ಆ ವಾರ್ಡಿನಲ್ಲೊಂದು ಮಾರುತಿ ವ್ಯಾನ್ ಇದೆ. ಅದರಲ್ಲಿ ಸ್ವಯಂಸೇವಕರು ಅಲ್ಲಿನ ಜನರಿಗಾಗಿ ದಿನದ 24 ಗಂಟೆಯೂ ಶ್ರಮಿಸುತ್ತಿದ್ದಾರೆ. ಆ ಶ್ರಮದ ಹಿಂದೆ ನಿಸ್ವಾರ್ಥತೆ ಇದೆ. ಮಾನವೀಯ ಗುಣವಿದೆ. ಆಪತ್ತಿನಲ್ಲಿರುವವರನ್ನು ರಕ್ಷಿಸುವ ಧೈರ್ಯವಿದೆ. ಎಲ್ಲಕ್ಕಿಂತ ಮಿಗಿಲಾಗಿ ಅಗತ್ಯವುಳ್ಳವರಿಗೆ ಸಹಾಯ ನೀಡುವ ಉದಾರತೆ ಇದೆ.
ಆಪತ್ ಸನ್ನಿವೇಶ ಹಾಗೂ ಕಿರಿಕಿರಿ ಉಂಟು ಮಾಡುವ ವಾತಾವರಣದಿಂದ ಸರ್ಕಾರಿ ಸಿಬ್ಬಂದಿಗಳಿಗಿಂತಲೂ ತ್ವರಿತವಾಗಿ ಜನರಿಗೆ ಮುಕ್ತಿ ಕೊಡಿಸುವ ಆ ಸ್ವಯಂಸೇವಕರ ತಂಡಕ್ಕೆ ‘ಬಾಂಧವ’ ಎಂಬ ಹೆಸರಿಡಲಾಗಿದೆ. ಜಯನಗರದ ಭೈರಸಂದ್ರ ವಾರ್ಡಿನ ವ್ಯಾಪ್ತಿಯಲ್ಲಿ ಸೇವೆ ಒದಗಿಸುತ್ತಿರುವ ಈ ತಂಡದ ಕಾರ್ಯವು ನಗರದ ಇತರ 197 ವಾರ್ಡ್‌ಗಳಿಗೂ ಮಾದರಿಯಂತಿದೆ.
‘ಬಾಂಧವ’ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ವ್ಯಕ್ತಿ ಭೈರಸಂದ್ರದ ಪಾಲಿಕೆ ಸದಸ್ಯ ಎನ್.ನಾಗರಾಜ್. ರಾಜಕಾರಣದಲ್ಲಿದ್ದರೂ ಅವರು ಈ ಬಾಂಧವ ಸೇವೆಯನ್ನು ರಾಜಕೀಯ, ಪಕ್ಷಬೇಧ ಹಾಗೂ ಧರ್ಮ ತಾರತಮ್ಯ ರಹಿತವಾಗಿ ಕಲ್ಪಿಸಿದ್ದಾರೆ. 2016ರಲ್ಲಿ ಶುರುವಾದ ಬಾಂಧವ ಸಂಕಷ್ಟದಲ್ಲಿದ್ದ ಸಾವಿರಾರು ಮಂದಿಯ ನೆರವಿಗೆ ನಿಂತಿದೆ.
ಈ ಬಗ್ಗೆ ಮಾಹಿತಿ ನೀಡುವ ಪಾಲಿಕೆ ಸದಸ್ಯ ಎನ್. ನಾಗರಾಜ್, ‘ಈಚೆಗೆ ವಯಸ್ಸಾದ ಮಹಿಳೆಯೊಬ್ಬರು ಪಡಿತರ ಅಕ್ಕಿ ಪಡೆಯಲೆಂದು ಕಷ್ಟಪಟ್ಟೇ ನ್ಯಾಯಬೆಲೆ ಅಂಗಡಿಗೆ ಹೋಗಿದ್ದರು. ಅಲ್ಲಿ ಮಾರುದ್ದದ ಸರದಿ ಸಾಲಿನಲ್ಲಿ ನಿಂತಿದ್ದ ಅವರು ಸುಸ್ತಾಗಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಆಗ ಕೂಡಲೇ ಸ್ಥಳಕ್ಕಾಗಮಿಸಿದ ನಮ್ಮ ಬಾಂಧವ ತಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅವರ ಪ್ರಾಣ ಉಳಿಸಿದೆ. ಇಂತಹ ಹಲವಾರು ಒಳ್ಳೆಯ ಕಾರ್ಯಗಳನ್ನು ಈ ತಂಡ ಮಾಡುತ್ತಿದೆ. ಜನರ ಅಗತ್ಯಕ್ಕೆ ಅನುಕೂಲವಾಗಲೆಂದು 2016ರಲ್ಲಿ ಈ ಬಾಂಧವ ಸೇವೆಯನ್ನು ಶುರು ಮಾಡಿದೆ. ಇಂದು ನೂರಾರು ಮಂದಿ ಸ್ವಯಂಸೇವಕರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರೂ ಸ್ವಯಂಪ್ರೇರಿತರಾಗಿ ಈ ತಂಡದಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ’ ಎನ್ನುತ್ತಾರೆ.
ಬಾಂಧವ ಕಾರ್ಯವೇನು?
ಭೈರಸಂದ್ರ ವಾರ್ಡಿನ ವ್ಯಾಪ್ತಿಯಲ್ಲಿ ಯಾವುದೇ ಸಮಯದಲ್ಲಿ ಯಾರಿಗೇ ತೊಂದರೆಯಾಗಲಿ, ಯಾರೇ ಸಂಕಷ್ಟದ ಸ್ಥಿತಿಯಲ್ಲಿರಲಿ ವಿಷಯ ತಿಳಿದ ಐದರಿಂದ ಹತ್ತು ನಿಮಿಷದೊಳಗೆ ಸ್ಥಳಕ್ಕೆ ಹೋಗಿ ಅವರ ನೆರವಿಗೆ ನಿಲ್ಲುತ್ತದೆ. ಕುಡಿಯುವ ನೀರಿನ ಅಡಚಣೆ, ವಿದ್ಯುತ್ ಸಮಸ್ಯೆ, ಟ್ರಾಫಿಕ್ ಜಾಮ್, ಕಸದ ಸಮಸ್ಯೆ, ರಸ್ತೆಗೆ ಉರುಳಿದ ಮರಗಳು, ರಸ್ತೆ ಮೇಲೆ ನಿಂತ ನೀರು… ಹೀಗೆ ವಾರ್ಡಿನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬಂದರೂ ಅದರ ಪರಿಹಾರಕ್ಕಾಗಿ ಮೊದಲಿಗೆ ಬರುವುದು ‘ಬಾಂಧವ’. ತನ್ನಿಂದ ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಸರ್ಕಾರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯನ್ನು ಪರಿಹರಿಸುವ ಹೊಣೆಯನ್ನೂ ಈ ತಂಡ ಹೊತ್ತಿದೆ.
ಸಮಾಜ ಸೇವೆಗಳಿಗೆ ಸಾರ್ವಜನಿಕರ ಜೊತೆಗೂಡುವುದು, ಉಚಿತವಾಗಿ ಸಸಿಗಳನ್ನು ವಿತರಿಸುವುದು, ಹಾಗೆ ವಿತರಿಸಿದ ಸಸಿಗಳ ಪೋಷಣೆಯ ಮೇಲೆ ನಿಗಾವಹಿಸುವುದು, ವಯಸ್ಸಾದವರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು, ತುರ್ತು ಅಗತ್ಯವುಳ್ಳವರಿಗೆ ಔಷಧಿಗಳನ್ನು ತಂದುಕೊಡುವುದು, ಕಸ ವಿಂಗಡನೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಬಾಂಧವದ ಕಾರ್ಯವೈಖರಿ. ಸಂಪರ್ಕಕ್ಕೆ: 9663859999
ಅನಾಹುತ ತಪ್ಪಿಸಿದ ‘ಬಾಂಧವ’
ಮನೆಯ ಬಳಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಶಾರ್ಟ್ ಸರ್ಕೀಟ್ ಉಂಟಾಗಿತ್ತು. ಅದರಿಂದ ಭಾರಿ ಅನಾಹುತದ ಸಂಭವ ಎದುರಾಗಿತ್ತು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬರುವ ಮುನ್ನವೇ ಬಾಂಧವ ಸ್ಥಳಕ್ಕೆ ಬಂದು ಸಂಭವಿಸುತ್ತಿದ್ದ ಅನಾಹುತವನ್ನು ತಪ್ಪಿಸಿತು. ಸರ್ಕಾರಿ ಸಿಬ್ಬಂದಿಗಿಂತಲೂ ತ್ವರಿತವಾಗಿ ಸೇವೆ ಒದಗಿಸುವ ಬಾಂಧವದ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು.
ಕಾಳಮ್ಮ, ನಕ್ಕಲ್ ಬಂಡೆ ಕಾಲೊನಿಯ ಮಹಿಳೆ
**
ನೀರಿನ ಸಮಸ್ಯೆ ಪರಿಹರಿಸಿತ್ತು
ಜಯನಗರದ ಮೂರನೇ ಹಂತದಲ್ಲಿ ಒಮ್ಮೆ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಕುಡಿಯುವ ನೀರು ಸಿಗದೇ ತುಂಬಾ ತೊಂದರೆ ಎದುರಾಗಿತ್ತು. ಜಲಮಂಡಳಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಿಷಯ ತಿಳಿದ ಸ್ಥಳಕ್ಕೆ ಬಂದ ಬಾಂಧವ ನೀರಿನ ಸಮಸ್ಯೆಯನ್ನು ಬಗೆಹರಿಸಿತ್ತು. ಅದಾದ ಬಳಿಕ ಅಂತಹ ಸಮಸ್ಯೆ ಮತ್ತೆಂದೂ ಕಾಣಿಸಿಕೊಂಡಿಲ್ಲ
ನಾಗಮ್ಮ, ಜಯನಗರ 3ನೇ ಹಂತ
**
ಕಸದ ಸಮಸ್ಯೆ ನಿವಾರಿಸಿತ್ತು
ಈ ಹಿಂದೆ ಭೈರಸಂದ್ರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿತ್ತು. ಸಾರ್ವಜನಿಕರು, ಹೋಟೆಲ್ ಗಳ ಸಿಬ್ಬಂದಿಯು ಕಸವನ್ನು ರಾತ್ರೋರಾತ್ರಿ ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದರು. ಇದರಿಂದ ಇಡೀ ವಾತಾವರಣವೇ ಕಲುಷಿತಗೊಂಡಿತ್ತು. ಈ ಬಗ್ಗೆ ನೆರವಿಗೆ ಬಂದ ಬಾಂಧವ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕಸವನ್ನು ಹಾಕಲು ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲು ಕಾರಣವಾಗಿತ್ತು. ಭೈರಸಂದ್ರದಲ್ಲಿದ್ದ ಕಸದ ಪಾಯಿಂಟ್ ತೆಗೆಸಲಾಯಿತು.
ಕಲ್ಲೇಶ್,ಭೈರಸಂದ್ರದ ನಿವಾಸಿ
**
ವೃದ್ಧರಿಗೂ ನೆರವು
ವೃದ್ಧರಿಗೆ ಹಾಗೂ ಅಸಹಾಯಕರಿಗೆ ತುರ್ತಾಗಿ ಬೇಕಾದ ಔಷಧಿಗಳನ್ನು ಬಾಂಧವ ತಂಡಕ್ಕೆ ತಿಳಿಸಿದರೆ ಸಾಕು ಕೆಲ ಹೊತ್ತಿನಲ್ಲಿ ಔಷಧಿಯನ್ನು ಅವರಿರುವ ಸ್ಥಳಕ್ಕೆ ಪೂರೈಸುತ್ತದೆ. ಇದು ಅತ್ಯಂತ ಖುಷಿ ಕೊಡುವ ಕೆಲಸ. ಬೇಕೆಂದ ಕೂಡಲೇ ಬಾಂಧವ ನೆರವಿಗೆ ಬರುತ್ತದೆ.
ಜಯಾನಂದ್,ಎಲ್ಐಸಿ ಕಾಲೊನಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.