ಮೈ ನಡುಗಿಸುವ ಚುಮುಚುಮು ಚಳಿಯಲ್ಲೂ ತಣ್ಣೀರಿನ ಸ್ನಾನ, ಸೂರ್ಯ ಉದಯಿಸುವ ವೇಳೆಗಾಗಲೇ ದೇವಸ್ಥಾನದಲ್ಲಿ ಹಾಜರ್, ಸಂಜೆಯೂ ತಪ್ಪದೇ ದೇವಸ್ಥಾನದಲ್ಲಿ ಪ್ರತ್ಯಕ್ಷ. ಅಲ್ಲಿ ಕೇಳಿ ಬರುವುದೊಂದೇ ಸ್ವಾಮಿಯೇ ಶರಣಂ ಅಯ್ಯಪ್ಪ, ಸ್ವಾಮಿಯೇ ಶರಣಂ ಅಯ್ಯಪ್ಪ...
ಹೌದು ಎಲ್ಲೆಡೆ ಅಯ್ಯಪ್ಪಸ್ವಾಮಿಯ ಪೂಜಾ ಕೈಂಕರ್ಯ ಚುರುಕುಗೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಅಯ್ಯಪ್ಪಸ್ವಾಮಿಯ ಆರಾಧಕರ ಭಕ್ತಿ ಮುಗಿಲು ಮುಟ್ಟಿದೆ. ವರ್ಷದಿಂದ ವರ್ಷಕ್ಕೆ ಸ್ವಾಮಿಯ ದರ್ಶನಕ್ಕೆ ತೆರಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ..
ಅಯ್ಯಪ್ಪ ಸ್ವಾಮಿಯ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲಿಯೂ ಮಾಲೆ ಧರಿಸಿದ ಭಕ್ತರು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಹರಿಹರಸುತನ ಭಜನೆ ಮಾಡುವ ದೃಶ್ಯ ಇದೀಗ ಸಾಮಾನ್ಯವಾಗಿದೆ. ಕಾರ್ತೀಕ ಮಾಸದೊಂದಿಗೆ ಸ್ವಾಮಿಯ ಪೂಜಾ ಕೈಂಕರ್ಯಕ್ಕೆ ಚಾಲನೆ ದೊರೆತಿದ್ದು, ಸಂಕ್ರಾತಿಯಂದು ಮಕರ ಜ್ಯೋತಿಯ ದರ್ಶನದ ತನಕ ಈ ಸಂಭ್ರಮ ಮುಂದುವರಿಯಲಿದೆ.
ಮಾಲೆ ಧರಿಸಿ ಮಣಿಕಂಠನ ದರ್ಶನಕ್ಕೆ ಹೊರಟ ಭಕ್ತರ ದಂಡನ್ನು ನಿತ್ಯ ಕಾಣಬಹುದು. ಸಾಮಾನ್ಯವಾಗಿ ಹಿಂದೆಲ್ಲ ಹರಕೆ ಹೊತ್ತವರು- ಭಕ್ತರು ಒಂಬತ್ತು, ಹದಿನೆಂಟು, ಇಪ್ಪತ್ತೊಂದು, 48 ದಿನಗಳ ಕಾಲ ತಮ್ಮ ಇಚ್ಛೆಯನುಸಾರ ಮಾಲೆ ಧರಿಸಿ, ವ್ರತ ಆಚರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುವ ವಾಡಿಕೆ ಇತ್ತು.
ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲಸದ ಒತ್ತಡ, ಸಮಯ ಕೊರತೆ, ಇತರೆ ಕಾರಣಗಳಿಂದಾಗಿ 48 (ಮಂಡಲ), 21, 18 ದಿನಗಳ ಕಾಲ ವ್ರತವನ್ನು ಆಚರಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಅಯ್ಯಪ್ಪ ದರ್ಶನಕ್ಕೆ ಹೋಗುವ ಭಕ್ತಾದಿಗಳಲ್ಲಿ ಈಗ ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು, ವಕೀಲರು, ನೌಕರರು ಹೀಗೆ ವಿವಿಧ ಉದ್ಯೋಗ ಹಿನ್ನೆಲೆಯವರು ಹೆಚ್ಚಾಗುತ್ತಿದ್ದಾರೆ. ಆಟೊ, ಬಸ್ ಮತ್ತು ಟ್ಯಾಕ್ಸಿ ಚಾಲಕರಂತೂ ಅತ್ಯಧಿಕ ಪ್ರಮಾಣದಲ್ಲಿದ್ದಾರೆ. ಇವರಿಗೆಲ್ಲ ಸಹಜವಾಗಿಯೇ ಸಮಯಾಭಾವ. ಆದ್ದರಿಂದ ಯಾತ್ರೆಗೆ ಹೊರಡುವ ದಿನ, ಹಿಂದಿನ ದಿನ ಮಾಲೆ ಧರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದು ಅಷ್ಟು ಶ್ರೇಯಸ್ಸಲ್ಲ ಎನ್ನುತ್ತಾರೆ 19 ವರ್ಷಗಳಿಂದ ಮಾಲೆ ಧರಿಸುತ್ತಿರುವ ಜ್ಞಾನಭಾರತಿ ನಿವಾಸಿ ದೇವಣ್ಣ.
ಮಾಲೆ ಧರಿಸಿ, ಶಬರಿಮಲೆಗೆ ತೆರಳುವ ಭಕ್ತರು ಅಷ್ಟೂ ದಿನ (ಮಾಲೆ ಹಾಕಿಕೊಂಡಿರುವಷ್ಟು) ನಿತ್ಯ ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನ ಸ್ನಾನ ಮಾಡಿ ಮಡಿಯಿಂದ ದೇವಸ್ಥಾನಕ್ಕೆ ತೆರಳಿ ಹರಿಹರಸುತನ ಪೂಜೆ ಮಾಡಿ, ಭಜನೆಯಲ್ಲಿ ತಮ್ಮನ್ನು ತಾವೇ ಮರೆಯುತ್ತಾರೆ. ಬ್ರಹ್ಮಚಾರ್ಯ ಪಾಲಿಸುತ್ತಾರೆ. ಅನುಕೂಲವಿರುವವರು ಸ್ವಯಂ ಪಾಕಕ್ಕೆ ಮುಂದಾದರೆ, ಮತ್ತೆ ಕೆಲವರು ಆಶ್ರಯಿಸುವುದು ಹೊಟೇಲ್‌ಗಳನ್ನು. ಹಾಸಿಗೆಗಳಿಗೆ ಗುಡ್‌ಬೈ ಹೇಳಿ ಚಾಪೆಯ ಮೇಲೆಯೇ ಮಲಗುತ್ತಾರೆ. ಧೂಮಪಾನ, ಮಧ್ಯಪಾದಂಥ ದುಷ್ಟ ಚಟಗಳಿಂದ ದೂರವಿರುತ್ತಾರೆ. ಭಕ್ತಿ ನಿಷ್ಠೆಗಳಿಂದ ವ್ರತವನ್ನು ಆಚರಿಸಿ ಇರುಮುಡಿಯನ್ನು ಹೊತ್ತು ಶಬರಿಗಿರಿಗೆ ತೆರಳಿ ಮುಡಿ ಅರ್ಪಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ.
ಸಾಮಾನ್ಯವಾಗಿ ಸ್ವಾಮಿ ದರ್ಶನಕ್ಕಾಗಿ ಭಕ್ತರೆಲ್ಲರು ಇದೇ ಸಂದರ್ಭದಲ್ಲಿ ತೆರಳುವುದರಿಂದ ಇದೀಗ ಖಾಸಗಿ ವಾಹನಗಳಿಗೆ, ಟ್ರಾವಲ್ಸ್‌ನವರಿಗೂ ಬೇಡಿಕೆ ಹೆಚ್ಚು. ಬೇಸಿಗೆಯಂತೆ ಬಾಡಿಗೆಗೆ ಇದು ಒಳ್ಳೆಯ ಸೀಜನ್ ಎನ್ನುತ್ತಾರೆ ಕ್ಯಾಬ್ ಡ್ರೈವರ್ ಸುರೇಶ್.
ಅಯ್ಯಪ್ಪ ಭಕ್ತರಿಂದ ಬೇಡಿಕೆ ಹೆಚ್ಚಿರುವ ಕಾರಣ ತಕ್ಷಣ ಅಥವಾ ಅಗತ್ಯವಿದ್ದಾಗ ಟಿಟಿ, ಸುಮೊಗಳು ಬಾಡಿಗೆಗೆ ದೊರೆಯುತ್ತಿಲ್ಲ ಎನ್ನುತ್ತಾರೆ ಖಾಸಗಿ ಕಂಪೆನಿ ಉದ್ಯೋಗಿ ರಾಕೇಶ್.
ಕರ್ಪೂರ ಪ್ರಿಯ ಅಯ್ಯಪ್ಪನಿಗೆ ಪೂಜಾ ಸಂದರ್ಭದಲ್ಲಿ ಚಿಂತಾಮಣಿ ಹೂ ಹಾಗೂ ತುಳಸಿಗೆ ಅಗ್ರ ಪ್ರಾಶಸ್ತ್ಯ. ಹೀಗಾಗಿ ಪ್ರತಿ ವರ್ಷವೂ ಈ ಸೀಜನ್‌ನಲ್ಲಿ ಚಿಂತಾಮಣಿ ಹೂವಿಗೆ ಡಿಮ್ಯಾಂಡ್ ಸ್ವಲ್ಪ ಜಾಸ್ತಿಯೇ ಎನ್ನುತ್ತಾರೆ ಸಿಟಿ ಮಾರುಕಟ್ಟೆಯ ಹೂವಿನ ವ್ಯಾಪಾರಿ ಗೋಪಿ.
ಕಾಲ ಎಷ್ಟೇ ಬದಲಾದರೂ ಜನರಿಗೆ ದೇವರ ಮೇಲಿನ ನಂಬಿಕೆ ಮಾತ್ರ ಕಡಿಮೆಯಾಗಿಲ್ಲ ಎನ್ನುವುದಕ್ಕೆ ವರ್ಷದಿಂದ ವರ್ಷಕ್ಕೆ ಮಾಲೆ ಧರಿಸಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿರುವ ಭಕ್ತರ ಸಂಖ್ಯೆಯೇ ಸಾಕ್ಷಿ. ನಿನ್ನೆ ಮೊನ್ನೆ ತನಕ ಜೀನ್ಸ್ ಟೀಶರ್ಟ್ ಧರಿಸಿ ಫೋಸ್ ಕೊಡುತ್ತಿದ್ದ ಯುವಕರು ಇಂದು ಕಪ್ಪು ವಸ್ತ್ರ ಧರಿಸಿ ದಾರಿಯಲ್ಲಿ ಸಿಗುವವರಿಗೆಲ್ಲಾ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಿದ್ದಾರೆ. ಕಚೇರಿಗಳಲ್ಲಿ ಸಹೋದ್ಯೋಗಿಗಳು ನಮಸ್ಕಾರ ಎಂದರೆ ಪ್ರತಿ ವಂದಿಸುವುದು ಸ್ವಾಮಿ ಶರಣಂ ಎಂದೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.