ಕಬ್ಬಿನ ರಸಕ್ಕಾಗಿ ಗಾಣ ತಿರುವುವಂತೆ, ಕಾಯ್ದ ಎಣ್ಣೆಯೊಳಗೆ ಜಿಲೇಬಿ ಹುಯ್ಯುವಂತೆ, ಗರಗರ ಗಿರಿಗಿಟ್ಲೆ ತಿರುಗಿಸಿದಂತೆ, ಸೇರಿನಿಂದ ಕಾಳು ಅಳೆದಂತೆ, ತರಕಾರಿ ಗೋಪುರ ಕಟ್ಟುತ್ತಿದ್ದಂತೆ, ಬೆಣ್ಣೆ ಮುದ್ದೆ ಕಟ್ಟುತ್ತಿದ್ದಂತೆ, ಪೆಟ್ಟುಕೊಡುತ್ತ ಮಡಕೆ ಪರೀಕ್ಷಿಸಿದಂತೆ, ಸರಸರ ನೋಟು ಎಣಿಸಿದಂತೆ, ಪಾತ್ರೆಗಳಿಗೆ ಕಲಾಯಿ ಮಾಡುವಂತೆ, ಮಾಲೆಯನ್ನು ಚಕ್ರಾಕಾರದಲ್ಲಿ ಸುತ್ತುತ್ತಿದ್ದಂತೆ, ಹಣ್ಣ ಮೇಲಿನ ಸಿಪ್ಪೆ ಹೆರೆಯುವಂತೆ, ಮಗುವೊಂದನ್ನು ತೊಡೆ ಮೇಲೆ ಕೂರಿಸಿಕೊಂಡು ಆನೆಯಾಡಿಸಿದಂತೆ... ಹೀಗೆ ಅಲ್ಲಿ ನಮ್ಮ ಬಜಾರ್‌ನ ಒಂದೊಂದೇ ದೃಶ್ಯ ಕಣ್ಣಿಗೆ ಕಟ್ಟುತ್ತಿತ್ತು. ಇದಕ್ಕೆ ಕಾರಣ ಅಂದಿನ ದೇಸಿ ಪ್ರಸ್ತುತಿ.
ಗೋಖಲೆ ಇನ್‌ಸ್ಟಿಟ್ಯೂಟ್‌ನಲ್ಲಿ ಹಿಂದೂಸ್ತಾನಿ ಕಲಾಕಾರ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಂಬೈನ ಹಿಂದೂಸ್ತಾನಿ ಗಾಯಕ ಪಂಡಿತ್ ಕೇದಾರ್ ಬೋಡಸ್ ಅವರು ಗಾಯನ ಪ್ರಸ್ತುತಪಡಿಸಿದರು.
ರಸಸಂತೆ
ಅದೊಂದು ರಸಸಂತೆ. ನಿಂತಲ್ಲಿ ನಿಲ್ಲದೇ, ಕೂತಲ್ಲಿ ಕೂರದೇ ಜರಜರ ಜಾರುತ್ತ ಸಾಗುವ ವಹಿವಾಟು. ಆ ರಸ ನಾಯಕನ ಗಂಟಲಿನಲ್ಲೊಂದು ಪುಟ್ಟ ಬೀನ್ ವಾದ್ಯವೇನಾದರೂ ಅಡಗಿ ಕುಳಿತಿದೆಯೋ ಎಂಬ ಗುಮಾನಿ.
ಐದೈದು ನಿಮಿಷಕ್ಕೊಮ್ಮೆ ಬಿಳಿಮೀಸೆ ಹುರಿಗೊಳಿಸುತ್ತಿದ್ದ ಕೈಗಳು. ಸುಮಾರು ಎರಡೂವರೆ ಗಂಟೆಯಷ್ಟು ‘ಭೆಂಡಿ ಬಝಾರ್’ ಘರಾಣೆಯ ಜವಾರಿತನ ಉಣಬಡಿಸಿದ ಕೇದಾರ್ ಅವರ ಗಾನ ರೀತಿ ಅಪೂರ್ವ ಮತ್ತು ಅಪರೂಪ.
ಏಕೆಂದರೆ, ಸಾಮಾನ್ಯವಾಗಿ ಎರಡು ಮೂರು ಘರಾಣೆಯನ್ನು ಕಲಿಯುವ ಗಾಯಕರು, ತಮ್ಮ ಪ್ರಸ್ತುತಿಗೆ ಪೂರಕವಾಗಿ ಆಯಾ ಘರಾಣೆಯ ಅಂಶಗಳನ್ನು ಬಳಸಿಕೊಂಡು ಕಛೇರಿಯ ಒಟ್ಟಂದ ಹೆಚ್ಚಿಸುವುದು ಸಾಮಾನ್ಯ. ಆದರೆ ಇವರು ಗ್ವಾಲಿಯರ್ ಕಲಿತಿದ್ದರೂ ಈ ಕಛೇರಿಯಲ್ಲಿ ಅದರ ತುಸು ನಝರೂ ಬೀಳಿಸದಂತೆ ಸಾಂಪ್ರದಾಯಿಕ ಶೈಲಿಯಲ್ಲಿ ಅಪ್ಪಟ ಭೆಂಡಿ ಬಝಾರ್ ಘರಾಣೆಯಲ್ಲಿ ಅಪರೂಪದ ರಾಗಗಳನ್ನು ಹಾಡಿದ್ದು ವಿಶೇಷ.
ಭಾನುವಾರದ ಬೆಳಗಿನ ಆಲಸ್ಯವನ್ನು ಕೊಡವಿ ಬೆನ್ನು ಹುರಿ ನೆಟ್ಟಗೆ ಮಾಡಿ ಆಲಿಸುವಂತೆ ಮಾಡಿದ್ದು ದೇಸಿ ತೋಡಿ. ಧೀಮಾ ಏಕತಾಲದಲ್ಲಿ ಬಡಾಖಯಾಲ್ ‘ಹಮಪತ ರಾಖೀ ಜೋ’ ನಂತರ ತೀನ್‌ತಾಲದಲ್ಲಿ ‘ರಬ ತೂ ಹೀ ತೇರೋ ನಾಮ ಸತ್ತಾರ’ ಮತ್ತು ಧೃತ್ ಏಕತಾಲ್ ದಲ್ಲಿ ‘ಢಮ್ ಢಮ್ ಢಮರು ಭಾಜೆ’ ಭೆಂಡಿ ಬಝಾರಿನ ಬಂದಿಶ್‌ಗಳ ರಚನೆ, ಸಂಯೋಜನೆ ಆಕರ್ಷಕ.
ಈ ಘರಾಣೆಯ ವಿಶೇಷ ಅಂಗವಾದ ಸರಗಮ್‌ನಲ್ಲಿ ಲೀಲಾಜಾಲವಾಗಿ ಅವರು ಸೃಷ್ಟಿಸಿದ ಮೀಂಡ-ತಿಹಾಯಿ, ಅದರಲ್ಲೂ ಒಂದು ಸಪ್ತಕದ ಸ್ವರದಿಂದ ಇನ್ನೊಂದು ಸಪ್ತಕದ ಅದೇ ಸ್ವರಕ್ಕೆ ಜೀಕುವ ರೀತಿ ಚೇತೋಹಾರಿ. ಅವರೊಳಗೊಬ್ಬ ಚೈತನ್ಯಪೂರ್ಣ ಬಾಲಕ ಸದಾ ಜಾಗೃತನಿದ್ದಾನೇನೋ ಎನ್ನುವಂಥ ಮುಖಭಾವ ಮತ್ತು ಹಾಡುಗಾರಿಕೆ.
‘ಝೂಲತ ಹಿಂದೋಳ’ ಎಂದು ಹಿಂದೋಳ ಬಹಾರದ ಖಯಾಲನ್ನು ರೂಪಕದಲ್ಲಿ ವಿಸ್ತರಿಸಿ ವಿರಮಿಸಿ, ಹಿಂಡೋಲಕ್ಕೆ ಹಾರಿದಾಗ ಹೊಮ್ಮಿದ್ದು ‘ಸಪ್ತಸೂರತೀನಗ್ರಾಂ’ ಎಂಬ ಏಕತಾಲ ಬಂಧಿ ಚೀಝ್. ಆನಂತರ ಜೀವನಪುರಿಯಲ್ಲಿ ‘ಗುನಿಜನ ಸಬ ಮಿಲ’ ಮತ್ತು ‘ಜಾವೋಜಿ ಜಾವೋಜಿ ಜಾವೋ’ ಕ್ರಮವಾಗಿ ಝಪ್ತಾಲ್ ಮತ್ತು ಧೃತ್ ತೀನ್‌ತಾಲದಲ್ಲಿ ಪ್ರಸ್ತುತಗೊಂಡವು. ಕೊನೆಯಲ್ಲಿ ಇವರು ಭೈರವಿಯಲ್ಲಿ ಖ್ಯಾಲ್ ನೂಮಾ ಹಾಡಿ ತರಾನಾ ಮೂಲಕ ಕಛೇರಿಯನ್ನು ಸಂಪನ್ನಗೊಳಿಸಿದಾಗ ರಸಿಕವೃಂದದಲ್ಲಿ ತೃಪ್ತಭಾವ.
ಮುಖ್ಯ ಕಲಾವಿದ, ಸಹ ಕಲಾವಿದ ಎನ್ನುವ ಬೇಧವಿಲ್ಲದೆ ಜೊತೆಜೊತೆಯಲ್ಲೇ ಮೇಳೈಸಲು ಪರಸ್ಪರ ಪ್ರೋತ್ಸಾಹಿಸಿದ ರೀತಿ ಗಮನಿಸುವಂಥದ್ದಾಗಿತ್ತು. ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಅವರವರ ಹರಿವಿಗೂ ಅವಕಾಶ ಕಲ್ಪಿಸುತ್ತ ಮುಖ್ಯಮೇಳವೊಂದಕ್ಕೆ ಬಂದು ಸೇರುವ ಕ್ರಮವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. ಆದ್ದರಿಂದಲೇ ಪುಣೆಯ ದತ್ತಾತ್ರೇಯ ಭಾವೆ ಅವರು ತಬಲಾ ಸಾಥ್‌ನಲ್ಲಿ ಚೆಂದದಿಂದ ಪುಟಿದೇಳಲು ಸಾಧ್ಯವಾಗಿದ್ದು. ಹಾಗೆಯೇ ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿಯವರು ಕೈಚಳಕ ತೋರಲು ಅನುವಾಗಿದ್ದು.
ಕೋಟೆಯ ಹಿಂದೇನಿದೆ?
ಅಂದಹಾಗೆ ಸುಮಾರು ನೂರೈವತ್ತು ವರ್ಷಗಳ ಹಿಂದೆ ಚಜ್ಜೂ ಖಾನ್, ನಾದೀರ್ ಖಾನ್, ಖಾದೀಮ್ ಹುಸೇನ್ ಸಹೋದರರು ಮಧ್ಯಪ್ರದೇಶದ ಮುರಾದಾಬಾದ್‌ನಿಂದ ಮುಂಬೈಗೆ ಬರುತ್ತಾರೆ. ತಂದೆ ದಿಲಾವರ್ ಖಾನ್ ಸ್ವತಃ ಹಿಂದೂಸ್ತಾನಿ ಕಲಾವಿದರಾಗಿದ್ದರೂ, ದ್ರುಪದ್ ಶೈಲಿಯ ವಿಶೇಷ ಕಲಿಕೆಗೆಂದು ಡಾಗರ್ ಮನೆತನದ ಇನಾಯತ್ ಖಾನ್ ಅವರ ಬಳಿ ಈ ಮೂವರು ಸಹೋದರರನ್ನು ಕಳಿಸುತ್ತಾರೆ.
ಮುಂಬೈನ ಭೆಂಡಿ ಬಝಾರ್‌ನಲ್ಲಿ ವಾಸಿಸುವ ಅವರು ಕ್ರಮೇಣ ತಮ್ಮದೇ ಆದ ಶೈಲಿಯನ್ನು ರೂಪಿಸುತ್ತಾರೆ. ಇದೇ ಭೆಂಡಿ ಬಝಾರ್ ಘರಾಣೆಯಾಗಿ ರೂಪುತಳೆಯುತ್ತದೆ. ಅವರು ವಾಸಿಸುತ್ತಿದ್ದ ಬಝಾರ್ ಇದ್ದದ್ದು ಮುಂಬೈನ ಕೋಟೆಯ ಹಿಂಬದಿ. ಅಂದರೆ Behind the fort. ಆಡುಮಾತಿನಲ್ಲಿ ಅದು ಭೆಂಡಿ ಆಗಿ ಬಝಾರಿನೊಂದಿಗೆ ಸೇರಿ ಭೆಂಡಿ ಬಝಾರ್ ಎಂಬಂತಾಗಿದ್ದು.
ಹೀಗೆ ಈ ನಾದದ ನದಿಗಳು ನಯಾ-ಪುರಾನಾದ ಹಂಗಿಲ್ಲದೆ ಹರಿಯುತ್ತಿದ್ದರೆ, ಏನೆಲ್ಲ ಸ್ವಾರಸ್ಯಗಳು ತೇಲಿಬರುತ್ತವಲ್ಲ? ಹರಿವೆನ್ನುವುದೇ ಹಾಗೆ. ಜಗದ ಸಂತೆಯೊಳಗೆ ಹಳೆಯದು ಹೊಸದು ಎಲ್ಲವೂ ತೇಲುತ್ತದೆ ಮುಳುಗುತ್ತದೆ ಮತ್ತೆ ಮತ್ತೆ ಮೇಲೇಳುತ್ತಿರುತ್ತದೆ. ಆಸ್ವಾದಕರು ಯಾವ ಕಾಲಕ್ಕೂ ಒಂಟಿಗಾಲಿನಲ್ಲಿ ಕಾಯುತ್ತಿರುತ್ತಾರೆ. ಈ ಮೂಲಕ ಕಲಾವಿದರು ಉಸಿರಾಡುತ್ತಿರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.