ADVERTISEMENT

ಲೇಹ್‌ ಸುತ್ತಿ ಬಂದ ಜೋಡಿ

ಮಂಜುಶ್ರೀ ಎಂ.ಕಡಕೋಳ
Published 8 ಡಿಸೆಂಬರ್ 2017, 19:30 IST
Last Updated 8 ಡಿಸೆಂಬರ್ 2017, 19:30 IST
ಮಂಜುನಾಥ್ ಮತ್ತು ಅನಿಲ್ ಶ್ರೀನಿಧಿ
ಮಂಜುನಾಥ್ ಮತ್ತು ಅನಿಲ್ ಶ್ರೀನಿಧಿ   

ಗಗನ ಚುಂಬಿಸುತ್ತಿರುವ ಸಾಲುಸಾಲು ಪರ್ವತಶ್ರೇಣಿ, ಇನ್ನೇನು ಮುಗಿಲೇ ಕೈಗೆಟುಕುತ್ತದೆ ಎನ್ನುವ ಭಾವ, ಒಂದೇ ಸೆಕೆಂಡ್ ಎಚ್ಚರ ತಪ್ಪಿದರೂ ಸಾಕು ಆಳ ಕಣಿವೆಯೊಳಗೆ ಸಾವಿನ ಬಾಗಿಲು... - ಬೈಕ್ ಓಡಿಸುವುದನ್ನು ಆರಾಧಿಸುವ ಅನಿಲ್ ಶ್ರೀನಿಧಿ ಮತ್ತು ಮಂಜುನಾಥ್ ಭಾವುಕವಾಗಿ ತಮ್ಮ ಲೇಹ್‌–ಲಡಾಕ್ ಪಯಣದ ಹಾದಿ ಬಿಚ್ಚಿಡುತ್ತಿದ್ದರೆ ಎದುರಿಗಿದ್ದವರ ಮನದಲ್ಲಿ ತಾವೂ ಅಲ್ಲಿಗೆ ಹೋಗಬೇಕೆಂಬ ಆಸೆ ಮೊಳೆಯುತ್ತದೆ.

ಜಗತ್ತಿನ ಅತ್ಯಂತ ದುರ್ಗಮ ಹಾದಿಯೆಂದೇ ಬಿಂಬಿತವಾಗಿರುವ ಲೇಹ್‌–ಲಡಾಕ್ ಮಾರ್ಗದಲ್ಲಿ ಮೌಂಟೇನ್ ಬೈಕಿಂಗ್ ಅನ್ನೋದು ಈಗ ಜನಪ್ರಿಯ ಸಾಹಸ. ಅಂಥದ್ದೊಂದು ದುರ್ಗಮ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿ ಹಿಂತಿರುಗಿದ್ದಾರೆ ನಗರದ ಯುವಕರಾದ ಅನಿಲ್ ಶ್ರೀನಿಧಿ ಮತ್ತು ಮಂಜುನಾಥ್.

ಬಾಲ್ಯದಲ್ಲಿಯೇ ಬೈಕ್ ರೈಡಿಂಗ್ ಬಗ್ಗೆ ಒಲವಿದ್ದ ಅನಿಲ್ ಶ್ರೀನಿಧಿಗೆ ತಂದೆ ಜಿ.ಆರ್. ಕೃಷ್ಣಮೂರ್ತಿ ಅವರೇ ಸ್ಫೂರ್ತಿ. ಮಧುಗಿರಿಯಿಂದ ಗಾಮಕಾರನಹಳ್ಳಿಗೆ ಅಪ್ಪ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ ನೆನಪುಗಳನ್ನೇ ಎದೆಯೊಳಗೆ ಬೆಚ್ಚಗಿರಿಸಿಕೊಂಡು ಬೆಳೆದ ಅವರು ದೊಡ್ಡವನಾದ ಮೇಲೆ ಸಾಹಸಮಯ ಬೈಕಿಂಗ್ ಮಾಡಬೇಕೆಂಬ ಕನಸು ಕಂಡಿದ್ದರಂತೆ.

ADVERTISEMENT

ಎಸ್‌ಎಲ್‌ಆರ್ ಕಂಪೆನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿರುವ ಅನಿಲ್ ಅವರ ಈ ಕನಸಿಗೆ ಜೊತೆಯಾದವರು ಗೆಳೆಯ ಮಂಜುನಾಥ್. ಬಾಷ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ನಗರದ ಒತ್ತಡದ ಬದುಕಿನಿಂದ ಬೇಸತ್ತು, ಮನಸಿಗೆ ಖುಷಿ ಕೊಡುವ ಸಾಹಸ ಮಾಡಬೇಕೆನ್ನುತ್ತಿರುವಾಗ ಅನಿಲ್ ಜತೆಯಾದರು. ಬಹುವರ್ಷಗಳ ಸಂಬಂಧ–ಸ್ನೇಹ, ಮೌಂಟೇನ್ ಬೈಕಿಂಗ್ ಮೂಲಕ ಮತ್ತಷ್ಟು ಗಟ್ಟಿಯಾದ ಪುಲಕ ಈ ಇಬ್ಬರದ್ದೂ.

ಭಾರತದ ಗಡಿಯ ಕೊನೆಯ ಗ್ರಾಮ ತುರ್ತುಕ್‌ಗೆ ಬೈಕ್ ಮೂಲಕ ಪ್ರಯಾಣಿಸಬೇಕೆನ್ನುವ ಕನಸನ್ನು ನನಸು ಮಾಡುವ ಉದ್ದೇಶದಿಂದ ಇಬ್ಬರೂ ಪ್ರಯಾಣ ಆರಂಭಿಸಿದರು. ಅಷ್ಟು ದೂರ ಬೈಕಿನಲ್ಲೇ ಹೋಗುತ್ತೇವೆ ಅಂದರೆ ಮನೆಯಲ್ಲಿ ಬೈಗುಳ ಸುರಿಮಳೆ ಗ್ಯಾರಂಟಿ ಎಂದರಿತ ಇಬ್ಬರೂ ದೆಹಲಿಯವರೆಗೆ ವಿಮಾನದಲ್ಲಿ, ನಂತರ ಬೈಕ್ ಪ್ರಯಾಣ ಅಂತ ಮನೆಯವರಿಗೆ ಸುಳ್ಳು ಹೇಳಿದ್ದರಂತೆ.

ಅದುವರೆಗೂ ದಕ್ಷಿಣ ಭಾರತವನ್ನಷ್ಟೇ ಬೈಕ್‌ನಲ್ಲಿ ಸುತ್ತಿ ಬಂದಿದ್ದ ಅನಿಲ್, ಮಂಜುನಾಥ್ ಅವರು ಪ್ಲಾನ್ ಪ್ರಕಾರ ಮನಾಲಿ ತನಕ ಸಾಗಿದರು. ಆದರೆ, ಅಲ್ಲಿಂದ ಲೇಹ್‌–ಲಡಾಕ್‌ ಕುರಿತು ಮಾರ್ಗದರ್ಶನದ ಸಮಸ್ಯೆಯಾದಾಗ ಮೊರೆ ಹೋಗಿದ್ದು ಅಡ್ವೆಂಚರ್ ಅನ್‌ಲಿಮಿಟೆಡ್ ಕಂಪೆನಿಯ ಸುಮೇಶ್ ಅವರನ್ನು. ಸುಮೇಶ್ ನೀಡಿದ ಮಾರ್ಗದರ್ಶನವನ್ನು ಚಾಚೂ ತಪ್ಪದೇ ಅನುಸರಿಸಿದ ತಮ್ಮ ಗಮ್ಯತಾಣವನ್ನು ಯಶಸ್ವಿಯಾಗಿ ತಲುಪಿತು. ಹೀರೊ ಹೊಂಡಾ ಕರಿಜ್ಮಾ ಬೈಕ್‌ನಲ್ಲಿ 29 ದಿನಗಳಲ್ಲಿ ಈ ಜೋಡಿ (ಜುಲೈ 14ರಿಂದ ಆಗಸ್ಟ್‌ 11) 8,545 ಕಿ.ಮೀ. ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಿದ ಕೀರ್ತಿಗೆ ಪಾತ್ರವಾಗಿದೆ ಈ ಜೋಡಿ.

‘ಹೇಳಿಕೊಳ್ಳುವಷ್ಟು ಸುಲಭವಾಗಿರಲಿಲ್ಲ ಈ ಪಯಣದ ಹಾದಿ. ಲೇಹ್‌–ಲಡಾಕ್‌ ಪಯಣ ಆರಂಭಿಸುವ ಮುನ್ನ ಅದಕ್ಕೆ ತಕ್ಕ ಸಿದ್ಧತೆಗಳನ್ನು ಮಾಡಿಕೊಂಡೆವು. ರಸ್ತೆಯ ನಕ್ಷೆಗಳು, ಪಯಣದ ಹಾದಿಯಲ್ಲಿ ನೋಡಲೇಬೇಕಾದ ಸ್ಥಳಗಳು ಹೀಗೆ ಎಲ್ಲವನ್ನೂ ಗುರುತು ಮಾಡಿಟ್ಟುಕೊಂಡೆವು. ಶ್ರವಂತಿ ವ್ಯಾಲಿ, ಕರಾವಳಿ ತೀರ ಪ್ರದೇಶಗಳನ್ನು ಹಾಯ್ದು ಹೆದ್ದಾರಿ ಮಾರ್ಗಕ್ಕೆ ತೆರೆದುಕೊಂಡು ಅಲ್ಲಿಂದ ಹಿಮಾಚಲ ಪ್ರದೇಶ ತಲುಪುವುದು ನಮ್ಮ ಮುಖ್ಯ ಗುರಿಯಾಗಿತ್ತು’ ಎನ್ನುತ್ತಾರೆ ಈ ಸವಾರರು.

‘ಬೆಂಗಳೂರು–ಕಾರವಾರ–ಗೋವಾ–ಅಂಬೋಲಿ ಘಾಟ್, ಪುಣೆ–ಕೊಲ್ಲಾಪುರ, ಮುಂಬೈ, ವಡೋದರಾ, ಅಜ್ಮೇರ್, ಜೈಪುರ, ಆಗ್ರಾ ಮೂಲಕ ದೆಹಲಿಗೆ ತಲುಪಿದೆವು. ಬೆಂಗಳೂರಿನಿಂದ ದೆಹಲಿವರೆಗೆ ಉತ್ತಮ ರಸ್ತೆ ಮಾರ್ಗಗಳಿದ್ದವು. ದೆಹಲಿಯ ನಂತರ ಚಂಡೀಗಢ, ಹಿಮಾಚಲ ಪ್ರದೇಶಕ್ಕೆ ತಲುಪಿದ ಮೇಲೆ ನಮ್ಮದು ಅಕ್ಷರಶಃ ದುರ್ಗಮದ ಹಾದಿಯಾಗಿತ್ತು.

ಛತ್ತೀಸ್‌ಗಡದ ಬಿಲಾಸ್‌ಪುರಕ್ಕೆ ತಲುಪಿದಾಗ ಹಿಮದ ದಾಳಿಗೆ ಒಳಗಾಗಬೇಕಾಯಿತು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಹಿಮಪಾತ ಆರಂಭವಾಗುವ ಮುನ್ನವೇ ಅಲ್ಲಿಂದ ಜಾಣ್ಮೆಯಿಂದ ಹೊರಟುಬಿಟ್ಟೆವು. ಆದರೂ ಮಾರ್ಗಮಧ್ಯೆ ನಮ್ಮ ಹೆಲ್ಮೆಟ್ ಮೇಲೆ ತಪತಪನೇ ದೊಡ್ಡ ಮಂಜಿನ ಕಲ್ಲುಗಳು ಬೀಳತೊಡಗಿದಾಗ ನಮ್ಮ ಪ್ರಯಾಣ ಇಲ್ಲಿಗೇ ಮುಗಿಯಬಹುದೆಂಬ ಆತಂಕ ಎದುರಾಗಿತ್ತು.

ಸರ್ಚು ಎಂಬ ಪ್ರದೇಶದಲ್ಲಿ ಸರಿಯಾಗಿ ಆಮ್ಲಜನಕ ದೊರಕದೇ ಉಸಿರಾಟದ ಸಮಸ್ಯೆ ಎದುರಿಸಬೇಕಾಯಿತು. ವೈದ್ಯರ ಸಲಹೆ ಪಡೆದು ತೆಗೆದುಕೊಂಡು ಹೋಗಿದ್ದ ಔಷಧಿಗಳು ನಮ್ಮ ನೆರವಿಗೆ ಬಂದವು’ ಎಂದು ತಮ್ಮ ಪಯಣದ ಅನುಭವ ಬಿಚ್ಚಿಡುತ್ತಾರೆ ಅನಿಲ್, ಮಂಜುನಾಥ್.

ನಾವು ತಲುಪುವ ಮಾರ್ಗದಲ್ಲಿ ಎದುರಾಗಬಹುದಾದ ಅಡಚಣೆಗಳು, ಹವಾಮಾನ ವೈಪರೀತ್ಯದ ಬಗ್ಗೆ ಮಾರ್ಗದರ್ಶಕ ಸುಮೇಶ್ ಮೊದಲೇ ಮಾಹಿತಿ ನೀಡುತ್ತಿದ್ದರು. ಮತ್ತೊಬ್ಬ ಸ್ನೇಹಿತ ರಾಜು ಪ್ರತಿರಾತ್ರಿ ವಿಡಿಯೊ ಕಾಲ್ ಮಾಡಿ ನಮ್ಮ ಆರೋಗ್ಯ ಮತ್ತು ಪ್ರಯಾಣದ ವಿವರ ಪಡೆದುಕೊಳ್ಳುತ್ತಿದ್ದ. ಇವರಿಬ್ಬರ ಸಹಕಾರವನ್ನು ಎಂದಿಗೂ ಮರೆಯಲಾಗದು ಎಂದು ಭಾವುಕರಾಗುತ್ತಾರೆ.

ಇಬ್ಬರೂ ಹೀರೊಹೊಂಡಾ ಕರಿಜ್ಮಾ ಬೈಕ್‌ನಲ್ಲಿ 20 ರಾಜ್ಯಗಳನ್ನು ಸುತ್ತಿ ಲೇಹ್‌–ಲಡಾಕ್‌ಗೆ ಭೇಟಿ ನೀಡುತ್ತಿರುವ ವಿಷಯ ಗಾಡಿ ಸರ್ವೀಸ್ ಮಾಡಿಸುವಾಗ ಗ್ವಾಲಿಯರ್‌ನ ಹೀರೊ ಮೋಟಾರ್ಸ್‌ ಸಿಬ್ಬಂದಿಗೆ ತಿಳಿದಾಗ, ಅಲ್ಲಿನ ಮ್ಯಾನೇಜರ್ ಮತ್ತು ಸಿಬ್ಬಂದಿ ನಮ್ಮನ್ನು ಮತ್ತಷ್ಟು ಹುರಿದುಂಬಿಸಿದರು.

ಇಬ್ಬರು ವಿದೇಶಿಯರು ಜೆಫ್ರಿ ಜೆಲೆಟ್, ಪೌಲ್ ಪೌನಿಯಲ್ ಅಂತ ಇಬ್ಬರ ಸ್ನೇಹ ಇಂದಿಗೂ ಮುಂದುವರಿದಿದೆ ಎಂಬುದೇ ಸಂತಸ. ನಾವು ಇಲ್ಲಿಂದ ಉತ್ತರದ ಕಡೆಗೆ ಪ್ರಯಾಣಿಸಿದರೆ, ಅವರು ಉತ್ತರದಿಂದ ದಕ್ಷಿಣದವರೆಗೆ ಪ್ರಯಾಣ ಬೆಳೆಸಿದ್ದರು. ಇಬ್ಬರೂ ನಮ್ಮ ನಮ್ಮ ಅನುಭವಗಳನ್ನು ಹಂಚಿಕೊಂಡೆವು. ಹೀಗೆ ಹಾದಿಯುದ್ದಕ್ಕೂ ಅನೇಕ ಬೈಕರ್‌ಗಳು ನಮಗೆ ಬೆಂಬಲ ನೀಡಿದರು. ರಾಜ್ಯ, ಭಾಷೆ ತಿಳಿಯದಿದ್ದರೂ ಮಾನವೀಯ ಗುಣ ಮತ್ತು ಸಾಹಸದ ಮನೋಭಾವದ ಜನರು ಸಿಕ್ಕರು. ಒಟ್ಟಾರೆ ಇದೊಂದು ವಿಶೇಷ ಅನುಭವ ನೀಡಿದ ಪಯಣ ಎನ್ನುತ್ತಾರೆ ಅನಿಲ್, ಮಂಜುನಾಥ್.

ನಿತ್ಯವೂ 12ರಿಂದ 15 ತಾಸುಗಳ ಪಯಣದಿಂದ ಮೈಕೈನೋವು, ತಲೆ ಭಾರ, ಪರ್ವತಪ್ರದೇಶಗಳಲ್ಲಿ ಆಮ್ಲಜನಕದ ಕೊರತೆ ಹೀಗೆ ಅನೇಕ ಸಮಸ್ಯೆಗಳು ಎದುರಾದವು. ಆದರೂ, ಭಾರತದ ಕೊನೆಯ ಗಡಿಪ್ರದೇಶದ ಹಳ್ಳಿಗೆ ಭೇಟಿ ನೀಡಬೇಕೆಂಬ ಆಸೆ ಮಾತ್ರ ಮುಕ್ಕಾಗಲಿಲ್ಲ. ಕೊನೆಗೂ ಆ ಸ್ಥಳವನ್ನು ತಲುಪಿದಾಗ ನಮ್ಮಿಬ್ಬರಿಗೂ ವರ್ಣನಾತೀತ ಅನುಭವ ದಕ್ಕಿತು. ಮತ್ತೆ ಅದೇ ಹುಮ್ಮಸ್ಸಿನಲ್ಲಿ ಬೆಂಗಳೂರಿಗೆ ಹಿಂತಿರುಗಿದಾಗ ನಮ್ಮ ಕುಟುಂಬವಷ್ಟೇ ಅಲ್ಲ, ಸ್ನೇಹಿತರು, ಸಂಬಂಧಿಕರ ವಲಯದಲ್ಲಿ ನಾವಿಬ್ಬರೂ ಸೆಲೆಬ್ರಿಟಿಗಳಾಗಿಬಿಟ್ಟಿದ್ದೆವು ಎಂದು ಮಾತು ಮುಗಿಸುತ್ತಾರೆ ಅನಿಲ್ ಮತ್ತು ಮಂಜುನಾಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.