ಮಿದುಳಿನಲ್ಲಿ ಬೆಳೆಯುವ ಕ್ಯಾನ್ಸರ್ ಗಡ್ಡೆ ಹೆಸರು ಕೇಳಿದರೇ ಭಯ ಬೀಳುವವರೇ ಹೆಚ್ಚು. ಮಾರಣಾಂತಿಕ ಕ್ಯಾನ್ಸರ್ ಗಡ್ಡೆಗೆ ಕಿಮೋ ಚಿಕಿತ್ಸೆ ಇನ್ನೂ ಯಾತನೆ. ನಿವೃತ್ತ ವಿಂಗ್ ಕಮಾಂಡರ್ ಡಾ. ವಿ.ಜಿ. ವಸಿಷ್ಠ ಅವರು ಮಿದುಳು ಗಡ್ಡೆಗೆನೋವುರಹಿತ ಮತ್ತು ಶಸ್ತ್ರಚಿಕಿತ್ಸೆ ರಹಿತ ಸರಳ ಚಿಕಿತ್ಸಾ ವಿಧಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಅಮೆರಿಕದಿಂದ ಪೇಟೆಂಟ್ ಕೂಡಾ ಪಡೆದಿರುವ ಅವರು ಶುಕ್ರವಾರ ತಮ್ಮ ಚಿಕಿತ್ಸಾ ವಿಧಾನದ ಯಶಸ್ಸನ್ನು ಹಂಚಿಕೊಂಡರು.
ಗ್ಲಿಯೊಬ್ಲಾಸ್ಟೋಮಾ ಮಲ್ಟಿಫಾರ್ಮ್ (ಜೆಬಿಎಂ) ಎಂಬ ಮಿದುಳು ಗಡ್ಡೆಯ ಸಮಸ್ಯೆಗೆ ‘ಸೀಕ್ವೆನ್ಷಿಯಲೀ ಪ್ರೋಗ್ರಾಮ್ಡ್ ಮಾಗ್ನೆಟಿಕ್ ಫೀಲ್ಡ್ಸ್’ (ಎಸ್‌ಪಿಎಂಎಫ್) ಎಂಬ ಚಿಕಿತ್ಸಾ ವಿಧಾನ ಸೂಕ್ತ ಪರಿಹಾರ ಎನ್ನುತ್ತಾರೆ ಡಾ. ವಸಿಷ್ಠ. ಈ ವಿಧಾನದಲ್ಲಿ ಆಕ್ತಿಸ್ ಸೋಮಾ ಎಂಬ ಎಂಆರ್‌ಐ ಸ್ಕ್ಯಾನರ್ ಮಾದರಿಯ ಯಂತ್ರದಿಂದ ವಿದ್ಯುತ್ ಆಯಸ್ಕಾಂತೀಯ ತರಂಗಗಳನ್ನು ಹಾಯಿಸುವ ಮೂಲಕ ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸಲಾಗುತ್ತದೆ.
ವಿದೇಶಕ್ಕೆ ಭಾರತದ ತಂತ್ರಜ್ಞಾನ
ನಿತ್ಯ ಒಂದು ಗಂಟೆಯಂತೆ 28 ದಿನ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಗೆ ಒಟ್ಟು ₹1.5 ಲಕ್ಷ ವೆಚ್ಚವಾಗುತ್ತದೆ. ಇಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಇರುವುದಿಲ್ಲ.ಎಸ್‌ಪಿಎಂಎಫ್ ಚಿಕಿತ್ಸೆಗೂ ಮೊದಲು ವಿದೇಶದ ವೈದ್ಯಕೀಯ ವಿಧಾನದ ಮೇಲೆ ಭಾರತ ಅವಲಂಬಿತವಾಗಿತ್ತು. ಇದೀಗ ಭಾರತದ ಈ ತಂತ್ರಜ್ಞಾನವನ್ನು ವಿದೇಶಗಳೂ ಅನುಸರಿಸುತ್ತಿವೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
‘ಬ್ರೈನ್ ಟ್ಯೂಮರ್ ಚಿಕಿತ್ಸೆ ಪಡೆದಾಗ ಕೂದಲು ಉದುರಿದ್ದವು. ಎಸ್‌ಬಿಎಫ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯಿತು. ಇನ್ನಷ್ಟು ವರ್ಷ ಬದುಕುವ ಆಸೆ ಚಿಗುರಿತು’ ಎಂದು ಚಿಕಿತ್ಸೆ ಪಡೆದು ಗುಣಮುಖರಾದ ಶಶಿಧರ್ ಎಂಬುವರು ಹೇಳಿದರು.
ಸೇನೆಯಿಂದ ನಿವೃತ್ತರಾದ ಬಳಿಕ ವಸಿಷ್ಠ ಅವರು ಎಸ್‌ಬಿಎಫ್ ಹೆಲ್ತ್‌ಕೇರ್ ಎಂಬ ವೈದ್ಯಕೀಯ ಸಂಸ್ಥೆ ಸ್ಥಾಪಿಸಿದರು. ಅಂದಿನಿಂದ ಕರ್ನಾಟಕದ 100 ರೋಗಿಗಳು ಸೇರಿದಂತೆ 500ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಈ ಚಿಕಿತ್ಸೆ ನೀಡಿದ್ದಾರೆ. ಅವರಲ್ಲಿ ದೀರ್ಘಕಾಲ ಬದುಕುವ ಆಶಾಭಾವನೆ ತುಂಬಿದ್ದಾರೆ. ಎಲ್ಲ ರೀತಿಯ ಕ್ಯಾನ್ಸರ್ ಹಾಗೂ ಸಂಧಿವಾತಕ್ಕೂ ಇದೇ ವಿಧಾನದಲ್ಲಿ ಚಿಕಿತ್ಸೆ ನೀಡಬಹುದು. ಮಾರತಹಳ್ಳಿ ಹಾಗೂ ಜೆಪಿ ನಗರದಲ್ಲಿರುವ ಎಸ್‌ಬಿಎಫ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ.
ಹೆಚ್ಚಿನ ಮಾಹಿತಿಗೆ 9900548375 ಸಂಪರ್ಕಿಸಿ. ವೆಬ್‌ಸೈಟ್: www.sbfhealthcare.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.