ADVERTISEMENT

ಸಾವಿರ ಅಡಿ ಕೊರೆದರೂ ಬರದು ಇಲ್ಲಿ ಹನಿ ನೀರು!

ಬೆಂಗಳೂರಿನಲ್ಲಿ ಬತ್ತುತ್ತಿವೆ ಕೊಳವೆಬಾವಿಗಳು

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 5:11 IST
Last Updated 24 ಜುಲೈ 2019, 5:11 IST
ಮಲ್ಲೇಶ್ವರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆಯುತ್ತಿರುವ ಬೋರ್‌ವೆಲ್‌ ಕೊರೆಯುವ ಕೆಲಸ
ಮಲ್ಲೇಶ್ವರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆಯುತ್ತಿರುವ ಬೋರ್‌ವೆಲ್‌ ಕೊರೆಯುವ ಕೆಲಸ   

ಮಲ್ಲೇಶ್ವರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹಗಲು, ರಾತ್ರಿ ಒಂದೇ ಸವನೆ ಕಿವಿ ತೂತು ಬೀಳುವಂತೆ ಸದ್ದು ಮಾಡುತ್ತಿದ್ದ ಬೋರ್‌ವೆಲ್‌ ಕೊರೆಯುವ ಯಂತ್ರ ಮೂರು ದಿನಗಳ ನಂತರ ಏಕಾಏಕಿ ಸ್ತಬ್ದವಾಯಿತು. ಕುತೂಹಲಕ್ಕೆ ಇಣುಕಿ ಹಾಕಿದರೆ ಅಪಾರ್ಟ್‌ಮೆಂಟ್‌ನ ಸೆಲ್ಲಾರ್‌ನಲ್ಲಿ ಮಣ್ಣಿನ ಗುಡ್ಡೆ ಬಿದ್ದಿರುವುದು ಕಂಡಿತೇ ಹೊರತು ಎಲ್ಲಿಯೂ ಹನಿ ನೀರು ಕಾಣಲಿಲ್ಲ ಮತ್ತು ಅಪಾರ್ಟ್‌ಮೆಂಟ್‌ ವಾಸಿಗಳ ಮುಖದಲ್ಲಿ ನಗುವೂ ಕಾಣಲಿಲ್ಲ.

‘ಎಷ್ಟು ನೀರು ಬಿತ್ತು, ಎಷ್ಟು ಅಡಿ ಕೊಳವೆಬಾವಿ ಕೊರೆಸಿದಿರಿ’ ಎಂದು ಕುತೂಹಲ ಹೊತ್ತವರ ದೊಡ್ಡ ದಂಡು ಅಲ್ಲಿ ನೆರೆದಿತ್ತು. ಕೊಳವೆಬಾವಿ ಕೊರೆಸಿದ ಅಪಾರ್ಟ್‌ಮೆಂಟ್‌ ವಾಸಿಗಳು ಮಾತ್ರನಿರಾಶೆಯಿಂದ ‘ಒಂದು ಹನಿ ನೀರೂ ಬರಲಿಲ್ಲ’ ಎಂದರು.

ಮೂರು ದಿನ ಒಂದು ಸಾವಿರ ಅಡಿ ಕೊಳವೆಬಾವಿ ಕೊರೆದರು ಹನಿ ನೀರು ಜಿನುಗಗಿಲ್ಲ ಎಂದರೆ ಆಶ್ಚರ್ಯವಾಯಿತು. ಆದರೂ, ಅಪಾರ್ಟ್‌ಮೆಂಟ್‌ ನಿವಾಸಿಗಳು ಇನ್ನೂ 100 ರಿಂದ 200 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೆ ನೀರು ಬಂದೀತು ಎಂಬ ಆಶಯದಲ್ಲಿದ್ದಾರೆ.ಇದು ಕೇವಲ ಮಲ್ಲೇಶ್ವರದ ಸ್ಥಿತಿ ಮಾತ್ರವಲ್ಲ. ಇಡೀ ಬೆಂಗಳೂರು ನಗರದ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ADVERTISEMENT

‘ಇನ್ನೂ ಸಾವಿರ ಅಡಿ ಕೊರೆದರೂ ನೀರು ಬರುವ ಲಕ್ಷಣ ಇಲ್ಲ’ ಎಂದು ಬೋರ್‌ವೆಲ್‌ ಕಂಪನಿಯ ಪ್ರತಿನಿಧಿ ಮಹೇಶ್‌ ಸ್ಪಷ್ಟವಾಗಿ ಹೇಳಿದರು. ‘ಸಾವಿರ ಅಡಿ ಆಳದವರೆಗೆ ಕೊರೆಯುವ ಸಾಮರ್ಥ್ಯವುಳ್ಳ ಯಂತ್ರ ಮಾತ್ರ ನಮ್ಮಲ್ಲಿರುವುದು. ಅದಕ್ಕೂ ಹೆಚ್ಚು ಆಳಕ್ಕೆ ಇಳಿಯಬೇಕು ಎಂದರೆ ಬೇರೆ ಕಂಪನಿಯನ್ನು ಸಂಪರ್ಕಿಸಿ. ಹೊರ ತೆಗೆದ ಮಣ್ಣಿನ ಗುಣ ಲಕ್ಷಣಗಳನ್ನು ಗಮನಿಸಿದರೆ ನೀರು ಬರುವುದು ಅನುಮಾನ’ ಎಂದು ಸಲಹೆ ನೀಡಿದರು. ಯಂತ್ರೋಪಕರಣ, ಸರಂಜಾಮುಗಳನ್ನು ಕಟ್ಟಿಕೊಂಡು ಹೊರಡಲು ಅಣಿಯಾದ ಮಹೇಶ್‌ ‘ಮೆಟ್ರೊ’ ಜತೆ ಮಾತಿಗಿಳಿದರು.

ಜುಲೈ ಮುಗಿಯುತ್ತಾ ಬಂದರೂ ಇನ್ನೂ ಮಳೆಯಾಗದ ಕಾರಣ ಅಲ್ಪಸ್ವಲ್ಪ ನೀರು ಬರುತ್ತಿದ್ದ ಬೆಂಗಳೂರಿನಹೆಚ್ಚಿನ ಕೊಳವೆಬಾವಿಗಳು ಈಗಾಗಲೇ ಬತ್ತುತ್ತಿವೆ. ಮಾರ್ಚ್‌–ಏಪ್ರಿಲ್‌ನಿಂದಲೇ ನೀರಿನ ಕೊರತೆ ಎದುರಿಸುತ್ತಿರುವ ಅಪಾರ್ಟ್‌ಮೆಂಟ್‌, ವಸತಿ ಗೃಹ, ಹೋಟೆಲ್‌ಗಳು ಹೊಸ ಕೊಳವೆಬಾವಿ ಕೊರೆಸಿದರೂ ನೀರು ಬರುತ್ತಿಲ್ಲ. ಐದು ಹೊಸ ಕೊಳವೆಬಾವಿಗಳಲ್ಲಿ ನಾಲ್ಕು ವಿಫಲವಾಗುತ್ತಿವೆ.

ವಿಫಲವಾಗುತ್ತಿವೆ ಹೊಸ ಕೊಳವೆಬಾವಿ

‘15 ದಿನಗಳಲ್ಲಿ ಮಲ್ಲೇಶ್ವರ ಸುತ್ತಮುತ್ತ ಐದಾರು ಕೊಳವೆಬಾವಿ ಕೊರೆದಿದ್ದೇವೆ. ಎಲ್ಲವೂ ವಿಫಲವಾಗಿವೆ. ಒಂದು ಅಥವಾ ಎರಡರಲ್ಲಿ ಅರ್ಧ ಅಥವಾ ಒಂದು ಇಂಚು ನೀರು ಬರುತ್ತಿದೆ. ಮೊದಲಾದರೆ ಇಲ್ಲಿ 300–350 ಅಡಿಗಳಿಗೆ ಮೂರ‍್ನಾಲ್ಕು ಇಂಚು ನೀರು ಬರುತ್ತಿತ್ತು’ ಎಂದು ಬೋರ್‌ವೆಲ್‌ ಕಂಪನಿಯ ಮಹೇಶ್‌ ಹೇಳುತ್ತಾರೆ.

‘ಜುಲೈ ಕಳೆಯುತ್ತಾ ಬಂದರೂ ಇನ್ನೂ ವಾಡಿಕೆ ಮಳೆಯಾಗಿಲ್ಲ. ಇದರಿಂದ ಭೂಮಿಯ ಆಳದಲ್ಲಿ ಹರಿಯುವ ನೀರಿನ ತೊರೆಗಳು ಇಂಗಿ ಹೋಗಿವೆ. ಅಂತರ್ಜಲಮಟ್ಟ ಇನ್ನೂ ಆಳಕ್ಕೆ ಕುಸಿಯುತ್ತಿದೆ. ಇದರಿಂದ ಹೆಚ್ಚಿನ ಬೋರ್‌ವೆಲ್‌ ವಿಫಲವಾಗುತ್ತಿವೆ‘ ಎನ್ನುವುದು ಅವರ ಅನುಭವದ ಮಾತು.

ಸಾವಿರ ಅಡಿ ನೆಲವನ್ನು ಬಗೆದರೂ ಬೋರ್‌ವೆಲ್‌ ವಿಫಲವಾಗಲುಬೇಕಾಬಿಟ್ಟಿ ಅಂತರ್ಜಲ ಬಳಕೆಯೇ ಕಾರಣ. ವಾಡಿಕೆಗಿಂತ ಕಡಿಮೆ ಮಳೆ, ಕೆರೆಗಳ ಒತ್ತುವರಿ ಮತ್ತು ಮಳೆನೀರು ಸಂಗ್ರಹವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಪಕ್ಕದಲ್ಲಿಯೇ ಕೆರೆ ಇದ್ದರೂ ನೀರಿಗೆ ಬರ!

ಪಕ್ಕದಲ್ಲಿಯೇ ಸ್ಯಾಂಕಿ ಕೆರೆ ಇದ್ದರೂ ಮಲ್ಲೇಶ್ವರದ ಹೆಚ್ಚಿನ ಕೊಳವೆಬಾವಿ ಬತ್ತಿ ಹೋಗಿವೆ.ಇಡೀ ರಾತ್ರಿ ಟ್ಯಾಂಕರ್‌ ನೀರು ತುಂಬಿಸಿದರೂ ಸಾವಿರಾರು ಜನರಿರುವ ಅಪಾರ್ಟ್‌ಮೆಂಟ್‌, ಮಾಲ್‌ಗಳಿಗೆ ಈ ನೀರು ಏತಕ್ಕೂ ಸಾಕಾಗುವುದಿಲ್ಲ. ಹೊಸದಾಗಿ ಕೊರೆಸುವ ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ.

ಈ ಮೊದಲು ಜಯನಗರ, ಮಲ್ಲೇಶ್ವರದಲ್ಲಿ 300–350 ಅಡಿ ಕೊರೆದರೆ ನೀರು ಸಿಗುತ್ತಿತ್ತು. ಈಗ 900–1000 ಅಡಿ ಆಳಕ್ಕೆ ಇಳಿದರೂ ಅರ್ಧ ಇಂಚು ನೀರು ಬರುತ್ತಿಲ್ಲ.ಇದು ವಾಸಿ. ಎಲೆಕ್ಟ್ರಾನಿಕ್‌ ಸಿಟಿ, ಮಾರತ್‌ ಹಳ್ಳಿ, ಬೊಮ್ಮನಹಳ್ಳಿ, ಕೆ.ಆರ್‌. ಪುರದಲ್ಲಿ 1700–2000 ಅಡಿ ನೆಲವನ್ನು ಕೊರೆಯಬೇಕು.ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎನ್ನುವುದು ಮಹೇಶ್‌ ಆತಂಕ.

ದೇವನಹಳ್ಳಿ ಮತ್ತು ವಿಮಾನ ನಿಲ್ದಾಣ ರಸ್ತೆ ಸುತ್ತಮುತ್ತ ಮಿತಿಮೀರಿದ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಮನೆಗೆ ಒಂದು ಅಥವಾ ಎರಡರಂತೆ ಕೊಳವೆಬಾವಿಗಳಿವೆ. ಇದರಿಂದ ಅಂತರ್ಜಲಮಟ್ಟ ಪಾತಾಳಕ್ಕೆ ಕುಸಿಯುತ್ತಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆನೀರು ಸಂಗ್ರಹ ಕಡ್ಡಾಯ ಎಂದು ಬಿಬಿಎಂಪಿ ನಿಯಮಾವಳಿ ರೂಪಿಸಿದರೂ ಅದು ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ ಎಂದು ಅವರು ಕಾರಣಗಳ ಪಟ್ಟಿಯನ್ನು ಬಿಡಿಸಿಡುತ್ತಾ ಹೋದರು.

ನಿಜವಾಗಲಿದೆಯೇ ನೀತಿ ಆಯೋಗದ ಆತಂಕ?

2020ರ ವೇಳೆಗೆ ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಸೇರಿದಂತೆ ದೇಶದ 21 ನಗರಗಳು ಅಂತರ್ಜಲದ ತೀವ್ರ ಕೊರತೆ ಎದುರಿಸಲಿವೆ ಎಂಬ ಆತಂಕಕಾರಿ ಸಂಗತಿಯನ್ನು ನೀತಿ ಆಯೋಗದ ವರದಿ ಇತ್ತೀಚೆಗೆ ಹೊರಗೆಡವಿದೆ. ಬೆಂಗಳೂರಿನ ವಿಷಯದಲ್ಲಿ ಅದು ನಿಜವಾಗಲಿದೆಯೇ ಎಂಬ ಆತಂಕ ಜನರನ್ನು ಕಾಡುತ್ತಿದೆ.

ವರದಿ ಪ್ರಕಾರ ಭಾರತ ಅತಿಹೆಚ್ಚು ಅಂತರ್ಜಲ ಬಳಸುತ್ತಿರುವ ದೇಶ. ಶುದ್ಧ ನೀರಿನ ಪ್ರಮಾಣ4% ಮಾತ್ರ ಇದ್ದು, 2030ರ ಹೊತ್ತಿಗೆ ಕುಡಿಯುವ ನೀರು ಸಿಗದೇ ಪರದಾಡುವ ದೇಶದ ಜನರ ಪ್ರಮಾಣ40%ಕ್ಕೆ ಏರಲಿದೆ ಎಂದು ವರದಿ ಹೇಳುತ್ತದೆ.

ಮಾನ್ಸೂನ್‌ ಆತಂಕ

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆವರಣದಲ್ಲಿ ಮಳೆ ನೀರು ಹಿಡಿದಿಡುವ ವಿಶೇಷ ಸಾಮರ್ಥ್ಯದ ಮರಗಳನ್ನು ಪಶ್ಚಿಮ ಘಟ್ಟಗಳಿಂದ ತಂದು ನೆಡಲಾಗಿದೆ. ಇವು ಅಂತರ್ಜಲಮಟ್ಟವನ್ನು ಸಂರಕ್ಷಿಸುತ್ತಿವೆ. ಇಲ್ಲಿ 10–20 ಅಡಿಗೆ ನೀರು ಸಿಗುತ್ತದೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಎ.ಆರ್‌. ಶಿವಕುಮಾರ.

ನೆರೆಯ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಬೇಕಾಬಿಟ್ಟಿಯಾಗಿ ಬಳಸಿದ ಕಾರಣ ಅಂತರ್ಜಲ ಖಾಲಿಯಾಗಿ ಎಲ್ಲ ಕೊಳವೆಬಾವಿ ಬತ್ತಿಹೋಗಿ 15 ವರ್ಷವಾಗಿದೆ. ನಗರಕ್ಕೆ ಹೊರಗಿನಿಂದ ನೀರು ಪೂರೈಸಲಾಗುತ್ತಿದೆ ಎನ್ನುತ್ತಾರೆ ನ್ಯಾಷನಲ್‌ ಕಾನೂನು ಶಾಲೆಯ ಪರಿಸರ ಪ್ರಾಧ್ಯಾಪಕ ಡಾ. ಕ್ಷಿತೀಜ ಅರಸ್‌.

ಹವಾಮಾನ ವೈಪರೀತ್ಯಕ್ಕೆ ಕಾರಣವಾಗುವ 10 ಅಂಶಗಳಲ್ಲಿ ಭಾರತದ ಅನಿಶ್ಚಿತ ಮಾನ್ಸೂನ್‌ ಮಾರುತಗಳು ಕೂಡ ಒಂದು ಅಂಶ ಎಂಬ ಜಾಗತಿಕ ವರದಿ ಮಾರ್ಚ್‌ನಲ್ಲಿ ಬಿಡುಗಡೆಯಾಗಿದೆ. ನಿಜಕ್ಕೂ ಇದು ಆತಂಕಕಾರಿ ಸಂಗತಿ. ಈ ಬಗ್ಗೆ ಕೇಂದ್ರವಾಗಲಿ ಅಥವಾ ರಾಜ್ಯ ಸರ್ಕಾರ ಚಕಾರ ಎತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

***

ನೀರು ಇಂಗಲು ಜಾಗ ಇಲ್ಲ

ಬೆಂಗಳೂರು ಕಾಂಕ್ರೀಟ್ ಕಾಡಾಗುತ್ತಿದೆ. ಸಿಮೆಂಟ್‌, ಡಾಂಬರು ರಸ್ತೆ ಮತ್ತು ಕಟ್ಟಡಗಳಿಂದ ಮಳೆ ನೀರು ಇಂಗಲು ಜಾಗ ಇಲ್ಲ. ಮಣ್ಣಿನ ಪದರಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ. ಆಳದಲ್ಲಿರುವ ಕಲ್ಲುಗಳಲ್ಲಿ ಪದರುಗಳಿಲ್ಲ.ಬೆಂಗಳೂರು ಸುತ್ತಮುತ್ತಹಿಟ್ಟು ಬಂಡೆಕಲ್ಲುಗಳಿಲ್ಲ. ಹೀಗಾಗಿ ಅವುಗಳಿಗೆ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಇದರಿಂದ ಭೂಮಿಯ ಆಳದಲ್ಲಿರುವ ನೀರು ಖಾಲಿಯಾಗುತ್ತಿದೆ.

– ಎ.ಆರ್‌. ಶಿವಕುಮಾರ್‌, ನಿವೃತ್ತ ಹಿರಿಯ ವಿಜ್ಞಾನಿ, ಭಾರತೀಯ ವಿಜ್ಞಾನ ಸಂಸ್ಥೆ

ಬರಿದಾದ ಕೊಳವೆಬಾವಿಗಳು

ಉಲ್ಲಾಳ ಕೆರೆ, ಮಲ್ಲತ್ತಹಳ್ಳಿ ಕೆರೆ ಬರಿದಾಗುತ್ತಿವೆ. ಇದರಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ. ಕೆರೆಯ ಅಕ್ಕಪಕ್ಕದ ಬಡಾವಣೆಗಳ ಬೋರ್‌ವೆಲ್‌ಗಳೂ ಬತ್ತುತ್ತಿವೆ. ಬೇಸಿಗೆ ಆರಂಭವಾಗುತ್ತಲೇ ಬೋರ್‌ವೆಲ್‌ ಒಣಗಲು ಆರಂಭಿಸಿವೆ. ಮೊದಲಾದರೇ ಸಾಕಷ್ಟು ನೀರು ಇರುತ್ತಿತ್ತು. ಮುಂಗಾರು ಮಳೆ ಕೈಕೊಟ್ಟರೆ ಉಲ್ಲಾಳ ಮತ್ತು ಮಲ್ಲತ್ತಹಳ್ಳಿ ಕೆರೆಗಳು ಖಾಲಿಯಾದರೆ ಎಲ್ಲ ಕೊಳವೆಬಾವಿಗಳೂ ಒಣಗುತ್ತವೆ.

–ನಾಗರಾಜ ಸ್ವಾಮಿ, ಅನ್ನಪೂರ್ಣೇಶ್ವರಿ ನಗರ, ಉಲ್ಲಾಳ ಮುಖ್ಯರಸ್ತೆ

ಚೆನ್ನೈ ಸ್ಥಿತಿ ಬೆಂಗಳೂರಿಗೂ ಬರಲಿದೆ

ಒಂದೇ ಒಂದು ವರ್ಷ ಮಳೆ ಬಾರದೆ ಕಾವೇರಿ ಬತ್ತಿದರೆ ಬೆಂಗಳೂರಿಗೂ ಚೆನ್ನೈಗೆ ಒದಗಿದ ಪರಿಸ್ಥಿತಿಯೇ ಬರುತ್ತದೆ. ನೀರಿಗಾಗಿ ಹಾಹಾಕಾರ ಶುರುವಾಗುತ್ತದೆ. ಬೆಂಗಳೂರು ಜಲಮಂಡಳಿ ಪೂರೈಸುವ ನೀರು ಶೇ 70ರಷ್ಟು ಜನರಿಗೆ ಮಾತ್ರ ಸಾಕಾಗುತ್ತದೆ. ಉಳಿದ ಶೇ 30ರಷ್ಟು ಜನರು ಅನಿವಾರ್ಯವಾಗಿ ಬೋರ್‌ವೆಲ್‌ ಮೊರೆ ಹೋಗುತ್ತಾರೆ. ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಅತಿ ಹೆಚ್ಚು ಕೊಳವೆಬಾವಿ ಕೊರೆದು ಅಂತರ್ಜಲವನ್ನು ಬಳಸಲಾಗುತ್ತಿದೆ. ಅಂತರ್ಜಲ ಮಟ್ಟ ಮತ್ತು ಕೆರೆಗಳನ್ನು ರಕ್ಷಿಸದಿದ್ದರೆ ಭವಿಷ್ಯದಲ್ಲಿ ಬೆಂಗಳೂರು ಜೀವನ ನರಕವಾಗಲಿದೆ. ಚೆನ್ನೈ ಸ್ಥಿತಿ ತಂದುಕೊಳ್ಳುವ ಮೊದಲು ಈಗಲೇ ಎಚ್ಚೆತ್ತುಕೊಳ್ಳಬೇಕು. ಆಡಳಿತ ಯಂತ್ರಗಳು ಸೂಕ್ತ ಯೋಜನೆ ರೂಪಿಸಬೇಕು

– ಡಾ. ಕ್ಷಿತೀಜ ಅರಸ್‌, ಅಧ್ಯಾಪಕರು, ನ್ಯಾಷನಲ್‌ ಲಾ ಸ್ಕೂಲ್‌, ಪರಿಸರ ಮತ್ತು ಪ್ರಜಾಪ್ರಭುತ್ವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.