ಎಂಜಿನಿಯರ್ ಎಂದರೆ ಥಟ್ಟನೆ ನೆನಪಾಗುವುದು ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರು. ಮೈಸೂರು ಸಂಸ್ಥಾನದ ದಿವಾನರಾಗಿದ್ದ ಅವರು ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾವತಿ ಕಬ್ಬಿಣ ಕಾರ್ಖಾನೆ ಸೇರಿದಂತೆ ಅನೇಕ ಮೌಲಿಕ ಸಂಸ್ಥೆಗಳನ್ನು ಕಟ್ಟಿದವರು.
ಸಾಧನೆಗಳ ಹರಿಕಾರ ವಿಶ್ವೇಶ್ವರಯ್ಯ ಹುಟ್ಟೂರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿ. ಇದು ರಾಜಧಾನಿಗೆ ಹತ್ತಿರದಲ್ಲಿಯೇ ಇದೆ. ಈ ಗ್ರಾಮಕ್ಕೆ ಭೇಟಿ ನೀಡಿದಾಗ ಆದರ್ಶ ಗ್ರಾಮದ ಕನಸು ಕಣ್ತುಂಬುತ್ತದೆ.
ವಿಶ್ವಕುಟೀರ
ವಿಶ್ವೇಶ್ವರಯ್ಯ ಅವರು ಹುಟ್ಟಿದ, ತಮ್ಮ ಬಾಲ್ಯದ ದಿನಗಳನ್ನು ಕಳೆದ ಹೆಂಚಿನ ಮನೆಯು ಸುಂದರ ತಾಣದಂತಿದೆ. ಅದಕ್ಕೆ ‘ವಿಶ್ವಕುಟೀರ’ ಎಂಬ ಹೆಸರಿಡಲಾಗಿದೆ. ಮನೆಯ ಸುತ್ತ ಒಂದು ಒಂದು ಸುತ್ತು ಹಾಕಿದರೆ ಮನೆಗೆ ಹೊಂದಿಕೊಂಡ ಬಾವಿಯೂ ಕಾಣಸಿಗುತ್ತದೆ.ಮನೆಯ ಮಹಡಿಯಲ್ಲಿ ವಿಶ್ವೇಶ್ವರಯ್ಯ ಅವರೇ ಸ್ಥಾಪಿಸಿದ್ದ ‘ಸ್ಟೇಟ್ ಬ್ಯಾಂಕ್ ಆಫ್ ಮೈಸೂರು’ ಶಾಖೆ ಇದೆ.
ವಿಶ್ವೇಶ್ವರಯ್ಯ ಮ್ಯೂಸಿಯಂ
ಮ್ಯೂಸಿಯಂನಲ್ಲಿ ವಿಶ್ವೇಶ್ವರಯ್ಯ ಅವರು ಉಪಯೋಗಿಸಿದ ವಸ್ತುಗಳ ಸಂಗ್ರಹವಿದೆ. ಜತೆಗೆ ರಾಜ ಮನೆತನ ಮತ್ತು ಸಂಸ್ಥಾನಗಳು ನೀಡಿರುವ ದಂತ ಕಲಾಕೃತಿಗಳು ಹಾಗೂ ಬೆಳ್ಳಿಯ ಹಲವು ಪಾರಿತೋಷಕಗಳು ಇವೆ. ಅವರೇ ನಿರ್ಮಿಸಿದ ಅನೇಕ ಸಿವಿಲ್ ಮಾದರಿಗಳನ್ನು ನಾವಿಲ್ಲಿ ಕಾಣಬಹುದು.
1920ರ ದಶಕದಲ್ಲಿ ಸರ್.ಎಂ.ವಿ ಅವರು ಬಳಸಿದ ಬ್ಯಾಂಕಿನ ಪಾಸ್ ಪುಸ್ತಕ, ಅವರ ಕಚೇರಿಯಲ್ಲಿ ಉಪಯೋಗಿಸಿದ ಪೇಪರ್ ಕ್ಲೀಪ್, ಇಂಕ್ ಬಾಟಲಿ, ಪೆನ್‌ಗಳು, ಕಣ್ಣುಗಳನ್ನು ಶುಚಿಗೊಳಿಸಲು ಬಳಸುತ್ತಿದ್ದ ಗಾಜಿನ ಸಲಕರಣೆಗಳು ಗಮನ ಸೆಳೆಯುತ್ತವೆ.
ವಿಶ್ವೇಶ್ವರಯ್ಯ ಅವರಿಗೆ ಭಾರತ ರತ್ನ ಪ್ರಶಸ್ತಿ ದೊರೆತ ಸುದ್ದಿ ಪ್ರಕಟಸಿದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಪ್ರತಿಗಳೂ ಇವೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಬ್ರಿಟಿಷ್ ಅಧಿಕಾರಿ ಗಳೊಂದಿಗೆ ನಡೆಸಿರುವ ಪತ್ರ ವ್ಯವಹಾರಗಳು, ಅಂಚೆ ಪತ್ರಗಳನ್ನು ನೋಡಬಹುದು.
ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗ ಬಳಸಿದ ಸಮವಸ್ತ್ರ ಹಾಗೂ ಆಸನಗಳೂ ಗಮನ ಸೆಳೆಯುತ್ತವೆ.
‘ನಿರ್ಯಾಣ’ ಸ್ಥಳ
ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯ ಅವರ ‘ನಿರ್ಯಾಣ ಸಮಾಧಿ’ ಇದೆ. ಆದರ ಸುತ್ತಲು ಸುಂದರವಾದ ಉದ್ಯಾನವಿದೆ. ಸ್ನೇಹಿತರೊಟ್ಟಿಗೆ ಕೆಲ ಹೊತ್ತು ವಾಯುವಿಹಾರ ಮಾಡಬಹುದು. ಅಥವಾ ಕುಟುಂಬ ಸಮೇತರಾಗಿ ಬಂದರೆ ಮಕ್ಕಳು ಆಟ ವಾಡಲು ಉದ್ಯಾನದಲ್ಲಿ ಆಟಿಕೆಗಳು ಇವೆ. v
**
ಹೋಗುವುದು ಹೀಗೆ...
ಮಾರ್ಗ –1: ಬೆಂಗಳೂರಿನಿಂದ ಮುದ್ದೇನಹಳ್ಳಿಯ ನಡುವೆ 58.5 ಕಿ.ಮೀ ದೂರವಿದ್ದು, ಮಲ್ಲೇಶ್ವರಂ, ದೇವನಹಳ್ಳಿ, ವೆಂಕಟಗಿರಿಕೋಟೆ, ತರಬನಹಳ್ಳಿ ಮಾರ್ಗವಾಗಿ ಹೋಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.