‘ಥ್ಯಾಂಕ್ ಗಾಡ್ ಇಟ್ಸ್ ಸ್ಯಾಟರ್ಡೆ’ (ಟಿಜಿಐಎಸ್) ನಗರದ ಹವ್ಯಾಸಿ ಛಾಯಾಗ್ರಾಹಕರ ತಂಡವು ತನ್ನ 6ನೇ ವಾರ್ಷಿಕ ‘ಜಗಚಿತ್ರ’ ಛಾಯಾಚಿತ್ರ ಪ್ರದರ್ಶನವನ್ನು ಇದೇ 31 ರಿಂದ ಜೂನ್ 3 ರವರೆಗೆ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್‌ನ ವಿಸ್ಮಯ ಗ್ಯಾಲರಿಯಲ್ಲಿ ಆಯೋಜಿಸಿದೆ.
ಮಲ್ಟಿಪಲ್ ಸ್ಕ್ಲೆರಾಸಿಸ್ (ಎಂಎಸ್) (ಜೀವಕೋಶಗಳ ಮರಗಟ್ಟುವಿಕೆ) ಕಾಯಿಲೆಯಿಂದ ಬಳಲುತ್ತಿರುವವರ ಆರೈಕೆಗೆ ಹಾಗೂ ಚಿಕಿತ್ಸೆಗಾಗಿ ಶ್ರಮಿಸುತ್ತಿರುವ ಮಲ್ಟಿಪಲ್ ಸ್ಕ್ಲೆರಾಸಿಸ್ ಸೊಸೈಟಿ ಆಫ್ ಇಂಡಿಯಾ (ಎಂಎಸ್‌ಎಸ್‌ಐ) ಸಂಸ್ಥೆಗೆ ದೇಣಿಗೆ ನೀಡುವುದು ‘ಜಗಚಿತ್ರ’ ಗುಂಪಿನ ಈ ಪ್ರದರ್ಶನದ ಉದ್ದೇಶ. ಟಿಜಿಐಎಸ್ ತಂಡದಲ್ಲಿ 1,400ಕ್ಕಿಂತ ಅಧಿಕ ಸದಸ್ಯರಿದ್ದಾರೆ. ವಿಶ್ವದಾದ್ಯಂತ ಇರುವ ಅವರು ಸೆರೆ ಹಿಡಿದಿರುವ ಅದ್ಭುತ ಚಿತ್ರಗಳು ನೋಡುಗರ ಕಂಗಳಿಗೆ ಹಾಗೂ ಮನಸ್ಸಿಗೆ ರಸದೌತಣ ನೀಡಲಿವೆ.
ಮೇ 31ರ ಸಂಜೆ 4.30 ಗಂಟೆಗೆ ಈ ಪ್ರದರ್ಶನದ ಉದ್ಘಾಟನೆ ನಡೆಯಲಿದ್ದು, ನಟಿ ಸುಮನ್ ನಗರ್‌ಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆನಂದ್ ಶರಣ್ ಫೋಟೋಗ್ರಫಿ ವರ್ಕ್-ಶಾಪ್ಸ್ ನಿರ್ದೇಶಕ ಹಾಗೂ ಛಾಯಾಗ್ರಾಹಕ ಆನಂದ್ ಶರಣ್ ಇರಲಿದ್ದಾರೆ. ಟಿಜಿಐಎಸ್‌ನಲ್ಲಿ ಆನಂದ್ ಶರಣ್ ಅವರ ವಿದ್ಯಾರ್ಥಿಗಳೇ ಬಹುತೇಕರು. ಈ ತಂಡ ನಡೆಸುವ ವಾರ್ಷಿಕ ಛಾಯಾಚಿತ್ರ ಪ್ರದರ್ಶನಕ್ಕೆ ಈ ಬಾರಿ ‘ಜಗಚಿತ್ರ’ ಎಂದು ಹೆಸರಿಡಲಾಗಿದೆ. ಜಗಚಿತ್ರ ಎಂದರೆ ಜಗದ ಅದ್ಭುತಗಳ ಒಂದು ಇಣುಕು ನೋಟ. ತಂಡದ ಸದಸ್ಯರು ಸೆರೆ ಹಿಡಿದು ಪ್ರದರ್ಶನ ಬಯಸಿ ಕಳುಹಿಸಿದ್ದ 400ಕ್ಕೂ ಅಧಿಕ ಚಿತ್ರಗಳ ಪೈಕಿ 100 ಚಿತ್ರಗಳು ಆಯ್ಕೆ ಮಾಡಿ ಅವುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ದೀಪಾ ರವಿಕುಮಾರ್ ಅವರ ‘ಬ್ರೇಕಿಂಗ್ ಡೌನ್’ ಚಿತ್ರ
ಅಂಟಾರ್ಟಿಕ, ಆಸ್ಟ್ರೇಲಿಯಾ, ಬರ್ಮಾ, ಅಮೆರಿಕ, ಚೀನಾ, ನಾರ್ವೆ, ಥಾಯ್‌ಲೆಂಡ್ ಮುಂತಾದ ದೇಶಗಳ ಪ್ರಕೃತಿ, ಸಂಸ್ಕೃತಿ, ವಾಸ್ತುಶಿಲ್ಪ, ವನ್ಯಜೀವನ ಹಾಗೂ ಜನಜೀವನದ ಒಂದು ಇಣುಕು ನೋಟವನ್ನು ಪ್ರದರ್ಶನಕ್ಕಿಟ್ಟಿರುವ ಚಿತ್ರಗಳು ಕಟ್ಟಿಕೊಡಲಿವೆ. ಹನಿ ಕೂಮ್ಬ್ ತಂಡದವರು ವಿಶೇಷ ಕಾಗದದಲ್ಲಿ ಮುದ್ರಿಸಿರುವ ಈ ಚಿತ್ರಗಳು 40 ವರ್ಷಗಳವರೆಗೂ ತಮ್ಮ ಮೆರುಗನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಎಂಎಸ್ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ಅವರ ಕುಟುಂಬಸ್ಥರು ಸೆರೆ ಹಿಡಿದಿರುವ ಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿರುವುದು ಈ ಬಾರಿಯ ವಿಶೇಷ.
ಟಿಜಿಐಎಸ್‌ನ ಮಾರ್ಗದರ್ಶಕ ಗಿರೀಶ್ ಮಾಯಾಚಾರಿ, ‘ನಗರದಲ್ಲಿ ಸಕ್ರಿಯವಾಗಿರುವ ಛಾಯಾಗ್ರಹಣ ಗುಂಪುಗಳಲ್ಲಿ ಟಿಜಿಐಎಸ್ ಒಂದು. ಛಾಯಾಗ್ರಹಣ ಕೇವಲ ಹವ್ಯಾಸವಾಗಿರದೆ ಅದನ್ನು ವೃತ್ತಿಯನ್ನಾಗಿಸಿಕೊಳ್ಳುವಂತೆ ಸದಸ್ಯರಿಗೆ ಪ್ರೋತ್ಸಾಹ ನೀಡಲಾಗುತ್ತದೆ’ ಎಂದರು.
ಎಂಎಸ್‌ಎಸ್‌ಐ ಸಹಯೋಗ: ಟಿಜಿಐಎಸ್ ಪ್ರತಿ ವರ್ಷವೂ ಒಂದೊಂದು ಎನ್‌ಜಿಒ ಸಂಸ್ಥೆಯೊಂದಿಗೆ ಕೈಜೋಡಿಸಿ, ಒಳ್ಳೆಯ ಕೆಲಸಕ್ಕೆ ನೆರವು ನೀಡಲು ಛಾಯಾಚಿತ್ರ ಪ್ರದರ್ಶನದ ಮೂಲಕ ಹಣ ಸಂಗ್ರಹಿಸುತ್ತದೆ. 2017ನೇ ಸಾಲಿನಲ್ಲಿ ನಡೆಸಿದ ಪ್ರದರ್ಶನದಿಂದ ₹6 ಲಕ್ಷ ಸಂಗ್ರಹವಾಗಿತ್ತು. ಆ ಹಣವನ್ನು ಎಂಎಸ್‌ಎಸ್‌ಐಗೆ ದೇಣಿಗೆಯಾಗಿ ನೀಡಲಾಗಿತ್ತು. ಈ ಬಾರಿಯೂ ಅದೇ ಸಂಸ್ಥೆಗೆ ಪ್ರದರ್ಶನದಿಂದ ಬರುವ ಹಣವನ್ನು ದೇಣಿಗೆ ರೂಪದಲ್ಲಿ ನೀಡಲಾಗುತ್ತದೆ. ಚಿತ್ರಗಳನ್ನು ಖರೀದಿಸುವವರಿಗೆ ತೆರಿಗೆ ವಿನಾಯಿತಿಯೂ ಇದೆ.
ಚಿತ್ರ: ಗೌರವ್ ಭಟ್ಕರ್
ಎಂಎಸ್‌ಎಸ್‌ಐನ ಬೆಂಗಳೂರು ವಿಭಾಗದ ಕಾರ್ಯದರ್ಶಿ ಶಂಕರ್ ಸುಬ್ರಮಣ್ಯನ್, ‘ಎಂಎಸ್ ಊಹೆಗೂ ಎಟುಕದ ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆ. ಮಿದುಳು ಮತ್ತು ದೇಹದ ನಡುವಿನ ಮಾಹಿತಿ ವಿನಿಮಯದ ಮೇಲೆ ಈ ಕಾಯಿಲೆ ಪರಿಣಾಮ ಬೀರುತ್ತದೆ. ಟಿಜಿಐಎಸ್‌ನ ನೆರವಿನಿಂದ ಎಂಎಸ್ ಪೀಡಿತ ಬಡವರಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿದೆ’ ಎಂದರು.
ಬಣ್ಣಗಳ ಸಂಗದಲ್ಲಿ ಕಾಯಿಲೆ ಮೀರುವ ಹಂಬಲ ಮಲ್ಟಿಪಲ್ ಸ್ಕ್ಲೆರಾಸಿಸ್ ಇದ್ದರೂ ಅದನ್ನು ಮೀರಿ ಜೀವನ ಸಾಗಿಸುವ ಸಲುವಾಗಿ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಪ್ರಿಯಾ.
‘ಕೆಲ ವರ್ಷಗಳಿಂದ ಎಂಎಸ್ಎಸ್ಐಗೆ ಚಿಕಿತ್ಸೆಗಾಗಿ ಬರುತ್ತಿದ್ದು, ಟಿಜಿಐಎಸ್ ನೆರವಿನಿಂದಾಗಿ ಪ್ರಸಿದ್ಧ ನರರೋಗ ತಜ್ಞರಿಂದ ಚಿಕಿತ್ಸೆ ಲಭ್ಯವಾಗಿದೆ. ಅಲ್ಲದೆ ಫಿಸಿಯೋಥೆರಪಿ ತಜ್ಞರಿಂದ ಪ್ರತಿವಾರ ಚಿಕಿತ್ಸೆಗಾಗಿ ಸಹಾಯ ದೊರೆಯುತ್ತಿದೆ. ಟಿಜಿಐಎಸ್‌ಗೆ ನಾನು ಆಭಾರಿ’ ಎನ್ನುತ್ತಾರೆ ಅವರು.
**
ಚಿತ್ರ: ಡಾ.ಅದ್ವೈತ್ ಅಫಲೆ
*
* ಕಲಾವಿದರು: ‘ಥ್ಯಾಂಕ್ ಗಾಡ್ ಇಟ್ಸ್ ಸಾಟರ್ಡೆ’ ತಂಡ
* ಉದ್ಘಾಟನೆ: ನಟಿ ಸುಮನ್ ನಗರ್‌ಕರ್
* ಸ್ಥಳ: ವಿಸ್ಮಯ ಗ್ಯಾಲರಿ, ರಂಗೋಲಿ ಮೆಟ್ರೊ ಆರ್ಟ್ ಸೆಂಟರ್
* ಅವಧಿ: ಮೇ 31ರಿಂದ ಜೂನ್ 3ರವರೆಗೆ
* ಸಮಯ: ಬೆಳಿಗ್ಗೆ 10ರಿಂದ ಸಂಜೆ 7
* ಪ್ರವೇಶ: ಉಚಿತ
* ಸಂಪರ್ಕ: ಶಂಕರ್ ಸುಬ್ರಮಣಿಯನ್, 9448478147
* ಇ–ಮೇಲ್: tgis.jagachitra@gmail.com
ಚಿತ್ರ: ಸಚಿನ್ ಅಗರ್‌ವಾಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.