ತಲೆತಲಾಂತರದಿಂದ ಬಂದ ವೃತ್ತಿಯನ್ನು ಜೀವನಾಧಾರವಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನರಿದ್ದಾರೆ. ಅವರಲ್ಲಿ ಹಲವರಿಗೆ ವಾಸಕ್ಕೆ ಮನೆಗಳಿಲ್ಲದೆ ರಸ್ತೆ ಬದಿಯಲ್ಲಿಯೇ ಜೀವನ ಸಾಗಿಸುತ್ತಿರುವುದನ್ನು ನಾವು ಕಾಣುತ್ತೇವೆ.
ಚಾಮರಾಜಪೇಟೆಯ ಮಕ್ಕಳ ಕೂಟ ರಸ್ತೆಯಲ್ಲಿ ನಿಂತು ನೋಡಿದರೆ ಪಾದಚಾರಿ ರಸ್ತೆಯಲ್ಲಿ ಸಾಲುಗಟ್ಟಿರುವ ಬುಟ್ಟಿ ಅಂಗಡಿಗಳನ್ನು ಗಮನಿಸಬಹುದು. ಮೂಲತಃ ಮೈಸೂರಿನ ಈ ಕುಟುಂಬಗಳು ಸುಮಾರು 25 ವರ್ಷಗಳಿಂದ ಇಲ್ಲಿ ನೆಲೆ ಕಂಡುಕೊಂಡಿವೆ. ಇವರು ತಯಾರಿಸುವ ವಿವಿಧ ಅಲಂಕಾರಿಕ ಬುಟ್ಟಿಗಳು ಮನಸೆಳೆಯುವಂತಿವೆ. ಮೂಲ ಸೌಕರ್ಯಗಳಿಂದ ವಂಚಿತರಾದ ಇವರು ರಸ್ತೆ ಬದಿಯ ಜೀವನದಿಂದ ಬೇಸತ್ತಿದ್ದಾರೆ.
‘ವ್ಯಾಪಾರವೇನೋ ಉತ್ತಮವಾಗಿ ನಡೆಯುತ್ತಿದೆ, ಆದರೆ ವಾಸಕ್ಕೆ ಸೂರಿಲ್ಲ, ಪ್ರತ್ಯೇಕ ಅಂಗಡಿ ಇಲ್ಲ’ ಎನ್ನುವ ಇಲ್ಲಿನ ನಿವಾಸಿ ಕೃಷ್ಣಪ್ಪ ತಮ್ಮ ಸ್ಥಿತಿ–ಗತಿಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.
ಬುಟ್ಟಿ ಹೆಣೆಯುವುದೇ ಕುಲಕಸುಬು
‘ತಾತ, ಮತ್ತಾತನ ಕಾಲದಿಂದ ಈ ಕಸಬು ನಮ್ಮ ಕೈಹಿಡಿದಿದೆ, ಇದನ್ನು ಬಿಟ್ಟು ಬೇರೆ ಯಾವ ಕೆಲಸವನ್ನೂ ಮಾಡುವುದಿಲ್ಲ’ ಎನ್ನುವ ಕೃಷ್ಣಪ್ಪ ಅವರ ಕುಟುಂಬ, ತಮ್ಮ ಹುಟ್ಟೂರಿನಲ್ಲಿ ವ್ಯವಸಾಯ ಮಾಡಲು ಭೂಮಿಯಿಲ್ಲದೆ, ತಮ್ಮ ವೃತ್ತಿಯನ್ನು ನಿರ್ವಹಿಸಲು ಸ್ಥಳಾವಕಾಶವಿಲ್ಲದೆ ಬೆಂಗಳೂರಿಗೆ ಬಂದು ಬುಟ್ಟಿ ಹೆಣೆಯುವ ಕಾಯಕ ಪ್ರಾರಂಭಿಸಿದರು.
ಬಿದಿರಿನಿಂದ ಸಿಂಗಾರಗೊಂಡ ಬುಟ್ಟಿಗಳು
ಬಿದಿರನ್ನು ಬಳಸಿ ಚಾಪೆಗಳು, ದೊಡ್ಡ ಗಾತ್ರದ ಬುಟ್ಟಿಯಿಂದ ಹಿಡಿದು ಸಣ್ಣ ಗಾತ್ರದ ಬುಟ್ಟಿಯವರೆಗೂ ತಯಾರಿಸಲಾಗುತ್ತದೆ. ಈ ಬಿದಿರು ಬೆಳಗಾವಿಯಿಂದ ಮಾರುಕಟ್ಟೆಯಲ್ಲಿರುವ ಬಂಬೂ ಬಜಾರ್‌ಗೆ ಬರುತ್ತದೆ. ಅಲ್ಲಿಂದ ಮೂರರಿಂದ ನಾಲ್ಕು ಜನ ಒಟ್ಟುಗೂಡಿ ಬಿದಿರು ಕೊಂಡು ಹಂಚಿಕೊಳ್ಳುತ್ತಾರೆ.
ಹೂಕುಂಡಗಳಂತಹ ಅಲಂಕಾರಿಕ ಬುಟ್ಟಿಗಳು ಇಲ್ಲಿನ ಆಕರ್ಷಣೆ. ನವರಾತ್ರಿ, ಶಿವರಾತ್ರಿ, ದಸರಾ, ಹೀಗೆ ಹಬ್ಬಗಳ ಸಮಯದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ಗೌರಿ ಹಬ್ಬದ ಸಮಯದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಮೊರಗಳು ಹೆಚ್ಚು ಮಾರಾಟವಾಗುತ್ತವೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇಲ್ಲಿ ಬುಟ್ಟಿಗಳು ತಯಾರಾಗುತ್ತವೆ. ತಮಗೆ ಬೇಕಾದ ವಿನ್ಯಾಸವನ್ನು ಮೊದಲೇ ತಿಳಿಸಿದರೆ ಅವುಗಳನ್ನು ಇಲ್ಲಿನ ವ್ಯಾಪಾರಿಗಳು ಸಿದ್ಧಪಡಿಸುತ್ತಾರೆ. ಬಿದಿರಿನಿಂದ ತಯಾರಿಸಿದ ಆನೆಗಳಿಗೆ ಮೂರು ಸಾವಿರದವರೆಗೆ ಬೆಲೆ ನಿಗದಿಸಲಾಗುತ್ತದೆ. ಸಣ್ಣ ಬುಟ್ಟಿಗಳಾದರೆ ₹150 ರಿಂದ ₹250ರ ವರೆಗೆ ಬೆಲೆ ಇರುತ್ತದೆ..
ಮೂಲ ಸೌಕರ್ಯವಿಲ್ಲ
ಸುಮಾರು ವರ್ಷಗಳಿಂದ ಚಾಮರಾಜಪೇಟೆಯಲ್ಲಿಯೇ ಮತ ಚಲಾಯಿಸುತ್ತಿರುವ ಈ ಕುಟುಂಬಗಳಿಗೆ ಇದುವರೆಗೂ ಯಾವ ಮೂಲ ಸೌಕರ್ಯಗಳಿಲ್ಲ. ‘ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ತಪ್ಪದೇ ಬಂದು ಮತದಾನ ಮಾಡುವಂತೆ ಕೇಳುತ್ತಾರೆ. ಆದರೆ, ಚುನಾವಣೆ ಆದ ನಂತರ ಒಬ್ಬರೂ ಇಲ್ಲಿಗೆ ಬರುವುದಿಲ್ಲ. ಮನೆ ಮತ್ತು ಅಂಗಡಿ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದೆವು, ಬರಬರುತ್ತಾ ನಮಗೇ ಬೇಸರವಾಗಿ ಕೇಳುವುದನ್ನೇ ಬಿಟ್ಟಿದ್ದೇವೆ. ಅವರೇಬರುತ್ತಾರೆ ಮನೆ ಮತ್ತು ಅಂಗಡಿ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ಕೊಟ್ಟು ಹೋಗುತ್ತಾರೆ, ಮತ್ತೆ ಚುನಾವಣೆ ಬಂದಾಗ ಮಾತ್ರವೇ ಅವರು ಇಲ್ಲಿಗೆ ಬರುವುದು’ ಎಂದು ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.
ಸರ್ಕಾರದಿಂದ ಬರುವ ಸಹಾಯಧನ ನಮ್ಮ ಕೈಗೆಟುಕ ದಂತಾಗಿದೆ. ನಮಗೆ ಸಹಾಯಧನದ ಬಗ್ಗೆ ತಿಳಿವಳಿಕೆ ಇಲ್ಲ, ಎಲ್ಲಿ ಹೋಗಬೇಕು ಯಾರನ್ನ ಕೇಳಬೇಕು ತಿಳಿದಿಲ್ಲ. ಸಹಾಯಧನ ನಮಗೆ ಸಿಗುತ್ತಿಲ್ಲ. ಸಹಾಯಧನವನ್ನು ಹೊರತುಪಡಿಸಿ ಕೈಗಾರಿಕಾ ಸಾಲ ಸಹ ನಮಗೆ ಸಿಗುತ್ತಿಲ್ಲ ಎನ್ನುತ್ತಾರೆ ಕೃಷ್ಣಪ್ಪ.
ಸಮಸ್ಯೆಗಳಿಗೆ ಹೊಂದಿಕೊಂಡ ಜೀವನ
ರಸ್ತೆ ಬದಿಯಲ್ಲಿ ವಾಸವಾಗಿರುವುದರಿಂದ ನಿತ್ಯ ವಾಹನಗಳ ಕಿರಿಕಿರಿ, ಮಕ್ಕಳಿಗೆ ಓದಲು ಕಷ್ಟವಾಗುತ್ತಿದೆ. ಕೆಲವು ಪೊಲೀಸರು ಇಲ್ಲಿ ಅಂಗಡಿ ಇಡುವ ಹಾಗಿಲ್ಲ ಎಂದು ನಮ್ಮ ಬುಟ್ಟಿಗಳನ್ನು ರಸ್ತೆಗೆ ಎಸೆಯುತ್ತಾರೆ. ನಮ್ಮ ಬಳಿ ಹಣ ಪಡೆಯುತ್ತಾರೆ. ಮೊದಲು ಠಾಣೆಗೆ ಎಳೆದೊಯ್ಯುತ್ತಿದ್ದರು. ಇತ್ತೀಚೆಗೆ ಸ್ವಲ್ಪ ಕಡಿಮೆಯಾಗಿದೆ ಎಂದೂ ಕೃಷ್ಣಪ್ಪ ನೆನಪಿಸಿಕೊಳ್ಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.