ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?
ಆಕೆ: ಭೂತ, ಭವಿಷ್ಯ, ವರ್ತಮಾನ ಕಾಲಗಳನ್ನು ಹಕ್ಕಿಯಲ್ಲಿ ಕಂಡು ವರ್ಣಿಸುತ್ತ ಚಲನೆಯನ್ನೇ ‘ಕಾಲಪಕ್ಷಿ’ಯಾಗಿಸಿ ವರಕವಿ ದ.ರಾ.ಬೇಂದ್ರೆ ಹಾಡಿರಬಹುದು. ಆದರೂ, ಹಕ್ಕಿ ಹಾರುತಿದೆ ನೋಡಿದಿರಾ?
ನಾನು: ಬರಿಗಣ್ಣಿಗೆ ಕಾಣದಿದ್ದರೂ ದೂರದ್ದನ್ನೂ ತೀಕ್ಷ್ಣವಾಗಿ ಶೂಟ್ ಮಾಡಬಲ್ಲ ಟೆಲಿಲೆನ್ಸ್ ಕ್ಯಾಮೆರಾ ಇರುವಾಗ ಬರೀ ನೋಡುವುದು ಹೇಗೆ? ನೋಡಲಾಗದಿದ್ದರೂ ಕ್ಯಾಮೆರಾ ಕಣ್ಣಲ್ಲಿ ಪಕಪಕನೆ ಸೆರೆ ಹಿಡಿಯುವುದಂತೂ ಇದ್ದೇ ಇದೆ.
ಆಕೆ: ಉದ್ಯಾನ ನಗರಿ, ಫಲವತ್ತಾದ ಕೆರೆಗಳ ನಾಡು ದಿನೇ ದಿನೇ ಕಾಂಕ್ರೀಟ್ ಕಾಡಾಗುತ್ತಿದೆ. ಚಳಿ ತಾಳಲಾರದೆ ಉತ್ತರದ ಸಾವಿರಾರು ಕಿ.ಮೀ. ದೂರದಿಂದ ಒಂಚೂರು ನೀರು, ಒಂಚೂರು ಹಸಿರು, ಚೂರು ಬಿಸಿಲನು ಹುಡುಕಿ ವಲಸೆ ಹೊರಟ ಹಕ್ಕಿಗಳು ನಮ್ಮೂರಲ್ಲೂ ಉಳಿದುಕೊಂಡಿವೆ. ಅಲ್ಲೊಂದು-ಇಲ್ಲೊಂದು ಎನ್ನುವಂತೆ ಅಲ್ಲಲ್ಲಿ.
ಆದರೂ, ಹಕ್ಕಿ ಹಾರುತಿದೆ ನೋಡಿದಿರಾ?
ನಾನು: ಲಾಲ್‌ಬಾಗ್, ಕಬ್ಬನ್‌ಪಾರ್ಕ್, ಹೆಸರುಘಟ್ಟ, ಹೊಸಕೋಟೆ, ನಂದಿ ಬೆಟ್ಟ, ಬನ್ನೇರುಘಟ್ಟ, ಹೆಬ್ಬಾಳ, ಪುಟ್ಟೇನಹಳ್ಳಿ, ಐಐಎಸ್‌ಸಿ, ಮೇಡಹಳ್ಳಿ, ಮಂಚನಬೆಲೆ, ಅಗರ... ಎಷ್ಟೆಲ್ಲ ಕಡೆ ಹತ್ತಾರು ಪ್ರಭೇದದ ಪಕ್ಷಿಗಳು. ಅಕ್ಟೋಬರ್‌ನಿಂದ ಎಪ್ರಿಲ್‌ವರೆಗೂ ಎಲ್ಲೆಲ್ಲೂ ಅವುಗಳದೇ ಹಾರಾಟ, ಹುಡುಕಾಟ. ಮೀನು ಹಿಡಿಯುವ, ಜಿಗಿಯುವ, ಕುಣಿಯುವ ಎಷ್ಟೊಂದು ಭಂಗಿಗಳ ಅಪರೂಪದ ಕ್ಲಿಕ್ ಗಳು.
ಆಕೆ: ಉದ್ಯಾನದ ಹಸಿರಿನಲ್ಲಿ ಬದುಕನ್ನರಸಿ ಬರುವ ಹತ್ತಾರು ಹಕ್ಕಿಗಳು ಹಾಗೂ ನೀರನ್ನು ಅವಲಂಬಿಸಿರುವ 50ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತಿದ್ದವು.
ಹಿಮಾಲಯದ ಆಚೆಗಿನ ಪ್ರದೇಶ, ರಷ್ಯಾ, ಪೂರ್ವ ಯುರೋಪ್, ಮಧ್ಯ ಏಷ್ಯಾ, ಅಮೆರಿಕ, ಆಫ್ರಿಕಾ ಸೇರಿದಂತೆ ಹಲವು ಭಾಗಗಳಿಂದ ಬಂದು ಗೂಡುಕಟ್ಟಿ ಮರಿಗಳೊಟ್ಟಿಗೆ ಮರಳಿ ತವರಿಗೆ ಹೊರಡುತ್ತಿದ್ದವು.
ಎಷ್ಟೋ ಪಕ್ಷಿಗಳು ನೀರಿನ ಮೇಲೆ ಬೆಳೆಯುವ ಸಸ್ಯಗಳ ನಡುವೆ ಗೂಡು ಕಟ್ಟುತ್ತವೆ. ಅಭಿವೃದ್ಧಿ, ಒತ್ತುವರಿಗಳಿಂದ ನಲುಗಿರುವ ಕೆರೆಗಳಲ್ಲಿ ನೀರಿಲ್ಲ, ಇರುವ ನೀರಿಗೆ ಕೊಳಕು, ಇಲ್ಲಿ ಅಗತ್ಯ ಸಸ್ಯ ಬೆಳೆಯುತ್ತಿಲ್ಲ, ಹಕ್ಕಿಗಳು ಗೂಡುಕಟ್ಟಲಾಗುತ್ತಿಲ್ಲ.
ಆದರೂ, ಹಕ್ಕಿ ಹಾರುತಿದೆ ನೋಡಿದಿರಾ?
ನಾನು: ಕಾಗೆ, ಕೋಗಿಲೆ, ಪಾರಿವಾಳಗಳು ಬದುಕುತ್ತಿರುವುದು ಬದಲಾವಣೆಗೆ ಒಗ್ಗಿಕೊಂಡೆ. ನಮ್ಮಂಥ ಬರ್ಡ್ ಕ್ಯಾಚರ್‌ಗಳ ಡಿಟಿಟಲ್ ಕ್ಯಾಮೆರಾಗಳಿಂದ; ನಾರ್ದನ್ ಪಿನ್ ಟೇಲ್, ಸೆಸ್ಟ್ರಲ್, ಗ್ಲಾಸಿ ಐಬಿಸ್, ಏಷಿಯನ್ ಬ್ರೌನ್, ಗ್ರೀನಿಷ್ ಲೀಫ್ ವಾರ್ಬ್ಲರ್, ನಾರ್ದನ್ ಷವ್ಲೆರ್... ಇನ್ನೂ ಅನೇಕ ತಪ್ಪಿಸಿಕೊಂಡಿಲ್ಲ. ಎಲ್ಲವೂ ರೆಕಾರ್ಡ್.
ಆಕೆ: ಒಂದು ಪ್ರಭೇದದ ಒಂದು ಪಕ್ಷಿಯ ಫೋಟೊ ಹಿಡಿದ ಕೂಡಲೇ ಎಲ್ಲವೂ ಇದೇ ಎಂದಾ? ಅವುಗಳ ಪ್ರಮಾಣ ಎಷ್ಟು?
ಹಿಂದಿನ 30 ವರ್ಷಗಳಿಗೆ ಹೋಲಿಸಿದರೆ ಎಷ್ಟೋ ಪ್ರಭೇದದ ಪಕ್ಷಿಗಳು ಶೇ2 ಮಾತ್ರ ಕಾಣಿಸಿಕೊಂಡಿವೆ. ಹಕ್ಕಿಗಳಿಗೆ ಫಲವತ್ತು ಭೂಮಿ ಮತ್ತು ಕೆರೆ ಭಾಗಗಳು ನೆಚ್ಚು. ಇಲ್ಲಿನ ಕೇವಲ ಶೇ 5ರಷ್ಟು ಮಾತ್ರ ಇದಕ್ಕೆ ಪೂರಕ. ಹಿಂದೆ ಕಾಣಬಹುದಾಗಿದ್ದ ನೀರಿನ ಹಕ್ಕಿಗಳ ಪ್ರಮಾಣ ಅಂದಾಜು 1ಲಕ್ಷ. ಈಗಿನ ಆಗಮನ ಆ ಸಂಖ್ಯೆಯ ಶೇ 20ರಷ್ಟು ಮಾತ್ರ. ಇನ್ನೂ ವಲಸೆ ಬರುವ ಗಾರ್ಡನ್ ಪಕ್ಷಿಗಳ ಪ್ರಮಾಣ ಶೇ5ಕ್ಕೆ ಇಳಿಕೆಯಾಗಿದೆ. ಮನೆಯ ಹಿಂದೆ-ಮುಂದೆ ಹಸಿರಿಲ್ಲ, ರಸ್ತೆಯ ಅಕ್ಕ-ಪಕ್ಕದ ಹಸಿರನ್ನು ಉಳಿಸುತ್ತಿಲ್ಲ, ಕೆರೆಗಳಲ್ಲಿ ನೀರಿಲ್ಲ.
ಆದರೂ, ಹಕ್ಕಿ ಹಾರುತಿದೆ ನೋಡಿದಿರಾ?
ಮಾನವನ ಹಾಗೆ ವೈಪರೀತ್ಯ ಬದಲಾವಣೆಗೆ ಪಕ್ಷಿಗಳು ಹೊಂದಿಕೊಳ್ಳುವುದಿಲ್ಲ. ಆಹಾರಕ್ಕಾಗಿ ಪರಿಸರವನ್ನೇ ಅವಲಂಬಿಸಿರುತ್ತವೆ. ಅವುಗಳ ಬದುಕಿನ ಸೊಗಸನ್ನು ಸವಿಯಬೇಕಾದರೆ ಗಮನಿಸುವಿಕೆ ಅತ್ಯಗತ್ಯ.
ಆಧುನಿಕ ಕ್ಯಾಮೆರಾಗಳ ಮೂಲಕ ಸುಲಭದಲ್ಲಿ ಫೋಟೊ ಕ್ಲಿಕ್ಕಿಸುವುದು ಸಾಧ್ಯವಿದೆ. ಆದರೆ, ಪಕ್ಷಿಗಳ ಬದುಕಿನ ರೀತಿ, ಆಹಾರ ಪದ್ಧತಿ, ರೆಕ್ಕೆಯೊಳಗಿನ ಅಪರೂಪದ ಬಣ್ಣ ಮತ್ತು ರಚನೆಯನ್ನು ಬೈನಾಕ್ಯುಲರ್ ಬಳಸಿ ಗಮನಿಸುವ ಆಸಕ್ತಿ ಬೆಳೆಸಿಕೊಳ್ಳಬೇಕಿದೆ. ಪಕ್ಷಿಗಳ ಬಗೆಗೆ ಯಾವುದೇ ಅರಿವಿಲ್ಲದೆ ಸುಮ್ಮನೆ ಕ್ಲಿಕ್ಕಿಸುವ ಫೋಟೊಗಳು ಅನುಭವಕ್ಕೆ ಸಿಗುವುದೇ ಇಲ್ಲ.
ಕ್ಯಾಮೆರಾ ಇರಲಿ, ಬೈನಾಕ್ಯುಲರ್ ಹಿಡಿಯಿರಿ
ಹೊಸಕೋಟೆ ಕೆರೆ ಸೇರಿದಂತೆ ಬೆಂಗಳೂರು ಸುತ್ತಮುತ್ತ ವಿವಿಧ ಪ್ರಭೇದಗಳ ವಲಸೆ ಹಕ್ಕಿಗಳು ಬಿಡಾರ ಹೂಡಿವೆ. ಇತ್ತೀಚಿನ ಪಕ್ಷಿ ವೀಕ್ಷಣೆ ಸಮಯದಲ್ಲಿ 14 ಪ್ರಭೇದಗಳ ಪಕ್ಷಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಗ್ಲಾಸಿ ಐಬಿಸ್: ಗಾಢ ಬಣ್ಣ, ಬಾಗಿರುವ ಉದ್ದನೆಯ ಕೊಕ್ಕಿನ ಗ್ಲಾಸಿ ಐಬಿಸ್ ಪಕ್ಷಿಗಳು ಯುರೋಪ್, ಆಸ್ಟ್ರೇಲಿಯಾ, ಏಷ್ಯಾ ಹಾಗೂ ಅಟ್ಲಾಂಟಿಕ್ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ.
ನಾರ್ದನ್ ಷವ್ಲೆರ್: ಬಹಳ ದೂರದವರೆಗೂ ಹಾರಿ ಬರುವ ಗೋರು ಸಲಿಕೆ (ಷವಲ್) ಕೊಕ್ಕಿನ ನಾರ್ದನ್ ಷವ್ಲೆರ್, ಹಿಮಾಲಯವನ್ನು ದಾಟಿದ ಬಳಿಕ ದಕ್ಷಿಣ ಹಿಮಾಲಯದ ನೀರಿನ ಭಾಗದಲ್ಲಿ ಇಳಿದು ದಾಹ ತಣಿಸಿಕೊಳ್ಳುತ್ತವೆ. ಮುಂದೆ ದಕ್ಷಿಣ ಭಾಗದ ತುಸು ಬೆಚ್ಚಗಿನ ಜಾಗದ ಹುಡುಕಾಟ ನಡೆಸುತ್ತವೆ.
ಹೆಚ್ಚಿನ ಸಮಯ ನೀರಿನ ಮೇಲೆ ತೇಲುತ್ತ ಕಳೆಯುವ ಇವುಗಳಿಗೆ ಬೀಜಗಳು ಹಾಗೂ ಸಣ್ಣ ಹುಳುಗಳೇ ಆಹಾರ.
*
ಉದ್ಯಾನಗಳು, ಸಾಲು ಮರಗಳು ಹಾಗೂ ಕೆರೆಗಳ ಸರಿಯಾದ ನಿರ್ವಹಣೆ ಆಗಬೇಕು. ಸರ್ಕಾರದ ಬಳಿ ಹೆಚ್ಚು ಭೂಮಿ ಮತ್ತು ಜನರು ಇದ್ದಾರೆ. ಅವರಿಂದ ಪರಿಸರಮುಖಿ ಕೆಲಸಗಳು ಹೆಚ್ಚು ನಡೆಯಬೇಕಿದೆ.
–ಕೃಷ್ಣ ಎಂ.ಬಿ, ಪಕ್ಷಿಶಾಸ್ತ್ರಜ್ಞ/ಪಕ್ಷಿ ವೀಕ್ಷಕ
*
ಫೋಟೊ ಹಿಡಿದ ಮಾತ್ರಕ್ಕೆ ಪಕ್ಷಿ ವೀಕ್ಷಣೆ ಮಾಡಿದಂತಾಗುವುದಿಲ್ಲ. ಪಕ್ಷಿಗಳ ಕುರಿತಾದ ವಿವರಣೆಯ ಕಿರು ಹೊತ್ತಿಗೆ, ಬರೆಯುವ ಪುಸ್ತಕ ಹಾಗೂ ಬೈನಾಕ್ಯುಲರ್ ಹಿಡಿದು ಪಕ್ಷಿಗಳನ್ನು ಗಮನಿಸುವಾಗ ಸಿಗುವ ಸಂತಸವೇ ಬೇರೆ.
–ಕೆ.ಎಸ್. ಶ್ರೀನಿವಾಸ್
ಪಕ್ಷಿ ವೀಕ್ಷಕ, ಛಾಯಾಗ್ರಾಹಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.