ADVERTISEMENT

ಸೆಂಟ್ರಲ್ ಕಾಲೇಜು ಸಸ್ಯವಿಜ್ಞಾನ ವಿಭಾಗಕ್ಕೆ ನೂರು ವರ್ಷ

ಪೃಥ್ವಿರಾಜ್ ಎಂ ಎಚ್
Published 11 ಸೆಪ್ಟೆಂಬರ್ 2019, 20:00 IST
Last Updated 11 ಸೆಪ್ಟೆಂಬರ್ 2019, 20:00 IST
   

ಬರಿಗಣ್ಣಿಗೆ ಕಾಣದ ಸೂಕ್ಷ್ಮ ಬ್ಯಾಕ್ಟೀರಿಯಾಗಳಿಂದ ಹಿಡಿದು ಸಿಕ್ವೊಯಾ (ವಿಶ್ವದ ಅತ್ಯಂತ ದೊಡ್ಡ ವೃಕ್ಷ ಪ್ರಭೇದ) ವರೆಗೆ ತಿಳಿಸುವ ವಿಜ್ಞಾನವೇ ಸಸ್ಯವಿಜ್ಞಾನ. ದೇಶದಲ್ಲೇ ಮೊದಲ ಬಾರಿಗೆ ಒಂದೇ ಕಾಲಘಟ್ಟದಲ್ಲಿ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಈ ವಿಜ್ಞಾನ ಬೋಧನೆ ಆರಂಭವಾಯಿತು. ಅಲಹಾಬಾದ್‌ನ ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮೊದಲ ಬಾರಿಗೆ ಆರಂಭವಾಗಿತ್ತು. ಅದಾಗಿ ಕೆಲವೇ ತಿಂಗಳಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಆರಂಭವಾಗಿದ್ದು ಬೆಂಗಳೂರಿನ ಹೆಮ್ಮೆ.

ಅಮೆರಿಕದ ಶಿಕಾಗೊ ವಿಶ್ವವಿದ್ಯಾಲಯದಲ್ಲಿ ಸಸ್ಯವಿಜ್ಞಾನದಲ್ಲಿ ಪದವಿ ಪಡೆದು ಭಾರತಕ್ಕೆ ಬಂದಿದ್ದ ಪ್ರೊಫೆಸರ್ ಮಂಡಯನ್ ಎ. ಸಂಪತ್‌ಕುಮಾರನ್ ಅವರು 1919ರಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ ಸಸ್ಯವಿಜ್ಞಾನ ವಿಭಾಗವನ್ನು ಆರಂಭಿಸಿದರು. ಸೌಲಭ್ಯ ಮತ್ತು ನುರಿತ ಸಿಬ್ಬಂದಿಯನ್ನು ಒದಗಿಸುವ ಸವಾಲು ಕೂಡ ಅವರ ಮುಂದೆ ಇತ್ತು. ಕಟ್ಟಡ ಇಲ್ಲದೇ ಇದ್ದುದರಿಂದ ಬಯಲಿನಲ್ಲೇ ಪಾಠ ಮಾಡುತ್ತಿದ್ದರು. ಹಂತ ಹಂತವಾಗಿ ವಿಭಾಗವನ್ನು ಕಟ್ಟಿ, ಎಲ್ಲ ಸೌಕರ್ಯಗಳನ್ನು ಒದಗಿಸುವಲ್ಲಿ ಯಶಸ್ವಿಯಾದ ಅವರು ಕೆಲವೇ ವರ್ಷಗಳಲ್ಲಿ ಪ್ಲ್ಯಾಂಟ್‌ ಮಾರ್ಫೊಲಜಿಯನ್ನೂ (ಸಸ್ಯ ಆಕೃತಿ ವಿಜ್ಞಾನ) ಆರಂಭಿಸಿದರು. ಅಲ್ಲದೇ ಈ ವಿಜ್ಞಾನದ ಕುರಿತು ಅಧ್ಯಯನ ಮಾಡುವ ಸಂಶೋಧನಾ ಕೇಂದ್ರವನ್ನೂ ಆರಂಭಿಸಿದರು.

ಎಲ್‌. ನಾರಾಯಣ ರಾವ್, ಸಿ.ವಿ. ಕೃಷ್ಣ ಅಯ್ಯಂಗಾರ್‌, ಎಸ್.ಬಿ. ಕೌಶಿಕ್, ಕೆ.ವಿ. ಶ್ರೀನಾಥ್‌, ಎ.ಆರ್‌, ಗೋಪಾಲ ಅಯ್ಯಂಗಾರ್‌, ಬಿ. ವ್ಯಾಸ ವಿಟ್ಟಲ್, ಕೆ. ರಂಗಸ್ವಾಮಿ, ಕೆ.ಎನ್‌. ಶೇಷಗಿರಯ್ಯ, ಎಸ್‌.ಕೆ. ನರಸಿಂಹ ಮೂರ್ತಿ, ಕೆ.ಎಲ್‌.ಎನ್‌ ಮೂರ್ತಿ, ಟಿ. ತಾತಾಚಾರ್ಯ, ಅನ್ನಪೂರ್ಣ ಬಾಯಿ ಸೇರಿದಂತೆ ಹಲವರು ಇಲ್ಲಿ ಸಸ್ಯವಿಜ್ಞಾನ ಬೋಧಿಸಿದ್ದಾರೆ.

ADVERTISEMENT

ಪಿಯುಸಿ ವಿದ್ಯಾರ್ಥಿಗಳಿಗಾಗಿ ಆರಂಭವಾದ ಸಸ್ಯವಿಜ್ಞಾನ, ಪದವಿ ಮತ್ತು ಸ್ನಾತಕೋತ್ತರ ಪದವಿಗೂ ವಿಸ್ತರಿಸಿತು. ಮಹರಾಣಿ ಮಹಿಳಾ ಕಾಲೇಜು ಆರಂಭವಾದ ನಂತರ ಅಲ್ಲಿಗೂ ಸಸ್ಯವಿಜ್ಞಾನದ ಬೇರುಗಳು ವಿಸ್ತರಿಸಿದವು. 1964ರಲ್ಲಿ ಸಸ್ಯವಿಜ್ಞಾನ ಬೋಧನೆ ಮತ್ತಷ್ಟು ವಿಸ್ತೃತ ರೂಪ ಪಡೆಯಿತು.

ಈ ಅವಧಿಯಲ್ಲಿ ಆ್ಯಂಗಿಯೊಸ್ಪರ್ಮ್ಸ್, ಕೈಟೊಜೆನೆಟಿಕ್ಸ್, ಮೈಕೊಲಜಿ, ಪ್ಲ್ಯಾಂಟ್‌ ಪ್ಯಾಥೊಲಜಿ ವಿಷಯಗಳ ಬೋಧನೆ ಆರಂಭವಾಯಿತು. ಇದೇ ವರ್ಷ ಎಂ.ಎಸ್ಸಿ (M.Sc) ಸ್ನಾತಕೋತ್ತರ ಪದವಿಯಲ್ಲಿ ಪ್ಯಾಲೊಯೊಬೊಟನಿ ಎಂಬ ಹೊಸ ವಿಷಯವನ್ನು ಪರಿಚಯಿಸಲಾಯಿತು.

1978ರಲ್ಲಿ ಸೆಮಿಸ್ಟರ್ ಪದ್ಧತಿ ಜೊತೆಗೆ ಸಸ್ಯವಿಜ್ಞಾನದಲ್ಲಿ ಎಂ.ಫಿಲ್ ಪದವಿ ಕೂಡ ಆರಂಭವಾಯಿತು. ಇದೇ ವರ್ಷ ಅಕ್ಟೋಬರ್‌ನಲ್ಲಿ ‘ಇಂಡಿಯನ್ ಪಾಲಿನೊಲಾಜಿಕಲ್ ಕಾನ್ಫರೆನ್ಸ್‌’ ಅನ್ನು ಸಸ್ಯವಿಜ್ಞಾನ ವಿಭಾಗವೇ ಆಯೋಜಿಸಿತ್ತು.

ಪ್ರಸ್ತುತ ಸಸ್ಯವಿಜ್ಞಾನ ವಿಭಾಗದಲ್ಲಿ, ಆ್ಯಂಗಿಯೊಸ್ಪರ್ಮ್ಸ್, ಕೈಟೊಟ್ಯಾಕ್ಸೊನಮಿ, ಮೈಕೊಲಜಿ, ಪ್ಲ್ಯಾಂಟ್ ಪಾಥಲಜಿ, ಪ್ಯಾಲಿಯೊಬೊಟನಿ, ಪಾಲಿನೊಲಜಿ, ಫಿಜಿಯಾಲಜಿ, ಅನಾಟಮಿ, ಪೆಟ್ರಿಡೊಫೈಟ್ಸ್, ಟಿಸ್ಯು ಕಲ್ಚರ್ ಆ್ಯಂಡ್ ಟಾಕ್ಸಾನಮಿ ವಿಷಯಗಳಲ್ಲಿ ಅಧ್ಯಯನ, ಸಂಶೋಧನೆ ಮಾಡಲು ಅವಕಾಶವಿದೆ. ಒಟ್ಟು 16 ತಜ್ಞ ಸಿಬ್ಬಂದಿ ಬೋಧಿಸುತ್ತಿದ್ದು, 20ಕ್ಕೂ ಹೆಚ್ಚು ಪಿಎಚ್‌.ಡಿ ವಿದ್ಯಾರ್ಥಿಗಳು ಇದ್ದಾರೆ.

ಜ್ಞಾನಭಾರತಿ ಕ್ಯಾಂಪಸ್‌ ನಿರ್ಮಾಣವಾದ ಮೇಲೆ ಸಸ್ಯವಿಜ್ಞಾನ ವಿಭಾಗವನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯವನ್ನು ವಿಭಜಿಸಿದ ಮೇಲೆ, ಕೇಂದ್ರ ವಿಶ್ವವಿದ್ಯಾಲಯ (ಸೆಂಟ್ರಲ್‌ ಕಾಲೇಜು) ಮತ್ತೆ ಹೊಸದಾಗಿ ಸಸ್ಯವಿಜ್ಞಾನ ವಿಭಾಗವನ್ನು ಆರಂಭಿಸಲಾಗಿದೆ. ಪ್ರಸ್ತುತ ಸುಮಾರು 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಓದಿದ ಪ್ರಮುಖರು

ಕಿರಣ್ ಮಜುಂದಾರ್ ಷಾ, ಬಯೊಕಾನ್ ಮುಖ್ಯಸ್ಥೆ

ಪ್ರೊ. ರಾಘವೇಂದ್ರ ಗದಗ್‌ಕರ್‌, ಐಐಎಸ್‌ಸಿ ಪ್ರಾಧ್ಯಾಪಕ

ಡಾ. ಟಿ.ಎಂ. ಮಂಜುನಾಥ್‌, ಮೊನ್ಸಂಟೊ ಸಂಶೋಧನಾ ಕೇಂದ್ರದ ನಿರ್ದೇಶಕ

ಡಾ. ಮಿಟ್ಟೂರ್ ಎನ್. ಜಗದೀಶ್‌ ಮೊನ್ಸಂಟೊ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕ

ಪ್ರೊ. ಎನ್‌.ಎಸ್‌. ರಂಗಸ್ವಾಮಿ ದೆಹಲಿ ವಿಶ್ವವಿದ್ಯಾಲಯದ ಬೊಟನಿ ವಿಭಾಗದ ಮುಖ್ಯಸ್ಥ.

ಪ್ರೊ, ಎಸ್‌. ಸುಬ್ಬರಾವ್, ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ಮೈಕ್ರೊಬಯೊಲಜಿ ಮುಖ್ಯಸ್ಥ.

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಕರ್ನಾಟಕ ಮಾಜಿ ಲೋಕಾಯುಕ್ತ.

-------------------------

ಸೆಂಟ್ರಲ್ ಕಾಲೇಜಿಗೆ ಭವ್ಯ ಪರಂಪರೆ ಇದೆ

ಸೆಂಟ್ರಲ್ ಕಾಲೇಜಿಗೆ ಭವ್ಯ ಪರಂಪರೆ ಇದೆ. ಕುವೆಂಪು, ರಾಜರತ್ನಂ, ಸಿ.ವಿ. ರಾಮನ್, ಸಿ.ಎನ್‌.ಆರ್. ರಾವ್‌ ರಂತಹ ಹಲವು ಮಹನೀಯರು ಇಲ್ಲಿ ಇದ್ದರು ಎಂದು ಹೇಳುವುದಕ್ಕೇ ರೋಮಾಂಚನವಾಗುತ್ತದೆ. ಬೊಟನಿ ವಿಭಾಗ ಆರಂಭವಾಗಿ ನೂರು ವರ್ಷವಾಗಿರುವುದು ಕಾಲೇಜಿನ ಹೆಮ್ಮೆಗಳಲ್ಲಿ ಒಂದು. ಈ ವರ್ಷದಿಂದ ಬೊಟನಿ ವಿಭಾಗವನ್ನು ‘ಡಿಪಾರ್ಟ್‌ಮೆಂಟ್ ಆಫ್ ಲೈಫ್‌ಸೈನ್ಸ್‌’ ಎಂದು ಆರಂಭಿಸಲಾಗುವುದು. ಇದರಲ್ಲಿ ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ ಎರಡನ್ನೂ ಪ್ರತ್ಯೇಕವಾಗಿ ಬೋಧಿಸಲಾಗುವುದು. ಸಂಶೋಧನೆ ಮಾಡುವುದಕ್ಕೆ ಬೊಟನಿ ಉತ್ತಮ ವಿಷಯ. ಹೀಗಾಗಿ ಎಲ್ಲ ಸೌಕರ್ಯಗಳನ್ನೂ ಒದಗಿಸುತ್ತೇವೆ. ಶಿಕ್ಷಣವಷ್ಟೇ ಅಲ್ಲದೇ, ಇಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ಕೂಡ ಸಿಗಬೇಕೆಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ವ್ಯವಸ್ಥೆ ರೂಪಿಸಲಿದ್ದೇವೆ ಎಂದುಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕುಲಪತಿಪ್ರೊಫೆಸರ್ ಜಾಫೆಟ್ ಅಭಿಪ್ರಾಯಪಟ್ಟಿದ್ದಾರೆ.

ಇಂದಿನ ವಿದ್ಯಾರ್ಥಿಗಳು ಉತ್ತಮ ಸಂಶೋಧನೆ ಮಾಡಬೇಕಿದೆ

ಸೆಂಟ್ರಲ್‌ ಕಾಲೇಜಿನ ಹಲವು ಪ್ರಾಧ್ಯಪಕರು ಮತ್ತು ವಿದ್ಯಾರ್ಥಿಗಳು ಬೊಟನಿ ವಿಭಾಗದೊಂದಿಗೆ ಪ್ರಭಾವ ಬೀರಿದೆ. 1967 ಜೂನ್‌ನಲ್ಲಿ ಪ್ರಾಧ್ಯಪಕನಾಗಿ ವೃತ್ತಿ ಜೀವನ ಆರಂಭಿಸಿದ ನಾನು 1998 ಮೇನಲ್ಲಿ ನಿವೃತ್ತಿ ಪಡೆದೆ. 31 ವರ್ಷಗಳ ಈ ಪಯಣದಲ್ಲಿ ಹಲವು ನೆನಪುಗಳನ್ನು ಈ ವಿಭಾಗ ನೀಡಿದೆ. ನನ್ನ ಹಲವು ವಿದ್ಯಾರ್ಥಿಗಳು ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಲವು ಸಂಶೋಧನೆಗಳನ್ನು ಮಾಡಿದ್ದಾರೆ. ಮತ್ತಷ್ಟು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದು ಮನುಕುಲಕ್ಕೆ ಒಳಿತಾಗುವ ಸಂಶೋಧನೆಗಳನ್ನು ಮಾಡಬೇಕಿದೆ ಎಂದುಸೆಂಟ್ರಲ್ ಕಾಲೇಜು ಬೊಟನಿ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷಸಿ.ಕಾಮೇಶ್ವರ್ ರಾವ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.