ಅಗ್ಗದ ಸಾರಿಗೆ, ಆರೋಗ್ಯಕರ ಸಾರಿಗೆ ಎಂಬ ಹೆಗ್ಗಳಿಕೆಯೊಂದಿಗೆ ಜನರಿಗೆ ಹತ್ತಿರವಾಗುತ್ತಿರುವ ಸೈಕಲ್, ನಗರಕ್ಕೆ ಪರ್ಯಾಯ ಸಾರಿಗೆ ಎಂಬ ಭರವಸೆಯೊಂದಿಗೆ ಒಂದಷ್ಟು ಪರಿಸರಸ್ನೇಹಿ ಮನಸ್ಸುಗಳು ಮತ್ತೊಂದು ಸೈಕಲ್ ದಿನ ಹಮ್ಮಿಕೊಂಡಿವೆ. ಅಕ್ಟೋಬರ್ ಮತ್ತು ನವೆಂಬರ್‌ನ ಕೊನೆಯ ಭಾನುವಾರಗಳಂದು ಕಬ್ಬನ್ ಉದ್ಯಾನದಲ್ಲಿ ನಡೆದ ಎರಡು ಸೈಕಲ್ ದಿನಾಚರಣೆಗೆ ಸಿಕ್ಕಿದ ಅಭೂತ ಪ್ರತಿಕ್ರಿಯೆಯಿಂದಾಗಿ ಪ್ರತಿ ತಿಂಗಳೂ ಸೈಕಲ್ ದಿನ ನಡೆಸುವ ಹುಮ್ಮಸ್ಸಿನಲ್ಲಿದ್ದಾರೆ ‘ಸೈಕಲ್ ಡೇ ಗ್ರೂಪ್’!
ಇನ್ನೂ ಹಸಿರಿನ ಮಡಿಲಲ್ಲಿ ತಂಪಾಗಿರುವ ಜಯನಗರ ಬಡಾವಣೆಯಲ್ಲಿ ಬೆಂಗಳೂರಿನಲ್ಲೇ ಅತ್ಯಧಿಕ ಸಂಖ್ಯೆಯ ಸೈಕಲಿಗರು ಇದ್ದಾರೆನ್ನುವುದು ಈ ಬಡಾವಣೆಯ ಮತ್ತೊಂದು ಹೆಗ್ಗಳಿಕೆ. ಹೀಗಾಗಿ ದಕ್ಷಿಣ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲಿಗರು ಭಾನುವಾರದ ಸೈಕಲ್ ದಿನದಲ್ಲಿ ಭಾಗವಹಿಸುವ ನಿರೀಕ್ಷೆ ಸೈಕಲ್ ದಿನದ ಆಯೋಜಕರದ್ದು.
‘ಕಳೆದ ಬಾರಿಯಂತೆ ಸೈಕಲ್ ದಿನಕ್ಕೆ ಈ ಸಲವೂ ಮುಖ್ಯ ಪ್ರೇರಣೆ ನಗರ ಭೂಸಾರಿಗೆ ನಿರ್ದೇಶನಾಲಯದ್ದು. ಬಿಎಂಟಿಸಿ ಮೊದಲ ಸೈಕಲ್ ದಿನಕ್ಕೆ ತನ್ನ ವೋಲ್ವೊ ಬಸ್‌ನಲ್ಲಿ ಸೈಕಲ್ ತರಲು ಅನುವು ಮಾಡಿಕೊಟ್ಟಿತ್ತಾದರೂ ಎರಡನೇ ಕಾರ್ಯಕ್ರಮಕ್ಕೆ ಹಿಂದೆ ಸರಿದಿತ್ತು. ಈ ಬಾರಿಯೂ ಸೈಕಲ್ ದಿನಕ್ಕೆ ಅದು ಕೈಜೋಡಿಸಿದೆ. ಉಳಿದಂತೆ ಗೋ ಗ್ರೀನ್, ಬೆಂಗಳೂರು ಸೈಕ್ಲಿಸ್ಟ್ ಗ್ರೂಪ್, ಪ್ರಜಾ ಡಾಟ್ ಇನ್ ಮುಂತಾದ ಸೈಕಲಿಗರ ತಂಡಗಳು, ವೇದಿಕೆಗಳು ಕಾರ್ಯಕ್ರಮ ಆಯೋಜಿಸಲು ಕಾರಣಕರ್ತರು’ ಎಂಬುದು ಸೈಕಲ್ ದಿನದ ಸ್ವಯಂ ಸೇವಕರಲ್ಲೊಬ್ಬರಾದ ಅವಿನಾಶ್ ಕೆ. ನುಡಿ.
‘ಸ್ವಂತ ಸೈಕಲ್ ಇಲ್ಲದಿದ್ದರೂ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಬಯಸುವವರಿಗಾಗಿ ‘ನಮ್ಮ ಸೈಕಲ್’ ಹಾಗೂ ಕರ್ಬರಾನ್ ವತಿಯಿಂದ ಉಚಿತವಾಗಿ 150 ಸ್ಥಳಗಳಲ್ಲಿ ಸೈಕಲ್‌ಗಳು ಲಭ್ಯ. ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಈ ಸಂಸ್ಥೆಗಳ ವಶಕ್ಕೆ ನೀಡಿ ಸೈಕಲ್ ಪಡೆಯಬಹುದು.
‘ಮೊದಲ ಸೈಕಲ್ ದಿನದಲ್ಲಿ ಬರೋಬ್ಬರಿ 1200 ಮಂದಿ ಸೈಕಲಿಗರು ಭಾಗವಹಿಸಿದ್ದರು. ನವೆಂಬರ್‌ನಲ್ಲಿ ಮತ್ತೆ ಕಬ್ಬನ್ ಉದ್ಯಾನದಲ್ಲಿ ನಡೆದ ಸೈಕಲ್ ದಿನದಲ್ಲಿ 1000 ಮಂದಿ ಪಾಲ್ಗೊಂಡಿದ್ದರು. ಈ ಬಾರಿ ಕಳೆದ ಸಲದಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ.
ಯಾಕೆಂದರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಇನ್ನೂ ಕೆಲವು ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿರುವುದು ಇದಕ್ಕೆ ಕಾರಣ. ಆದರೆ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಇಲ್ಲಿವರೆಗೂ ಸಿಕ್ಕಿರುವ ಪ್ರತಿಕ್ರಿಯೆ ನೋಡಿದರೆ ಈ ಸಲ ದಾಖಲೆ ಪ್ರಮಾಣದಲ್ಲಿ ಸೈಕಲಿಗರು ಭಾಗವಹಿಸುವ ನಿರೀಕ್ಷೆಯಿದೆ. ವಿಶೇಷವಾಗಿ ದಕ್ಷಿಣ ಬೆಂಗಳೂರು ಅತ್ಯಧಿಕ ಸೈಕಲಿಗರನ್ನು ಒಳಗೊಂಡಿರುವುದು ಇದಕ್ಕೆ ಮತ್ತೊಂದು ಕಾರಣ’ ಎಂಬುದು ಬೆಂಗಳೂರು ಸೈಕ್ಲಿಸ್ಟ್ ಗ್ರೂಪ್‌ನ ಸದಸ್ಯ ಅನಿಲ್ ಕಡಸೂರ್ ವಿವರಣೆ.
ಮನರಂಜನೆಯೂ ಇದೆ
ಈ ಹಿಂದಿನ ಎರಡೂ ಸೈಕಲ್ ದಿನಗಳು ಬರಿಯ ಸೈಕಲ್ ಜಾಥಾಕ್ಕಷ್ಟೇ ಸೀಮಿತವಾಗಿತ್ತು. ಈ ಬಾರಿ ಸೈಕಲಿಗರಿಗೆ, ಮಕ್ಕಳಿಗೆ ಮನರಂಜನೆ ಕೊಡುವ ಕಾರ್ಯಕ್ರಮಗಳೂ ನಡೆಯಲಿರುವುದು ವಿಶೇಷ.
ಜಯನಗರ ಐದನೇ ಬ್ಲಾಕ್, 10ನೇ ಮುಖ್ಯರಸ್ತೆ ಬಳಿಯ ಶಾಲಿನಿ ಮೈದಾನದಿಂದ ಬೆಳಿಗ್ಗೆ 7 ಗಂಟೆಗೆ ‘ಸೈಕಲ್ ರೈಡ್’ನೊಂದಿಗೆ ಸೈಕಲ್ ದಿನಕ್ಕೆ ಚಾಲನೆ ಸಿಗುತ್ತದೆ. ಹೀಗೆ ಆರಂಭಗೊಂಡ ರೈಡ್ ಲಕ್ಷ್ಮಣರಾವ್ ಉದ್ಯಾನ– ಸೌತ್ ಎಂಡ್–ಪಟಾಲಮ್ಮ ಸ್ಟ್ರೀಟ್–ಆರ್ಮುಗಂ ವೃತ್ತ–ಕೃಷ್ಣರಾವ್ ವೃತ್ತ– ಅಶೋಕ ಪಿಲ್ಲರ್– ಮಾಧವನ್ ಪಾರ್ಕ್– ಕಾಸ್ಮೊಪಾಲಿಟನ್ ಕ್ಲಬ್– ಜಯನಗರ 4ನೇ ಬ್ಲಾಕ್– 11ನೇ ಮುಖ್ಯರಸ್ತೆ ಮೂಲಕ ಶಾಲಿನಿ ಮೈದಾನಕ್ಕೆ ವಾಪಸಾಗಲಿದೆ. ಹೀಗೆ ಒಟ್ಟು 6.5 ಕಿ.ಮೀ. ದೂರ ಕ್ರಮಿಸಲು ಒಂದು ಗಂಟೆ ಕಾಲಾವಕಾಶವಿರುತ್ತದೆ.
ಇದಾದ ಬಳಿಕ ಶಾಲಿನಿ ಮೈದಾನದಲ್ಲಿ ಮಕ್ಕಳಿಗಾಗಿ ಕುಂಟೋಬಿಲ್ಲೆ, ಲಗೋರಿಯಂತಹ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ನಿಮಗೆ ಯಾವ ಸೈಕಲ್ ಸೂಕ್ತ, ಸೈಕಲ್‌ನ ಆಯ್ಕೆ ಹೇಗೆ, ಸೈಕಲ್‌ನ ಸಣ್ಣಪುಟ್ಟ ರಿಪೇರಿ ಹೇಗೆ ಇತ್ಯಾದಿ ಮಾಹಿತಿಗಳನ್ನು ಒಳಗೊಂಡ ‘ಸೈಕಲ್ ಗ್ಯಾನ್’ ಎಂಬ ಕಾರ್ಯಾಗಾರವೂ ಇರುತ್ತದೆ.
ಈ ಎಲ್ಲಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ 7ರಿಂದ 11ರವರೆಗೆ ಎರಡು ಗಂಟೆ ಅವಧಿಯಲ್ಲಿ ಶಾಲಿನಿ ಮೈದಾನದ ಬಳಿಯ 10ನೇ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಲು ಸಂಚಾರ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ ಎಂದು ‘ಪ್ರಜಾ’ ಸಂಸ್ಥೆಯ ಶ್ರೀನಿಧಿ ತಿಳಿಸಿದ್ದಾರೆ. ಸಂಪರ್ಕಕ್ಕೆ: 96116 88666.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.