ಕಳೆದ ಒಂದು ದಶಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ–ಸ್ವೇಚ್ಛೆ ಎರಡರ ಗಡಿರೇಖೆಗಳನ್ನು ಅಗಾಧವಾಗಿ ವಿಸ್ತರಿಸಿದ ಪ್ರಮುಖ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್’. ಅನಂತರದಲ್ಲಿ ಈ ಜಾಲತಾಣ ಯುವಜನತೆಯಲ್ಲಿ ಹುಟ್ಟುಹಾಕಿದ ‘ಸಮೂಹ ಸಂವಹನ’ದ ಗೀಳನ್ನೇ ಬಂಡವಾಳವಾಗಿಸಿಕೊಂಡು ಅಂತರ್ಜಾಲ ಆಧಾರಿತ ಅನೇಕ ಸಂವಹನ ದಾರಿಗಳು ತೆರೆದುಕೊಂಡವು. ಅವುಗಳಲ್ಲಿ ವಾಟ್ಸ್‌ಆ್ಯಪ್ ಮುಖ್ಯವಾದದ್ದು.
ಪ್ರತಿ ತಂತ್ರಜ್ಞಾನವೂ ಒಳಿತು–ಕೆಡುಕಿನ ಎರಡೂ ಮುಖಗಳನ್ನು ಹೊತ್ತೇ ಬರುತ್ತದೆ ಎಂಬ ಮಾತಿಗೆ ವಾಟ್ಸ್‌ಆ್ಯಪ್ ಕೂಡ ಹೊರತಲ್ಲ. ಕೆಡುಕಿನ ಅಂಶಗಳನ್ನು ಕೊಂಚ ಬದಿಗಿರಿಸಿ ನೋಡುವುದಾದರೆ ಇಂದಿನ ಆಧುನಿಕೃತ ಮಹಾನಗರದ ಮನುಷ್ಯ ಸಂಬಂಧಗಳ ಜೋಡಣೆಯಲ್ಲಿ ವಾಟ್ಸ್‌ಆ್ಯಪ್ ಬಹುಮುಖ್ಯ ಪಾತ್ರ ವಹಿಸುತ್ತಿದೆ.
ವೃತ್ತಿಗೂ ಪ್ರವೃತ್ತಿಗೂ ವಾಟ್ಸ್‌ಆ್ಯಪ್
ನಗರದ ಬಿಪಿಓ ಕಂಪೆನಿಯೊಂದರ ಉದ್ಯೋಗಿ ಸ್ವಾತಿ ಕೆ.ಎಚ್. ಅವರ ವೃತ್ತಿ–ಪ್ರವೃತ್ತಿ ಎರಡಕ್ಕೂ ವಾಟ್ಸ್‌ಆ್ಯಪ್ ಒದಗಿಬಂದಿದೆ. ‘ನಮ್ಮ ಕಚೇರಿ ಸಹೋದ್ಯೋಗಿಗಳದ್ದೇ ಒಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿ ಕೊಂಡಿದ್ದೇವೆ. ಇದರಿಂದ ಕೆಲಸಕ್ಕೆ ಸಾಕಷ್ಟು ಅನುಕೂಲವಾಗುತ್ತದೆ. ಕಚೇರಿ ಸಂಬಂಧಿ ಮಾಹಿತಿಯನ್ನೆಲ್ಲ ಎಲ್ಲರಿಗೂ ಬಹುತ್ವರಿತವಾಗಿ ತಲುಪಿಸಬಹುದು. ಮಾಹಿತಿ ವಿನಿಮಯ ಸುಲಭವಾಗಿದೆ.
ವೈಯಕ್ತಿಕವಾಗಿ ಮೆಸೇಜ್ ಕಳುಹಿಸುವುದಕ್ಕಿಂತ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಾಕಿಬಿಟ್ಟರೆ ಎಲ್ಲರಿಗೂ ಒಟ್ಟಿಗೇ ತಲುಪುತ್ತದೆ. ತುರ್ತು ರಜಾ ತೆಗೆದುಕೊಳ್ಳುವುದರ ಬಗ್ಗೆ, ಆ ದಿನದ ಕೆಲಸಗಳ ಬಗ್ಗೆಯೆಲ್ಲ ಈ ಗ್ರೂಪ್‌ನಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇವೆ’ ಎಂದು ತಮ್ಮ ವೃತ್ತಿಗೆ ವಾಟ್ಸ್‌ಆ್ಯಪ್ ಒದಗಿಬಂದ ಪರಿಯನ್ನು ವಿವರಿಸುತ್ತಾರೆ ಸ್ವಾತಿ. ಬರವಣಿಗೆ–ಓದು ಸ್ವಾತಿ ಅವರ ನೆಚ್ಚಿನ ಹವ್ಯಾಸ. ತಮ್ಮ ಈ ಅಭಿರುಚಿಗೂ ವಾಟ್ಸ್‌ಆ್ಯಪ್ ವೇದಿಕೆ ಕಲ್ಪಿಸಿರುವ ಬಗ್ಗೆ ಸಾಕಷ್ಟು ಖುಷಿಯಿಂದಲೇ ಅವರು ಹೇಳಿಕೊಳ್ಳುತ್ತಾರೆ.
‘ಸಮಾನ ಮನಸ್ಕರ ಒಂದು ಗ್ರೂಪ್ ಮಾಡಿಕೊಂಡಿದ್ದೀವಿ. ಇದರಿಂದ ಬಿಡುವಿನ ಸಮಯದಲ್ಲಿ ನಾವು ಓದಿದ ಪುಸ್ತಕ, ಬರಹಗಳ ಬಗ್ಗೆ, ವಿಭಿನ್ನ ಹವ್ಯಾಸಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಇದರಿಂದಲೇ ಹೊಸ ಹೊಸ ಸ್ನೇಹಿತರು ಸಿಕ್ಕಿದ್ದಾರೆ’ ಎನ್ನುವ ಸ್ವಾತಿ ಅವರು ವಾಟ್ಸ್‌ಆ್ಯಪ್ ಸ್ನೇಹಿತರ ಜತೆಯಲ್ಲಿಯೇ ಇತ್ತೀಚೆಗೆ ಎರಡು ದಿನದ ಪ್ರವಾಸವನ್ನೂ ಮಾಡಿ ಬಂದಿದ್ದಾರೆ.
‘ಮೊನ್ನೆ ಒಂದಷ್ಟು ಸ್ನೇಹಿತರು ಸೇರಿಕೊಂಡು ತೀರ್ಥಹಳ್ಳಿ, ಕುಪ್ಪಳಿಯ ಕುವೆಂಪು ಮನೆ, ಕವಿಶೈಲ, ಕುಂದಾದ್ರಿ ಬೆಟ್ಟ, ಕವಲೆದುರ್ಗ ಕೋಟೆ ಅಂತೆಲ್ಲ ಎರಡು ದಿನ ಪ್ರವಾಸ ಮಾಡಿ ಬಂದೆವು. ಈ ಪ್ರವಾಸದ ಯೋಜನೆ ರೂಪುಗೊಂಡಿದ್ದು, ಮಾಹಿತಿ ಹಂಚಿಕೊಂಡಿದ್ದು, ಎಲ್ಲವೂ ವಾಟ್ಸ್‌ಆ್ಯಪ್ ಮೂಲಕವೇ’ ಎಂದು ವಿವರಿಸುವ ಅವರಿಗೆ ಮನುಷ್ಯ ಸಂಬಂಧಗಳ ಬೆಸೆಯುವಿಕೆಗೆ ವಾಟ್ಸ್‌ಆ್ಯಪ್ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಂತೋಷವಿದೆ.
ಬಳಕೆದಾರ ಸ್ನೇಹಿ
ರುಕ್ಮಿಣಿನಗರದ ನಿವಾಸಿ ಮದನ್ ಸಿ.ಪಿ. ಡಿಪ್ಲೊಮಾ ವಿದ್ಯಾರ್ಥಿ. ‘ಕಾಲೇಜಿನ ಸಮಯದ ತಕ್ಷಣದ ಬದಲಾವಣೆ ಅಥವಾ ಇನ್ಯಾವುದೇ ವಿಷಯವನ್ನು ಎಲ್ಲಾ ಗೆಳೆಯರಿಗೆ ತಿಳಿಸಲು ವಾಟ್ಸ್‌ಆ್ಯಪ್‌ನ ಗ್ರೂಪ್ ಚಾಟ್ ಅತ್ಯುತ್ತಮವಾದ ಮಾಧ್ಯಮ’ ಎನ್ನುವುದು ಅವರ ಅಭಿಪ್ರಾಯ.
‘ವಾಟ್ಸ್‌ಆ್ಯಪ್ ಬಳಕೆದಾರ ಸ್ನೇಹಿ ಆ್ಯಪ್. ಮೊದಲೆಲ್ಲಾ ಪರೀಕ್ಷಾ ಸಮಯದಲ್ಲಿ ನೋಟ್ಸ್ ಹಾಗೂ ಬೇಕಾದ ಪಠ್ಯಭಾಗವನ್ನು ಪಡೆಯಲು ಎಷ್ಟು ದೂರವಿದ್ದರೂ ಖುದ್ದಾಗಿ ಗೆಳೆಯರಿರುವಲ್ಲಿ ಹೋಗಿ ಬರೆದುಕೊಂಡೋ ಅಥವಾ ಜೆರಾಕ್ಸ್ ಪ್ರತಿ ತೆಗೆದುಕೊಂಡೋ ಬರಬೇಕಿತ್ತು. ಈಗ ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಶೇರಿಂಗ್ ಸೌಲಭ್ಯವಿರುವುದರಿಂದ ಆ ಅನಿವಾರ್ಯತೆ ಇಲ್ಲ. ಅತಿ ಶೀಘ್ರವಾಗಿ ಮತ್ತು ಸುಲಭವಾಗಿ ಗೆಳೆಯರಿಂದ ಮಾಹಿತಿ ಪಡೆದುಕೊಳ್ಳುವಲ್ಲಿ ಸಹಾಯಕವಾಗಿದೆ’ ಎನ್ನುವ ಮದನ್‌ಗೆ ವಾಟ್ಸ್‌ಆ್ಯಪ್ ಸಹವಾಸ ಮಿತಿಮೀರಿದರೆ ಆಗುವ ನಕಾರಾತ್ಮಕ ಪರಿಣಾಮಗಳ ಬಗೆಗೂ ಅರಿವಿದೆ.
‘ಹಲವು ಬಾರಿ ವಾಟ್ಸ್‌ಆ್ಯಪ್ ಹರಟೆಯಲ್ಲಿ ಕಾಲ ಹರಣ ಮಾಡುವುದೂ ಹೆಚ್ಚು. ಅದಲ್ಲದೆ ವಾಟ್ಸ್‌ಆ್ಯಪ್ ಅಡಿಕ್ಟ್ ಆಗಿ ತಮ್ಮ ಸುತ್ತಮುತ್ತಲಿನ ಪರಿಸರದ ಪ್ರಜ್ಞೆ ಕಳೆದುಕೊಳ್ಳುವುದರ ಜೊತೆಗೆ, ಸಣ್ಣ ಸಣ್ಣ ಮನಸ್ತಾಪಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಪ್ರಸಂಗವೂ ಸಾಮಾನ್ಯವಾಗಿರುತ್ತದೆ’ ಎನ್ನುತ್ತಾರೆ ಅವರು.
ವಾಟ್ಸ್‌ಆ್ಯಪ್‌ನಿಂದ ಎನ್‌ಜಿಒ
ಸಾಫ್ಟ್‌ವೇರ್ ಕಂಪೆನಿಯೊಂದರ ಉದ್ಯೋಗಿ ವಿನಯ್ ಎಸ್. ಅವರಿಗೆ ವಾಟ್ಸ್‌ಆ್ಯಪ್ ಬಾಲ್ಯ ಸ್ನೇಹಿತರನ್ನು ಮರಳಿ ದೊರಕಿಸಿದೆ. ‘ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಒಂದು ಶಾಲೆಯಲ್ಲಿ ಓದಿದ್ದೆ. ಐದನೇ ತರಗತಿಯಿಂದ ಏಳನೇ ತರಗತಿಯವರೆಗೆ ಬೇರೆ ಶಾಲೆಯಲ್ಲಿ ಓದಿದೆ. ಉನ್ನತ ಶಿಕ್ಷಣಕ್ಕೆ ತೆರಳಿದ ಮೇಲೆ ಪ್ರಾಥಮಿಕ ಶಾಲೆ ಸಹಪಾಠಿಗಳ ಸಂಪರ್ಕ ತಪ್ಪಿ ಹೋಗಿತ್ತು. ಇತ್ತೀಚೆಗೆ ನಾವು ಓದಿದ ಪ್ರಾಥಮಿಕ ಶಾಲೆಯ ಹೆಸರಿನಲ್ಲಿಯೇ ಒಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡೆವು.
ಒಬ್ಬರಿಂದ ಒಬ್ಬರು ಗ್ರೂಪ್‌ಗೆ ಸೇರಿಕೊಳ್ಳುತ್ತಾ ಇಂದು 57 ಜನ ಹಳೆ ಸ್ನೇಹಿತರು ಒಟ್ಟುಗೂಡಿದ್ದೇವೆ. ಇದು ವಾಟ್ಸ್‌ಆ್ಯಪ್ ಮಹಿಮೆ. ನಾವು ಪರಸ್ಪರ ಕರೆ ಮಾಡಿ ಮಾತನಾಡುವುದು ಕಡಿಮೆ. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಚಾಟ್ ಮಾಡುತ್ತಿರುತ್ತೇವೆ. ಆಗಾಗ ವಾಟ್ಸ್‌ಆ್ಯಪ್ ಸ್ನೇಹಿತರೆಲ್ಲ ಸೇರಿಕೊಂಡು ಗೆಟ್ ಟುಗೆದರ್ ಪಾರ್ಟಿ ಮಾಡುತ್ತಿರುತ್ತೇವೆ’ ಎಂದು ಹೇಳಿಕೊಳ್ಳುವ ವಿನಯ್ ಮತ್ತವರ ವಾಟ್ಸ್‌ಆ್ಯಪ್ ಸ್ನೇಹಿತರು ಸೇರಿಕೊಂಡು ಇದೀಗ ಎನ್‌ಜಿಒ ಒಂದನ್ನು ಆರಂಭಿಸುವ ಸಿದ್ಧತೆಯಲ್ಲಿದ್ದಾರೆ.
ಇದರ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಹಾಯ ಮಾಡುವ ಯೋಜನೆ ಅವರದು. ವಾಟ್ಸ್‌ಆ್ಯಪ್‌ನಂತಹ ತಂತ್ರಜ್ಞಾನಗಳಿಂದ ಸಾಕಷ್ಟು ನಕಾರಾತ್ಮಕ ಪರಿಣಾಮಗಳೂ ಇಲ್ಲದಿಲ್ಲ. ಆದರೆ ಅವುಗಳ ನಡುವೆಯೇ ಇಂದಿನ ಆಧುನಿಕ ಜೀವನಶೈಲಿಯ ಜಂಜಡಗಳಲ್ಲಿ ಮನಸ್ಸು ಮನಸ್ಸುಗಳ ನಡುವೆ ಆತ್ಮೀಯತೆಯ ಜೀವನದಿ ಹರಿಯಲು ಕಾರಣವಾಗುತ್ತದೆ ಎನ್ನುವುದೂ ಸತ್ಯ.
*
ವಾಟ್ಸ್‌ಆ್ಯಪ್ ವಿಚಿತ್ರಗಳು
*ವಾಟ್ಸ್‌ಆ್ಯಪ್ ಅನೇಕ ವಿಚಿತ್ರಗಳ ಆಗರವೂ ಹೌದು. ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗಿರುವ ಹೆಸರುಗಳನ್ನೊಮ್ಮೆ ಗಮನಿಸಿದರೂ ಸಾಕು. ತುಂಡ್ ಹೈಕ್ಳು, ಮೆಂಟಲ್ಸ್ ಗ್ರೂಪ್, ಕ್ರಾಕರ್ಸ್ ಜೋನ್, ಬೀದಿ ಕಾಮಣ್ಣರು, ಲೋಕಲ್ ಹುಡುಗ್ರು ಹೀಗೆ ಕನ್ನಡ ಸಿನಿಮಾ ಶೀರ್ಷಿಕೆಗಳನ್ನೂ ಮೀರಿಸುವ ಅದ್ಭುತ ಹೆಸರುಗಳು ವಾಟ್ಸ್‌ಆ್ಯಪ್‌ನಲ್ಲಿ ಸಿಗುತ್ತದೆ.
*ವಾಟ್ಸ್‌ಆ್ಯಪ್ ಪ್ರೊಫೈಲ್ ಪಿಕ್ಚರ್ ಚೇಂಜ್ ಮಾಡುವುದು ಹಲವರಿಗೆ ಒಂದು ಖಯಾಲಿ. ಈಗ ಸೆಲ್ಫಿಯೂ ಅಷ್ಟೇ ಜನಪ್ರಿಯವಾಗಿರುವುದರಿಂದ ಗಂಟೆಗೊಮ್ಮೆ ಪ್ರೊಫೈಲ್ ಪಿಕ್ಚರ್ ಬದಲಿಸುವವರೂ ಇದ್ದಾರೆ. ಕೆಲವೊಮ್ಮೆ ತಮ್ಮ ಪ್ರೊಫೈಲ್‌ಗೆ ಬೇರೆಯವರ ಚಿತ್ರ ಲಗತ್ತಿಸಿ ಗುರುತಿನ ಗೊಂದಲದಿಂದ ತಮಾಷೆ ನಡೆಯುವುದೂ ಇದೆ.
*ವಾಟ್ಸ್‌ಆ್ಯಪ್ ಇಂದು ವೇಗದ ಮಾಧ್ಯಮವೂ ಹೌದು. ಎಲ್ಲೋ ನಡೆದ ಅಪಘಾತವೊಂದರ ಸುದ್ದಿ ಆ ಘಟನೆಯ ಭೀಕರ ದೃಶ್ಯದೊಟ್ಟಿಗೇ ನಿಮ್ಮ ಮೊಬೈಲ್‌ಗೆ ಕ್ಷಣಾರ್ಧದಲ್ಲಿ ಬಂದುಬಿದ್ದಿರುತ್ತದೆ.
*ತಂತ್ರಜ್ಞಾನ ಎಲ್ಲ ಸಾಮಾಜಿಕ ಕಟ್ಟುಪಾಡು ಮಿತಿಗಳನ್ನು ಮೀರಿದ್ದು ಎಂಬುದು ನಿಜವಾದರೂ ಜಾತಿ, ಧರ್ಮ, ಸಮುದಾಯ, ಪ್ರಾದೇಶಿಕತೆ ಇವೆಲ್ಲವುಗಳನ್ನೂ ಆಧರಿಸಿಯೇ ರೂಪಿತಗೊಂಡಿರುವ ರಾಶಿ ರಾಶಿ ಗ್ರೂಪ್‌ಗಳು ವಾಟ್ಸ್‌ಆ್ಯಪ್‌ನಲ್ಲಿ ಕಂಡುಬರುತ್ತವೆ.
*ಇಂದು ವೈವಾಹಿಕ ಸಂಬಂಧಗಳೂ ವಾಟ್ಸ್‌ಆ್ಯಪ್‌ನಲ್ಲಿಯೇ ನಿರ್ಧರಿತವಾಗುತ್ತಿವೆ. ವಧು–ವರರ ಫೋಟೊಗಳೂ ವಾಟ್ಸ್‌ಆ್ಯಪ್‌ನಲ್ಲಿಯೇ ವಿನಿಮಯವಾಗುತ್ತವೆ. ಆದ್ದರಿಂದ ಒಂದು ರೀತಿಯಲ್ಲಿ ವಾಟ್ಸ್‌ಆ್ಯಪ್ ಆಧುನಿಕ ಮ್ಯಾರೇಜ್ ಬ್ರೋಕರ್ ಆಗಿಯೂ ಕಾರ್ಯನಿರ್ವಹಿಸುತ್ತಿದೆ ಎನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.