‘ಹುತ್ತವ ಬಡಿದರೆ’ ಹವ್ಯಾಸಿ ರಂಗಭೂಮಿಗೆ ತಿರುವು ತಂದ ನಾಟಕ. ಬೆಂಗಳೂರಿನಲ್ಲಿ ಈ ನಾಟಕದ ಪ್ರದರ್ಶನದೊಂದಿಗೆ ಸಮುದಾಯ ರಂಗ ತಂಡ 1975ರಲ್ಲಿ ಅಸ್ತಿತ್ವಕ್ಕೆ ಬಂದಿತು. ರಾಜ್ಯದ ಹಲವು ಕಡೆ ತನ್ನ ಶಾಖೆಗಳನ್ನು ಆರಂಭಿಸಿ ವೈಚಾರಿಕ ನಾಟಕಗಳ ಆಂದೋಲನವನ್ನೇ ಶುರುಮಾಡಿತು. ಕೆ.ವಿ.ನಾರಾಯಣ ರಚಿಸಿದ ‘ಹುತ್ತವ ಬಡಿದರೆ’ ನಾಟಕ ನಂತರ ರಾಜ್ಯದ ಮತ್ತಷ್ಟು ಸಮುದಾಯದ ಶಾಖೆಗಳಲ್ಲಿ ಪ್ರಯೋಗ ಕಂಡಿತು.
ಕ್ಲಾಸಿಕ್ ಎನ್ನಬಹುದಾದ ಈ ನಾಟಕವನ್ನು ಮತ್ತೆ ಪ್ರಯೋಗಕ್ಕೆ ತೆಗೆದುಕೊಂಡು ಯಶಸ್ವಿಗೊಳಿಸಿದವರು- ಸಮುದಾಯಕ್ಕಿಂತ ಮುಂಚೆಯೇ ಅಂದರೆ 1960ರ ದಶಕದಿಂದ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯ ನಿರ್ದೇಶಕ ಎಲ್.ಕೃಷ್ಣಪ್ಪನವರು. ಸರ್ಕಾರಿ ಕಲಾ ಕಾಲೇಜು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಎಡಿಎ ರಂಗಮಂದಿರದಲ್ಲಿ ಈ ನಾಟಕ ಪ್ರದರ್ಶಿಸಿದರು.
ಮೈಸೂರು ಅರಸರ ಕುರಿತ ಸಂಸರ ‘ವಿಗಡ ವಿಕ್ರಮರಾಯ’ ನಾಟಕವನ್ನು ಆಧರಿಸಿ ರಚಿಸಿರುವ ಈ ನಾಟಕದಲ್ಲಿ ಇತಿಹಾಸವನ್ನು ಸಾಮಾನ್ಯರ (ಸೈನಿಕರ) ದೃಷ್ಟಿಯಿಂದ ಗ್ರಹಿಸುವ ಪ್ರಯತ್ನವಿದೆ. ರಾಜ ಮಹಾರಾಜರ ಶೌರ್ಯ, ಸಾಹಸಗಳನ್ನು ಬಣ್ಣಿಸುವುದೇ ಐತಿಹಾಸಿಕ ನಾಟಕ ಎಂದು ಕರೆದಿದ್ದೇವೆ. ಈಗಲೂ ಅದೇ ಪರಿಪಾಠ ಹಲವು ನಾಟಕಕಾರರಲ್ಲಿದೆ.
ಮೈಸೂರು ಅರಸರ ಕುರಿತು ಅತಿ ಹೆಚ್ಚು ನಾಟಕಗಳನ್ನು ಬರೆದ ನಾಟಕಕಾರ ಸಂಸ ಅವರು, ಶೌರ್ಯ, ಸಾಹಸಗಳ ಜತೆಗೆ ಅರಮನೆ ಒಳಗಿನ ಸಂಚು, ಪ್ರತಿಸಂಚು ಸೇರಿದಂತೆ ಸೂಕ್ಷ್ಮ ವಿವರಗಳ ಸಂಕೀರ್ಣ ಕೃತಿಗಳನ್ನು ರಚಿಸಿದ್ದಾರೆ. ಅವರ ವಿಗಡ ವಿಕ್ರಮರಾಯ ಆಧರಿಸಿದ ಈ ‘ಹುತ್ತವ ಬಡಿದರೆ’ ಕಲಾಕೃತಿಯಲ್ಲಿ ದುಷ್ಟ ರಾಜನನ್ನು ಕೊಂದರೆ ರಾಮರಾಜ್ಯ ಸ್ಥಾಪನೆಯಾಗುವುದಿಲ್ಲ. ಬದಲಿಗೆ ರಾಜ ವ್ಯವಸ್ಥೆಯನ್ನೇ ಬದಲಿಸಬೇಕು ಎಂಬ ಧ್ವನಿ ಇದೆ.
ಏನೂ ಅರಿಯದ ಹದಿ ಹರೆಯದ ರಾಜ ಒಡೆಯನನ್ನು ದಾಳವಾಗಿ ಆಡಿಸುತ್ತ ದಳವಾಯಿ ವಿಕ್ರಮರಾಯ ಇಡೀ ಮೈಸೂರು ರಾಜ್ಯದ ಸೂತ್ರವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತಾನೆ. ವೈದ್ಯರಿಂದ ಚಿಕಿತ್ಸೆ ಕೊಡಿಸುವ ನೆಪದಲ್ಲಿ ರಾಜ ಒಡೆಯನಿಗೆ ವಿಷಪ್ರಾಸನ ಮಾಡಿಸುತ್ತಾನೆ. ರಾಜ ವಂಶದ ಕಂಠೀರವ ನರಸರಾಜನಿಗೆ ಪಟ್ಟ ಕಟ್ಟುವುದಾಗಿ ಓಲೆಯನ್ನು ಕಳಿಸಿ, ಕರೆಯಿಸಿಕೊಂಡು ಗೃಹಬಂಧನದಲ್ಲಿ ಇಡುತ್ತಾನೆ.
ಈ ಸಂಚನ್ನು ಅರಿತುಕೊಂಡ ರಾಜ ಒಡೆಯನ ಮಾತೆ ತಿಮ್ಮಾಜಮ್ಮಣ್ಣಿಯು ರಣಧೀರನ ಗೆಳೆಯರಾದ ಸಕ್ಕ ಮತ್ತು ನಿರೀಶರನ್ನು ಮಾರುವೇಷದಲ್ಲಿ ಮೈಸೂರಿಗೆ ಕರೆಯಿಸಿಕೊಂಡು ಜನರು ದಂಗೆ ಏಳುವಂತೆ ಪ್ರೇರೇಪಿಸುತ್ತಾರೆ. ಮೈಸೂರು ಅರಸು ಮನೆತನಕ್ಕೆ ನಿಷ್ಠರಾದ ಚನ್ನ ಮತ್ತು ರಂಗ ಎಂಬ ಸೈನಿಕರು ದುಷ್ಟನಾದ ದಳವಾಯಿ ವಿಕ್ರಮರಾಯನ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿರುವುದನ್ನು ಅರಿತುಕೊಳ್ಳುತ್ತಾರೆ. ರಾಜ್ಯಕ್ಕೆ ಬಂದೊದಗಿದ ವಿಪತ್ತಿಗೆ ದಳವಾಯಿ ವಿಕ್ರಮರಾಯನ ಕೊಲೆಯೊಂದೇ ಪರಿಹಾರ ಎಂದು ಗ್ರಹಿಸಿದ ಅವರು ದಳವಾಯಿಯನ್ನು ಕೊಲೆ ಮಾಡುತ್ತಾರೆ.
ರಣಧೀರ ಕಂಠೀರವನ ನೇತೃತ್ವದಲ್ಲಿ ಇನ್ನೇನು ಸುಖೀರಾಜ್ಯ ಸ್ಥಾಪನೆಯಾಗಲಿದೆ ಎಂಬ ಸಂತಸದಲ್ಲಿದ್ದ ಚನ್ನ, ರಂಗರಿಗೆ ದಳವಾಯಿಯನ್ನು ಕೊಂದ ಆರೋಪದ ಮೇಲೆ ಮರಣ ದಂಡನೆ ಶಿಕ್ಷೆ ಆಗುತ್ತದೆ! ದುಷ್ಟ ರಾಜರನ್ನು ಕೊಲ್ಲುವುದು ಪರಿಹಾರವಲ್ಲ, ಜನಸಾಮಾನ್ಯರ (ಪ್ರಜಾಪ್ರಭುತ್ವ) ಆಡಳಿತವೊಂದೇ ಇದಕ್ಕೆ ಪರಿಹಾರ ಎಂಬುದನ್ನು ನಾಟಕ ಪರೋಕ್ಷವಾಗಿ ಧ್ವನಿಸುತ್ತದೆ. ಇತಿಹಾಸದ ಘಟನೆಗಳಿಗೆ ನಿಷ್ಠರಾಗಿಯೂ ಹೇಗೆ ಒಂದು ಕೃತಿ ಜನಪರವಾಗಬಲ್ಲದು ಎಂಬುದಕ್ಕೆ ಇದು ಮಾದರಿಯಾಯಿತು. ‘ಟ್ರೆಂಡ್ ಸೆಟರ್’ ಆಗಿ ಈ ಕೃತಿಗೆ ಮಹತ್ವ ಇದೆ.
ಅರಮನೆಗಳ ಒಳಗಿನ ಸಂಚು, ಒಳಸಂಚು; ಊಳಿಗದವರ, ನೃತ್ಯಗಾತಿಯರ ಅತಂತ್ರ ಸ್ಥಿತಿ; ಗರಡಿ ಮನೆ, ಕತ್ತಿವರಸೆ; ದುಷ್ಟ ದಳವಾಯಿಯನ್ನು ಅಧಿಕಾರದಿಂದ ದೂರ ಇಡಲು ನಡೆಯುವ ಪ್ರತಿತಂತ್ರ ಹೀಗೆ ಸಮೃದ್ಧ ವಿವರಗಳಿಂದ ಸಂಸರ ಐತಿಹಾಸಿಕ ನಾಟಕಗಳ ಸಾಂದ್ರತೆಯನ್ನು ನೆನಪಿಸುತ್ತಲೇ ಹೊಸದೊಂದು ದೃಷ್ಟಿಕೋನವನ್ನು ನಾಟಕ ಸ್ಥಾಪಿಸುತ್ತದೆ. ಸನ್ನಿವೇಶಗಳಿಗೆ ಪೂರಕವಾದ ಹಾಡುಗಳನ್ನು ರಚಿಸಿದವರು ಹಿರಿಯ ಸಾಹಿತಿ ಸಿ.ವೀರಣ್ಣ. ‘ಮೈಸೂರು ರಾಜ್ಯದ ದೊರೆಯೆ... ರಣಧೀರ ನಾಯಕ, ನಿನ್ನಂತಾರಾರೂ ಇಲ್ಲಲ್ಲೋ ಲೋಕಾದ ಮೇಲೆ...’ ಮುಂತಾದ ಈ ನಾಟಕದ ಹತ್ತಾರು ಹಾಡುಗಳು ನಂತರದ ದಶಕಗಳಲ್ಲಿ ಜನ್ನಿಯ ಧ್ವನಿಯಲ್ಲಿ ಜನಜನಿತವಾದವು.
ಎಪ್ಪತ್ತು ವಯಸ್ಸಿನ ಕೃಷ್ಣಪ್ಪನವರು ಇಪ್ಪತ್ತಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದ ಹುಡುಗರನ್ನು ಹದ್ದುಬಸ್ತಿನಲ್ಲಿಡಲು ತುಂಬಾ ಶ್ರಮ ವಹಿಸಿದಂತೆ ಕಂಡಿತು. ಕೆಲವರು ನಿರೀಕ್ಷಿತ ಮಟ್ಟಕ್ಕೆ ಬಂದರು, ಮತ್ತೆ ಕೆಲವರು ಆ ಹಾದಿಯಲ್ಲಿದ್ದಾರೆ. ದಳವಾಯಿ ವಿಕ್ರಮರಾಯನ ಮನಸ್ಥಿತಿಯನ್ನು ಅರ್ಥಮಾಡಿಕೊಂಡಂತೆ ಓಂಕಾರೇಶ್ ಹಿತಮಿತವಾಗಿ ಔಚಿತ್ಯಪೂರ್ಣವಾಗಿ ಅಭಿನಯಿಸಿದರು. ರಾಜ ಒಡೆಯನ ಪಾತ್ರಕ್ಕೆ ಸಂಜಯಕುಮಾರ್, ತಿಮ್ಮಾಜಮ್ಮಣ್ಣಿ ಪಾತ್ರಕ್ಕೆ ಅಂಜುಲ ಕೋಟಿಗಾನಹಳ್ಳಿ ಸೂಕ್ತವಾಗಿ ಒಪ್ಪಿದ್ದರು. ನಾಟಕದ ಪ್ರಮುಖ ಪಾತ್ರಗಳಾದ ಸೈನಿಕ ಚನ್ನನಾಗಿ ಜೆ.ಎಂ.ರಂಗೇಗೌಡ, ಸೈನಿಕ ರಂಗನಾಗಿ ಎಚ್.ಎಂ.ಮಂಜುನಾಥ ತಮ್ಮ ಲವಲವಿಕೆಯ ಅಭಿನಯದಿಂದ ಪ್ರೇಕ್ಷಕರ ಮನಗೆದ್ದರು.
ಐತಿಹಾಸಿಕ ಪಾತ್ರಗಳಿಗೆ ಪಾರಂಪರಿಕವಾಗಿ ಬೇಡುವ ದೇಹದಾರ್ಢ್ಯ ಇಲ್ಲದಿದ್ದರೂ ನರಸರಾಜನಾಗಿ ಧನಂಜಯ, ಬೊಮ್ಮರಸ ಪಂಡಿತ- ಅವಿನಾಶ್ ಮಂಡ್ಯ, ಶ್ರೀನಿವಾಸ ಶೆಟ್ಟಿ-ಶಂಕರ್, ಸೋಮಯಾಜಿ- ಶ್ರೀಧರ್, ಕೃಷ್ಣರಾಯ- ಮಂಜು, ತುಂಗರಾಯ-ಮೋಹನ್ ಕುಮಾರ್, ಗೌಡ- ನವೀನ್, ಚೆನ್ನಾಸಾನಿ-ಮಮತ, ಮಾರನಾಯಕ- ಸುರೇಂದ್ರ, ಸಕ್ಕ-ಹನುಮಂತರಾಜು, ನಿರೀಶ- ಸಚಿನ್, ಇತರ ಪಾತ್ರಗಳಲ್ಲಿ ಸೌಮ್ಯ, ವರುಣಾಶ್ರೀ, ಭವ್ಯ, ಭಾರತಿ, ತೇಜಸ್ವಿನಿ ನಾಯಕ್, ಪುನೀತ್, ತೇಜ, ಹರ್ಷ, ಪಾರ್ಥ, ಲಕ್ಷ್ಮಣ್, ಹೊನ್ನೇಶ್ ತಮ್ಮ ಶಕ್ಯ್ತಾನುಸಾರ ಮಾಡಿದರು. ಪರಿಶ್ರಮ ಹಾಕಿದರೆ ಪಾತ್ರಗಳನ್ನು ಮತ್ತಷ್ಟು ಕಳೆಗಟ್ಟಿಸಲು ಸಾಧ್ಯವಿದೆ.
ಹಿರಿಯ ನಿರ್ದೇಶಕ ಮಾಲತೇಶ ಬಡಿಗೇರರ ಪ್ರಸಾಧನ, ಛಾಯಾ ಭಾರ್ಗವಿ ಅವರ ವಸ್ತ್ರವಿನ್ಯಾಸ ಸೂಕ್ತವಾಗಿದ್ದವು. ಡೋಲಕ್, ನಗಾರಿ, ದಮ್ಮಡಿ ಬಳಸಿ ಸಂಗೀತ ನೀಡಿದ ಡಿಂಗ್ರಿ ನರೇಶ್ ಅವರಲ್ಲಿ ಹೊಸತನ ಇದೆ. ಆದರೆ ಮಧ್ಯೆ ಗ್ಯಾಪ್ ತಪ್ಪಿಸಲು ನುಡಿವಾದ್ಯಗಳಾದ ಹಾರ್ಮೋನಿಯಂ, ಕೊಳಲು, ಕೀಬೋರ್ಡ್ ಮತ್ತು ಆಲಾಪ ಬಳಸಿದರೆ ಮತ್ತಷ್ಟು ಪರಿಣಾಮಕಾರಿಯಾಗಬಹುದು. ಮೈಸೂರು ಅರಸರ ಲಾಂಛನ ಗಂಡಭೇರುಂಡದ ಒಳಗಿನ ಕೇಂದ್ರ ಬಿಂದುವಿನಲ್ಲಿ ಅಧಿಕಾರ ದಾಹದ ಸಿಂಹಾಸನವಿರಿಸಿ ಅದರ ಮೇಲೆ ಬೆಳಕು ಬೀರಿದ ಹಾಗೂ ಒಟ್ಟಾರೆ ರಂಗವಿನ್ಯಾಸ ನಿರ್ದೇಶಕರ ಪರಿಣತಿಗೆ ಸಾಕ್ಷಿಯಾಗಿತ್ತು.
ದೆಹಲಿಯಲ್ಲಿ ಬೀಡುಬಿಟ್ಟಿದ್ದ ಬಿ.ವಿ.ಕಾರಂತರನ್ನು ಲಂಕೇಶ್ ಅವರ ಒತ್ತಾಸೆಯಂತೆ ಬೆಂಗಳೂರಿಗೆ ಕರೆತಂದವರಲ್ಲಿ ಆರ್.ನಾಗೇಶ್ ಮತ್ತು ಎಲ್.ಕೃಷ್ಣಪ್ಪ ಪ್ರಮುಖರು. ಲಂಕೇಶ್ ಅವರೊಂದಿಗೆ ಪ್ರತಿಮಾ ರಂಗ ಸಂಶೋಧನಾ ಪ್ರತಿಷ್ಠಾನ ಶುರುಮಾಡಿದ ಕೃಷ್ಣಪ್ಪನವರ ರಂಗಬದ್ಧತೆ ಈ ಇಳಿ (ಪ್ರಬುದ್ಧ) ವಯಸ್ಸಿನಲ್ಲೂ ಮೆಚ್ಚತಕ್ಕ ಅಂಶ. ಈ ಮಧ್ಯೆ ‘ಈ ಮಾಸ ನಾಟಕ’ ಪತ್ರಿಕೆಯನ್ನು ನಿರಂತರವಾಗಿ ಹೊರತರುವ ‘ಥ್ಯಾಂಕ್‌ಲೆಸ್ ಜಾಬ್’ನಲ್ಲಿ ತೊಡಗಿಕೊಂಡೂ ನಾಟಕ ನಿರ್ದೇಶನವನ್ನು ಅವರು ಕೈಬಿಟ್ಟಿಲ್ಲ. ಆ ಕಾಲ- ಈ ಕಾಲಕ್ಕೆ ಕೊಂಡಿಯಂತಿದ್ದಾರೆ.
ಹುಡುಗರಿಗೆ ಬಣ್ಣ ಹಚ್ಚಿ ರಂಗದ ಮೇಲೆ ಬಿಟ್ಟರೆ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ, ಕಾಲೇಜು ರಂಗಭೂಮಿ ಬೆಳೆಯುತ್ತದೆ ಎಂಬುದನ್ನು ಅರಿತಂತೆ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ವೆಂಕಟಶಾಮಿ ರೆಡ್ಡಿ, ಉಪನ್ಯಾಸಕ ರುದ್ರೇಶ್ ಅದರಂಗಿ ಹಾಗೂ ಅದೇ ಕಾಲೇಜಿನ ಉಪನ್ಯಾಸಕರು ಮತ್ತು ನಾಟಕಕಾರರಾದ ಕೆ.ವೈ.ನಾರಾಯಣಸ್ವಾಮಿ ಹುಡುಗರ ಬೆನ್ನಿಗೆ ನಿಂತರು. ಇದರ ಫಲವಾಗಿ ಕೃಷ್ಣಪ್ಪ ಪ್ರತಿಮಾದಿಂದ ಒಂದು ಪ್ರಬುದ್ಧ ನಾಟಕ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.