ADVERTISEMENT

ವಿಭಿನ್ನ ಸಿನಿಮಾ, ವಿಭಿನ್ನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST
ವಿಭಿನ್ನ ಸಿನಿಮಾ, ವಿಭಿನ್ನ ಪ್ರಯೋಗ
ವಿಭಿನ್ನ ಸಿನಿಮಾ, ವಿಭಿನ್ನ ಪ್ರಯೋಗ   

ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಅದ್ಭುತ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಅವುಗಳ ಬಗೆಗೆ ಅರಿತುಕೊಳ್ಳಲು, ಅಲ್ಲಿಯ ಸಿನಿಮಾ ಜಗತ್ತಿನಲ್ಲಾಗುತ್ತಿರುವ ಪ್ರಯೋಗ, ಕಥೆ ಹೇಳುವ ರೀತಿ, ತಾಂತ್ರಿಕ ಬದಲಾವಣೆಗಳನ್ನು ಅರಿಯಲು ಸಿನಿಮೋತ್ಸವಗಳು ತುಂಬಾ ಮುಖ್ಯವಾಗುತ್ತವೆ. ಹೀಗಾಗಿ ಇಂಥ ಅವಕಾಶಗಳು ಸಿಕ್ಕಾಗ ಹೆಚ್ಚಾಗಿ ಬೇರೆ ಬೇರೆ ದೇಶದ ವಿಭಿನ್ನ ಚಿತ್ರಗಳನ್ನು ನೋಡುವುದೇ ನನ್ನ ಆಯ್ಕೆ. ಈಗ ನಡೆಯುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ದ ಕರ್ಸ್ಡ್‌ ಒನ್ಸ್‌’, ‘ದ ಮ್ಯಾನ್‌ ಹು ಕಾಲ್ಡ್‌ ಓವೆ’, ‘ದ ಟೀಚರ್‌’ ಸಿನಿಮಾಗಳನ್ನು ನೋಡಿದೆ. ಇವುಗಳನ್ನು ಇನ್ನೊಮ್ಮೆ ನೋಡಬಹುದು. ಅಷ್ಟು ಚೆನ್ನಾಗಿವೆ.
ಮಂಗಳವಾರ (ಫೆ.7) ನೋಡಬಹುದಾದ ನನ್ನ ಆಯ್ಕೆಯ ಸಿನಿಮಾಗಳು ನಾಲ್ಕು. ‘ದ ಟೀಚರ್‌’, ‘ನವಾರಾ’, ‘ಸಾಂಕ್ಚ್ಯುರಿ’, ‘ಇನೊಸೆನ್ಸ್‌’ ಚಿತ್ರಗಳು. ಇವುಗಳಲ್ಲಿ ‘ದ ಟೀಚರ್‌’ ಸಿನಿಮಾ ನೋಡಿದ್ದೇನೆ. ಇನ್ನೊಮ್ಮೆ ನೋಡಬೇಕೆನಿಸಿದೆ. ಉಳಿದವು ಅವುಗಳ ಕಥೆಯ ಮೂಲಕ ಕಾಡುತ್ತಿವೆ. ‘ಸಾಂಕ್ಚ್ಯುರಿ’ ಚಿತ್ರ ರಿಮಾಂಡ್‌ ಹೋಂಗೆ ಸಂಬಂಧಿಸಿದ್ದು. ಕಥಾ ಸಾರಾಂಶ ಕನ್ನಡದ ‘ಮೈತ್ರಿ’ ಚಿತ್ರ ನೆನಪಿಸಿತು. ಹೀಗಾಗಿ ಆ ಸಿನಿಮಾ ಚೆಲುವು ಕಣ್ತುಂಬಿಕೊಳ್ಳುವ ಆಸೆಯಿದೆ.
- ಹೃದಯ ಶಿವ, ಗೀತ ರಚನೆಕಾರ

ದ ಟೀಚರ್‌

ಶಾಲೆಯಲ್ಲಿ ಒಬ್ಬಳು ಅಸಭ್ಯ  ಶಿಕ್ಷಕಿಯಿರುತ್ತಾಳೆ. ಎಲ್ಲರ ಬಳಿ ಆಕೆ ಒರಟಾಗಿ ನಡೆದುಕೊಳ್ಳುತ್ತಾಳೆ. ಅವಳ ಒರಟು ನಡವಳಿಕೆಯಿಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಶಿಕ್ಷಕಿಯ ಕೆಟ್ಟ ನಡವಳಿಕೆಯಿಂದ ಮಕ್ಕಳ ಭವಿಷ್ಯದ ಬಗೆಗೆ ಪೋಷಕರಲ್ಲಿ ಆತಂಕ ಉಂಟಾಗುತ್ತದೆ. ಇದರಿಂದ ಆಕೆಯ ವಿರುದ್ಧ ದೂರು ಕೊಡುವ ನಿರ್ಧಾರಕ್ಕೆ ಪೋಷಕರು ಬರುತ್ತಾರೆ. ಕಮ್ಯುನಿಸ್ಟ್‌ ಪಾರ್ಟಿಯಲ್ಲಿ ಆಕೆಗೆ ಇರುವ ಪ್ರಭಾವ, ಆಕೆಯನ್ನು ಕಂಡರೆ ಭಯಪಡುವಂತೆ ಮಾಡುತ್ತದೆ. ಇಂಥ ಸಂದರ್ಭದಲ್ಲಿ ಆಕೆಯ ವಿರುದ್ಧ ಎಲ್ಲರು ದನಿಯೆತ್ತುತ್ತಾರಾ? ಅಥವಾ ಸುಮ್ಮನಿರುತ್ತಾರಾ? ಎನ್ನುವುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ನಿರ್ದೇಶನ– ಜಾನ್‌ ಹ್ರೆವಿಕ್‌. ದೇಶ– ಸ್ಲೊವಾಕಿಯಾ. ನಿಮಿಷ– 102. ಪರದೆ– 4. ಸಮಯ– ಸಂಜೆ 5.30.

ADVERTISEMENT

ನವಾರಾ
ನವಾರಾ ಸುಂದರ ತರುಣಿ, ಪ್ರತಿದಿನ ಕೆಲಸಕ್ಕೆ ನೆರೆಹೊರೆಯ ಬಡವರು ವಾಸವಾಗಿರುವ ಓಣಿಯ ಮೂಲಕ ಹೋಗುತ್ತಿರುತ್ತಾಳೆ. ನಂತರ ಐಷಾರಾಮಿ ವಠಾರದೊಳಗಿನ ರಸ್ತೆಯ ಮೂಲಕ ಸಾಗುತ್ತಾಳೆ. ಬಡಜನರ ಹಾಗೂ ಶ್ರೀಮಂತರ ಬದುಕನ್ನು ತೀರಾ ಹತ್ತಿರದಿಂದ ನೋಡಿದ ಅವಳಿಗೆ ಬಡವರ ಬಗೆಗೆ ವಿಶೇಷ ಕಾಳಜಿ ಇರುತ್ತದೆ. ಸಿನಿಮಾಗಳಲ್ಲಿ ಸಾಕಷ್ಟು ತಿರುವುಗಳಿದ್ದು, ಕುತೂಹಲ ಹುಟ್ಟಿಸುತ್ತದೆ.
ನಿರ್ದೇಶನ– ಹಾಲಾ ಖಲೀಲ್‌. ಭಾಷೆ– ಈಜಿಪ್ಟ್‌. ನಿಮಿಷ– 122. ಪರದೆ– 7. ಸಮಯ– ಬೆಳಿಗ್ಗೆ 10.

ಸಾಂಕ್ಚ್ಯುರಿ
1968ರ ಬೇಸಿಗೆ. ಬದಲಾವಣೆಯ ಗಾಳಿ ಉತ್ತರ ಜರ್ಮನಿಯ ಸಣ್ಣಪಟ್ಟಣಗಳ ಮೇಲೆ ತಂಗಾಳಿಯಂತೆ ಬೀಸತೊಡಗಿದೆ. 14ರ ವೋಲ್ಫ್‌ಗ್ಯಾಂಗ್‌ ಎಂದಿನಂತೆ ತಾಯಿಯನ್ನು, ತನ್ನ ಮಲತಂದೆಯನ್ನು ಸಹಜ ಗೊಂದಲಗಳೊಂದಿಗೆ ಭೇಟಿಯಾಗುತ್ತಾನೆ. ತನ್ನ ಕುಟುಂಬದಿಂದ ಅವನನ್ನು ದೂರದ ಧಾರ್ಮಿಕ ಸಂಸ್ಥೆ ಫ್ರೆಯಿಸ್ಟಾಟ್‌ಗೆ ಗಡಿಪಾರು ಮಾಡಿದಾಗ, ಆತನಿಗೆ ತನ್ನ ಸ್ವಾತಂತ್ರ್ಯದ ಹಂಬಲಕ್ಕೆ ಇದು ಅಡ್ಡಿಯಾಗದು ಎನಿಸುತ್ತದೆ. ಬೀಗ ಹಾಕಿದ ಕದ, ತಡೆಯೊಡ್ಡುವ ಕಿಟಕಿ, ಮಿಲಿಟರಿ ಕವಾಯತು ಇರುವ ಆ ಬಂಜರು ಭೂಮಿಯ ಸರಹದ್ದು ಇದ್ದರೂ ಸ್ವಾತಂತ್ರ್ಯದ ಹಂಬಲ ಅಷ್ಟು ಬೇಗ ಹೂತುಹೋಗುವುದಿಲ್ಲ ಎನ್ನುವುದು ಆತನಿಗೆ ಸ್ಪಷ್ಟವಾಗಿತ್ತು. ನಿರ್ದೇಶನ–  ಮಾರ್ಕ್‌ ಬ್ರುಮುಂದ್‌. ಭಾಷೆ– ಜರ್ಮನ್‌. ನಿಮಿಷ– 104. ಪರದೆ– 2. ಸಮಯ– ರಾತ್ರಿ 8.20.

ದ ಇನೊಸೆನ್ಸ್‌
1945ರಲ್ಲಿ ಪೋಲೆಂಡ್‌ನಲ್ಲಿ ಜರ್ಮನ್‌ ನಾಜಿ ಕ್ಯಾಂಪ್‌ಗಳಲ್ಲಿ ಬದುಕುಳಿದವರ ನೆರವಿಗೆ ಫ್ರೆಂಚ್‌ ರೆಡ್‌ಕ್ರಾಸ್‌ ವೈದ್ಯನೊಬ್ಬ ಬರುತ್ತಾನೆ. ಹತ್ತಿರದ ಕಾನ್ವೆಂಟ್‌ಗೆ ಭೇಟಿ ನೀಡಿದಾಗ ಅಲ್ಲಿನ ಅನೇಕ ಕ್ರೈಸ್ತ ಸನ್ಯಾಸಿನಿಯರ ಮೇಲೆ ರಷ್ಯನ್‌ ಸೈನಿಕರಿಂದ ಲೈಂಗಿಕ ದೌರ್ಜನ್ಯ ನಡೆದಿರುವುದೂ,  ಅವರು ಗರ್ಭಿಣಿಯಾಗಿರುವುದನ್ನೂ ಕಾಣುತ್ತಾನೆ. ಅವರ ನೆರವಿಗೆ ಆತ ಮುಂದಾಗುತ್ತಾನೆ.
ನಿರ್ದೇಶನ– ಅನ್ನೆ ಪಾಂಟೇನ್‌. ದೇಶ– ಇಟಲಿ. ನಿಮಿಷ– 115. ಪರದೆ– 5. ಸಮಯ– ಮಧ್ಯಾಹ್ನ 2.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.