ಬೆಂಗಳೂರಿನ ಪ್ರತಿಷ್ಠಿತ ರಾಮೋತ್ಸವ ಮಂಡಳಿಗಳಲ್ಲಿ ಶ್ರೀಶೇಷಾದ್ರಿಪುರ ರಾಮಸೇವಾ ಸಮಿತಿಯು ಮುಂಚೂಣಿಯಲ್ಲಿದೆ. 1948ರಲ್ಲಿ ಶೇಷಾದ್ರಿಪುರ ಮುಖ್ಯ ರಸ್ತೆಯ ಸ್ವಸ್ತಿಕ್ ಸರ್ಕಲ್‍ನಲ್ಲಿರುವ ರಾಮ ಮಂದಿರದ ಮುಂಭಾಗದಲ್ಲಿ ಪುಟ್ಟ ಪ್ರಮಾಣದಲ್ಲಿ ಪ್ರಾರಂಭವಾದ ರಾಮೋತ್ಸವ ಕಾರ್ಯಕ್ರಮಗಳು, ಕ್ರಮೇಣ ಬೆಳೆದು ಶೇಷಾದ್ರಿಪುರ ಪ್ರೌಢಶಾಲೆಯ ಆವರಣಕ್ಕೆ ಸ್ಥಳಾಂತರವಾಯಿತು. ಕಳೆದ ಅನೇಕ ದಶಕಗಳಿಂದ ಶೇಷಾದ್ರಿಪುರಂ ಎಜುಕೇಷನಲ್ ಟ್ರಸ್ಟ್‌ನ ನೆರವಿನಲ್ಲಿ ಇಲ್ಲಿ ರಾಮೋತ್ಸವ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.
ಸಮಿತಿಯ ಬೆಳವಣಿಗೆಯಲ್ಲಿ ಸಿ.ಡಿ. ಗೋಪಾಲ ಅಯ್ಯಂಗಾರ್, ಶ್ರೀಪಾದಾಚಾರ್, ವಿ. ಕೃಷ್ಣಮೂರ್ತಿ, ನರಸಿಂಹಮೂರ್ತಿ, ಲಕ್ಷ್ಮೀನಾರಾಯಣ ಜೋಯಿಸ್, ರಾಮದಾಸ್ ಮುಂತಾದವರ ಸೇವೆ ಸ್ಮರಣೀಯ. ಈಗ, ನಿವೃತ್ತ ನ್ಯಾಯಾಧೀಶ ಎಸ್. ವೆಂಕಟರಾಘವನ್ ಮಂಡಳಿಯ ಅಧ್ಯಕ್ಷರು. ವೂಡೆ ಪಿ. ಕೃಷ್ಣ, ವಿ. ತಾರಕರಾಂ ಹಾಗೂ ರೇವತಿ ತಾರಕರಾಂ ಅವರನ್ನು ಒಳಗೊಂಡ ಕಾರ್ಯನಿರ್ವಾಹಕ ಮಂಡಳಿ ಇತ್ತೀಚಿನ ವರ್ಷಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತಿದೆ. ಶೇಷಾದ್ರಿಪುರ ಕಾಲೇಜಿನ ರಾಷ್ಟ್ರಕವಿ ಕುವೆಂಪು ಕಲಾಮಂದಿರದ ವಿಶಾಲ ವೇದಿಕೆಯ ಮೇಲೆ ಕಛೇರಿಗಳು ನಡೆಯುತ್ತವೆ.
ಮಾರ್ಚ್ 25ರಂದು ಪ್ರಾರಂಭವಾದ ಈ ವರ್ಷದ ರಾಮೋತ್ಸವಕ್ಕೆ 70ನೇ ವರ್ಷದ ಸಡಗರ! 22 ದಿನಗಳ ರಾಮೋತ್ಸವದಲ್ಲಿ ಗಾಯನ ಕಾರ್ಯಕ್ರಮಗಳಿಗೇ ಆದ್ಯತೆಯಾದರೂ, ವೀಣೆ, ಕೊಳಲು, ತನಿ ಪಿಟೀಲು, ತಾಳವಾದ್ಯ, 'ತಾಳ ತರಂಗ'ಗಳಲ್ಲದೆ ಹರಿಕಥೆ, ಗಮಕಗಳೂ ಸೇರಿ, ವೈವಿಧ್ಯಮಯ ಕಾರ್ಯಕ್ರಮಗಳು ನಡೆದಿವೆ. ಹಿರಿಯ, ಜನಪ್ರಿಯ ಕಲಾವಿದರಲ್ಲದೆ ಉದಯೋನ್ಮುಖ ಕಲಾವಿದರಿಗಾಗಿ ಒಂದು ಸರಣಿಯನ್ನೇ ಏರ್ಪಡಿಸಿ, ಸುಮಾರು 75 ಮಂದಿ ಉದಯೋನ್ಮುಖ ಕಲಾವಿದರಿಗೆ ವೇದಿಕೆ ಒದಗಿಸಿದೆ.
ಏಪ್ರಿಲ್ 15ರ ಭಾನುವಾರ ಶ್ರೀರಾಮ ಪಟ್ಟಾಭಿಷೇಕವನ್ನು ಲಕ್ಷಾರ್ಚನೆಯೊಂದಿಗೆ ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಬೆಳಗ್ಗೆ ಹಿರಿಯ ವಿದುಷಿ ಗಂಗಮ್ಮ ಕೇಶವಮೂರ್ತಿ ಅವರ ಗಮಕ ವಾಚನ ನಡೆಯುವುದು ಇನ್ನೊಂದು ವಿಶೇಷ.
ಅಂದು ಸಂಜೆ ಕನಕಗಿರಿ ಹುಸೇನ್ ಸಾಹೇಬರ ದೇವರನಾಮಗಳ ಗಾಯನದೊಂದಿಗೆ, ಶ್ರೀ ಶೇಷಾದ್ರಿಪುರ ರಾಮ ಸೇವಾ ಸಮಿತಿಯ ಈ ವರ್ಷದ ರಾಮನವಮಿ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ.
ರಾಮೋತ್ಸವದಲ್ಲಿ ಇಂದು
ಸಂಜೆ 6 ಗಂಟೆಗೆ ವೀಣಾ ವಾದನ–ಲಕ್ಷ್ಮೀದಾಸ್, ಮೃದಂಗ–ವಾಸುದೇವ್. ಘಟ–ಕೃಷ್ಣಪ್ರಸಾದ್. ರಾತ್ರಿ7.15ಕ್ಕೆ ಪಿಟೀಲು–ಪ್ರೇಮ ವಿವೇಕ್, ಮೃದಂಗ–ವಿನಯ್ ನಾಗರಾಜನ್. ಸ್ಥಳ–ರಾಷ್ಟ್ರಕವಿ ಕುವೆಂಪು ರಂಗಮಂದಿರ, ಶೇಷಾದ್ರಿಪುರ ಕಾಲೇಜಿನ ಆವರಣ, ನಾಗಪ್ಪ ರಸ್ತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.