ಕನ್ನಂಬಾಡಿ ಆಣೆಕಟ್ಟು ಎಂದರೆ ನೆನಪಿಗೆ ಬರುವುದು ಸರ್.ಎಂ.ವಿ. ಆದರೆ ಸರ್.ಎಂ.ವಿ. ಎಂದರೆ ಕೇವಲ ಕಣ್ಣಿಗೆ ಕಾಣುವ ಕಟ್ಟಡಗಳ ಎಂಜಿನಿಯರ್ ಅಷ್ಟೇ ಅಲ್ಲ. ಸರ್.ಎಂ.ವಿ ಎಂದರೆ ದೂರದೃಷ್ಟಿ, ಸ್ವಾಭಿಮಾನ, ಪ್ರಾಮಾಣಿಕತೆ, ಶ್ರದ್ಧೆ. ಬದಲಾವಣೆಯ ಹರಿಕಾರ ಸರ್.ಎಂ.ವಿ. 102 ವರ್ಷಗಳ ಕಾಲ ಆರೋಗ್ಯಪೂರ್ಣ ಬದುಕು ನಡೆಸಿದ ಗಟ್ಟಿಗ. ಅವರು ಹಾಕಿಕೊಟ್ಟ ನೂರಾರು ಯೋಜನೆಗಳು ಇಂದಿಗೂ ಜೀವಂತವಾಗಿವೆ. ಶತಮಾನ ಉರುಳಿದರೂ ಅದೇ ಹೊಳಪು ಉಳಿಸಿಕೊಂಡು ನಿಂತ ಆಣೆಕಟ್ಟು/ಕಟ್ಟಡಗಳು ಅವರ ಕಾರ್ಯವೈಖರಿಯನ್ನು ಸಾರುತ್ತವೆ.
ಬೆಂಗಳೂರಿಗೆ ಸರ್.ಎಂ.ವಿ ನೀಡಿದ ಕೊಡುಗೆ ಸಾಕಷ್ಟಿದೆ. ಎಂಜಿನಿಯರುಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ನೆನೆಯುವಂತಹ ಕೆಲಸಗಳನ್ನು ಅವರು ಮಾಡಿದ್ದಾರೆ. ಬೆಂಗಳೂರು ತಾಂತ್ರಿಕ ಶಿಕ್ಷಣ ಕೇಂದ್ರವಾಗಿ ಬೆಳೆಯುವಲ್ಲಿ ಅವರ ಪಾತ್ರ ಮಹತ್ವದ್ದು. 1914ರಲ್ಲಿಯೇ ಬೆಂಗಳೂರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಾಲೆಯನ್ನು ಆರಂಭಿಸಿದರು. ಭಾರತೀಯ ವಿಜ್ಞಾನ ಮಂದಿರದ ಸ್ಥಾಪನೆಯಲ್ಲಿಯೂ ಅವರ ಶ್ರಮವಿದೆ. ತಾವೇ ಸ್ವತಃ ದೇಣಿಗೆ ನೀಡಿ 1943ರಲ್ಲಿ ಜಯಚಾಮರಾಜೇಂದ್ರ ತಾಂತ್ರಿಕ ಶಾಲೆಯನ್ನು ಅಸ್ತಿತ್ವಕ್ಕೆ ತಂದರು.
ಸರ್ ಎಂ.ವಿ ಎಂದೇ ಜನಪ್ರಿಯರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹುಟ್ಟಿದ್ದು ಸೆಪ್ಟೆಂಬರ್ 15, 1861ರಂದು. ಹುಟ್ಟೂರು ಮುದ್ದೇನಹಳ್ಳಿ. ಚಿಕ್ಕಬಳ್ಳಾಪುರದಲ್ಲಿ ಪ್ರಾಥಮಿಕ ಮತ್ತು ಬೆಂಗಳೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿದರು. 1881ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಪದವಿ ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಮುಂಬೈ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ವೃತ್ತಿ ಜೀವನ ಆರಂಭಿಸಿದರು (೧೮೮೪). ಇದಾದ ಮೇಲೆ ಭಾರತೀಯ ನೀರಾವರಿ ಕಮಿಷನ್ ಸೇರಿದರು. ಆಗ ದಖನ್ ಪ್ರಸ್ಥಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆ ಮಾಡಿದರು.
ಮೊದಲ ಮೈಲಿಗಲ್ಲು
ಆಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವನ್ನು ರೂಪಿಸಿದವರು ಅವರೇ. ಈ ವಿಶಿಷ್ಟ ತಂತ್ರಜ್ಞಾನ ಬಳಸಿ ಸ್ವಯಂ ಚಾಲಿತ ಗೇಟ್ ನಿರ್ಮಿಸಿದ್ದು ಪುಣೆಯ ಖಡಕ್ ವಾಸ್ಲಾ ಜಲಾಶಯದಲ್ಲಿ (1903). ನಂತರ ಕರ್ನಾಟಕದ ‘ಕೃಷ್ಣರಾಜಸಾಗರ’ ಅಣೆಕಟ್ಟು ಹಾಗೂ ಗ್ವಾಲಿಯರ್‌ನ ‘ಟಿಗ್ರಾ ಅಣೆಕಟ್ಟು’ ಈ ಪ್ರಯೋಗಕ್ಕೆ ಒಳಪಟ್ಟವು. ಅವರು ನಿರ್ಮಿಸಿದ ಇಂತಹ ಗೇಟುಗಳು ಜಗತ್ತಿನಾದ್ಯಂತ ಮಾದರಿಯಾದವು. ಎಲ್ಲಿಯಾದರೂ ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟುಗಳು ತಮ್ಮಷ್ಟಕ್ಕೆ ತಾವೇ ತೆರೆದುಕೊಳ್ಳುವ ತಂತ್ರಜ್ಞಾನವಿದೆ. ಇಲ್ಲಿ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗುತ್ತದೆ.
ಮೈಸೂರು ಒಡೆಯರು ಹಾಗೂ ಬ್ರಿಟಿಷರ ಆಳ್ವಿಕೆಯಲ್ಲಿ 1912ರಿಂದ 1918ರವರೆಗೆ ಆರು ವರ್ಷ ಆಡಳಿತ ನಡೆಸಿದರೂ ಅವರು ಮಾಡಿದ ಕೆಲಸಗಳು, ಅವರ ಪ್ರಾಮಾಣಿಕತೆ, ಬದ್ಧತೆಗೆ ಕಾಲದ ಮಿತಿ ಇಲ್ಲ. ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯಗಳು, ಬೆಂಗಳೂರು ವಿವಿ ಎಂಜಿನಿಯರಿಂಗ್ ಕಾಲೇಜು, ಜಯಚಾಮರಾಜೇಂದ್ರ ವೃತ್ತಿ ತರಬೇತಿ ಸಂಸ್ಥೆ, ಹಿಂದೂಸ್ಥಾನ್ ಏರ್‌ಕ್ರಾಫ್ಟ್ ಫ್ಯಾಕ್ಟರಿ (ಎಚ್‌ಎಎಲ್), ಹೆಬ್ಬಾಳದ ಕೃಷಿ ಸಂಶೋಧನಾ ಕೇಂದ್ರ, ಕಬ್ಬನ್ ಪಾರ್ಕ್‌ನ ಸೆಂಚುರಿ ಕ್ಲಬ್... ಹೀಗೆ ಬೆಂಗಳೂರಿಗರು ಮುಂಜಾನೆ ಎದ್ದು ನೆನೆಯುವಂತಹ ಅನೇಕ ಕೆಲಸಗಳನ್ನು ಸರ್.ಎಂ.ವಿ ಮಾಡಿದ್ದಾರೆ.
ಮೈಸೂರು ಮಹಾರಾಜರ ಮನವೊಲಿಸಿ, ಬ್ರಿಟಿಷರ ಅಂಕೆಯನ್ನೂ ಮೀರಿ ಬೆಂಗಳೂರು ಏರ್‌ಕ್ರಾಫ್ಟ್ ಸೆಂಟರ್ ಸ್ಥಾಪಿಸಿದರು. ಟಾಟಾ ಇನ್‌ಸ್ಟಿಟ್ಯೂಟ್ (ಐಐಎಸ್‌ಸಿ) ಅನ್ನು ಒಪ್ಪಿಸಿ ಬಾಹ್ಯಾಕಾಶ ಸಂಬಂಧಿ ಸಂಶೋಧನಾ (ಏರೋನಾಟಿಕ್ಸ್ ಡಿಪಾರ್ಟ್‌ಮೆಂಟ್) ಕೇಂದ್ರ ಪ್ರಾರಂಭಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ಗಳು ಅತಿ ಹೆಚ್ಚು ಬೇಕಾಗಿರುವುದೇ ಏರೋನಾಟಿಕ್ಸ್‌ಗೆ. ಹೀಗಾಗಿ ಬೆಂಗಳೂರು ಐಟಿ ನಗರವಾಗಿ ಬೆಳೆಯಿತು. ಸೆಪ್ಟೆಂಬರ್ 15 ವಿಶ್ವೇಶ್ವರಯ್ಯನವರ ಜನ್ಮದಿನ. ಸರ್.ಎಂ.ವಿ. ಅವರ ಗೌರವಾರ್ಥ ಭಾರತೀಯ ಎಂಜಿನಿಯರುಗಳ ಸಂಘ ಪ್ರತಿವರ್ಷ ಸೆಪ್ಟೆಂಬರ್ 15ನ್ನು ಎಂಜಿನಿಯರ್ ದಿನವನ್ನಾಗಿ ಆಚರಿಸುತ್ತದೆ.
ಚಿತ್ರಗಳು: ಟಿ.ಆರ್. ರಾಮಸ್ವಾಮಿ (ಪ್ರಜಾವಾಣಿ ಆರ್ಕೈವ್ಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.