ADVERTISEMENT

ಟ್ರೆಂಡ್ ಆಗುತ್ತಿದೆ ಬಾರ್‌ ಟೆಂಡರಿಂಗ್‌

ಮಾನಸ ಬಿ.ಆರ್‌
Published 6 ಜೂನ್ 2019, 19:30 IST
Last Updated 6 ಜೂನ್ 2019, 19:30 IST
ಕ್ವಿಜ್‌ನಲ್ಲಿ ಭಾಗವಹಿಸಿದ್ದ ಬಾರ್‌ಟೆಂಡರ್‌ಗಳು 
ಕ್ವಿಜ್‌ನಲ್ಲಿ ಭಾಗವಹಿಸಿದ್ದ ಬಾರ್‌ಟೆಂಡರ್‌ಗಳು    

ಸ್ಟಾರ್‌ ಹೋಟೆಲ್ ಮತ್ತು ಐಷಾರಾಮಿ ಹೋಟೆಲ್‌ ಶೆಫ್‌ಗಳ (ಮುಖ್ಯ ಬಾಣಸಿಗರು) ಕೈಚಳಕಕ್ಕೆ ಜಗತ್ತಿನ ಎಲ್ಲಾ ದೇಶಗಳಲ್ಲೂ ಮನ್ನಣೆ ಇದೆ. ಆದರೆ ಇದೇ ಕೆಲಸ ಮಾಡುವ ಬಾರ್‌ ಟೆಂಡರ್‌ಗಳನ್ನು ಕಂಡರೆ ಮಾತ್ರ ಒಂದು ರೀತಿಯ ಅಸಡ್ಡೆ ಬೆಳೆದಿದೆ.

ಪಾಶ್ಚಾತ್ಯ ದೇಶಗಳಲ್ಲಿ ಬಾರ್‌ ಟೆಂಡರ್‌ಗಳನ್ನು ಗೌರವದಿಂದ ನೋಡಲಾಗುತ್ತದೆ. ಶೆಫ್‌ಗಳ ರೀತಿಯಲ್ಲಿಯೇ ಅವರಿಗೂ ಅವಕಾಶಗಳು ಸಾಕಷ್ಟಿವೆ. ಆದರೆ ಭಾರತದಲ್ಲಿ ಹಾಗಿರಲಿಲ್ಲ.ಇತ್ತೀಚೆಗೆ ಕೆಲವು ಬದಲಾವಣೆ ಆಗಿವೆ.

ಬೆಂಗಳೂರಿನಂತಹ ನಗರ ಈಗ ಇಂತಹ ನೂರಾರು ಬಾರ್‌ ಟೆಂಡರ್‌ಗಳನ್ನು ಕೈಬೀಸಿ ಕರೆಯುತ್ತಿದೆ. ಆಧುನಿಕ ಶೈಲಿಯ ಪಬ್‌ ಹಾಗೂ ಬಾರ್‌ಗಳು ನಗರದ ಆಕರ್ಷಣೆಯಾಗುತ್ತಿವೆ. ಇಲ್ಲಿ ಕೆಲಸ ಮಾಡಲು ದೇಶದ ಬೇರೆ ರಾಜ್ಯಗಳಲ್ಲದೇ ವಿದೇಶದ ಬಾರ್‌ ಟೆಂಡರ್‌ಗಳನ್ನೂ ನೇಮಕ ಮಾಡಿಕೊಳ್ಳುವ ಪರಂಪರೆ ಶುರುವಾಗಿದೆ. ಯುವತಿಯರು ಕೂಡ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಏನಿದು ಬಾರ್‌ ಟೆಂಡರಿಂಗ್‌

ಬಾರ್‌ ಟೆಂಡರ್‌ಗಳು ಎಂದರೆ ಅವರು ಸರ್ವರ್‌ ಅಥವಾ ವೇಟರ್‌ ಅಲ್ಲ. ಸರ್ವ್‌ ಮಾಡುವವರಿಗೆ ಬೇರೆ ಬೇರೆ ಡ್ರಿಂಕ್ಸ್‌ಗಳನ್ನು ಮಿಕ್ಸಿಂಗ್ ಮಾಡಿ ಕೊಡುವ ಕೆಲಸ ಮಾಡುತ್ತಾರೆ. ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಡ್ರಿಂಕ್ಸ್ ಮಿಕ್ಸ್‌ ಮಾಡುತ್ತಾರೆ. ಸ್ವೀಟನಿಂಗ್, ಖಡಕ್‌ ಡ್ರಿಂಕ್ಸ್‌ಗಳ ಆಯ್ಕೆಯನ್ನು ಉತ್ತಮವಾಗಿ ಮಾಡುವ ಕಲೆಯನ್ನು ಅವರು ಅಧ್ಯಯನ ಮಾಡುತ್ತಾರೆ.

ಭಾರತ ಸೇರಿದಂತೆ ಜಗತ್ತಿನ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ ಕೋರ್ಸ್‌ನಲ್ಲಿಯೇ ಬಾರ್‌ ಟೆಂಡರಿಂಗ್ ಕೋರ್ಸ್ ಕೂಡ ಸೇರಿಸಲಾಗಿದೆ. ಅವಕಾಶಗಳ ಬಗ್ಗೆ ಅರಿವು ಇದ್ದವರು ಈ ಕೋರ್ಸ್‌ ಆಯ್ಕೆ ಮಾಡಿಕೊಳ್ಳುತ್ತಾರೆ.

ಬ್ಲೆಂಡಿಂಗ್‌ ಒಂದು ಕಲೆ

ಬಾರ್‌ ಟೆಂಡರಿಂಗ್ ವೃತ್ತಿಯಲ್ಲಿ ಸಾಕಷ್ಟು ಹೆಸರು ಮಾಡುವ ಮೂಲಕ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೆಲಸ ಮಾಡಿರುವ ಪಂಕಜ್‌ ಬಾಲಚಂದ್ರನ್‌ ಅವರು ‘ಪ್ರಜಾವಾಣಿ’ಯ ‘ಮೆಟ್ರೊ’ದೊಂದಿಗೆ ಈ ವೃತ್ತಿಯ ಸವಾಲುಗಳ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಬಾರ್‌ಟೆಂಡರ್‌ ಪಂಕಜ್‌ ಬಾಲಚಂದ್ರನ್‌

ಬಾರ್‌ ಟೆಂಡರಿಂಗ್ ಏಕೆ ಆಯ್ಕೆ ಮಾಡಿಕೊಂಡಿರಿ?

ಡ್ರಿಂಕ್ಸ್‌ ಮಿಕ್ಸಿಂಗ್‌ (ಕಾಕ್‌ಟೇಲ್‌) ನನ್ನ ಪ್ರಿಯವಾದ ಕೆಲಸ. ಮೊದಲಿನಿಂದಲೂ ಇದರ ಬಗ್ಗೆ ನನಗೆ ಆಸಕ್ತಿ ಇತ್ತು. ಇದನ್ನೇ ಸವಾಲಾಗಿ ತೆಗೆದುಕೊಂಡು ಮುಂದುವರಿದೆ.

ಬಾರ್‌ ಟೆಂಡರಿಂಗ್‌ನ ಸವಾಲುಗಳೇನು?

ದಿನದ 24 ಗಂಟೆಯೂ ಮೈ ಮುರಿದು ಕೆಲಸ ಮಾಡಬೇಕು. ಬಾರ್‌ ಕೌಂಟರ್‌ಗಳಲ್ಲಿ ಒಂದು ನಿಮಿಷವೂ ಕೂರುವ ಹಾಗಿಲ್ಲ. ದೈಹಿಕ ಶ್ರಮ ಬೇಡುವ ಕೆಲಸ. ಈಗೀಗ ಶೆಫ್‌ಗಳ ರೀತಿಯಲ್ಲೇ ನಮ್ಮನ್ನೂ ಗುರುತಿಸುತ್ತಾರೆ. ಅವರಂತೆಯೇ ಸಂಬಳ ಹಾಗೂ ಅವಕಾಶವೂ ಇದೆ. ಆದರೆ ಇದಕ್ಕಾಗಿ ನಾವು ಹೆಚ್ಚು ಕಷ್ಟಪಡಬೇಕು.

ವೃತ್ತಿಯಾಗಿ ಸ್ವೀಕರಿಸುವ ಸವಾಲುಗಳೇನು? ಈ ವೃತ್ತಿಯ ಬಗ್ಗೆ ಕೆಲವರಲ್ಲಿ ಅಸಡ್ಡೆ ಏಕೆ?

ಅಜ್ಞಾನದಿಂದ ಅಸಡ್ಡೆ ಇದೆ ಅಷ್ಟೇ. ಬಾರ್‌ ಟೆಂಡರ್‌ಗಳನ್ನು ಸರ್ವರ್‌ಗಳು ಎಂದುಕೊಳ್ಳುತ್ತಾರೆ. ಅಂಥವರು ಈ ವೃತ್ತಿಯ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಬಾರ್‌ ಟೆಂಡರಿಂಗ್‌ ಒಂದು ಕಲೆ. ಈಗ ಅದಕ್ಕೆ ತುಂಬಾ ಮನ್ನಣೆ ಇದೆ. ಇಂದಿನ ದಿನಗಳಲ್ಲಿ ಪಬ್‌, ಬಾರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ ಆಧುನಿಕ ಬಾರ್‌ಗಳಿಗೂ ಬಾರ್‌ ಟೆಂಡರ್‌ಗಳ ನೇಮಕ ಅನಿವಾರ್ಯವಾಗಿದೆ.

ಮದ್ಯ ಬ್ಲೆಂಡ್‌ ಮಾಡುತ್ತಿರುವಬಾರ್‌ಟೆಂಡರ್‌ ಯುವತಿ

ಬಾರ್‌ ಟೆಂಡರಿಂಗ್‌ ವೃತ್ತಿಗೆ ಇದು ಸುವರ್ಣ ಯುಗ ಎಂದೇ ಹೇಳಬಹುದು. ಜಗತ್ತೇ ಈಗ ಈ ವೃತ್ತಿಯ ಕಡೆ ತಿರುಗಿ ನೋಡುತ್ತಿದೆ. ಕಾಕ್‌ಟೇಲ್ ಪಾರ್ಟಿಗಳು ಇಂದಿನ ಕಾಲದಲ್ಲಿ ಮಾಮೂಲಿಯಾಗಿದೆ. ನಾನು ಕೇರಳದಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್ ಕೋರ್ಸ್‌ ಮಾಡಿದೆ. ಆಗ ಈ ಮಟ್ಟದಲ್ಲಿ ಯಶಸ್ಸು ಸಿಗುವ ಬಗ್ಗೆ ಯೋಚಿಸಿರಲಿಲ್ಲ. ಈಗ ಕಾಲ ಬದಲಾಗಿದೆ.

ಬಾರ್‌ಟೆಂಡರ್‌ಗಳ ಆಯ್ಕೆಗೆ ಸ್ಪರ್ಧೆ

ವಿಮಾನ ನಿಲ್ದಾಣ ರಸ್ತೆಯ ಹೆಣ್ಣೂರು ಕ್ರಾಸ್‌ ಬಳಿ ಇರುವ ‘ಬಿಗ್‌ ಬ್ರೆವ್‌ಸ್ಕಿ’ ಬಾರ್‌ನಲ್ಲಿ ಇತ್ತೀಚೆಗೆ ಮಂಕಿ ಶೋಲ್ಡರ್‌ ಕಂಪನಿ ಆಯೋಜಿಸಿದ್ದ ಬಾರ್‌ಟೆಂಡರ್‌ಗಳ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ನಡೆಯಿತು. ಇಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಬಾರ್‌ಟೆಂಡರ್‌ಗಳು ಭಾಗವಹಿಸಿದ್ದರು. ‘ಸ್ಮೆಲ್‌ ಆ್ಯಂಡ್‌ ಟೆಲ್‌‘ ಕ್ವಿಜ್‌ (ವಾಸನೆ ಅಘ್ರಾಣಿಸಿ ಮದ್ಯ ಗುರುತಿಸುವ ಸ್ಪರ್ಧೆ), ಗ್ಲಾಸ್ ಜೋಡಿಸುವುದು, ಬ್ಲೆಂಡಿಂಗ್‌ (ಮದ್ಯಗಳ ಬೆರೆಕೆ) ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮದ್ಯದ ಘಾಟು ವಾಸನೆಯನ್ನು ಆಘ್ರಾಣಿಸಿ ಅದು ಯಾವ ಬ್ರಾಂಡ್‌, ಅದರಲ್ಲಿ ಯಾವ ಅಂಶಗಳು ಅಡಕವಾಗಿವೆ ಎಂದು ಹೇಳಬೇಕು. 5 ರಿಂದ 10 ಅಡಿ ಎತ್ತರಕ್ಕೆ ಗ್ಲಾಸ್‌ಗಳನ್ನು ಜೋಡಿಸಿ ಕೈಯಲ್ಲಿ ಎತ್ತಬೇಕು.ವಿವಿಧ ಡ್ರಿಂಕ್ಸ್‌ಗಳನ್ನು ಮಿಕ್ಸ್‌ ಮಾಡಿ ಕಾಕ್‌ಟೇಲ್‌ ಸಿದ್ದಪಡಿಸಬೇಕು. ರಸಪ್ರಶ್ನೆ ಸುತ್ತಿನಲ್ಲಿ ನೂರಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಈ ಎಲ್ಲಾ ಸವಾಲುಗಳನ್ನು ಬಾರ್‌ಟೆಂಡರ್‌ಗಳು ಎದುರಿಸಿದರು.

ಈ ಚಾಂಪಿಯನ್‌ಷಿಪ್‌ನಲ್ಲಿ ಬಾರ್‌ಟೆಂಡರ್‌ಗಳಿಗೆ ಸ್ಟಾರ್ ನೀಡಲಾಗುತ್ತದೆ. 20 ವಿಜೇತರು ಊಟಿಯಲ್ಲಿ ನಡೆಯುವ ಬೂಟ್‌ ಕ್ಯಾಂಪ್‌ಗೆ ಆಯ್ಕೆಯಾಗುತ್ತಾರೆ. ಅಲ್ಲಿಂದ ಅವರಿಗೆ ಉದ್ಯೋಗ ಅವಕಾಶಗಳು ಸಿಗುತ್ತವೆ.

ವಿಸ್ಕಿ ಕಂಪನಿಗೆ ರಾಯಭಾರಿ

ಸಾಮಾನ್ಯವಾಗಿ ಬ್ರ್ಯಾಂಡ್‌ ಪ್ರಮೋಶನ್‌ಗೆ ಸಿನಿಮಾ ತಾರೆಯರು, ಕ್ರಿಕೆಟ್‌ ಪಟುಗಳು, ರೂಪದರ್ಶಿಗಳಂತಹ ಸೆಲೆಬ್ರಿಟಿಗಳನ್ನು ರಾಯಭಾರಿಯಾಗಿ ಮಾಡುವುದು ರೂಢಿ. ಆದರೆ, ಮಂಕಿ ಶೋಲ್ಡರ್‌ನಂತಹ ಖ್ಯಾತ ವಿಸ್ಕಿ ಕಂಪನಿಯು ಬಾರ್‌ಟೆಂಡರ್‌ ಪಂಕಜ್‌ ಬಾಲಚಂದ್ರನ್‌ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿದೆ. ಈ ಕಂಪನಿ 1886ರಿಂದ ಇದೆ. ಯುವಕ, ಯುವತಿಯರ ಫೇವರಿಟ್‌ ಡ್ರಿಂಕ್ಸ್ ಆಗಿದೆ. ಇದಕ್ಕೆ ಕಾರಣ ಇದು ನೀಡುವ ಖುಷಿ ಮತ್ತು ಆಹ್ಲಾದತೆ.

ಈ ಬಗ್ಗೆ ಪ್ರಶ್ನಿಸಿದಾಗ ಅವರು ಹೇಳಿದ್ದು ಹೀಗೆ....‘ದೊಡ್ಡ ದೊಡ್ಡ ಕಂಪನಿಗಳು ಸಿನಿಮಾ ಸೆಲೆಬ್ರಿಟಿಗಳನ್ನು ರಾಯಭಾರಿಯಾಗಿ ಆಯ್ಕೆ ಮಾಡುತ್ತವೆ. ಆದರೆ ಈ ಕಂಪನಿ ಬಾರ್‌ಟೆಂಡರ್‌ ಒಬ್ಬರನ್ನು ರಾಯಭಾರಿಯಾಗಿ ಮಾಡಿದೆ ಎಂದರೆ ಇದರ ಹಿಂದೆ ಇರುವ ಉದ್ದೇಶ ಇಷ್ಟೇ. ಯಾವುದೇ ವಿಸ್ಕಿ ಬ್ರಾಂಡ್ ಅನ್ನು ಜನರ ಮುಂದೆ ಇಡುವುದು ಒಬ್ಬ ಬಾರ್‌ಟೆಂಡರ್‌ ಮಾತ್ರ. ಆ ಬ್ರಾಂಡ್‌ನ ರುಚಿ ಹಾಗೂ ವಿಭಿನ್ನತೆಯನ್ನು ತೆರೆದಿಟ್ಟರೆ ಮಾತ್ರ ಗ್ರಾಹಕರು ರುಚಿ ನೋಡಲು ಒಪ್ಪುತ್ತಾರೆ. ಬ್ರಾಂಡ್‌ನ ಪ್ರಮೋಷನ್‌ ನಮ್ಮ ಕೈಯಲ್ಲೇ ಇರುತ್ತದೆ. ಇದು ಈ ಕಂಪನಿಯ ಪ್ರೌಢ ನಿರ್ಧಾರ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.