ADVERTISEMENT

ಸರ್ವರಿಗೂ ಸಲ್ಲುವ ಹಂಬಲ

ಪವಿತ್ರ ಶೆಟ್ಟಿ
Published 25 ಡಿಸೆಂಬರ್ 2014, 19:30 IST
Last Updated 25 ಡಿಸೆಂಬರ್ 2014, 19:30 IST
ಸರ್ವರಿಗೂ ಸಲ್ಲುವ ಹಂಬಲ
ಸರ್ವರಿಗೂ ಸಲ್ಲುವ ಹಂಬಲ   

ಚಿನ್ನದ ಬಣ್ಣದ ಬ್ಲೌಸ್ ಮೇಲೆ ಸೂಕ್ಷ್ಮವಾದ ಕೈಕುಸುರಿಯ ವಿನ್ಯಾಸ. ಅದರ ಪಕ್ಕದಲ್ಲಿಯೇ ಇರುವ ಕೆಂಪು ಲೆಹಂಗಾ ಕೂಡ ಸರಳವಾದ ವಿನ್ಯಾಸದಿಂದ ಸೆಳೆಯುತ್ತಿತ್ತು. ನೀಲಿ ಬಣ್ಣದ ಸೆಲ್ವಾರ್, ತಿಳಿ ಗುಲಾಬಿ ಬಣ್ಣದ ಸೀರೆ ಹೀಗೆ ಒಂದೊಂದು ದಿರಿಸು ಒಂದೊಂದು ವಿನ್ಯಾಸದಿಂದ ಗಮನ ಸೆಳೆಯುತ್ತಿತ್ತು.

ವಿನ್ಯಾಸಕ ಗಿರೀಶ್ ಅವರ ಸರ್ಗಾ ಸಂಗ್ರಹ ಸರಳವಾಗಿ ಕಂಡರೂ ಅದರಲ್ಲೊಂದು ರಾಯಲ್ ನೋಟವಿದೆ. ಹಲವು ವರ್ಷಗಳಿಂದ ವಿನ್ಯಾಸ ವೃತ್ತಿಯಲ್ಲಿ ತೊಡಗಿಕೊಂಡಿರುವ ಗಿರೀಶ್ ಇತ್ತೀಚೆಗೆ ನಗರದಲ್ಲಿ ತಮ್ಮ ಸಂಗ್ರಹಗಳ ಪ್ರದರ್ಶನವನ್ನು ಮಾಡಿದ್ದಾರೆ.

ಬಾಲ್ಯದಿಂದಲೇ ಒಲವು
ಗಿರೀಶ್‌ಗೆ ಬಾಲ್ಯದಿಂದಲೇ ದಿರಿಸುಗಳ ಬಗ್ಗೆ ಒಲವು ಜಾಸ್ತಿ. ಯಾವುದೇ ಬಟ್ಟೆ ಹಾಕಿದರೂ ಅದಕ್ಕೊಂದು ಶಿಸ್ತು ಇರಬೇಕು. ತನಗದು ಆರಾಮದಾಯಕ ಅನಿಸಬೇಕು ಎಂಬ ನಿಲುವು ಇವರದ್ದು. ಅದೇ ಅವರನ್ನು ವಿನ್ಯಾಸ ವೃತ್ತಿಗೆ ಇಳಿಯುವುದಕ್ಕೆ ಪ್ರೇರಣೆ ನೀಡಿತು.
‘ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುವುದಕ್ಕಾಗಿ ನಾನು ಕೆಲಸ ಮಾಡಿಕೊಂಡು ಓದು ಮುಂದುವರಿಸಿದೆ. ಬದುಕಿನಲ್ಲಿ ಎದುರಾದ ಕಷ್ಟಗಳು ವಿನ್ಯಾಸಕನಾಗಬೇಕು ಎಂಬ ನನ್ನ ಕನಸನ್ನು ಕದಿಯಲು ಬಿಡಲಿಲ್ಲ. ಇಲ್ಲಿ ತರಬೇತಿ ಪಡೆದುಕೊಂಡು ನಾನು ಸೀದಾ ಮುಂಬೈಗೆ ಹೊರಟುಬಿಟ್ಟೆ. ಅಲ್ಲಿ ಒಂದಷ್ಟು ದಿನ ಕೆಲಸ ಮಾಡಿದೆ. ನಂತರ ಸುಶ್ಮಿತಾ ಸೇನ್ ಅವರ ಉಡುಗೆ ವಿನ್ಯಾಸ ಮಾಡುತ್ತಿದ್ದ ಅಸ್ಲಾಂ ಖಾನ್ ಅವರ ಬಳಿ ಸಹಾಯಕನಾಗಿ ಸೇರಿಕೊಂಡೆ. ಇದು ನನ್ನ ಬದುಕನ್ನು ಬದಲಾಯಿಸಿತು’ ಎಂದು ವಿನ್ಯಾಸ ಮೋಹದ ಹಿನ್ನೆಲೆಯನ್ನು ವಿವರಿಸುತ್ತಾರೆ ಗಿರೀಶ್.

ಕಾಯಕದ ಜಾಡು ಹಿಡಿದು
ವಿನ್ಯಾಸಕ ಅಸ್ಲಾಂ ಖಾನ್ ಅವರ ಅನುಭವದ ಗರಡಿಯಲ್ಲಿ ಪಳಗಿ ಇತ್ತೀಚೆಗೆ ಉದ್ಯಾನನಗರಿಗೆ ಬಂದಿರುವ  ಗಿರೀಶ್‌ ಅವರಿಗೆ ತಾವು ಗಿಟ್ಟಿಸಿಕೊಂಡ ಅನುಭವಗಳನ್ನು, ಸೃಜನಶೀಲತೆಯನ್ನು ಇಲ್ಲಿ ತೋರಿಸಬೇಕು ಎಂಬ ಹಂಬಲವಿದೆ.

‘ನನ್ನೂರು ತಮಿಳುನಾಡು. ಆದರೆ ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಮುಂಬೈಯಲ್ಲಿ ಸಾಕಷ್ಟು ವರ್ಷ ಇದ್ದೆ. ನಾನು ಹುಟ್ಟಿ ಬೆಳೆದ ಊರಿನಲ್ಲಿ ಸಾಧನೆ ಮಾಡಬೇಕು ಎಂದು ಇಲ್ಲಿಗೆ ಬಂದೆ’ ಎಂದು ತಮ್ಮ ಕಾಯಕದ ಕ್ಷೇತ್ರದ ಬಗ್ಗೆ ಹೇಳುತ್ತಾರೆ ಗಿರೀಶ್.
ದಿರಿಸುಗಳು ಕೈಗೆಟುಕುವಂತಿರಬೇಕು

ತಾನು ವಿನ್ಯಾಸ ಮಾಡಿದ ಉಡುಪುಗಳನ್ನು ಎಲ್ಲರೂ ಧರಿಸುವಂತಾಗಬೇಕು. ಎಲ್ಲರ ಕೈಗೆಟುಕುವಂತಾಗಬೇಕು ಆಶಯ ಗಿರೀಶ್‌ ಅವರದು. ‘ಡಿಸೈನರ್ ದಿರಿಸುಗಳನ್ನು ಧರಿಸಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಹತ್ತು ಸಾವಿರ, ಐವತ್ತು ಸಾವಿರ ಕೊಟ್ಟು ಬಟ್ಟೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ನಾನು ವಿನ್ಯಾಸ ಮಾಡಿದ ಉಡುಪುಗಳು ಇಂಥ ಜನರ ಕೈಗೆಟುಕುವಂತಿರಬೇಕು. ಅವರ ಆಸೆಗಳನ್ನು ಸ್ವಲ್ಪ ಮಟ್ಟಿಗಾದರೂ ಪೂರೈಸಬೇಕು’ ಎಂದು ತಮ್ಮ ಬದ್ಧತೆಯ ಬಗ್ಗೆ ಹೇಳುತ್ತಾರೆ ಗಿರೀಶ್.

ವಿನ್ಯಾಸದ ಪರಿ
ಗಿರೀಶ್ ಅವರ ವಿನ್ಯಾಸದಲ್ಲಿ ಸಾಂಪ್ರದಾಯಿಕ ಮತ್ತು ಪಾಶ್ಚಾತ್ಯ ಎರಡೂ ಶೈಲಿಯ ಮಿಶ್ರಣವಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂಬ ತುಡಿತವೂ ಇವರಿಗಿದೆ.

‘ಅಮ್ಮನ ರೇಷ್ಮೆ ಸೀರೆ ಇದು ಇದಕ್ಕೊಂದು ಹೊಸ ಲುಕ್‌ ನೀಡಿ’ ಎಂದು ಗಿರೀಶ್‌ ಬಳಿ ಬರುವ ಅನೇಕ ಗ್ರಾಹಕರು ಇದ್ದಾರೆ. ಅಂಥವರ ಭಾವನೆಗಳನ್ನು ಗುರುತಿಸಿ ಒಂದು ಚೆಂದದ ವಿನ್ಯಾಸ ಮಾಡಿ ಕೊಟ್ಟು ಅವರ ಮುಖದಲ್ಲಿ ಮೂಡುವ ನಗು ನೋಡಿ ಖುಷಿ ಪಡುವ ಮನೋಭಾವ ಇವರದು.

‘ಇಂದಿನವರಲ್ಲಿ ಫ್ಯಾಷನ್ ಪ್ರಜ್ಞೆ ಜಾಸ್ತಿ ಇದೆ. ತಾವು ಹೇಗೆ ಕಾಣಿಸಬೇಕು, ಯಾವ ರೀತಿ ಉಡುಗೆ ತೊಟ್ಟರೆ ಚೆಂದ ಕಾಣಿಸುತ್ತೇವೆ ಎಂಬುದರ ಕುರಿತು ತುಂಬ ಕಾಳಜಿ ವಹಿಸುತ್ತಾರೆ. ಹಾಗಾಗಿ ವಿನ್ಯಾಸಕರಿಗೂ ಇದೊಂದು ರೀತಿ ಸವಾಲಾಗಿದೆ. ಇಂದಿನ ಟ್ರೆಂಡ್ ಏನು ಎಂಬುದನ್ನು ವಿನ್ಯಾಸಕ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಜನರ ನಿರೀಕ್ಷೆಗೆ ತಕ್ಕ ದಿರಿಸುಗಳನ್ನು ಮಾಡಬೇಕಾಗುತ್ತದೆ’ ಎಂದು ವಿನ್ಯಾಸ ವೃತ್ತಿಯ ಸವಾಲುಗಳ ಕುರಿತು ಹೇಳುತ್ತಾರೆ.

ಯಾವ ವಿನ್ಯಾಸದ ಉಡುಗೆ ತಮಗೆ ಹೊಂದುತ್ತದೆ ಎಂಬುದು ತುಂಬ ಜನರಿಗೆ ತಿಳಿದಿರುವುದಿಲ್ಲ. ಉಡುಪುಗಳ ಆಯ್ಕೆ ಮಾಡುವಾಗ ಎಚ್ಚರದಿಂದ ಇರಬೇಕು ಎನ್ನುವುದು ಗಿರೀಶ್ ಕಿವಿಮಾತು.

‘ತಿಳಿ ಬಣ್ಣದ ಮೇಲೆ ಸರಳವಾದ ವಿನ್ಯಾಸವಿರುವ ಉಡುಗಳನ್ನು ಧರಿಸಿ. ಅದು ನಿಮ್ಮ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ’ ಎಂದು ಇವರು ಟಿಪ್ಸ್ ನೀಡುತ್ತಾರೆ.

ಇವರು ಹೆಚ್ಚಾಗಿ ಮದುವೆ ದಿರಿಸುಗಳ ವಿನ್ಯಾಸ ಮಾಡುತ್ತಾರೆ. ‘ಮದುವೆ ಹೆಣ್ಣಿಗೆ ತಾನು ಎಲ್ಲರಿಗಿಂತ ತುಂಬ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ವಧುವಿನ ದಿರಿಸಿನ ವಿನ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ’ ಎನ್ನುತ್ತಾರೆ ಗಿರೀಶ್.
ಪ್ರಸ್ತುತ ಕೂರ್ಗಿ ಶೈಲಿಯ ಸೀರೆಗಳಿಗೆ ಹೊಸ ನೋಟ ನೀಡಲು ಇವರು ಸಿದ್ಧತೆ ನಡೆಸುತ್ತಿದ್ದಾರೆ ಗಿರೀಶ್‌. ಜತೆಗೆ ಸಿನಿಮಾ ಕ್ಷೇತ್ರದಲ್ಲೂ ತಾವು ವಿನ್ಯಾಸ ಮಾಡಿದ ಉಡುಪುಗಳನ್ನು ಪರಿಚಯಿಸಬೇಕು ಎಂಬ ಆಸೆಯೂ ಇವರಿಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.