಚಿಸಿದ ಪ್ರಪ್ರಥಮ ರಾಜಕೀಯ ನಾಟಕ ಎಂದೇ ಹೇಳಬಹುದು. ರೋಮ್‌ ರಾಜಕೀಯ ಹಿನ್ನೆಲೆಯಾಗಿ ಇಟ್ಟುಕೊಂಡು ಬರೆದ ರಾಜಕೀಯ ನಾಟಕವಾದರೂ ಇಂದಿಗೂ ಸರ್ವ ವಿಧದಲ್ಲೂ ಎಲ್ಲ ದೇಶಕ್ಕೂ ಸಲ್ಲುವ ಅತ್ಯಂತ ಮಹತ್ವದ ನಾಟಕವಾಗಿದೆ.

ನಾಟಕ ಪ್ರದರ್ಶನದ ವಿವರ
ರಂಗವಿಹಾರ ನಾಟಕೋತ್ಸವವನ್ನು ಜುಲೈ 1 ರಿಂದ 5 ರವರೆಗೆ ಸಂಜೆ 6 ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ.
ಜುಲೈ 1ರಿಂದ ಕ್ರಮವಾಗಿ ಸದಾರಮೆ, ಕತ್ತಲೆ ಬೆಳಕು, ತಲೆದಂಡ, ಸಂಸ್ಕಾರ, ಜೂಲಿಯಸ್‌ ಸೀಜರ್‌ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಪ್ರತಿ ಪ್ರದರ್ಶನಕ್ಕೆ ₹ 100ಗಳನ್ನು ನಿಗದಿಪಡಿಸಲಾಗಿದೆ. ಮುಂಗಡವಾಗಿ  ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಲು: www.bookmyshow.com.

ಮಾಹಿತಿಗೆ ಮೊಬೈಲ್‌: 94480 77292.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT