ಉದ್ದುದ್ದ ಭಾಷಣಗಳು ಮಾಡದ ಕೆಲಸವನ್ನು ನಾಟಕಗಳು ಮಾಡಲು ಸಾಧ್ಯ ಎಂಬುದನ್ನು ನೀವು ನಿರೂಪಿಸಿ ಬಿಟ್ಟಿದ್ದೀರಿ. ನಿಮಗೆ ಅಭಿನಂದನೆಗಳು’
ಹೀಗೆಂದು ಆ ಇಬ್ಬರು ಮಹನೀಯರು ಹೇಳಿದಾಗ ನನ್ನ ಕಾಲುಗಳು ನೆಲದ ಮೇಲಿರಲಿಲ್ಲ. ಆಕಾಶದಲ್ಲಿ ತೇಲಾಡುತ್ತಿದ್ದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ?
ಹೀಗೆ ತಮ್ಮ ಸಂತಸವನ್ನು ಹಂಚಿಕೊಂಡವರು ಧಾರವಾಡದ ಖ್ಯಾತ ನಾಟಕ ನಿರ್ದೇಶಕಿ ವಿಶ್ವೇಶ್ವರಿ ಹಿರೇಮಠರು. ಅಂದ ಹಾಗೆ ವಿಶ್ವೇಶ್ವರಿ ಹಿರೇಮಠರನ್ನು ಪ್ರಶಂಸಿಸಿದ ವ್ಯಕ್ತಿಗಳು ಬೇರಾರೂ ಅಲ್ಲ; ಒಬ್ಬರು ಇಳಕಲ್ಲಿನ ಮಹಾಂತಪ್ಪ ಅಪ್ಪ. ಇನ್ನೊಬ್ಬರು ಖ್ಯಾತ ವಿಜ್ಞಾನಿ ಡಾ. ಸ.ಜ. ನಾಗಲೋಟಿಮಠ ಅವರು.
ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿದೆ ದೇವದಾಸಿ ಪದ್ಧತಿ. ಈ ಪದ್ಧತಿಯನ್ನು ನಿರ್ಮೂಲನೆ ಮಾಡುವ ದಿಸೆಯಲ್ಲಿ ದೇವದಾಸಿಯರ ಜಾಗೃತಿ ಅಭಿಯಾನದಲ್ಲಿ ವಿಶ್ವೇಶ್ವರಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲದೆ ದೇವದಾಸಿಯರ ಮಕ್ಕಳಿಗೆ ಒಂದು ತಿಂಗಳ ಕಾಲ ನಾಟಕ ತರಬೇತಿ ನೀಡಿ ಅವರಿಂದಲೇ ನಾಟಕವನ್ನು ಆಡಿಸಿದ್ದರು. ಪರಿಣಾಮವಾಗಿ ಅಥಣಿ ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಹಾಜರಾಗುತ್ತಿದ್ದ ಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿತ್ತು. ಅನೇಕ ದೇವದಾಸಿಯರು ‘ನಮ್ಮ ಕಾಲವಂತೂ ಮುಗಿಯಿತು, ನಮ್ಮ ಮಕ್ಕಳು ಮುತ್ತು ಕಟ್ಟುವುದಕ್ಕೆ ನಾವು ಇನ್ನೆಂದೂ ಅವಕಾಶ ನೀಡುವುದಿಲ್ಲ’ ಎಂದು ಪಣ ತೊಟ್ಟಿದ್ದರು. ಇದನ್ನು ಗಮನಿಸಿದ ಇಳಕಲ್ ಶ್ರೀಗಳು ಮತ್ತು ಡಾ. ಸಜನಾ ಹೇಳಿದ ಪ್ರಶಂಸೆಯ ಮಾತುಗಳು ತಮಗೆ ಹೇಳಲಾರದಷ್ಟು ಖುಷಿಯನ್ನು ತಂದುಕೊಟ್ಟಿದ್ದವು ಎಂದು ವಿಶ್ವೇಶ್ವರಿ ವಿವರಿಸಿದರು.
ಇಷ್ಟು ಮಾತ್ರವಲ್ಲ; ವಿಶ್ವೇಶ್ವರಿ ಅವರು ಕನ್ನಡದಲ್ಲಿ ನಿರ್ದೇಶಿಸಿದ್ದ ದೇವದಾಸಿ ಪದ್ಧತಿ ವಿರೋಧಿ ನಾಟಕವನ್ನು ದೇವದಾಸಿಯರ ನಿರ್ಮೂಲನೆಗಾಗಿ ಹೋರಾಟ ನಡೆಸುತ್ತಿರುವ ಅಥಣಿಯ ಬಿ.ಎಲ್. ಪಾಟೀಲರ ವಿಮೋಚನಾ ಸಂಸ್ಥೆ ಹಿಂದಿಗೂ ಭಾಷಾಂತರಿಸಿತು. ದೆಹಲಿ, ರಾಜಸ್ತಾನಗಳಲ್ಲಿ ನಾಟಕ ಪ್ರದರ್ಶನಗೊಂಡು ಅಲ್ಲಿನ ಜನರಿಗೆ ದೇವದಾಸಿ ಪದ್ಧತಿ ಮತ್ತು ಎಚ್.ಐ.ವಿ ಮುಂತಾದ ಲೈಂಗಿಕ ಸೋಂಕುಗಳ ಬಗ್ಗೆ ತಿಳಿವಳಿಕೆ ನೀಡುವಲ್ಲಿ ಯಶಸ್ವಿಯಾದವು. ಇದಕ್ಕಾಗಿ ವಿಮೋಚನಾ ಸಂಸ್ಥೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಕೂಡ ಬಂದಿದ್ದು ಹೆಮ್ಮೆ ಪಡುವ ವಿಚಾರ ಎಂದು ಅವರು ಹೇಳಿದರು.
ವಿಶ್ವೇಶ್ವರಿ ಹಿರೇಮಠ (ಕಲ್ಮಠ) ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನವರು. ಬಾಲ್ಯದಲ್ಲೇ ಸಂಗೀತ, ನೃತ್ಯ, ನಾಟಕ, ಭಾಷಣಗಳಲ್ಲಿ ಆಸಕ್ತಿ ಹೊಂದಿದ್ದರು. ಕಿತ್ತೂರಿನಲ್ಲಿ ಯುವತಿಯರ ಮಂಡಳಿ ಸ್ಥಾಪಿಸಿ ತಮ್ಮ ನಾಟಕ ಜೀವನಕ್ಕೆ ನೀರೆರೆದರು. ವಿಶ್ವೇಶ್ವರಿ ಅವರ ತಂದೆ ರುದ್ರಯ್ಯ ಕಲ್ಮಠರು ಸ್ವಾತಂತ್ರ್ಯ ಯೋಧರು. ಅಲ್ಲದೆ ಸಣ್ಣಾಟಗಳಲ್ಲಿ ಪಾತ್ರ ಮಾಡುತ್ತಿದ್ದವರು. ತಾಯಿ ನೀಲಾಂಬಿಕೆ ಗಾಯಕಿಯಾಗಿದ್ದರು.
1983ರಲ್ಲಿ ಜಯತೀರ್ಥ ಜೋಶಿ ಅವರು ನಡೆಸಿಕೊಟ್ಟ ನಾಟಕ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಶ್ವೇಶ್ವರಿ, ಅದೇ ವರ್ಷ ಹೆಗ್ಗೋಡಿನ ನೀನಾಸಂನಲ್ಲಿ ಸಂಸ್ಕೃತಿ ಶಿಬಿರಕ್ಕೆ ಹೋದರು. ಇವರ ನಾಟಕ ಮತ್ತು ಅಭಿನಯದ ಕೌಶಲವನ್ನು ಮೆಚ್ಚಿಕೊಂಡ ನೀನಾಸಂನ ಕೆ.ವಿ. ಸುಬ್ಬಣ್ಣ ಅವರು ನೀನಾಸಂ ಜತೆ ಇರಲು ಆಹ್ವಾನಿಸಿದರು. ಹೀಗೆ ಆರಂಭವಾದ ವಿಶ್ವೇಶ್ವರಿ ಅವರ ಕಲಾಯಾತ್ರೆ ಚಿತ್ರದುರ್ಗದ ಸಾಣೆಹಳ್ಳಿಯಲ್ಲೂ ಮುಂದುವರಿಯಿತು. ಸಾಣೆಹಳ್ಳಿ ಶ್ರೀಗಳ ಕರೆಯ ಮೇಲೆ ಅಲ್ಲಿಗೆ ಹೋದ ಇವರು, ಅಲ್ಲಿ ರಂಗಮಂದಿರವನ್ನು ಕಟ್ಟಿಸಿ ಅಲ್ಲಿನ ಮಕ್ಕಳಿಂದಲೇ ಹೂಲಿ ಶೇಖರ್ ಅವರ ‘ಅರಗಿನ ಬೆಟ್ಟ’ ನಾಟಕವನ್ನು ಆಡಿಸಿದರು. ಆಗ ನೀನಾಸಂನ ತಿರುಗಾಟದಲ್ಲಿ ಇದ್ದ ನಟ, ನಿರ್ದೇಶಕ, ಹಾಡುಗಾರ ಬಸವಲಿಂಗಯ್ಯ ಅವರ ಕೈ ಹಿಡಿದು ತಮ್ಮ ಕಲಾಯಾತ್ರೆಯನ್ನು ಮುಂದುವರಿಸಿದರು.
ಮಕ್ಕಳ ನಾಟಕಗಳನ್ನು ನಿರ್ದೇಶಿಸುವಲ್ಲಿ ಪಳಗಿದ್ದ ವಿಶ್ವೇಶ್ವರಿ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕೃತ ನಿರ್ದೇಶಕರೆಂದು ಗುರುತಿಸಿತು. ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ನಾಟಕ ತರಬೇತಿ ಶಿಬಿರಗಳನ್ನು ಸಂಘಟಿಸಿರುವ ಇವರು, ಹವ್ಯಾಸಿ ರಂಗಭೂಮಿಯ ಜತೆ ವೃತ್ತಿ ರಂಗಭೂಮಿ ಮತ್ತು ಜನಪದ ರಂಗಭೂಮಿಯಲ್ಲಿ ವಿಭಿನ್ನ, ವಿಶಿಷ್ಟ ಪ್ರಯೋಗಗಳನ್ನು ನಡೆಸಿದರು. ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಶ್ರೀಕೃಷ್ಣ ಪಾರಿಜಾತ, ಇನ್ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿರುವ ‘ಸಂಗ್ಯಾ ಬಾಳ್ಯಾ’, ಎಂ.ಎಂ. ಕಲಬುರ್ಗಿ ಅವರ ‘ಖರೇ ಖರೇ ಸಂಗ್ಯಾಬಾಳ್ಯಾ’ ನಾಟಕಗಳಲ್ಲಿ ಅಭಿನಯಿಸಿದವರು. ಮಾತುಗಳೇ ಪ್ರಧಾನವಾದ ಕಂದಗಲ್ ಹನುಮಂತರಾಯರ
‘ರಕ್ತರಾತ್ರಿ’ ನಾಟಕವನ್ನು ಅಭಿನಯ ಕೇಂದ್ರಿತ ನಾಟಕವನ್ನಾಗಿ ಪರಿವರ್ತಿಸಿ ಆಡಿಸಿದ ಕೀರ್ತಿ ಅವರದು.
ಪತಿ, ಬಸವಲಿಂಗಯ್ಯ ಅವರೊಂದಿಗೆ 1995ರಲ್ಲಿ ಧಾರವಾಡದಲ್ಲಿ ಜನಪದ ಸಂಶೋಧನಾ ಕೇಂದ್ರ ಸ್ಥಾಪಿಸಿರುವ ಅವರು, ಕೇಂದ್ರದ ವತಿಯಿಂದ 20ಕ್ಕೂ ಹೆಚ್ಚು ಮೌಲ್ಯಯುತ ಪುಸ್ತಕಗಳ ಪ್ರಕಟಣೆಗೆ ಸಾಥ್ ನೀಡಿದ್ದಾರೆ. ಜನಪದದ ಎಲ್ಲ ಪ್ರಕಾರಗಳ ಅಧ್ಯಯನದ ದೃಷ್ಟಿಯಿಂದ ಪ್ರಾರಂಭವಾಗಿರುವ ಈ ಕೇಂದ್ರದ ವತಿಯಿಂದ 22 ಸಿ.ಡಿ.ಗಳನ್ನು ಸಹ ಹೊರತರಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬಯಲಾಟ, ಹಾಡುಗಾರಿಕೆ, ಸಣ್ಣಾಟ, ದೊಡ್ಡಾಟ ತರಗತಿಗಳನ್ನು ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದೆ. ಕಳೆದ ವರ್ಷ ಕ್ಯಾಲಿಫೋರ್ನಿಯಾದಲ್ಲಿ ವಿಶ್ವೇಶ್ವರಿ– ಬಸವಲಿಂಗಯ್ಯ ದಂಪತಿ ‘ಶ್ರೀಕೃಷ್ಣ ಪಾರಿಜಾತ’ ಕುರಿತು ಒಂದು ತಿಂಗಳ ಕಾರ್ಯಾಗಾರ ನಡೆಸಿದ್ದರು. 20–25 ಕಲಾವಿದರನ್ನು ಒಳಗೊಂಡ ತಂಡವೊಂದನ್ನು ಕಟ್ಟಿಕೊಂಡಿದ್ದು ಹೊಸ ಹೊಸ ನಾಟಕಗಳನ್ನು ಪ್ರದರ್ಶಿಸುತ್ತಾರೆ.
ಮಲ್ಲಿಕಾರ್ಜುನ ಮನ್ಸೂರ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಕುರಿತಂತೆ ಸಾಕ್ಷ್ಯಚಿತ್ರಗಳನ್ನು ತಯಾರಿಸಿರುವ ವಿಶ್ವೇಶ್ವರಿ ಅವರು, ಟೋನಿ, ಗಂಗಾ ಮುಂತಾದ ಟಿ.ವಿ. ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ.
40ಕ್ಕೂ ಹೆಚ್ಚು ಮಕ್ಕಳ ನಾಟಕ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುವ ವಿಶ್ವೇಶ್ವರಿ ಅವರು, ಎರಡು ಬಾರಿ ಲಂಡನ್‌ಗೆ ಭೇಟಿ ನೀಡಿ ತಮ್ಮ ಕಲಾ ಪ್ರದರ್ಶನವನ್ನು ನೀಡಿದ್ದಾರೆ. 2010ರಲ್ಲಿ ನಾವಿಕ ಸಮ್ಮೇಳನದಲ್ಲಿ ಭಾಗವಹಿಸಿ ಬಹ್ರೇನ್, ದುಬೈ, ಸಿಂಗಪುರಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ನಾಗಪುರದ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಮಕ್ಕಳ ಜಾನಪದ ಶಿಬಿರದ ನಿರ್ದೇಶಕಿಯಾಗಿ, ನೃತ್ಯ ಭಾರತ– ಭಾರತಿ ಶಿಬಿರವನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕೌನ್ಸಿಲ್ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಾರಿಜಾತ ಪರಾಮರ್ಶೆ, ಸಣ್ಣಾಟ ಸ್ವರೂಪ, ಸೋಗುಗಳು– ಒಂದು ಅಧ್ಯಯನ ಕೃತಿಗಳ ಸಂಪಾದನೆ ಮಾಡಿರುವ ವಿಶ್ವೇಶ್ವರಿ ಅವರು, ಮೂರು ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ. ಇದಲ್ಲದೇ 10ಕ್ಕೂ ಹೆಚ್ಚು ರೇಡಿಯೊ ನಾಟಕಗಳನ್ನು ಹಾಗೂ ರಂಗಭೂಮಿಗೆ ಸಂಬಂಧಿಸಿದಂತೆ ಇವರು ಬರೆದಿರುವ ಅನೇಕ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿವೆ.
ಬೆಂಗಳೂರು ದೂರದರ್ಶನದಲ್ಲಿ ‘ಸಂಗಾತಿ ಸಂಪ್ರೀತಿ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ವಿಶ್ವೇಶ್ವರಿ ಅವರು ‘ಮನೆಯಲ್ಲಿ ಪತಿ ಮಾತ್ರವಲ್ಲದೇ ತವರು ಮನೆ ಮತ್ತು ಅತ್ತೆಯ ಮನೆಯಲ್ಲಿ ಅಪಾರ ಪ್ರೋತ್ಸಾಹ ಸಿಗುತ್ತಿದ್ದ ಕಾರಣ ನಾನೊಬ್ಬ ಕಲಾವಿದೆಯಾಗಿ ರೂಪುಗೊಳ್ಳಲು ಸಾಧ್ಯವಾಯಿತು. ನಾನು ನಿರ್ದೇಶಿಸುತ್ತಿದ್ದ, ಅಭಿನಯಿಸುತ್ತಿದ್ದ ನಾಟಕಗಳನ್ನು ನೋಡಲು ನನ್ನ ಅತ್ತೆ ಸ್ವತಃ ಬಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು’ ಎಂದು ಕುಟುಂಬದ ಸದಸ್ಯರ ಸಹಕಾರದ ಬಗ್ಗೆ ಬಿಚ್ಚು ಮನಸ್ಸಿನಿಂದ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.