ಚರ್ಚ್‌ಸ್ಟ್ರೀಟ್‌ನ ಎರಡನೇ ಮಹಡಿಯಲ್ಲಿರುವ ಬಾರ್‌ವೊಂದರ ಕಿಟಕಿಯಿಂದ ಶುಕ್ರವಾರ ರಾತ್ರಿ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ವ್ಯಕ್ತಿಗಳಿಬ್ಬರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ನಗರದ ಪಬ್, ಬಾರ್ ಮತ್ತು ಜಾಯಿಂಟ್‌ಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆಗಳು ಕಾಡತೊಡಗಿವೆ..
ನಗರದಲ್ಲಿ ಹೆಜ್ಜೆಗೊಂದರಂತೆ ಬಾರ್, ವೈನ್‌ಶಾಪ್, ಪಬ್‌ಗಳಿದ್ದರೂ ಗಿರಾಕಿಗಳ ಕೊರತೆ ಇಲ್ಲ. ಸಂಜೆಯಾದರೆ ಶುರುವಾಗುವ ಜಾತ್ರೆ ಮಧ್ಯರಾತ್ರಿಯವರೆಗೂ ಎಗ್ಗಿಲ್ಲದೆ ನಡೆಯುತ್ತದೆ. ಬಾರು ಬಾಗಿಲು ಹಾಕಿದ ಮೇಲೆಯೂ ರಸ್ತೆಯಲ್ಲಿ ತೂರಾಟ, ಕೂಗಾಟದ ಪುಕ್ಕಟೆ ಮನರಂಜನೆ ಇರುತ್ತದೆ. ಪೊಲೀಸರು ಅವರೆನ್ನಲ್ಲ ಮನೆಗೆ ಸಾಗ ಹಾಕುವ ಹೊತ್ತಿಗೆ ಸಾಕುಬೇಕಾಗುತ್ತದೆ. ವಾರಾಂತ್ಯ ಬಂತೆಂದರೆ ಬಾರ್‌ಗಳ ಮುಂದೆ ಜಾತ್ರೆಯೇ ನೆರೆದಿರುತ್ತದೆ.
ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಬಾರ್, ಪಬ್, ಜಾಯಿಂಟ್‌ಗಳು ಗ್ರಾಹಕರಿಗೆ ಎಷ್ಟು ಸುರಕ್ಷಿತ ಎಂದು ಪರೀಕ್ಷಿಸಲು ‘ಮೆಟ್ರೊ’ ರಿಯಾಲಿಟಿ ಚೆಕ್ ನಡೆಸಿದಾಗ ಕಂಡು ಬಂದಿದ್ದು ಬೆಚ್ಚಿ ಬೀಳಿಸುವ ಸಂಗತಿಗಳು.
ಕೋಳಿಗೂಡಿನಂತಹ ಬಾರ್, ಕಿರಿದಾದ ಸ್ಟೇರ್‌ಕೇಸ್, ಕಡಿದಾದ ಮೆಟ್ಟಿಲುಗಳು, ಅಬ್ಬರದ ಸಂಗೀತ ಮತ್ತು ಜನಜಂಗುಳಿ ದಾಟಿಕೊಂಡು ಮಂದ ಬೆಳಕಿನಲ್ಲಿ ಆಯತಪ್ಪದಂತೆ ಹೆಜ್ಜೆ ಹಾಕಿ ಹೊರಬರುವುದೇ ಒಂದು ಸರ್ಕಸ್. ಸ್ವಲ್ಪ ಆಯ ತಪ್ಪಿದರೂ ಆಪತ್ತು ತಪ್ಪಿದ್ದಲ್ಲ. ಈ ಕೋಳಿಗೂಡುಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದರೆ ನಂದಿಸಲು ಅಗ್ನಿಶಾಮಕ ವ್ಯವಸ್ಥೆ, ತುರ್ತು ನಿರ್ಗಮನ ದ್ವಾರಗಳಿಲ್ಲ. ಕೆಲವು ಬಾರ್‌ಗಳಲ್ಲಿಸಿ.ಸಿ ಟಿ.ವಿ ಕ್ಯಾಮೆರಾಗಳೂ ಕಾಣುವುದಿಲ್ಲ. ಬಹುತೇಕ ಮಧ್ಯಮ ದರ್ಜೆಯ ಬಾರ್‌ಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
ಮೆಜೆಸ್ಟಿಕ್, ಮಲ್ಲೇಶ್ವರ, ರಾಜಾಜಿನಗರ, ಚಿಕ್ಕಪೇಟೆ, ಬಿನ್ನಿಪೇಟೆ, ಶೇಷಾದ್ರಿಪುರ, ಯಶವಂತಪುರ,ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರ, ವೈಟ್‌ಫೀಲ್ಡ್ ಸೇರಿದಂತೆ ಹೆಚ್ಚಿನ ಪಬ್, ಬಾರ್‌ಗಳು ಮೊದಲ ಮತ್ತು ಎರಡನೇ ಮಹಡಿಯಲ್ಲಿವೆ.ಟೆರೆಸ್ ಗಾರ್ಡನ್ ಬಾರ್‌ಗಳು ಎರಡು ಮತ್ತು ಮೂರನೇ ಮಹಡಿಗಳ ಮೇಲೆ. ಬೇಸ್‌ಮೆಂಟ್ ಬಾರ್‌ಗಳ ಸಂಖ್ಯೆ ಕಡಿಮೆ.
ಯುವತಿಯರು ಭೇಟಿ ನೀಡುವ ಕೋರ ಮಂಗಲ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ವೈಟ್‌ಫೀಲ್ಡ್, ಇಂದಿರಾ ನಗರ ಪಬ್‌ಗಳಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಇಲ್ಲ. ಮಹಿಳಾ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆ ಈ ಹಿಂದೆ ಬಾರ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.
ಹಳೆಯ ಬಾರ್‌ಗಳಲ್ಲಿ ಉಸಿರಾಡಲು ಕಿಟಕಿಗಳಿಲ್ಲ. ಹೊಸ ವಿನ್ಯಾಸದ ಆಧುನಿಕ ಬಾರ್, ಟೆರೆಸ್ ಗಾರ್ಡನ್ ಬಾರ್‌ಗಳಲ್ಲಿ ದೊಡ್ಡ, ದೊಡ್ಡ ಗಾಜಿನ ಕಿಟಕಿಗಳಿದ್ದರೂ ಸುರಕ್ಷತೆಗೆ ಕಬ್ಬಿಣದ ಸರಳುಗಳಿಲ್ಲ. ಸ್ವಲ್ಪ ಜೋಲಿ ತಪ್ಪಿದರೂ ಸಾಕು, ಕಿಟಕಿಯಿಂದ ಕೆಳಗೆ ಬಿದ್ದು ಪ್ರಾಣ ಬಿಡಬೇಕು. ಗ್ರಾಹಕರ ಜೀವ ರಕ್ಷಿಸಲು ಯಾವುದೇ ಸುರಕ್ಷಿತ ಕ್ರಮಗಳು ಕಾಣುವುದಿಲ್ಲ.ಗ್ರಾಹಕರ ‘ಬಿಲ್’ ಮೇಲಷ್ಟೇ ದೃಷ್ಟಿನೆಟ್ಟಿರುವ ಮಾಲೀಕರಲ್ಲಿ ಗ್ರಾಹಕರ ಸುರಕ್ಷತೆ ಬಗ್ಗೆ ಅಸಡ್ಡೆ ಎದ್ದು ಕಾಣುತ್ತದೆ.
ಈ ಬಗ್ಗೆ ಬಾರ್ ಮಾಲೀಕರನ್ನು ಪ್ರಶ್ನಿಸಿದರೆ, ‘ಪ್ರತಿದಿನ ಸಾವಿರಾರು ಗ್ರಾಹಕರು ಬರುತ್ತಾರೆ. ಪ್ರತಿಯೊಬ್ಬರಿಗೂ ಭದ್ರತೆ ನೀಡುವುದು, ಮನೆಗೆ ತಲುಪಿಸುವುದು ಹೇಗೆ ಸಾಧ್ಯ’ ಎಂದು ಮರು ಪ್ರಶ್ನೆ ಹಾಕುತ್ತಾರೆ. ‘ಯಾವುದೇ ಅನಾಹುತ ನಡೆಯಬಾರದು ಎಂದು ನಾವೂ ಬಯಸುತ್ತೇವೆ. ಇಂತಹ ಘಟನೆ ನಡೆದರೆ ನಮಗೆ ಕೆಟ್ಟ ಹೆಸರು. ಕೆಲವೊಮ್ಮೆ ಇಂತಹ ಅಹಿತಕರ ಘಟನೆಗಳು ಆಕಸ್ಮಿಕವಾಗಿ ನಡೆದು ಹೋಗುತ್ತವೆ’ ಎನ್ನುತ್ತಾರೆ.
ಮಹಿಳಾ ಭದ್ರತಾ ಸಿಬ್ಬಂದಿ ಇಲ್ಲ
ಶುಕ್ರವಾರದ ಕರಾಳ ಘಟನೆಯ ನಂತರ ಇದುವರೆಗೂ ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ, ಸುರಕ್ಷಿತ ಕ್ರಮಗಳ ಬಗ್ಗೆ ಅವಲೋಕನ ನಡೆಸಿಲ್ಲ. ಘಟನೆ ನಡೆದ ಚರ್ಚ್‌ಸ್ಟ್ರೀಟ್ ಅಕ್ಕಪಕ್ಕದ ಬಾರ್ ಮತ್ತು ಪಬ್‌ಗಳಲ್ಲಿ ಯುವಕ, ಯುವತಿಯರು ಇನ್ನೂ ಬಾಲ್ಕನಿಗಳ ರೇಲಿಂಗ್‌ಗಳಿಗೆ ಆತುಕೊಂಡು ಬಿಂದಾಸ್ ಆಗಿ ಮದ್ಯ ಸೇವಿಸುತ್ತಿದ್ದ ದೃಶ್ಯಗಳು ಕಂಡುಬಂದವು.ಅಲ್ಲಿಂದ ಆಯತಪ್ಪಿ ಬಿದ್ದರೆ ಬದುಕುಳಿಯುವುದು ಸಾಧ್ಯವಿಲ್ಲದ ಮಾತು.
ಪಬ್ ಮಾಲೀಕರು, ಮ್ಯಾನೇಜರ್ ಅಥವಾ ಸಿಬ್ಬಂದಿ ಅವರನ್ನು ತಡೆಯುವ ಗೋಜಿಗೆ ಹೋಗುತ್ತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದರೆ ಗಿರಾಕಿಗಳನ್ನು ಕಳೆದುಕೊಳ್ಳುವ ಭೀತಿ ಅವರನ್ನು ಕಾಡುತ್ತಿದೆ.
ಏನಾದವು ಕಿಯೋಸ್ಕ್ ಯಂತ್ರ?
ಈ ಹಿಂದೆ ನಗರದ ಪಬ್ ಮತ್ತು ಬಾರ್‌ಗಳಲ್ಲಿ ಮದ್ಯ ಸೇವನೆ ಪ್ರಮಾಣ ಪತ್ತೆ ಹಚ್ಚುವ ಕಿಯೋಸ್ಕ್ ಯಂತ್ರಗಳನ್ನು ಅಳವಡಿಸಲಾಗಿತ್ತು. ಗ್ರಾಹಕರು ತಾವು ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ದೇವೆ ಎಂದು ಅದರಿಂದ ಮಾಹಿತಿ ಪಡೆಯಬಹುದಿತ್ತು.
ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವಿಸಿದ್ದರೆ ಮನೆಗೆ ಹೋಗಲು ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದಿತ್ತು. ರಸ್ತೆ ಅಪಘಾತ ತಪ್ಪಿಸಲು ಮತ್ತು ಗ್ರಾಹಕರನ್ನು ಮನೆಗೆ ತಲುಪಿಸಲು ರಾಜ್ಯ ಸರ್ಕಾರ ಮೂರ‍್ನಾಲ್ಕು ವರ್ಷಗಳ ಹಿಂದೆ ಓಲಾ ಸಂಸ್ಥೆಯ ಜತೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಈ ಯಂತ್ರಗಳು ಎಲ್ಲಿಯೂ ಕಾಣುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ಯಾರಿಗೂ ಮಾಹಿತಿ ಯೂ ಇಲ್ಲ.
ಮದ್ಯದಂಗಡಿಗಳು ನಿಗದಿತ ಅವಧಿಗಿಂತ ಹೆಚ್ಚು ‘ಕಳ್ಳದಾರಿಗಳ' ಅಥವಾ ‘ಕಳ್ಳಗಿಂಡಿ‘ಗಳ ಮೂಲಕ ಮದ್ಯ ಸರಬರಾಜು ಮಾಡುವುದು ಸಾಮಾನ್ಯ. ಇದರಿಂದಾಗಿ ಕೆಲವೊಂದು ಬಾರಿ ಚಿಕ್ಕಪುಟ್ಟ ಸಂಘರ್ಷಗಳು ಕೈ, ಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತವೆ. ಪೊಲೀಸರೂ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ.
ಜತೆಗೆ ವ್ಯಕ್ತಿ ಕರೆದೊಯ್ಯುವುದು ಸೇಫ್
ಬಾರ್ ಅಥವಾ ಪಬ್‌ಗೆ ಹೋಗುವುದಿದ್ದರೆ ಮದ್ಯ ಕುಡಿಯದ ವ್ಯಕ್ತಿಯೊಬ್ಬರು ನಿಮ್ಮ ಜೊತೆಗಿರಲಿ. ಅವರು ನಿಮ್ಮನ್ನು ಮನೆಯವರೆಗೆ ಸುರಕ್ಷಿತವಾಗಿ ತಲುಪಿಸಬಲ್ಲರು. ಅದು ಸಾಧ್ಯವಾಗದಿದ್ದರೆ ವಾಹನವನ್ನು ಅಲ್ಲೇ ಬಿಟ್ಟು ಟ್ಯಾಕ್ಸಿ ಹತ್ತಿ ಎನ್ನುವುದು ಪೊಲೀಸರ ಸಲಹೆ.
ಸಿ.ಸಿ ಟಿ.ವಿ ಕ್ಯಾಮೆರಾಗಳ ಅಳವಡಿಕೆ, ಮಹಿಳಾ ಭದ್ರತಾ ಸಿಬ್ಬಂದಿಯ ನೇಮಕ ಸೇರಿದಂತೆ ಪಬ್ ಹಾಗೂ ಬಾರ್‌ಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪಬ್ ಹಾಗೂ ಬಾರ್‌ಗಳಲ್ಲಿ ಅಹಿತಕರ ಘಟನೆ ನಡೆದರೆ ಮಾಲೀಕರನ್ನೇ ಹೊಣೆ ಮಾಡಲಾಗುವುದು ಎಂದು ಪೊಲೀಸರು ಹೇಳುತ್ತಾರೆ.
ವಾರಾಂತ್ಯದಲ್ಲಿ ಕುಡಿದು ವಾಹನ ಚಲಾಯಿಸಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚುತ್ತಿದೆ. ಅದರಲ್ಲಿ ಹಲವರು ಯುವಕರು ಮತ್ತು ಮಹಿಳೆಯರೂ ಇದ್ದಾರೆ. 2018ರಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 17 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ದಾಖಲೆಗಳು ಹೇಳುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.