ಆರ್ಯ ವೈಶ್ಯ ಬಿಸಿನೆಸ್ ನೆಟ್‌ವರ್ಕಿಂಗ್ ಗ್ರೂಪ್(ಬಿಶಿಪ್) ತಮ್ಮ ಸಮುದಾಯದ ವ್ಯಾಪಾರ-ವಹಿವಾಟು ಅಭಿವೃದ್ಧಿ ಮತ್ತು ನೂತನ ಕೌಶಲ್ಯಗಳ ಅಳವಡಿಕೆಗಾಗಿ ‘ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್’ ಆರಂಭಿಸಿದೆ.
ಈ ವರ್ಚುವಲ್ ಹಬ್ ಅನ್ನು ಭಾನುವಾರ ಖಾಸಗಿ ಹೊಟೇಲ್‌ನಲ್ಲಿ ಬಿಡುಗಡೆ ಮಾಡಲಾಯಿತು. ತಂತ್ರಜ್ಞಾನದ ಅತ್ಯುತ್ತಮ ಬಳಕೆ ಮಾಡಿಕೊಳ್ಳುವುದು ಈ ವರ್ಚುವಲ್ ಹಬ್‌ನ ಪ್ರಮುಖ ಉದ್ದೇಶ ಮತ್ತು ಆ ಮೂಲಕ ವಿಶ್ವದೆಲ್ಲೆಡೆ ತಲುಪುವುದು ಇದರ ಗುರಿಯಾಗಿದೆ.ಗೂಗಲ್ ಪ್ಲೇ ಸ್ಟೋರ್‌ನಲ್ಲಿ‘ಗ್ಲೋಬಲ್ ಕನೆಕ್ಟ್ ವರ್ಚುವಲ್ ಹಬ್’ ಮೊಬೈಲ್ ಆ್ಯಪ್ ಲಭ್ಯ.
‘ಈ ಹಿಂದೆ ವ್ಯಾಪಾರ ಎಂಬ ಪದಕ್ಕೆ ಅನ್ವರ್ಥಕ ನಾಮವಾಗಿ ಆರ್ಯ ವೈಶ್ಯ ಸಮುದಾಯ ಇತ್ತು. ಆದರೆ, ಇಂದು ಬೇರೆ ಸಮುದಾಯಗಳ ಬೆಳವಣಿಗೆಯಿಂದ ಸಮುದಾಯ ಸವಾಲು ಎದುರಿಸುವಂತಾಗಿದೆ. ವ್ಯಾಪರಸ್ಥರು ಕೂಡ ದೂರವಾಗಿದ್ದಾರೆ. ಇವರನ್ನು ಒಗ್ಗೂಡಿಸಿ ಮತ್ತೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಮಂಚೂಣಿಗೆ ತರುವುದು ಆ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಈ ಸಮಾವೇಶ ಆಯೋಜಿಸಿದ್ದೇವೆ. ವ್ಯಾಪಾರ ವಹಿವಾಟುಗಳ ಬಗ್ಗೆ ಮುಕ್ತ ಚರ್ಚೆ ಮತ್ತು ಉದ್ಯಮರಂಗದಲ್ಲಿ ಪರಸ್ಪರ ಸಹಕಾರಕ್ಕೂ ಇದು ನೆರವಾಗಲಿದೆ’ ಎಂದು ಬಿಶಿಪ್ ಸಹ ಸಂಸ್ಥಾಪಕ ಮತ್ತು ಅಧ್ಯಕ್ಷ ಎಸ್.ಆರ್.ಶ್ರೀಧರ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಶಿಪ್ ಉಪಾಧ್ಯಕ್ಷ ಬಿ.ಎ.ನಾಗರಾಜ್, ವರ್ಚುವಲ್ ಹಬ್ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ಆರ್.ಎಸ್.ರಾಜೇಶ್, ಸಹ ಸಂಸ್ಥಾಪಕ ಮತ್ತು ಕಾರ್ಯದರ್ಶಿ ಸಂದೀಪ್ ಮತ್ತು ಬಿಶಿಪ್ ಸದಸ್ಯರು ಭಾಗವಹಿಸಿದ್ದರು.
ಬಿಶಿಪ್: ಆರ್ಯ ವೈಶ್ಯ ಸಮುದಾಯದವರನ್ನು ಒಗ್ಗೂಡಿಸಲು ಮತ್ತು ಅವರ ವ್ಯಾಪಾರ ವಹಿವಾಟುವಿನ ವೃದ್ಧಿಗೆ ನೆರವಾಗಲು ರೂಪುಗೊಂಡಿರುವ ವೇದಿಕೆ. ಬಿ-ಬಿಸಿನೆಸ್, ಎಸ್-ಸಪೋರ್ಟ್, ಎಚ್-ಹೆಲ್ಪ್, ಐ-ಇನ್ಫಾರ್ಮೇಷನ್, ಪಿ-ಪ್ರಮೋಷನ್ ಇದು ಬಿಶಿಪ್‌ನ ವಿಸ್ತಾರ. ಬಿಶಿಪ್‌ನಲ್ಲಿ ದಿನಸಿ ಅಂಗಡಿ ವ್ಯಾಪಾರಿಗಳಿಂದ ಹಿಡಿದು ವೈಮಾನಿಕ ಕ್ಷೇತ್ರಕ್ಕೆ ಬಿಡಿ ಭಾಗಗಳನ್ನು ಉತ್ಪಾದಿಸುವ ಉದ್ಯಮಿಗಳು ಸದಸ್ಯರಾಗಿದ್ದಾರೆ. ಕಳೆದ 4 ವರ್ಷದಿಂದ ಇದು ಕಾರ್ಯೋನ್ಮುಖವಾಗಿದೆ. ಬೆಂಗಳೂರು, ಚೆನ್ನೈ, ಮೈಸೂರು ಸೇರಿದಂತೆ 9 ಕಡೆ ಹಬ್‌ಗಳನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.