ಹಿಡಿ ಗಾತ್ರದ ಹೃದಯ ಭಾವನೆಗಳ ತಾಣ. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮನುಷ್ಯನ ಅಸ್ತಿತ್ವದ ಸಂಕೇತ. ಮುಖ ಮನಸ್ಸಿನ ಕನ್ನಡಿಯಾದರೆ, ಹೃದಯ ಜೀವದ ಮುನ್ನುಡಿ. ಮುಷ್ಟಿ ಆಕಾರದ ಪುಟ್ಟ ಹೃದಯ ಲಯ ತಪ್ಪಿದರೆ ಜೀವ ಅಂಕೆ ತಪ್ಪಿದಂತೆ. ಹೃದಯ ಬಡಿತ ತಾಳ ತಪ್ಪಿದರೆ ಬದುಕಿನ ಬಂಡಿ ಹಳಿ ತಪ್ಪಿದಂತೆ.
ಪ್ರತಿವರ್ಷ ಸುಮಾರು ಒಂದು ಕೋಟಿ ಎಪ್ಪತ್ತು ಲಕ್ಷ ಮಂದಿ ಹೃದಯ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಮಾರಣಾಂತಿಕ ಕ್ಯಾನ್ಸರ್, ಏಡ್ಸ್‌ಗಿಂತ ಹೃದ್ರೋಗ ಹೆಚ್ಚಿನ ಜೀವಗಳನ್ನು ಬಲಿ ಪಡೆಯುತ್ತಿದೆ ಎನ್ನುವುದು ಆತಂಕದ ಸಂಗತಿ.
ವಿಶ್ವದಲ್ಲಿ ಸಂಭವಿಸುತ್ತಿರುವ ಒಟ್ಟು ಮರಣ ಪ್ರಮಾಣದಲ್ಲಿ ಶೇ 30ರಷ್ಟು ಸಾವುಗಳು ಹೃದಯಾಘಾತದಿಂದ ಸಂಭವಿಸುತ್ತಿವೆ. ಭಾರತದಲ್ಲಿ 2 ಕೋಟಿ ಜನ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, 2020ರ ವೇಳೆಗೆ ಈ ಸಂಖ್ಯೆ 6 ಕೋಟಿ ತಲುಪುವ ಆತಂಕ ಇದೆ. ಹಿಂದೆ ಹೃದಯಾಘಾತವು ಪುರುಷರಿಗೆ ಮಾತ್ರ ಸೀಮಿತ ಎಂದು ಭಾವಿಸಲಾಗಿತ್ತು. ಆದರೆ, ಇತ್ತೀಚೆಗೆ ಶೇ 30ರಷ್ಟು ಮಹಿಳೆಯರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ.
ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ, ಅನಾರೋಗ್ಯಕರ ಆಹಾರ ಮತ್ತು ಜೀವನ ಶೈಲಿಯಿಂದ ಎರಡು ದಶಕಗಳಿಂದ ಭಾರತದಲ್ಲಿ ರಕ್ತದೊತ್ತಡ, ಹೃದಯ ರೋಗ ಮತ್ತು ಮಧುಮೇಹ ದೊಡ್ಡ ಆತಂಕ ಒಡ್ಡಿವೆ. ಚಿಕ್ಕ ವಯಸ್ಸಿನ ಯುವಕ–ಯುವತಿಯರು ಹೃದಯ ಸಮಸ್ಯೆಯೊಂದಿಗೆ ಆಸ್ಪತ್ರೆಗೆ ಬರುತ್ತಿದ್ದಾರೆ. ಹೃದ್ರೋಗ ಕುರಿತು ಮಾಹಿತಿಯ ಕೊರತೆ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ. ಸಮಸ್ಯೆ ಗಂಭೀರ ಹಂತ ತಲುಪುವವರೆಗೂ ಚಿಕಿತ್ಸೆ ಪಡೆಯದಿರುವುದು ಹೃದಯ ಸಂಬಂಧಿ ಕಾಯಿಲೆಗಳ ಸಮಸ್ಯೆ ಉಲ್ಬಣಿಸಲು ಕಾರಣವಾಗಿವೆ.
ಹೃದಯ ಸ್ತಂಭನವೊಂದೇ ನಮ್ಮನ್ನು ಸಾವಿನ ಮನೆಗೆ ಕರೆದೊಯ್ಯುವುದಿಲ್ಲ. ರಕ್ತ ಹೆಪ್ಪುಗಟ್ಟುವಿಕೆ, ಕೊಬ್ಬು ಶೇಖರಣೆಯಿಂದ ಹೃದಯದ ರಕ್ತನಾಳ ಕಿರಿದಾಗುವಿಕೆ, ಹುಟ್ಟಿನಿಂದ ಬರುವ ಸೋಂಕು, ಹೃದಯ ಕವಾಟ ರೋಗ ಸಾವಿಗೆ ಕಾರಣವಾಗಬಹುದು. ಹೃದಯಾಘಾತ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ರೋಗಕ್ಕೆ ಕಾರಣ, ಮುನ್ನೆಚ್ಚರಿಕೆ ಕ್ರಮ ಹಾಗೂ ಲಕ್ಷಣಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. 30 ವರ್ಷ ದಾಟಿದ ಪುರುಷರು ಹಾಗೂ ಮಹಿಳೆಯರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಹೃದಯ ಆರೋಗ್ಯ ತಪಾಸಣೆಗೆ ಒಳಗಾಗಬೇಕು.
ಹೃದಯ ರೋಗಕ್ಕೆ ಕಾರಣಗಳು
ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಆಹಾರ ಶೈಲಿ ಹೃದಯ ಸಂಬಂಧಿ ಕಾಯಿಲೆ ಹೆಚ್ಚಲು ಪ್ರಮುಖ ಕಾರಣ. ಚಟುವಟಿಕೆ ಇಲ್ಲದ ಜಡ ಜೀವನ, ಸ್ಥೂಲಕಾಯ, ಬೊಜ್ಜು, ಅಧಿಕ ಕೊಬ್ಬಿನಾಂಶ ಇರುವ ಕರಿದ ಆಹಾರ ಸೇವನೆ, ಮಾನಸಿಕ ಒತ್ತಡ, ಅನಿಯಮಿತ ಧೂಮಪಾನ, ತಂಬಾಕು ಸೇವನೆ, ಮದ್ಯಪಾನದಂಥ ದುಶ್ಚಟಗಳು, ಅಧಿಕ ರಕ್ತದೊತ್ತಡ, ಮಧುಮೇಹ, ನಿದ್ರೆ ಇಲ್ಲದ ರಾತ್ರಿ ಹೃದಯ ಕಾಯಿಲೆ ಕಡೆಗೆ ನಿಮ್ಮನ್ನು ಕೈಹಿಡಿದು ಕರೆದೊಯ್ಯುತ್ತವೆ.
ನಿಮ್ಮಲ್ಲೂ ಕಾಣಿಸಿಕೊಂಡಾವು ಹುಷಾರ್!
ಹೃದಯಾಘಾತಕ್ಕೆ ಎದೆಯ ಎಡಭಾಗದಲ್ಲೇ ನೋವು ಕಾಣಿಸಿಕೊಳ್ಳಬೇಕು ಎಂದೇನೂ ಇಲ್ಲ. ದವಡೆ, ಕತ್ತು, ಗಂಟಲು, ಹೊಟ್ಟೆಯ ಮೇಲ್ಭಾಗ, ಭುಜಗಳಲ್ಲೂ ನೋವು ಕಾಣಿಸಿಕೊಳ್ಳಬಹುದು. ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ಹೊತ್ತಿನಲ್ಲೂ ವಿನಾ ಕಾರಣ ಧಾರಾಕಾರವಾಗಿ ಬೆವರಬಹುದು. ಉಸಿರಾಡಲು ಕಷ್ಟವಾಗಬಹುದು. ತಲೆ ಸುತ್ತಬಹುದು. ತೋಳುಗಳಲ್ಲಿ ಊತ, ಅಸ್ಪಷ್ಟ ಮಾತು ಮುಂತಾದ ಸಮಸ್ಯೆ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಂಡರೆ ಜೀವ ಉಳಿಯುತ್ತದೆ.
ಪರಿಹಾರ ಏನು?
ಪೌಷ್ಟಿಕ ಆಹಾರ, ಹಣ್ಣು, ತರಕಾರಿ ಮತ್ತು ಮೀನಿನ ಮಾಂಸ ಸೇವನೆ, ಧೂಮಪಾನ, ಮದ್ಯಪಾನ ತ್ಯಜಿಸುವುದು, ಐಷಾರಾಮಿ ಹಾಗೂ ಜಡ ಜೀವನ ಶೈಲಿಗೆ ಕಡಿವಾಣ ಹಾಕಿದರೆ ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ. ನಿಯಮಿತ ವ್ಯಾಯಾಮ, ದೈಹಿಕ ಕಸರತ್ತು, ವೇಗದ ನಡಿಗೆ, ಸೈಕಲ್ ಸವಾರಿ, ಈಜು, ಸಾಕಷ್ಟು ನಿದ್ರೆ, ಕೋಪ ಶಮನ, ರಕ್ತದ ಒತ್ತಡ ಮತ್ತು ಕೊಬ್ಬಿನಾಂಶ (ಕೊಲೆಸ್ಟ್ರಾಲ್) ನಿರ್ವಹಣೆ, ಸಕ್ಕರೆ ಖಾಯಿಲೆ ಹಾಗೂ ಬೊಜ್ಜು ರಹಿತ ದೇಹ ಕಾಪಾಡಿಕೊಳ್ಳುವ ಸರಳ ಸೂತ್ರಗಳ ಪಾಲನೆಯಿಂದ ಚೈತನ್ಯದಾಯಕ ಹಾಗೂ ಆರೋಗ್ಯದಾಯಕ ಜೀವನ ನಡೆಸಬಹುದು.
***
ಎದೆಗೂಡಿನಲ್ಲಿ ಅವಿತಿದೆ ಹಿಡಿ ಗಾತ್ರದ ಹೃದಯ
ಶ್ವಾಸಕೋಶಗಳ ಮಧ್ಯೆ ಎದೆಗೂಡಿನಲ್ಲಿ ನೆಲೆ ನಿಂತ ಮುಷ್ಟಿಗಾತ್ರದ ಹೃದಯ ಟೊಳ್ಳಾದ ಸ್ನಾಯು ಹಾಗೂ ಮಾಂಸಖಂಡಗಳ ರಚನೆ. ಎಡಕ್ಕೆ ವಾಲಿದ ಲಯಬದ್ಧ ಸಂಕುಚನ ಮತ್ತು ವಿಕಸನಗಳ ಮೂಲಕ ನಿರಂತರವಾಗಿ ರಕ್ತಪರಿಚಲನೆ ಮಾಡುವ ಸ್ವಯಂಚಾಲಿತ ಶಕ್ತಿಶಾಲಿ ಪಂಪ್.
ಮಾನವನ ಹೃದಯವು ಪೆರಿಕಾರ್ಡಿಯಂ ಎಂಬ ಚೀಲದಿಂದ ಆವರಿಸಿದ್ದು, ಜೀವನದ ಕೊನೆಯ ಉಸಿರು ಇರುವರೆಗೂ ಹಗಲು-ರಾತ್ರಿ ಎನ್ನದೇ ದಣಿವರಿಯದ ಸೈನಿಕನಂತೆ ನಿರಂತರವಾಗಿ ‘ಲಬ್ ಡಬ್‘ ಎಂದು ಸದ್ದು ಮಾಡುತ್ತಲೇ ಇರುತ್ತದೆ. ಆರೋಗ್ಯವಂತ ವ್ಯಕ್ತಿಯ ಹೃದಯ ಪ್ರತಿ ನಿಮಿಷಕ್ಕೆ 72 ಬಾರಿ ಬಡಿದುಕೊಂಡರೆ, ಕೆಲಸದ ವೇಳೆ 100ರಿಂದ 120ರವರೆಗೂ ಹೆಚ್ಚಾಗುತ್ತದೆ. ರಾತ್ರಿ ನಿದ್ರಿಸುವಾಗ 60ರಿಂದ 50ಕ್ಕೆ ಕಡಿಮೆಯಾಗುತ್ತದೆ. ಆದರೆ ಹೃದಯ ಬಡಿತ 150-160 ದಾಟಿದಾಗ ಇಲ್ಲವೇ ಇದ್ದಕ್ಕಿದಂತೆ 40ಕ್ಕಿಂತ ಕಡಿಮೆಯಾದರೆ ಅಪಾಯ ಕಾದಿದೆ ಎಂದರ್ಥ.
***
ನಿಮ್ಮ ಹೃದಯ, ನಮ್ಮ ಮಿಡಿತ
ಸೆಪ್ಟೆಂಬರ್ 29 ವಿಶ್ವ ಹೃದಯ ಆರೋಗ್ಯ ದಿನ. ನಿಮ್ಮ ಹೃದಯಕ್ಕಾಗಿ ನಮ್ಮ ಹೃದಯ ಮಿಡಿಯುತ್ತಿದೆ. ಹೃದಯ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ವೈಯ್ಯಾಲಿಕಾವಲ್ ಹಾಗೂ ಸಹಕಾರಿ ನಗರದ ತಥಾಗತ್ ಹಾರ್ಟ್‌ಕೇರ್ ಸೆಂಟರ್, ಮಲ್ಲಿಗೆ ಮೆಡಿಕಲ್ ಸಹಯೋಗದಲ್ಲಿ ಮಂಗಳವಾರ ವಾಕಾಥಾನ್ ಹಾಗೂ ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಂಡಿದೆ. ಮಂಗಳವಾರ ಬೆಳಿಗ್ಗೆ 8.30ಕ್ಕೆ ಗಾಂಧಿನಗರ ಮೌರ್ಯ ಹೋಟೆಲ್ ಗಾಂಧಿ ಪ್ರತಿಮೆಯಿಂದ ಮಲ್ಲೇಶ್ವರದ ಮಂತ್ರಿ ಮಾಲ್‌ವರೆಗೆ ಹಾಗೂ ಸದಾಶಿವನಗರದ ಬಿಗ್ ಬಜಾರ್‌ದಿಂದ ಮಲ್ಲೇಶ್ವರದವರೆಗೆ ‘ಹೃದಯಕ್ಕಾಗಿ ನಡಿಗೆ’ ಆಯೋಜಿಸಿದೆ. ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಚಿವರು, ಮಹಾಪೌರರು, ರೂಪದರ್ಶಿಗಳು, ನಟರು, ಶಾಲಾ ಮಕ್ಕಳು ಸೇರಿದಂತೆ ಅನೇಕರು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ.
ನಗರದ ಹೃದಯ ಬಾಘದಲ್ಲಿರುವ ಮಲ್ಲಿಗೆ ಸೆಂಟರ್‌ನಲ್ಲಿರುವ ತಥಾಗತ್ ನೂರು ಹಾಸಿಗೆಯ ಅತ್ಯಾಧುನಿಕ ಸುಸಜ್ಜಿತ ಕೇಂದ್ರದಲ್ಲಿ ಉಚಿತ ಹೃದಯ ತಪಾಸಣೆ ನಡೆಯಲಿದೆ. ‘ನಿಮ್ಮ ಹೃದಯವನ್ನು ನಮಗೆ ಒಪ್ಪಿಸಿ ನಿಶ್ಚಿಂತೆಯಿಂದ ಇರಿ. ಅದರ ಆರೋಗ್ಯ ರಕ್ಷಣೆ ನಮ್ಮ ಹೊಣೆ’ ಎನ್ನುವುದು ತಥಾಗತ್ ಧ್ಯೇಯ. ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಹೃದಯ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುತ್ತಿರುವ ತಥಾಗತ್ ಆಸ್ಪತ್ರೆ ಇದುವರೆಗೂ ರಾಜ್ಯದ ವಿವಿಧ ಮೂಲೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚು ಉಚಿತ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.
****
ಲೇಖಕರು ಮುಖ್ಯ ವೈದ್ಯಕೀಯ ನಿರ್ದೇಶಕ,
ತಥಾಗತ್ ಹೃದಯ ತಪಾಸಣಾ ಕೇಂದ್ರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.