ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಪುರಭವನದ ಮುಂದೆ ಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅಸ್ಸಾಂ ಭಾಷಿಕರು ಭಾಗವಹಿಸಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದರು. ‘ಜೈ ಹೋ ಅಸ್ಸಾಂ’, ‘ಕಾಯ್ದೆಯನ್ನು ನಾವು ಒಪ್ಪುವುದಿಲ್ಲ’ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.
‘ನನ್ನ ತಂದೆ–ತಾಯಿ ಮತ್ತು ಸಂಬಂಧಿಕರು ಅಸ್ಸಾಂನಲ್ಲೇ ಇದ್ದಾರೆ. ಅಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿರುವುದರಿಂದ ಅವರ ಪರಿಸ್ಥಿತಿ ಹೇಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ’ ಎಂದು ಬೆಂಗಳೂರಿನ ಅಸ್ಸಾಂ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹಿರಾಕ್ ಜ್ಯೋತಿ ಕಾಕಟಿ ವಿಷಾದ ವ್ಯಕ್ತಪಡಿಸಿದರು. ಅವರು ನಗರದಲ್ಲಿ 14 ವರ್ಷಗಳಿಂದ ವಾಸಿಸುತ್ತಿದ್ದಾರೆ.
‘ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಂತಹ ಬೆಳವಣಿಗೆಗಳು ಸಲ್ಲ. ಜನ ಧ್ವನಿ ಎತ್ತಿದರೆ, ಸರ್ಕಾರ ಆ ಧ್ವನಿಯನ್ನು ಆಲಿಸಬೇಕು’ ಎಂದು ಅವರು ‘ಮೆಟ್ರೊ’ದೊಂದಿಗೆ ಮಾತು ಹಂಚಿಕೊಂಡರು. ‘ಕರ್ಫ್ಯೂ ವಿಧಿಸಿರುವುದರಿಂದ ಮನೆಬಿಟ್ಟು ಕದಲದಂತಹ ಪರಿಸ್ಥಿತಿ ಇದೆ. ಸಾಕಾಗುವಷ್ಟು ಊಟವನ್ನೂ ಪೂರೈಸುತ್ತಿಲ್ಲ, ಅಲ್ಲಿನ ಜನ ಹೇಗೆ ಬದುಕುತ್ತಿರಬಹುದು ಎಂಬ ಆತಂಕ ಕಾಡುತ್ತಿದೆ’ ಎಂದರು.
ನಗರದ ಬಿಎಂಎಸ್ ಕಾಲೇಜಿನ ಕಾನೂನು ವಿದ್ಯಾರ್ಥಿನಿ ಬಂದಿತಾ ದಾಸ್ ಅವರಿಗೂ ಮೊಬೈಲ್ ನೆಟ್‌ವರ್ಕ್ ಸ್ಥಗಿತಗೊಳಿಸುವ ಆತಂಕ ಕಾಡುತ್ತಿದೆ. ‘ಅಸ್ಸಾಂನಲ್ಲಿ ಪ್ರಸ್ತುತ ಅಸ್ಸಾಮಿಗಳ ಸಂಖ್ಯೆ ಶೇ 48ರಷ್ಟು ಮಾತ್ರ. ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ, ಆಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿನ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಿ, ನಮ್ಮ ರಾಜ್ಯದಲ್ಲಿ ನೆಲೆಸಲು ಅವಕಾಶ ಕೊಟ್ಟರೆ, ನಾವು ಅಲ್ಪಸಂಖ್ಯಾತರಾಗುವುದರಲ್ಲಿ ಸಂಶಯವಿಲ್ಲ’ ಎಂದು ಪುರಭವನದ ಮುಂದೆಈಚೆಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅಸಮಾಧಾನ ಹೊರಹಾಕಿದರು. ‘ನಗರದಲ್ಲಿ ಇಂತಹ ಪ್ರತಿಭಟನೆಗಳು ನಡೆದರೆ ಈಶಾನ್ಯ ರಾಜ್ಯಗಳ ಪರಿಸ್ಥಿತಿ ಹೇಗಿದೆ ಎಂಬುದು ಇತರರಿಗೆ ಗೊತ್ತಾಗುತ್ತದೆ’ ಎಂದರು.
ವಿದ್ಯಾರ್ಥಿಗಳಿಗೆ ಥಳಿತ
ನಗರದಲ್ಲಿ ಸುಮಾರು ಐದೂವರೆ ವರ್ಷಗಳಿಂದ ವಿದ್ಯಾಭ್ಯಾಸ ಮಾಡುತ್ತಿರುವ ಮೃಂಗಾಕ ದೆಕ ಅವರು ಅಸ್ಸಾಂನಲ್ಲಿ ನಡೆಯುತ್ತಿರುವ ಘಟನೆಗಳನ್ನು ‘ಹಿಂಸಾಚಾರ’ ಎಂದೇ ಹೇಳಿದರು. ‘ಪ್ರತಿಭಟನಾಕಾರರನ್ನು ಹತ್ತಿಕ್ಕಲು ಅಧಿಕಾರಿಗಳು ಮತ್ತು ಪೊಲೀಸರು ಗುಂಡಿನ ದಾಳಿ, ಟಿಯರ್‌ಗ್ಯಾಸ್, ಲಾಠಿ ಪ್ರಹಾರ ನಡೆಸುತ್ತಿದ್ದಾರೆ. ನಮ್ಮ ಮನೆಯಿಂದ ಸುಮಾರು 600 ಮೀಟರ್ ದೂರದಲ್ಲೇ ಆರು ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಕೊಂದಿದ್ದಾರೆ. ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನೂ ಥಳಿಸಲಾಗುತ್ತಿದೆ. ಗುವಾಹಟಿಯಲ್ಲಿರುವ ನಮ್ಮ ತಂದೆ, ಕೊಕ್ರಝರ್‌ನಲ್ಲಿರುವ ನಮ್ಮ ತಾಯಿಯನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಪರಿಸ್ಥಿತಿಯ ವಿಕೋಪ ಅರ್ಥವಾಗಬಹುದು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿರುವ ಅಸ್ಸಾಂನ ಅಮೃತಾ ಪ್ರಿಯಂ ದತ್ತಾ ಕೂಡ ಅಂತರ್ಜಾಲ ಸಂಪರ್ಕ ಕಡಿತಗೊಳಿಸಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿ ‘ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ನಮ್ಮ ತಾಯಿ ರಾತ್ರಿ ಕರೆ ಮಾಡಿ ಮಾತನಾಡಿದರು. ಮೊಬೈಲ್ ನೆಟ್‌ವರ್ಕ್ ಕೂಡ ಕಡಿತಗೊಳಿಸಿದರೆ ಅವರ ಸಂಪರ್ಕವೇ ಇರುವುದಿಲ್ಲ’ ಎಂದರು.
‘ಚಿಕ್ಕಂದಿನಿಂದ ಅಸ್ಸಾಂನಲ್ಲಿ ಹಲವು ಪ್ರತಿಭಟನೆಗಳು, ಬಂದ್‌ಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ಆದರೆ ಎಂದೂ ಅಂತರ್ಜಾಲ ಸಂಪರ್ಕ ಕಡಿತಗೊಳಿಸಿರಲಿಲ್ಲ. ಫೋನ್ ಸಂಪರ್ಕ ಕಡಿತಗೊಳಿಸುವ ಮುನ್ನ ನಿನ್ನೊಂದಿಗೆ ಮಾತನಾಡಿಸಬೇಕು ಎನಿಸಿತು, ಎಂದು ನಮ್ಮ ತಂದೆ ಹೇಳಿದ ಮಾತುಗಳಲ್ಲಿ ಆತಂಕವೇ ಧ್ವನಿಸುತ್ತಿತ್ತು’ ಎಂದು ಹೆಸರು ಹೇಳಲು ಇಚ್ಛಿಸದ ನಗರದ ಅಸ್ಸಾಮಿಯೊಬ್ಬರು ಹೇಳಿದರು.
‘ಕಾಯ್ದೆಗೆ ರಾಜ್ಯಸಭೆಯಲ್ಲಿ ಅನುಮೋದನೆ ದೊರೆತಾಗಿನಿಂದಲೂ ಅಸ್ಸಾಂನ ಹಲವೆಡೆ ಪ್ರತಿಭಟನೆಯ ಕಾವು ಏರುತ್ತಲೇ ಇದೆ. ಜನ ಜೀವ ಕಳೆದುಕೊಳ್ಳುವ ಭಯದಲ್ಲೇ ಜೀವನ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಯ್ದೆಯಿಂದಾಗಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶಿಯರಿಗೆ ಶಾಶ್ವತವಾಗಿ ನೆಲೆಸುವುದಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ನಮ್ಮ ಭಾಷೆ, ಸಂಸ್ಕೃತಿಯ ಮೇಲೂ ಅವರೂ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.
ಎನ್‌ಆರ್‌ಸಿ–ಕ್ಯಾಬ್ ಭಿನ್ನ
ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಮೊದಲಿಗೆ ಅಸ್ಸಾಂನಲ್ಲಿ ಜಾರಿಗೆ ತರಲಾಯಿತು. ಭಾರತದ ಎಲ್ಲ ನಾಗರಿಕರ ಹೆಸರುಗಳನ್ನು ಇದರಲ್ಲಿ ಸೇರ್ಪಡೆ ಮಾಡುವುದು ಉದ್ದೇಶವಾಗಿತ್ತು. ಬಾಂಗ್ಲಾದೇಶದ ಅಕ್ರಮ ವಲಸಿಗರು ಹೆಚ್ಚಿನ ಪ್ರಮಾಣದಲ್ಲಿ ಅಸ್ಸಾಂನಲ್ಲಿ ನೆಲೆಸುತ್ತಿದ್ದುದರಿಂದ ಈ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದರಿಂದ ಅಸ್ಸಾಂನಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ 3.29 ಕೋಟಿ ಜನರ ಪೈಕಿ ಸುಮಾರು 19 ಲಕ್ಷ ಅರ್ಜಿಗಳು ನಕಲಿಯಾಗಿದ್ದವು. ಸೂಕ್ತ ದಾಖಲೆಗಳಿಲ್ಲದೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಸೂಕ್ತ ದಾಖಲೆಗಳಿಲ್ಲದವರನ್ನು ಬಂಧನ ಕೇಂದ್ರಗಳಿಗೆ (ಡಿಟೆನ್ಷನ್ ಸೆಂಟರ್ಸ್) ದೂಡಲಾಗುತ್ತಿದೆ. ಎನ್‌ಆರ್‌ಸಿಯನ್ನು ದೇಶದಾದ್ಯಂತ ವಿಸ್ತರಿಸಲಾಗುವುದು ಕೇಂದ್ರ ಸರ್ಕಾರ ಘೋಷಿಸಿದೆ.
ಪೌರತ್ವ (ನೋಂದಣಿ) ಕಾಯ್ದೆ ಮೂಲಕ ಬಾಂಗ್ಲಾದೇಶ, ಆಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲಿನ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಇದರಿಂದ ಅಕ್ರಮವಾಗಿ ನೆಲೆಸಿರುವವರಿಗೆ ಧರ್ಮದ ಆಧಾರದ ಮೇಲೆ ಪೌರತ್ವ ದೊರೆಯುತ್ತದೆ. ಕೇರಳ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಪಂಜಾಬ್ ಮತ್ತು ಛತ್ತೀಸಗಡದ ಮುಖ್ಯಮಂತ್ರಿಗಳು ಈ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ಯಾಕೆ?
1951ರಿಂದ 1971ರ ಅವಧಿಯಲ್ಲಿ ಅಸ್ಸಾಂನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶದ ಹಲವರು ಅಸ್ಸಾಂನಲ್ಲಿ ನೆಲೆಸಲು ಆರಂಭಿಸಿದರು. ಇವರ ಸಂಖ್ಯೆ ಹೆಚ್ಚಾದ್ದರಿಂದ ರಾಜ್ಯದ ಪ್ರತಿಭಟನೆಗಳು ಹೆಚ್ಚಾಗುತ್ತಲೇ ಇವೆ. ವಲಸಿಗರು ಮತ್ತು ಮೂಲ ನಿವಾಸಿಗಳನ್ನು ಪತ್ತೆಮಾಡಲು ಒತ್ತಾಯಿಸಿ 1980ರಲ್ಲಿ ನಡೆದ ಅಸ್ಸಾಂ ಚಳವಳಿಯಲ್ಲಿ ಸುಮಾರು 800 ಮಂದಿ ಜೀವ ಕಳೆದುಕೊಂಡರು. ಕೇಂದ್ರ ಸರ್ಕಾರ ಮತ್ತು ಅಖಿಲ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟ, ಅಖಿಲ ಅಸ್ಸಾಂ ಗಣ ಸಂಗ್ರಾಮ ಪರಿಷತ್ ನಡುವೆ 1985ರಲ್ಲಿ ನಡೆದ ಒಪ್ಪಂದಿಂದಾಗಿ ಪರಿಸ್ಥಿತಿ ತಿಳಿಯಾಗಿತ್ತು. ಈ ಒಪ್ಪಂದದ ಪ್ರಕಾರ 1971ರ ಮಾರ್ಚ್ 24ರ ನಂತರ ಅಸ್ಸಾಂನಲ್ಲಿ ನೆಲೆಸಿದ ವಲಸಿಗರನ್ನು ಗಡೀಪಾರು ಮಾಡಬೇಕೆಂದು ನಿರ್ಧರಿಸಲಾಗಿತ್ತು. ಈಗ ಈ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ತಂದಿರುವುದರಿಂದ ಒಪ್ಪಂದವನ್ನು ಮುರಿಯಲಾಗಿದೆ ಎಂದು ಹಲವು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಅಸ್ಸಾಮಿಗರು
ಸುಮಾರು 2 ಲಕ್ಷ ಅಸ್ಸಾಮಿಗರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಲ್ಲಿ ಬಹುತೇಕರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದವರಾಗಿದ್ದಾರೆ.
ಸಂಪರ್ಕಕ್ಕೆ
l ಅಸ್ಸಾಂ ಅಸೋಷಿಯೇಷನ್, ಬೆಂಗಳೂರು, ಕೇಂಬ್ರಿಜ್ ಲೇಔಟ್. ಮೊ–9880016282.
ಇ ಮೇಲ್– assamassociationblr@gmail.com.
l ಅಸ್ಸಾಂ ಸೊಸೈಟಿ, ಬೆಂಗಳೂರು: ಕೋರಮಂಗಲ.
ಮೊ–8892942382.
ಇ ಮೇಲ್– info@assamsocietybangalore.com.
ಕೆಲವು ಪ್ರಮುಖರು
ಜಾಹ್ನವಿ ಬರೂರ (ಸಾಹಿತಿ), ಜೊನಾಲಿ ಸೈಕಿಯಾ ಮತ್ತು ಜಿನ್ನಿಯಾ ಪುಖಾನ್ (ಫ್ಯಾಶನ್ ಡಿಸೈನರ್ಸ್), ಖಣೀಂದ್ರ ಬರ್ಮನ್ (ವರ್ಫೆಲ್ ಕುಚೆ ಸಂಸ್ಥಾಪಕ), ಮೃಗಾಂಕ ದೇಕ (ಪಾರ್ಕಿಂಗ್‌ರೈನೊ ಸಂಸ್ಥಾಪಕ).
‘ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸಲ್ಲ. ಇದು ಈ ದೇಶದ ತತ್ವವಲ್ಲ. ಭಾರತ ಜಾತ್ಯಾತೀತ ರಾಷ್ಟ್ರ ವೆಂದು ಸಂವಿಧಾನಲ್ಲಿ ಪ್ರಸ್ತಾವನೆಯಲ್ಲೇ ತಿಳಿಸಲಾಗಿದೆ. ಧರ್ಮದ ಆಧಾರದ ಮೇಲೆ ನಾಗರಿಕತ್ವ ನೀಡುವುದಾಗಲಿ, ತಿರಸ್ಕರಿಸುವು ದಾಗಲಿ ಆಗಬಾರದು, ಎಂದು ಸಂವಿಧಾನ ರಚಿಸಿದ ಡಾ.ಬಿ.ಆರ್. ಅಂಬೇಂಡ್ಕರ್ ಸೇರಿದಂತೆ ಹಲವು ತಜ್ಞರು ತಿಳಿಸಿದ್ದಾರೆ.’
–ನರೇಂದ್ರ ಫಣಿ, ಪ್ರಾಧ್ಯಾಪಕ
‘ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಯಿಂದ ಭಾರತ ಮುಸಲ್ಮಾನರು ಆತಂಕ ಪಡುವ ಅಗತ್ಯವಿಲ್ಲ. ಭಯದ ವಾತಾವರಣ ಸೃಷ್ಟಿಸುವ ಮಾತುಗಳಿಗೆ, ವದಂತಿಗೆ ಕಿವಿಗೊಡಬೇಡಿ. ಭಾರತದ ಎಲ್ಲ ಪ್ರಜೆಗಳು ಸಮಾನರು.’
–ಭಾಸ್ಕರ್ ರಾವ್, ನಗರ ಪೊಲೀಸ್ ಕಮಿಷನರ್
*ವಿಷಯ ಸಂಗ್ರಹ:ಸುರುಪಶ್ರೀ ಸರಮಾ, ರಜಿತಾ ಮೆನನ್, ತಮನ್ನಾ ಯಾಸ್ಮಿನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.