ADVERTISEMENT

ಹಸಿರು ಮರೆಯಾಯ್ತು...ಕಾಂಕ್ರೀಟ್ ಕಾಡಾಯ್ತು

ಮಂಜುಶ್ರೀ ಎಂ.ಕಡಕೋಳ
Published 4 ಜೂನ್ 2017, 19:30 IST
Last Updated 4 ಜೂನ್ 2017, 19:30 IST
ಹಸಿರು ಮರೆಯಾಯ್ತು...ಕಾಂಕ್ರೀಟ್ ಕಾಡಾಯ್ತು
ಹಸಿರು ಮರೆಯಾಯ್ತು...ಕಾಂಕ್ರೀಟ್ ಕಾಡಾಯ್ತು   

ನಾನು ಇಲ್ಲಿಯೇ ಬೆಳೆದವನು. ಓದಿದ್ದು ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್  ಆಫ್ ಸೈನ್ಸ್‌ನಲ್ಲಿ (ಭಾರತೀಯ ವಿಜ್ಞಾನ ಸಂಸ್ಥೆ). ಪದವಿ, ಡಾಕ್ಟರೇಟ್‌ ಪಡೆದು, ಅಲ್ಲಿಯೇ ಕೆಲಸಕ್ಕೆ ಸೇರಿಕೊಂಡೆ.

ಬಾಲ್ಯದಲ್ಲಿ ನಾನು ಕಂಡ ಈ ನಗರ ಬೇರೆಯದೇ ರೀತಿಯಾಗಿತ್ತು. ಆಗ ಎಲ್ಲೆಲ್ಲೂ ಹಸಿರಿತ್ತು. ಹೊರಗೆ ಹೋಗುವುದೆಂದರೆ ಖುಷಿಯಾಗುತ್ತಿತ್ತು. ಆಗಿನಿಂದಲೇ ನನಗೆ ಕೆರೆಗಳ ಬಗ್ಗೆ ವಿಶೇಷ ಆಕರ್ಷಣೆ. ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಎಲ್ಲ ಕಾಲದಲ್ಲಿಯೂ ನಗರದ ವಾತಾವರಣ ಚೆನ್ನಾಗಿರುತ್ತಿತ್ತು.

70ರ ದಶಕದಲ್ಲಿ ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 14 ರಿಂದ 16 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತಿತ್ತು. ಆದರೆ ಈಗ 38 ರಿಂದ 40 ಡಿಗ್ರಿ ಆಗಿಬಿಟ್ಟಿದೆ.  ಡಿಸೆಂಬರ್‌ನಲ್ಲಂತೂ ಒಮ್ಮೆಮ್ಮೆ ಒಂದಂಕಿಗೆ ಇಳಿಯುತ್ತಿತ್ತಂತೆ. ಆಗ ಸೇಬು ಕೂಡಾ ಬೆಳೆಯುತ್ತಿದ್ದರಂತೆ! ಈಗ ಸೇಬಿನ ಬದಲಿಗೆ ಕಸ ಬೆಳೆಯುತ್ತಿದ್ದೇವೆ. ಬೆಂಗಳೂರು ಈಗ ಗಾರ್ಡನ್ ಸಿಟಿಯಿಂದ ಗಾರ್ಬೇಜ್ ಸಿಟಿ ಆಗಿಬಿಟ್ಟಿದೆ.

ADVERTISEMENT

ದಾಖಲೆಗಳ ಪ್ರಕಾರ 1800ನೇ ಇಸವಿಯಲ್ಲಿ ಇಲ್ಲಿ 1452 ಕೆರೆಗಳಿದ್ದವು. ಈಗ ಬರೀ 193 ಕೆರೆಗಳಿವೆ. ವೃಷಭಾವತಿ, ಹೆಬ್ಬಾಳ–ನಾಗವಾರ, ಕೆ.ಸಿ ವ್ಯಾಲಿಯಲ್ಲಿ (ಕೋರಮಂಗಲ–ಚಲ್ಲಘಟ್ಟ) ಮಳೆ ನೀರು ಹರಿದುಹೋಗುತ್ತಿತ್ತು. ಆ ನೀರು ವ್ಯರ್ಥವಾಗದಂತೆ ಅಂದಿನ ಹಿರಿಯರು ಅಲ್ಲಲ್ಲಿ ಕೆರೆಗಳನ್ನು ನಿರ್ಮಿಸಿದ್ದರು. ಇದರಿಂದ ಆಯಾ ಪ್ರದೇಶದ ಜನರಿಗೆ ಕೃಷಿ, ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆ ಇರುತ್ತಿರಲಿಲ್ಲ.

1537ರಲ್ಲಿ ಕೆಂಪೇಗೌಡರು ಕಟ್ಟಿದ ಬೆಂಗಳೂರು ಕೇವಲ 2 ಚದರ ಕಿ.ಮೀ. ಇತ್ತು. ಬ್ರಿಟಿಷರ ಕಾಲದಲ್ಲಿ ನಗರ 69 ಚ.ಕಿ.ಮೀ. ಆಯಿತು. 2011ರ ಹೊತ್ತಿಗೆ ಇದು 741 ಚ.ಕಿ.ಮೀ. ಆಯಿತು. ಬೆಂಗಳೂರಿನ ವಿಸ್ತೀರ್ಣ ಜಾಸ್ತಿ ಮಾಡುವ ಅಗತ್ಯವೇ ಇರಲಿಲ್ಲ. ಅದಕ್ಕೆ ಮುಖ್ಯವಾದ ಕಾರಣ, ಸರ್ಕಾರಿ ನೌಕರರ ವೇತನ ಆಯೋಗ ಎನ್ನುವುದು ನನ್ನ ಅಭಿಪ್ರಾಯ.

ಆಯೋಗದ ಪ್ರಕಾರ ‘ಎ1’ ಶ್ರೇಣಿಯ ನಗರದಲ್ಲಿರುವ ಅಧಿಕಾರಿಗಳಿಗೆ ಮೂಲವೇತನಕ್ಕೆ ಶೇ 30ರಷ್ಟು ಸಂಬಳ ಜಾಸ್ತಿ ಸಿಗುತ್ತಿತ್ತು. ಆದರೆ, ಬೆಂಗಳೂರು ಬರೀ ‘ಎ’ ಶ್ರೇಣಿ ನಗರವಾಗಿತ್ತು. 2001ರ ಜನಗಣತಿ ಪ್ರಕಾರ ನಗರದಲ್ಲಿ ಆಗ 54 ಲಕ್ಷ ಜನಸಂಖ್ಯೆ ಇತ್ತು.  ‘ಎ1’  ಶ್ರೇಣಿ ನಗರವಾಗಬೇಕಿದ್ದರೆ 70 ಲಕ್ಷ ಜನಸಂಖ್ಯೆ ಇರಬೇಕು. ಆಗ (2006ರಲ್ಲಿ) ಅಧಿಕಾರಿಗಳು ಅಂದಿನ ಮುಖ್ಯಮಂತ್ರಿಯನ್ನು ಒಪ್ಪಿಸಿ ಸುತ್ತಮುತ್ತಲಿನ 110 ಹಳ್ಳಿಗಳನ್ನು ಸೇರಿಸಿ, ಗ್ರೇಟರ್ ಬೆಂಗಳೂರು ಮಾಡಿದರು.

ನಮ್ಮನ್ನು ಆಳುವವರಿಗೆ ವೈಜ್ಞಾನಿಕ ಅರಿವು ಇಲ್ಲ. ಕೆರೆಗಳಿದ್ದಾಗ ನಗರದಲ್ಲಿ 30 ರಿಂದ 60 ಅಡಿಗೇ ನೀರು ಸಿಗುತ್ತಿತ್ತು. ಆದರೆ, ಈಗ 700 ಅಡಿಯಷ್ಟು ಇಳಿದರೂ ನೀರು ಸಿಗುವ ಖಾತರಿ ಇಲ್ಲ.   ಕೆಲ ಪ್ರದೇಶಗಳಲ್ಲಿ ಅಂತರ್ಜಲ 1400 ಅಡಿಯಷ್ಟು ಆಳಕ್ಕೆ ಇಳಿದಿದೆ. ನೀರು ಸಿಕ್ಕರೂ ಅದರಲ್ಲಿ  ಲೋಹದ (ತಾಮ್ರ, ಕ್ಯಾಡ್ಮಿಯಂ, ಸತು) ಅಂಶಗಳಿರುತ್ತವೆ. ಈ ನೀರನ್ನು ಕುಡಿದವರಿಗೆ ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಕಟ್ಟಿಟ್ಟ ಬುತ್ತಿ.
ಕೆರೆಗಳಿಗೆ ಕಾರ್ಖಾನೆಗಳ ಘನ, ದ್ರವ ತ್ಯಾಜ್ಯ ಮತ್ತು ಚರಂಡಿ ನೀರು ಸೇರುತ್ತಿದೆ.

ಇಂಥ ಕೆರೆಗಳಲ್ಲಿ ಬೆಳೆಯುವ ಹಸಿರು ಹುಲ್ಲು ಮತ್ತು ಕಳೆಗಳಲ್ಲಿ ಲೋಹದ ಅಂಶ ಹೆಚ್ಚಿರುತ್ತದೆ. ಇದನ್ನು ಹಸುವಿಗೆ ಆಹಾರವಾಗಿ ಕೊಟ್ಟಾಗ, ಅದು ಹಸುವಿನ ಹಾಲಿನ ಮೂಲಕ ಮನುಷ್ಯನ ದೇಹಕ್ಕೂ ಸೇರುತ್ತಿದೆ. ಕೆರೆಗಳ ಕೆಳಗಿನ ಪ್ರದೇಶಗಳಾದ ವರ್ತೂರು, ತೂಬಗೊಂಡನಹಳ್ಳಿ, ರಾಮಗೊಂಡನಹಳ್ಳಿಗಳಲ್ಲಿ ತರಕಾರಿ, ಹಸಿರು ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಅವುಗಳಲ್ಲಿಯೂ ಲೋಹದ ಅಂಶಗಳು ಪತ್ತೆಯಾಗಿವೆ. ನಾವು ಸೇವಿಸುವ ಆಹಾರವೂ ವಿಷಮಯವಾಗಿದೆ. ಈ ಬಗ್ಗೆ ಈಚೆಗಷ್ಟೇ ಬಿ.ಬಿ.ಸಿ. ಯವರು ಅಧ್ಯಯನ ನಡೆಸಿ ಸಾಕ್ಷ್ಯಚಿತ್ರ ಮಾಡಿದ್ದಾರೆ.

ಹಿಂದೆ ಕೆ.ಆರ್.ಮಾರುಕಟ್ಟೆ, ಟೌನ್‌ಹಾಲ್, ಸಂಪಂಗಿರಾಮನಗರ, ಮೆಜೆಸ್ಟಿಕ್ ಬಸ್‌ ನಿಲ್ದಾಣಗಳು (ಧರ್ಮಾಂಬುಧಿ ಕೆರೆ) ಕೆರೆಗಳಾಗಿದ್ದವು. ಈಗ ಇವೆಲ್ಲಾ ವಸತಿ, ವಾಣಿಜ್ಯ ಸ್ಥಳಗಳಾಗಿಬಿಟ್ಟಿವೆ. ಕೆಲವನ್ನು ಭೂ ಮಾಫಿಯಾದವರು ಗುಳುಂ ಮಾಡಿದರೆ, ಇನ್ನು ಕೆಲವನ್ನು ರಾಜಕಾರಣಿಗಳು ಗುಳುಂ ಮಾಡಿಬಿಟ್ಟಿದ್ದಾರೆ.

ನಾನು 1970ರಿಂದಲೂ ಉಪಗ್ರಹ ಚಿತ್ರಗಳ ಮೂಲಕ ನಗರವನ್ನು ಅಧ್ಯಯನ ಮಾಡುತ್ತಿದ್ದೇನೆ. 1973ರಲ್ಲಿ ಬೆಂಗಳೂರು ಶೇ 78 ಹಸಿರಾಗಿತ್ತು. ಇಂದು ಅದೇ ಬೆಂಗಳೂರಿನಲ್ಲಿ ಶೇ 78ರಷ್ಟು ಭಾಗ ಕಟ್ಟಡಗಳಿವೆ. 1973ರಿಂದ 2016ರ ಅವಧಿಯಲ್ಲಿ ನಗರದಲ್ಲಿ ಕಟ್ಟಡಗಳ ಸಂಖ್ಯೆ ಹತ್ತು ಪಟ್ಟು  ಜಾಸ್ತಿಯಾಗಿದೆ.

ಇದೇ ಪರಿಸ್ಥಿತಿ ಮುಂದುವರಿದರೆ 2020ರಲ್ಲಿ ನಗರದ ಶೇ 94ರಷ್ಟು ಭೂಪ್ರದೇಶ ಬರೀ ಕಟ್ಟಡಗಳಿಂದ ತುಂಬಿರುತ್ತದೆ. ಆಗ ಶುದ್ಧ ಗಾಳಿ, ನೀರಿಗೆ ಸಮಸ್ಯೆ ಆಗುತ್ತದೆ. ಬೆಂಗಳೂರು ನಿಧಾನವಾಗಿ ಸಾಯುವ ಹಾದಿಯಲ್ಲಿದೆ. ಈ ಬಗ್ಗೆ ‘ಕರೆಂಟ್ ಸೈನ್ಸ್‌’ ಪತ್ರಿಕೆಯಲ್ಲಿ ಲೇಖನವನ್ನೂ ಬರೆದೆ.
ಬರೀ 90 ಮಿ.ಲೀ. ಮಳೆ ಬಂದರೂ ಸಾಕು. ಈ ನಗರದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆ. ಇದಕ್ಕಿಂತ ಜಾಸ್ತಿ ಮಳೆ ಬಂದರೆ ಚೆನ್ನೈ, ಉತ್ತರಾಖಂಡಕ್ಕಿಂತ ಹೆಚ್ಚಿನ ಅನಾಹುತ ಆಗುವುದರಲ್ಲಿ ಸಂಶಯವಿಲ್ಲ.

ನಗರದ 741 ಚ.ಕಿ.ಮೀ. ವ್ಯಾಪ್ತಿಯ 95 ಲಕ್ಷ ಜನಸಂಖ್ಯೆಗೆ 14.78 ಲಕ್ಷ ಮರಗಳಿವೆ. ಅಂದರೆ ಪ್ರತಿ 7 ಜನಕ್ಕೆ ಒಂದು ಮರವಿದೆ ಅಂದ ಹಾಗಾಯ್ತು. ಇದನ್ನು ನೋಡಿದರೆ, ನಮ್ಮ ಬೆಂಗಳೂರಿನವರಿಗೆ ಮರಗಳ ಪ್ರಯೋಜನವೇ ಮರೆತು ಹೋಗಿದೆ ಅನಿಸುತ್ತೆ. ಇಲ್ಲಿನ ಜನರಿಗೆ ಮರ

ಇದ್ದರೆ, ಎಲೆ ಬೀಳುತ;  ಮಳೆ ಬಂದರೆ ಮರ ಮುರಿದುಕೊಂಡು ಬೀಳುತ್ತದೆ ಎನ್ನುವ ಭಾವನೆಯೇ ತುಂಬಿಕೊಂಡಿದೆ. ಇದಕ್ಕಿಂತ ಮೂರ್ಖತನ ಮತ್ತೊಂದಿಲ್ಲ. ಒಬ್ಬ ವ್ಯಕ್ತಿಗೆ 8 ಮರಗಳು ಇರಬೇಕು ಎನ್ನುವುದು ಆದರ್ಶ ಸ್ಥಿತಿ. ಆದರೆ ನಮ್ಮ ಪರಿಸ್ಥಿತಿ ನೋಡಿ; 7 ಜನರಿಗೆ 1 ಮರವಿದೆ!
ನಗರ ಯೋಜನೆ ಪ್ರಕಾರ ಯಾವುದೇ ಪ್ರದೇಶದಲ್ಲಿ ಶೇ 15ರಷ್ಟು ಹಸಿರು ಇರಬೇಕು. ಆದರೆ, ಸರ್ಕಾರದ ಅಧಿಕಾರಿಯೊಬ್ಬರು ಶೇ 10 ಹಸಿರು ಇರಬೇಕೆಂದು ಮಾಡಲು ಹೊರಟ್ಟಿದ್ದಾರೆ. ಇದಕ್ಕಿಂತ ಮೂರ್ಖತನ ಮತ್ತೊಂದು ಇದೆಯೇ? ಈಗಿನ ಬೆಂಗಳೂರು ನಿಧಾನವಾಗಿ ವಾಸಯೋಗ್ಯ ಸ್ಥಾನವನ್ನು ಕಳೆದುಕೊಳ್ಳುತ್ತಿದೆ.

ಈ ನಗರದಿಂದ ಓಡಿಹೋದರೆ ಸಾಕಪ್ಪಾ ಅನ್ನುವಂಥ ವಾತಾವರಣ ಸೃಷ್ಟಿಯಾಗಿದೆ. ಸೂಕ್ಷ್ಮ ಮನಸಿನವರು ಇಂಥ ಕಲುಷಿತ ನಗರದಲ್ಲಿ ಇರಲು ಇಷ್ಟಪಡುವುದಿಲ್ಲ. ನಿಜ ಹೇಳಬೇಕೆಂದರೆ ನಾವೀಗ ಬೆಂಗಳೂರನ್ನು ಕಳೆದುಕೊಂಡಿದ್ದೇವೆ. ಅಂತೆಯೇ ನಿಜವಾದ ಬೆಂಗಳೂರಿಗರನ್ನೂ ಕಳೆದುಕೊಂಡಿದ್ದೇವೆ. 

ಟಿ.ವಿ.ರಾಮಚಂದ್ರ ಪರಿಚಯ
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಿರಿಯ ಪರಿಸರ ವಿಜ್ಞಾನಿಯಾಗಿರುವ ಡಾ.ಟಿ.ವಿ.ರಾಮಚಂದ್ರ ಅವರು ಸರ್ಕಾರದ  ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಎಕಾಲಜಿ, ಇಂಡಿಯನ್ ಅಸೋಸಿಯೇಷನ್ ಆಫ್ ಹೈಡ್ರಾಲಜಿ ಸೇರಿದಂತೆ ಅನೇಕ ಕಡೆ ಫೆಲೊ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.  ನವೀಕರಿಸಬಹುದಾದ ಇಂಧನ ಮೂಲಗಳು, ಜೀವವೈವಿಧ್ಯ, ಕೆರೆ ಮತ್ತು ಜೌಗು ಪ್ರದೇಶ, ಪರಿಸರ ವಿಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿದ್ದಾರೆ. ‘ನಮ್ಮ ಬೆಂಗಳೂರಿಗ’, ‘ಅಸಾಮಾನ್ಯ ನಾಗರಿಕ’ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ.
ಸಂಪರ್ಕ ಸಂಖ್ಯೆ: 080–2293 3099. ಇ–ಮೇಲ್: cestvr@ces.iisc.ernet.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.