ADVERTISEMENT

‘ಲಕ್ಷ್ಮಣ ರೇಖೆ’ಯಲ್ಲಿ ಹಂಪಿ ಪರಂಪರೆ

ಕಲಾಪ

ನವೀನ್‌ ಕುಮಾರ್‌ ಎ.ಎಂ
Published 29 ಸೆಪ್ಟೆಂಬರ್ 2015, 19:30 IST
Last Updated 29 ಸೆಪ್ಟೆಂಬರ್ 2015, 19:30 IST
‘ಲಕ್ಷ್ಮಣ ರೇಖೆ’ಯಲ್ಲಿ ಹಂಪಿ ಪರಂಪರೆ
‘ಲಕ್ಷ್ಮಣ ರೇಖೆ’ಯಲ್ಲಿ ಹಂಪಿ ಪರಂಪರೆ   

ಹಂಪಿ ಎಂದರೆ ಪ್ರವಾಸಿ ಸ್ಥಳವಷ್ಟೇ ಅಲ್ಲ, ಅದೊಂದು ನಾಗರಿಕತೆಯ ಭವ್ಯ ಪರಂಪರೆ ಹಾಗೂ ಸಾಂಸ್ಕೃತಿಕ ಪ್ರತೀಕವೂ ಹೌದು. ಹಂಪಿಯ ಸಾಂಸ್ಕೃತಿಕ ಇತಿಹಾಸ ಮುಗಿದ ಕತೆಯಾದರೂ, ಅಲ್ಲಿನ ಪ್ರತಿಯೊಂದು ಭಗ್ನಾವಶೇಷವೂ  ಒಂದೊಂದು ಕತೆಯನ್ನು ತೆರೆದಿಡುತ್ತದೆ.

ಮುತ್ತು–ರತ್ನಗಳನ್ನು ಸೇರಿನಲ್ಲಿ ಅಳೆದ ಬೀದಿ, ತುಲಾಭಾರ ಮಂಟಪಗಳ ಮುಂಭಾಗ, ಹಂಪಿಯ ಮಹಾದ್ವಾರ, ವಿಜಯನಗರ ಕಾಲದ ಅತಿಥಿ ಗೃಹ ಕಮಲ್ ಮಹಲ್, ಕಾವಲು ಗೋಪುರಗಳು, ಸೂರ್ಯಾಸ್ತ ಹಾಗೂ ವಿರೂಪಾಕ್ಷ ದೇಗುಲಗಳನ್ನು ಒಂದೇ ಸ್ಥಳದಲ್ಲಿ  ನಿಂತು ನೋಡುವ ಹೇಮಕೂಟದ ರಮಣೀಯವಾದ, ಸುಂದರ ಕಪ್ಪು ಬಿಳುಪಿನ ಜಲವರ್ಣ ಚಿತ್ರಗಳು ಕಣ್ತುಂಬಿಕೊಳ್ಳಲು ಸಿಕ್ಕಿದ್ದು ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಗ್ಯಾಲರಿ- 2ರಲ್ಲಿ.

‘ನನ್ನ ಜೀವನದ ನೆರಳುಗಳು’ ಎಂಬ ಹೆಸರಿನಲ್ಲಿ ಲಕ್ಷ್ಮಣ ಎ. ಗಾಣಿಗೇರ ಅವರ 21 ಜಲವರ್ಣ ಚಿತ್ರಗಳ ಕಲಾ ಪ್ರದರ್ಶನವನ್ನು ಸೆ.28ರಿಂದ ಸೆ.30ರವರೆಗೆ ಏರ್ಪಡಿಸಿದ್ದಾರೆ.

ಕಲಾ ಕುಟುಂಬದ ಹಿನ್ನೆಲೆಯಿಂದ ಬಂದ ಲಕ್ಷ್ಮಣ್ ಎ. ಗಾಣಿಗೇರ ಅತೀವ ಕಲಾಪ್ರೀತಿ ಇಟ್ಟುಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಕಲೆಯಲ್ಲಿ ಆಸಕ್ತಿ ಇರುವುದನ್ನು ಕಂಡ ಪೋಷಕರು ಅದನ್ನು ಪ್ರೋತ್ಸಾಹಿಸಿ ನೀರೆದರು.  ಆದ್ದರಿಂದಲೇ ಹದಿನೆಂಟನೇ ವಯಸ್ಸಿಗೇ ಅವರ ಚಿತ್ರಗಳು ಗ್ಯಾಲರಿಗಳಲ್ಲಿ ಪ್ರದರ್ಶನಗೊಳ್ಳುವ ಮಟ್ಟ ತಲುಪಿವೆ.

ಹಂಪಿಯ ಚಿತ್ರಗಳನ್ನು ಸ್ಥಳದಲ್ಲಿಯೇ ನಿಂತು ಅವರು ಚಿತ್ರಿಸಿರುವುದು ವಿಶೇಷ. ಹಂಪಿಯ ಮಹಾದ್ವಾರದ ಚಿತ್ರವನ್ನು ವಿವಿಧ ಆಯಾಮಗಳಲ್ಲಿ ಗ್ರಹಿಸಿ ಚಿತ್ರಿಸಿರುವ ತಂತ್ರಗಾರಿಕೆ ನಿಜಕ್ಕೂ ನುರಿತ ಕಲಾವಿದನಂತೆ ಭಾಸವಾಗುವಂತಿದೆ. ಇನ್ನು ಹಂಪಿ ಕಲ್ಲಿನ ರಥದ ಪಕ್ಕದಲ್ಲಿರುವ ಹನುಮಂತರಾಯನ ಪುಟ್ಟ ಗುಡಿಯನ್ನು ಕೇಂದ್ರೀಕರಿಸಿ ಹಿಂಭಾಗದ ದೇವಾಲಯದ ಚಿತ್ರವನ್ನು ಮಬ್ಬಾಗಿ ಬರೆದಿರುವುದು ಕುತೂಹಲ ಮೂಡಿಸುವಂತಿದೆ.

ಹೇಮಕೂಟ, ಕಾವಲು ಗೋಪುರಗಳು ಹಾಗೂ ಸ್ತಂಭವೊಂದರ ಬುಡದಲ್ಲಿನ ಶಿಲ್ಪಕಲೆಯನ್ನೇ ಆಧರಿಸಿದ ಚಿತ್ರವಂತೂ ಅವರಲ್ಲಿನ ಕಲಾನೈಪುಣ್ಯಕ್ಕೆ  ಹಿಡಿದ ಕನ್ನಡಿಯಾಗಿದೆ. ಇನ್ನು ಅಕ್ಕಪಕ್ಕದ ಮಂಟಪಗಳನ್ನು ಬೃಹತ್ ಶಿಲೆಗಳ ವಿವಿಧ ಆಯಾಮಗಳಲ್ಲಿ ಚಿತ್ರಿಸಿದ್ದಾರೆ.  ಕಮಲ ಮಹಲ್‌ನ ಒಂದೇ ಬಣ್ಣದ ಚಿತ್ರವೂ ನೋಡುಗರ ಮನಸೆಳೆಯುತ್ತದೆ.

ಬಹುಮುಖ ಪ್ರತಿಭೆ
ಲಕ್ಷ್ಮಣ್ ಎ. ಗಾಣಿಗೇರ ಎನ್.ಸಿ.ಸಿ.ಯಲ್ಲಿ ರಾಜ್ಯಮಟ್ಟದ ಕ್ಯಾಂಪ್‌ಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ರಾಷ್ಟ್ರ ಮಟ್ಟದಲ್ಲಿ 2011ರಲ್ಲಿ ದೆಹಲಿಯ ಥಲ್ ಸೈನಿಕ್ ಕ್ಯಾಂಪ್‌ನಲ್ಲಿ ಫೈರಿಂಗ್‌ನಲ್ಲಿ ಜೂನಿಯರ್ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ಎನ್.ಸಿ.ಸಿ. ಅಭ್ಯರ್ಥಿಯಾಗಿದ್ದು, ‘ಡ್ರಿಲ್ ಟು ಥ್ರಿಲ್’ ಎಂಬ ರೈಫಲ್ ಕಸರತ್ತನ್ನು ಪ್ರದರ್ಶಿಸಿರುವ ತಂಡದಲ್ಲಿದ್ದಾರೆ. ಅಲ್ಲದೆ ಈ ಜನವರಿ 26 ಗಣರಾಜ್ಯೋತ್ಸವದಲ್ಲಿ  ಈ ರೈಫಲ್ ಕಸರತ್ತನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಪ್ರದರ್ಶಿಸಲು ಇವರಿಗೆ ಅವಕಾಶ ಲಭಿಸಿತ್ತು.

ಚಿತ್ರಕಲೆಯನ್ನೇ ಜೀವನದ ಹಾದಿ ಮಾಡಿಕೊಳ್ಳಬೇಕೆಂದಿರುವ ಲಕ್ಷ್ಮಣ್‌ಗೆ  ಹಂದಿನೆಂಟನೇ ವಯಸ್ಸಿಗಾಗಲೇ ಹಲವಾರು ಜಿಲ್ಲಾ, ರಾಜ್ಯ ಮಟ್ಟದ  ಪ್ರಶಸ್ತಿ ಪುರಸ್ಕಾರಗಳು ಸಂದವು. 2011ರಲ್ಲಿ ರಾಜ್ಯ ಸರ್ಕಾರದ ಅಸಾಧಾರಣ ಪ್ರತಿಭಾ ಪುರಸ್ಕಾರವನ್ನು ಅಂದಿನ ರಾಜ್ಯಪಾಲ ಎಚ್.ಆರ್ ಭಾರದ್ವಾಜ್ ಅವರಿಂದ ಪಡೆದರು.

2014ರಲ್ಲಿ  ಇವರ ಕಲಾ ಸಾಧನೆಯನ್ನು ಗುರ್ತಿಸಿ ದೊಡ್ಡಬಳ್ಳಾಪುರದ ಕಲಾತಪಸ್ವಿ ರುಮಾಲೆ ಚೆನ್ನಬಸಪ್ಪ ಪ್ರತಿಷ್ಠಾನ ಗೌರವ ಪುರಸ್ಕಾರ ನೀಡಿ ಇವರ ಕಲಾಕೃತಿಗಳನ್ನು ರುಮಾಲೆ ಕಲಾ ಗ್ಯಾಲರಿಯಲ್ಲಿ ಸಂಗ್ರಹಿಸಿ ಇಟ್ಟಿತು. ಇವರು ರಚಿಸಿರುವ ಹಂಪಿಯ 21 ಚಿತ್ರಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಗ್ಯಾಲರಿ– 2ರಲ್ಲಿ ‘ನನ್ನ ಜೀವನದ ನೆರಳುಗಳು’ ಶೀರ್ಷಿಕೆಯಡಿ ಸೆ.28 ರಿಂದ ಸೆ.30 ರವರೆಗೆ ಪ್ರದರ್ಶನಕ್ಕೆ ಇಡಲಾಗಿದೆ. ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ಲಭ್ಯ. ಆಸಕ್ತರು ಚಿತ್ರಗಳನ್ನು ಕೊಂಡುಕೊಳ್ಳಬಹುದಾಗಿದೆ.

ಸಂಪರ್ಕಕ್ಕೆ: 9886508746, 7828484036.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.