ADVERTISEMENT

ಸಿನಿಮಾಗಳಿಗೂ ಕೋಟಿ ಕೋಟಿ ವಿಮೆ!

ಅನಿತಾ ಈ.
Published 18 ಸೆಪ್ಟೆಂಬರ್ 2016, 19:30 IST
Last Updated 18 ಸೆಪ್ಟೆಂಬರ್ 2016, 19:30 IST
ಸಿನಿಮಾಗಳಿಗೂ ಕೋಟಿ ಕೋಟಿ ವಿಮೆ!
ಸಿನಿಮಾಗಳಿಗೂ ಕೋಟಿ ಕೋಟಿ ವಿಮೆ!   

ನಿಮಾಗಳಿಗೆ ವಿಮೆ ಮಾಡಿಸುವುದನ್ನು ಹೆಚ್ಚುವರಿ ಹೊರೆ ಎಂದುಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಕೆಲ ವರ್ಷಗಳಿಂದೀಚೆಗೆ ಸಿನಿಮಾಗಳಿಗೆ ವಿಮೆ ಮಾಡಿಸುವುದು ರೂಢಿಯಾಗಿದೆ.

ಸಿನಿಮಾಗಳಿಗೆ ವಿಮೆ ಮಾಡಿಸುವ ಪರಿಕಲ್ಪನೆ ಹುಟ್ಟಿದ್ದು 1990ರಲ್ಲಿ. 90ರ ದಶಕದ ಖ್ಯಾತ ನಿರ್ದೇಶಕ ಸುಭಾಷ್‌ ಘಾಯ್‌ ನಿರ್ದೇಶನದ ‘ತಾಲ್‌’ ಚಿತ್ರಕ್ಕೆ ಮೊದಲ ಬಾರಿಗೆ ವಿಮೆ ಮಾಡಿಸಲಾಗಿತ್ತು. ಸಂಜಯ್‌ ದತ್‌ ಅವರನ್ನು ‘ಖಳ್‌ನಾಯಕ್‌’ ಚಿತ್ರದ ಚಿತ್ರೀಕರಣದ ವೇಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಇದರಿಂದಾಗಿ ಸುಭಾಷ್‌ ಘಾಯ್‌ ಅವರಿಗೆ ತುಂಬಾ ನಷ್ಟವಾಗಿತ್ತು. ಈ ಕಾರಣದಿಂದಲೇ ಸುಭಾಷ್‌ ಘಾಯ್‌ ‘ತಾಲ್‌’ ಚಿತ್ರಕ್ಕೆ ವಿಮೆ ಮಾಡಿಸಿದ್ದರು.

ಇದಾದ ನಂತರ ಬಿ–ಟೌನ್‌ನಲ್ಲಿ ಅನೇಕ ಚಿತ್ರಗಳಿಗೆ ವಿಮೆ ಮಾಡಿಸಲು ಚಿತ್ರ ನಿರ್ಮಾಣ ಸಂಸ್ಥೆಗಳು ಮುಂದಾದವು. ಮೊದಮೊದಲು ಚಿತ್ರಗಳಿಗೆ ಕೇವಲ ಸಾರ್ವಜನಿಕ ಸಾಮಾನ್ಯ ವಿಮೆಗಳನ್ನು ಮಾಡಿಸಲಾಗುತ್ತಿತ್ತು. ಕಾಲ ಕಳೆದಂತೆ ಖಾಸಗಿ ವಿಮೆ ಕಂಪೆನಿಗಳು ಸಿನಿಮಾಗಳಿಗೆ ವಿಮೆ ನೀಡಲಾರಂಭಿಸಿದವು.
ದಕ್ಷಿಣ ಭಾರತದಲ್ಲೂ ಭಾರಿ ಹಣ ಹೂಡಿಕೆ ಮಾಡುವ ಚಿತ್ರ ನಿರ್ಮಾಣ ಸಂಸ್ಥೆಗಳು ಮೆಲ್ಲನೆ ತಮ್ಮ ಚಿತ್ರಗಳಿಗೆ ವಿಮೆ ಮಾಡಿಸುತ್ತಿವೆ.

ಮುಂದಿನ ವರ್ಷ ತೆರೆ ಕಾಣಲಿರುವ ರಜನಿಕಾಂತ್‌ ಅಭಿನಯದ ‘ಎಂದಿರನ್‌ 2’ (ರೊಬೊ–2) ಚಿತ್ರಕ್ಕೆ ₹ 330 ಕೋಟಿ ವಿಮೆ ಮಾಡಿಸಲಾಗಿದೆ. ಈ ಹಿಂದೆ 2014ರಲ್ಲಿ ಬಿಡುಗಡೆಯಾಗಿದ್ದ ಅಮೀರ್‌ ಖಾನ್‌ ಮತ್ತು ಅನುಷ್ಕಾ ಶರ್ಮಾ ಅಭಿನಯದ ‘ಪಿಕೆ’ ಚಿತ್ರಕ್ಕೂ ₹300 ಕೋಟಿ ವಿಮೆ ಮಾಡಿಸಲಾತ್ತು. ಭಾರತೀಯ ಸಿನಿಮಾ ರಂಗದಲ್ಲೇ ಭಾರೀ ಸದ್ದು ಮಾಡಿದ್ದ ‘ಬಾಹುಬಲಿ’ ಚಿತ್ರಕ್ಕೂ ಕೋಟ್ಯಂತರ ರೂಪಾಯಿ ವಿಮೆ ಮಾಡಿಸಲಾಗಿತ್ತು.

ಕಂಗನಾ ರನೋಟ್‌ ಅಭಿನಯದ ‘ತನು ವೆಡ್ಸ್‌ ಮನು’ ಚಿತ್ರದ ಚಿತ್ರೀಕರಣದ ವೇಳೆ ನಡೆದಿದ್ದ ಅಪಘಾತದಿಂದ ಆ ಚಿತ್ರದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಬೈಕ್‌ ಮೇಲೆ ಹೋಗುವ ದೃಶ್ಯದ ಚಿತ್ರೀಕರಣದ ವೇಳೆ ಬೈಕ್‌ನಿಂದ ಕೆಳಗೆ ಬಿದ್ದಿದ್ದ ಕಂಗನಾ ಕಾಲಿಗೆ ಪೆಟ್ಟಾಗಿತ್ತು. ಇದರಿಂದ ಅವರು ಆಸ್ಪತ್ರೆಯ ಪಾಲಾಗಿದ್ದರು.

ಅಂದಾಜು 250 ಬಾಲಿವುಡ್‌ ಸಿನಿಮಾಗಳು ಹಾಗೂ ಸಾವಿರಕ್ಕೂ ಹೆಚ್ಚು ಪ್ರಾದೇಶಿಕ ಸಿನಿಮಾಗಳು ಒಂದು ವರ್ಷದಲ್ಲಿ ಬಿಡುಗಡೆಗೊಳ್ಳುತ್ತವೆ. ಇದರಲ್ಲಿ ಬಿ–ಟೌನ್‌ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತೀಯ ಸಿನಿಮಾಗಳು ವಿಮೆ ಮಾಡಿಸುವುದರತ್ತ ಈಗ ಹೆಜ್ಜೆ ಹಾಕುತ್ತಿವೆ.

*
ಚಿತ್ರೀಕರಣದ ಸೆಟ್‌, ಬಳಸುವ ಉಪಕರಣಗಳು, ಚಿತ್ರೀಕರಣದ ವೇಳೆ ಸಂಭವಿಸಬಹುದಾದ ಅಪಘಾತದಿಂದ ಆಗುವ ಜೀವಹಾನಿ, ಆಸ್ತಿ ನಾಶ, ಸಿನಿಮಾ ಬಿಡುಗಡೆ ಸಂಬಂಧಿಸಿದ  ಕಾನೂನು ತೊಡಕುಗಳು, ನೈಸರ್ಗಿಕ ವಿಕೋಪಗಳು, ವಾಯುಗುಣದಲ್ಲಿನ ದಿಢೀರ್‌ ಬದಲಾವಣೆಯಿಂದ ಚಿತ್ರೀಕರಣ ನಿಲ್ಲಿಸಿದಾಗ, (ಚಿತ್ರಮಂದಿರಗಳು ಮುಚ್ಚಿದರೆ, ದೊಂಬಿ, ಗಲಬೆ, ಪ್ರತಿಭಟನೆ) ಸಂಬಂಧಿಸಿದಂತೆ ಈ ವಿಮೆ ರಕ್ಷಣೆ ನೀಡುತ್ತದೆ. ಸಿನಿಮಾದ ಮೇಲೆ ಹೂಡಿಕೆ ಮಾಡಿರುವ ಹಣದ ಆಧಾರದ ಮೇಲೆ ಯಾವ ರೀತಿಯ ವಿಮೆ ಮಾಡಿಸಬಹುದು ಎಂದು ನಿರ್ಧರಿಸಲಾಗುತ್ತದೆ.

ನಟ–ನಟಿಯರಿಗೆ ವೈಯಕ್ತಿಕ ಅಪಘಾತ ವಿಮೆ
ಅಪಘಾತ ವಿಮೆ ಕೇವಲ ಸಿನಿಮಾಗಳಿಗೆ ಮಾತ್ರವಲ್ಲ. ಆ್ಯಕ್ಷನ್ ಚಿತ್ರಗಳಲ್ಲಿ ಅಭಿನಯಿಸುವ ನಟ–ನಟಿಯರೂ ಮಾಡಿಸಿಕೊಳ್ಳುತ್ತಾರೆ. ಈ ಸಿನಿಮಾಗಳಲ್ಲಿ ನಟಿಸುವ ಕೆಲ ನಾಯಕ, ನಾಯಕಿಯರೇ ಸ್ಟಂಟ್‌ಗಳನ್ನು ಮಾಡುವುದು ಇತ್ತೀಚಿನ ಟ್ರೆಂಡ್‌. ಎಷ್ಟೇ ಅಭ್ಯಾಸ, ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೂ, ಚಿತ್ರೀಕರಣದ ವೇಳೆ ಕೆಲವೊಮ್ಮೆ ಅನಾಹುತಗಳು ಸಂಭವಿಸುತ್ತವೆ. ಅದಕ್ಕಾಗಿ ಮುನ್ನೆಚ್ಚರಿಕೆ ದೃಷ್ಟಿಯಿಂದ ವೈಯಕ್ತಿಕ ಅಪಘಾತ ವಿಮೆಯನ್ನು ಮಾಡಿಸಿಕೊಳ್ಳುತ್ತಾರೆ.

ಈ ವಿಮೆ ಮಾಡಿಸುವ ಸಂಪೂರ್ಣ ಹೊಣೆ ಚಿತ್ರ ನಿರ್ಮಾಪಕರದ್ದೇ ಆಗಿರುತ್ತದೆ. ಇದು ಹಾಲಿವುಡ್‌ನಲ್ಲಿ ಸಾಮಾನ್ಯ ವಿಷಯವೇ ಆದರೂ ಬಾಲಿವುಡ್‌ನಲ್ಲಿ ವಿಶೇಷವೇ. ಬಿ–ಟೌನ್‌ನಲ್ಲಿ ಹಿಂದಿನಿಂದಲೂ ಚಿತ್ರ ತಂಡದಲ್ಲಿರುವ ಪ್ರತಿ ಸದಸ್ಯನಿಗೂ ₹ 5–10 ಲಕ್ಷ ಮೌಲ್ಯದ ವಿಮೆ ಮಾಡಿಸಲಾಗುತ್ತಿತ್ತು. ಇದು ಚಿತ್ರೀಕರಣದ ವೇಳೆ ಸಂಭವಿಸುವ ಅಪಘಾತದಿಂದ ಯಾವುದೇ ಸದಸ್ಯನಿಗೆ ವೈದ್ಯಕೀಯ ಸೌಲಭ್ಯದ ಅಗತ್ಯ ಬಿದ್ದಾಗ ಇದನ್ನು ಬಳಸಿಕೊಳ್ಳಬಹುದಿತ್ತು.

ಆದರೆ ಈಗ ಕಾಲ ಬದಲಾಗುತ್ತಿದೆ. ಹೀಗಾಗಿಯೇ ಕೆಲ ನಟನಟಿಯರು ಚಿತ್ರಗಳಿಗೆ ಸಹಿ ಹಾಕುವ ಮುನ್ನ ಒಪ್ಪಂದ ಪತ್ರದಲ್ಲಿ ವೈಯಕ್ತಿಕ ಅಪಘಾತ ವಿಮೆಯನ್ನೂ ಸೇರಿಸುತ್ತಾರೆ. ಬಿ–ಟೌನ್‌ನಲ್ಲಿ ಇದಕ್ಕೆ ನಾಂದಿ ಹಾಡಿದವರು ಆ್ಯಕ್ಷನ್‌ ಕಿಂಗ್‌ ಅಕ್ಷಯ್‌. ಅಕ್ಷಯ್‌ ಕುಮಾರ್‌ ಅಭಿನಯಿಸುವ ಚಿತ್ರಗಳಲ್ಲಿ ಸಾಹಸ ದೃಶ್ಯಗಳನ್ನು ತಾವೇ ಅಭಿನಯಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.

ADVERTISEMENT

ಚಿತ್ರೀಕರಣದ ವೇಳೆ ಸಾಕಷ್ಟು ಬಾರಿ ಅಪಘಾತಕ್ಕೀಡಾಗಿ ಪೆಟ್ಟು ಮಾಡಿಕೊಂಡಿದ್ದಾರೆ. ‘ಬೇಬಿ’, ‘ಸಿಂಗ್‌ ಈಸ್‌ ಕಿಂಗ್‌’ ಸೇರಿದಂತೆ ಹಲವಾರು ಚಿತ್ರಗಳ ಚಿತ್ರೀಕರಣದ ವೇಳೆ ಆಸ್ಪತ್ರೆ ಪಾಲಾಗಿದ್ದೂ ಉಂಟು. ಹೀಗಾಗಿಯೇ ಅವರು ಈಗ ಚಿತ್ರ ನಿರ್ಮಾಣ ಮಾಡುವ ಸಂಸ್ಥೆ ವತಿಯಿಂದ ಅಪಘಾತ ವಿಮೆ ಮಾಡಿಸಿಕೊಳ್ಳುತ್ತಾರೆ.

ಹರಿಓಂ ಎಂಟರ್‌ಟೈನ್‌ಮೆಂಟ್‌ ಹಾಗೂ ಸನ್‌ಶೈನ್‌ ಪಿಕ್ಚರ್ಸ್‌ ನಿರ್ಮಾಣದ ‘ಹಾಲಿಡೇ’ ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ಅಕ್ಷಯ್‌ ಚಿತ್ರ ನಿರ್ಮಾಣ ಸಂಸ್ಥೆಯಿಂದ ₹35 ಕೋಟಿ ಮೊತ್ತದ ವೈಯಕ್ತಿಕ ಅಪಘಾತ ವಿಮೆಯನ್ನು ಮಾಡಿಸಿಕೊಂಡಿದ್ದರು ಎಂದು ಓರಿಯಂಟಲ್‌ ವಿಮೆ ಸಂಸ್ಥೆಯ ಸಿಬ್ಬಂದಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.

ಇದು ಬಿ–ಟೌನ್‌ ಇತಿಹಾಸದಲ್ಲೇ ಪ್ರಥಮ ಬಾರಿಗೆ ಚಿತ್ರ ನಿರ್ಮಾಣ ಸಂಸ್ಥೆಯೇ ನಟನೊಬ್ಬನಿಗೆ ಭಾರಿ ಮೊತ್ತದ ವೈಯಕ್ತಿಕ ಅಪಘಾತ ವಿಮೆ ಮಾಡಿಸಿಕೊಟ್ಟಿದ್ದು. ‘ಕಿಲಾಡಿ’, ‘ಬೇಬಿ’, ‘ರೌಡಿ ರಾಥೋಡ್‌’, ‘ಸ್ಪೆಷಲ್‌ 26’ ಸೇರಿದಂತೆ ಹಲವಾರು ಸಹಾಸ ಪ್ರದಾನ ಚಿತ್ರಗಳಲ್ಲಿ ಅಭಿನಯಿಸಿರುವ ಅಕ್ಷಯ್‌ ‘ಏರ್‌ಲಿಫ್ಟ್‌’ ಚಿತ್ರಕ್ಕೂ ವಿಮೆ ಮಾಡಿಸಿಕೊಂಡಿದ್ದಾರೆ. ನಟಿ ಕಂಗನಾ ಸಹ ‘ಕ್ವೀನ್‌’ ಚಿತ್ರಕ್ಕೆ ಸಹಿ ಹಾಕುವ ಮುನ್ನ ಒಂದು ಕೋಟಿ ರೂಪಾಯಿ ಮೊತ್ತದ ವೈಯಕ್ತಿಕ ಅಪಘಾತ ವಿಮೆ ಮಾಡಿಸಿಕೊಡುವಂತೆ ಒಪ್ಪಂದದಲ್ಲಿ ಸೇರಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.