ಹಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ತಮ್ಮ ದೇಹದ ವಿವಿಧ ಅಂಗಗಳಿಗೆ ವಿಮೆ ಮಾಡಿಸುವ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕಿದ್ದಾರೆ. ಗ್ಲಾಮರ್ ಬದುಕಿಗೆ ದೇಹವೇ ಆಧಾರವಲ್ಲವೇ. ಅಂಗಾಂಗ ವಿಮೆ ಕುರಿತಾದ ಒಂದಿಷ್ಟು ಕುತೂಹಲಕಾರಿ ವಿಷಯಗಳು ಇಲ್ಲಿವೆ.
ಮೊದಲ ವ್ಯಕ್ತಿ
ಹಾಲಿವುಡ್‌ನಲ್ಲಿ ಅಂಗಗಳ ವಿಮೆ ಆರಂಭವಾಗಿದ್ದು 1920ರಲ್ಲಿ. ಇದಕ್ಕೆ ಶ್ರೀಕಾರ ಹಾಕಿದವರು ನಟ ಬೆನ್ ಟರ್ಪಿನ್. ಇವರು ತಮ್ಮ ಕಣ್ಣುಗಳಿಗೆ 25 ಸಾವಿರ ಡಾಲರ್ ವಿಮೆ ಮಾಡಿಸಿದ್ದರು. 1940ರಲ್ಲಿ ಬೆಟ್ಟಿ ಗ್ರಬೆಲ್ ತಮ್ಮ ಕಾಲುಗಳಿಗೆ, 1980ರಲ್ಲಿ ಗಾಯಕ ಬ್ರೂಸ್ ಸ್ಪಿಂಗ್‌ಸ್ಟೀನ್ ತಮ್ಮ ಕಂಠಕ್ಕೆ ಲಕ್ಷಾಂತರ ಡಾಲರ್ ಮೊತ್ತದ ವಿಮೆ ಮಾಡಿಸಿದ್ದರು.
ಮಾರಿಯಾ ಕೆರಿ
ಹಾಡುಗಳನ್ನು ಸ್ವತಃ ರಚಿಸಿ, ಹಾಡಿ ಆಲ್ಬಂ ಹೊರತರುವ ಈ ಗಾಯಕಿ ನಟಿಯೂ ಹೌದು. ಇವರು ತಮ್ಮ ಕಾಲಿಗೆ 10 ಲಕ್ಷ ಡಾಲರ್ ಮೊತ್ತದ ವಿಮೆ ಮಾಡಿಸಿದ್ದಾರೆ. ಜಿಲೆಟ್‌ನ ‘ಲೆಗ್ಸ್ ಆಫ್ ಎ ಗಾಡೆಸೆಸ್’ ಅಭಿಯಾನದ ನಂತರ, 2006ರಲ್ಲಿ ವಿಮೆ ಖರೀದಿಸಿದ್ದು ವಿಶೇಷ. ಅಮೆರಿಕನ್ ಗಾಯಕಿ ರಿಹಾನಾ ಸಹ 2007ರಲ್ಲಿ ತಮ್ಮ ಕಾಲುಗಳಿಗೆ ಇಷ್ಟೇ ಮೊತ್ತದ ವಿಮೆ ಖರೀದಿಸಿ ಸುದ್ದಿಯಾಗಿದ್ದರು.
ಜೆನಿಫರ್ ಲೊಪೆಜ್
ಹಿನ್ನೆಲೆ ನೃತ್ಯಗಾರ್ತಿಯಾಗಿ ವೃತ್ತಿ ಪ್ರಾರಂಭಿಸಿ, ಹಾಲಿವುಡ್‌ನಲ್ಲಿ ಜನಪ್ರಿಯ ನಾಯಕಿ ಹಾಗೂ ಗಾಯಕಿಯಾಗಿ ಮಿಂಚಿದವರು. ಜೆನಿಫರ್ ಅವರ ನಿತಂಬ ಗ್ಲಾಮರ್ ಲೋಕದಲ್ಲಿ ಚರ್ಚೆಗೆ ಗುರಿಯಾಗಿತ್ತು. 2000ದಲ್ಲಿ ಕ್ರಿಸ್ ರಾಕ್ ಎಂಬಾತ ಈ ವಿಷಯವನ್ನು ಎಂಟಿವಿ ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಪ್ರಸ್ತಾಪಿಸಿದರು. ನಂತರ ಜೆನ್ನಿ ತಮ್ಮ ನಿತಂಬಕ್ಕೆ ಬರೋಬ್ಬರಿ 2.7 ಕೋಟಿ ಡಾಲರ್ ಮೊತ್ತದ ವಿಮೆ ಮಾಡಿಸಿದರು.
ಹೋಲಿ ಮ್ಯಾಡಿಸನ್
ಅಮೆರಿಕದ ಚೆಲುವೆ ಹೋಲಿ ಮ್ಯಾಡಿಸನ್ ಲೇಖಕಿ ಹಾಗೂ ನಟಿಯಾಗಿ ಹೆಸರು ಮಾಡಿದವರು. 37 ವರ್ಷದ ಮ್ಯಾಡಿಸನ್ ತಮ್ಮ ಕಸಿ ಮಾಡಿಸಿಕೊಂಡ ಸ್ತನಗಳಿಗೆ 2011ರಲ್ಲಿ ಹತ್ತು ಲಕ್ಷ ಡಾಲರ್ ಮೊತ್ತದ ವಿಮೆ ಖರೀದಿಸಿದರು.
ಜೂಲಿಯಾ ರಾಬರ್ಟ್ಸ್
ತಮ್ಮ ಮಾದಕ ನಗುವಿನ ಮೂಲಕ ಪ್ರೇಕ್ಷಕರ ಮನಸು ಗೆಲ್ಲುತ್ತಿದ್ದ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ತಮ್ಮ ನಗುವಿಗೆ 3 ಕೋಟಿ ಡಾಲರ್ ವಿಮೆ ಮಾಡಿಸಿದ್ದಾರೆ. ತನ್ನನ್ನು ಯಶಸ್ಸಿನ ಉತ್ತುಂಗಕ್ಕೆ ಏರಿಸಿದ್ದು ಇದೇ ನಗು ಎಂಬುದು ಆಕೆಯ ನಂಬಿಕೆ. ‘ಮೈ ಬೆಸ್ಟ್ ಫ್ರೆಂಡ್ಸ್ ವೆಡ್ಡಿಂಗ್’, ‘ಪ್ರೆಟಿ ವುಮೆನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಡೇವಿಡ್ ಲಿ ರೊತ್
ಅಮೆರಿಕದ ರಾಕ್ ಗಾಯಕ ಡೇವಿಡ್ ತಮ್ಮ ವೀರ್ಯಕ್ಕೆ ಹತ್ತು ಲಕ್ಷ ಡಾಲರ್ ವಿಮೆ ಮಾಡಿಸಿದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಮಡೋನಾ, ಆಸ್ಟ್ರೇಲಿಯಾದ ಗಾಯಕಿ ಕೆಲಿ ಮಿನೋಗ್ ತಮ್ಮ ಪೃಷ್ಟಕ್ಕೆ 50 ಲಕ್ಷ ಡಾಲರ್ ವಿಮೆ ಮಾಡಿಸಿದ್ದಾರೆ.
ವಿಮಾ ಜಗತ್ತು
ಅಮೆರಿಕನ್ ನಟಿ ಜಾಮಿ ಲೀ ಕ್ರುಟಿಸ್ ಅವರ ಜಾಹೀರಾತು ಚಿತ್ರೀಕರಿಸಿದ ಸಂಸ್ಥೆ ಅವರ ಕಾಲುಗಳಿಗೆ 28 ಲಕ್ಷ ಡಾಲರ್ ವಿಮೆ ಮಾಡಿಸಿತ್ತು. ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ತಮ್ಮ ಕಾಲುಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಿಮೆ ಮಾಡಿಸಿಕೊಂಡಿದ್ದಾರೆ. ಕ್ರಿಶ್ಚಿಯಾನೊ ರೊನಾಲ್ಡೊ ಸಹ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ.
ಸಣ್ಣ ಗಾಯವಿದ್ದರೂ ಮೌಲ್ಯ ಕಡಿಮೆ
ಜರ್ಮನ್ ರೂಪದರ್ಶಿ ಹೈಡಿ ಕಮ್ ತಮ್ಮ ಎರಡೂ ಕಾಲುಗಳಿಗೆ ವಿಮೆ ಮಾಡಿಸಲು ಈಚೆಗೆ ಯತ್ನಿಸಿದ್ದರು. ಲಂಡನ್‌ನಲ್ಲಿ ಅವರನ್ನು ಪರಿಶೀಲಿಸಿದ ವಿಮಾ ಕಂಪೆನಿ ಅವರ ಒಂದು ಕಾಲಿಗೆ 22 ಲಕ್ಷ ಡಾಲರ್ ಹಾಗೂ ಮತ್ತೊಂದು ಕಾಲಿಗೆ 12 ಲಕ್ಷ ಡಾಲರ್ ಬೆಲೆ ಕಟ್ಟಿತು. ಒಂದು ಕಾಲಿನ ಮಂಡಿ ಮೇಲೆ ಗಾಯದ ಸಣ್ಣ ಕಲೆ ಇದ್ದ ಕಾರಣ ಅದರ ಮೌಲ್ಯವನ್ನು ಕಡಿಮೆ ಮಾಡಲಾಗಿತ್ತು.
ಬಿ–ಟೌನ್‌ನಲ್ಲೂ ವಿಮೆ ಗಾಳಿ
ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ನಟ–ನಟಿಯರೂ ಅಂಗಾಂಗ ವಿಮೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಅಥವಾ ದಾಖಲೆಗಳು ಲಭ್ಯವಿಲ್ಲ.
ಬಿಗ್ ಬಿ ಕಂಠ
*ಬಾಲಿವುಡ್‌ನ ಬಿಗ್–ಬಿ ಅಮಿತಾಭ್ ಅವರ ಕಂಠಕ್ಕೆ ಪೇಟೆಂಟ್ ಪಡೆದಿದ್ದಾರೆ. ಅದಕ್ಕೆ ವಿಮೆಯನ್ನೂ ಮಾಡಿಸಿದ್ದಾರೆ ಎಂಬ ವದಂತಿ ಇದೆ.
*ಹಾಲಿವುಡ್‌ನಲ್ಲಿ ಅವಕಾಶ ಗಿಟ್ಟಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ತನ್ನ ನಗುವಿಗೆ ವಿಮೆ ಮಾಡಿಸಲು ವಿಮೆ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದಾರಂತೆ.
*ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸುವ ಮೂಲಕವೇ ಸುದ್ದಿಯಲ್ಲಿರುವ ನಟಿ ಮಲ್ಲಿಕಾ ಶೆರಾವತ್ ದೇಹಕ್ಕೆ ₹50 ಕೋಟಿ ಮೊತ್ತದ ವಿಮೆ ಮಾಡಿಸುವಂತೆ ಅಂತರರಾಷ್ಟ್ರೀಯ ವಿಮೆ ಕಂಪೆನಿಯೊಂದು ಆಫರ್ ನೀಡಿದೆಯಂತೆ.
*ಮನೀಷಾ ಲಂಬಾ, ನೇಹಾ ಧೂಪಿಯಾ, ರಾಖಿ ಸಾವಂತ್, ನಟ ಸನ್ನಿ ದೇವಲ್ ಹಾಗೂ ಜಾನ್ ಅಬ್ರಾಹಂ ಅವರ ಹೆಸರುಗಳೂ ವಿಮೆ ಮಾಡಿಸುವವರ ಪಟ್ಟಿಯಲ್ಲಿ ಸೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.