ಹಬೆಯಾಡುವ ಕಾಫಿ ಕಪ್ ಜೊತೆಗೆ ಮೆಚ್ಚಿನ ಕೃತಿ ಓದು..! ಇಂಥದೊಂದು ಅವಕಾಶವನ್ನು ಪುಸ್ತಕಪ್ರೇಮಿಗಳಿಗೆ ಎಡ್ವರ್ಡ್ ರಸ್ತೆಯಲ್ಲಿನ ‘ಚಂಪಕಾ ಬುಕ್‌ಸ್ಟೋರ್, ಲೈಬ್ರೆರಿ, ಕೆಫೆ ನೀಡುತ್ತಿದೆ.
ಬಂಗಲೆಯಂತಿರುವ ಕಟ್ಟಡದ ಟೆರೇಸ್ ಮೇಲೊಂದರ ಕೊಠಡಿ ಹೊಕ್ಕಾಗ ತಣ್ಣನೆ ಗಾಳಿ. ಹೆಂಚಿನ ಮೇಲ್ಛಾವಣಿ. ಗಮನ ಸೆಳೆವ ಆ ಕಪಾಟು. ಅಲ್ಲಿ ಸಾಲಾಗಿ ಜೋಡಿಸಿಟ್ಟಿರುವ ಪುಸ್ತಕಗಳು. ಕಾಫಿ, ಸ್ಯಾಂಡ್‌ವಿಚ್, ಕೇಕ್‌ಗಳ ಪರಿಮಳ ಹಸಿವನ್ನು ಮೆಲ್ಲಗೆ ಕೆರಳಿಸುತ್ತವೆ. ಜೋಡಿಸಿಟ್ಟ ಪುಸ್ತಕಗಳು ಪುಸ್ತಕಪ್ರೇಮಿಗಳ ಮನಸ್ಸನ್ನು ಅರಳಿಸುತ್ತವೆ. ಇದೇ ‘ಚಂಪಕಾ ಬುಕ್‌ಸ್ಟೋರ್, ಲೈಬ್ರೆರಿ, ಕೆಫೆ’ಯ ವಿಶೇಷತೆ.
ಪುಸ್ತಕಪ್ರಿಯೆ, ಪರಿಸರ ಪ್ರೇಮಿ ಮುಂಬೈ ಮೂಲದ ರಾಧಿಕಾ ಟಿಂಬಾಡಿಯಾ ಅವರ ಕನಸು ‘ಚಂಪಕಾ ಬುಕ್‌ಸ್ಟೋರ್, ಲೈಬ್ರೆರಿ, ಕೆಫೆ’.
ಕಳೆದ ಜೂನ್ ತಿಂಗಳಲ್ಲಿ ಆರಂಭವಾದ ಈ ಕೆಫೆ ಲೈಬ್ರರಿಯಲ್ಲಿಗ್ರಾಹಕರು ತಮ್ಮಿಷ್ಟದ ಪುಸ್ತಕಗಳನ್ನು ಓದುತ್ತಾ, ಆಹಾರ ಸವಿಯುತ್ತಾ ಕಾಲ ಕಳೆಯಬಹುದು.ಜನರು ಒಟ್ಟಿಗೆ ಕುಳಿತು ಪುಸ್ತಕದ ಬಗ್ಗೆ ಚರ್ಚಿಸುತ್ತಾ, ಆಹಾರ ಸವಿಯಬಹುದು. ಪುಸ್ತಕ ಓದುವ ಅಭಿರುಚಿಯನ್ನು ಹೀಗೂ ಪ್ರೋತ್ಸಾಹಿಸಬಹುದು ಎನ್ನುವುದು ರಾಧಿಕಾ ಪ್ರತಿಪಾದನೆ.
ಇಲ್ಲಿ 12 ವರ್ಷಕ್ಕಿಂತ ಕೆಳಗಿನವರು ಪುಸ್ತಕಗಳನ್ನು ಓದಲು ಮನೆಗೆ ಕೊಂಡೊಯ್ಯಬಹುದು. ಅವರ ವಯಸ್ಸಿಗೆ ಅನುಗುಣವಾಗಿ ಮನರಂಜನಾ ಕೃತಿಗಳು ಇಲ್ಲಿ ಲಭ್ಯವಿವೆ. ಇದು ಉಚಿತ. ವಯಸ್ಕರು ಕೂಡ ಇಲ್ಲಿಂದ ಪುಸ್ತಕಗಳನ್ನು ಖರೀದಿಸಬಹುದು.
ಕೆಫೆಯಲ್ಲಿ ಸ್ಯಾಂಡ್‌ವಿಚ್, ಸೂಪ್, ಸಲಾಡ್, ಟೀ ಕೇಕ್, ಜ್ಯೂಸ್, ಟೀ ಹಾಗೂ ಕಾಫಿ ಆಸ್ವಾದಿಸಬಹುದು. ಈ ಅಂತರರಾಷ್ಟ್ರೀಯ ಖಾದ್ಯಗಳನ್ನು ಸ್ಥಳೀಯ ಬಾಣಸಿಗರು ಸಿದ್ಧಪಡಿಸುತ್ತಾರೆ. ಸಿರಿಧಾನ್ಯಗಳಿಂದ ತಯಾರಿಸುವ ತಿಂಡಿ, ಜ್ಯೂಸ್ ಕೂಡ ಇಲ್ಲಿ ಲಭ್ಯ.
ಪುಸ್ತಕ ಓದುವ ಕಾರ್ಯಾಗಾರ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ಇಲ್ಲಿ ಆಗಾಗ ಹಮ್ಮಿಕೊಳ್ಳಲಾಗುತ್ತಿದೆ.
ವಿಳಾಸ: ಎಡ್ವರ್ಡ್ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ. ಸಂಪರ್ಕಕ್ಕೆ–93536 08989. ಬೆಳಿಗ್ಗೆ 11ರಿಂದ ಸಂಜೆ 7.
ಮೂರು ಸಾವಿರ ಪುಸ್ತಕ
ಈ ಕೆಫೆಯಲ್ಲಿ 3,000ಕ್ಕೂ ಹೆಚ್ಚು ಕೃತಿಗಳಿವೆ. ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮಕತೆಗಳು, ಸಾಹಿತ್ಯ ಅಕಾಡೆಮಿ ಭಾಷಾಂತರಿಸಿದ ಅಪರೂಪದ ಕೃತಿಗಳು, ಶ್ರೇಷ್ಠ ಲೇಖಕರ ಕತೆಗಳು, ಸಮಾಜಶಾಸ್ತ್ರ, ರಾಜಕೀಯಕ್ಕೆ ಸಂಬಂಧಪಟ್ಟ ಕೃತಿಗಳು... ಹೀಗೆ ಅಪರೂಪದ ಕೃತಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಸದ್ಯಕ್ಕೆ ಇಲ್ಲಿ ಆಂಗ್ಲ ಭಾಷೆಯ ಪುಸ್ತಕಗಳಷ್ಟೇ ಇವೆ. ಪ್ರಾದೇಶಿಕ ಭಾಷೆಗಳ ಕೃತಿಗಳೂ ಸದ್ಯದಲ್ಲೇ ಈ ಕಪಾಟನ್ನು ಅಲಂಕರಿಸಲಿವೆ. ಹೊಸ ಬಗೆಯ ಸಾಹಿತ್ಯ, ಲೇಖಕರು, ಲೇಖನಗಳನ್ನೇ ಇಲ್ಲಿ ಹೆಚ್ಚು ಕಾಣಬಹುದು ಎಂದು ರಾಧಿಕಾ ಹೇಳುತ್ತಾರೆ.
‘ಈ ಎಲ್ಲಾ ಪುಸ್ತಕಗಳನ್ನು ನಾನು ಮತ್ತು ನನ್ನ ತಂಡ ಬಲು ಆಸ್ಥೆಯಿಂದ ಆಯ್ಕೆ ಮಾಡಿದ್ದೇವೆ’ ಎಂದು ಹೇಳಲು ಅವರು ಮರೆಯಲಿಲ್ಲ.
ಅಭಿರುಚಿಯ ಸಂಕೇತ
ಈ ಚಂಪಕ ಕೆಫೆ ಲೈಬ್ರೆರಿ ಒಳಾಂಗಣವೇ ರಾಧಿಕಾ ಅವರ ಅಭಿರುಚಿಯನ್ನೂ, ಪರಿಸರ ಪ್ರೀತಿಯನ್ನೂ ತೋರಿಸುವ ಹಾಗಿದೆ. ಹೊರಗಿನ ಹಸಿರು ಮರಗಳು, ಹಕ್ಕಿಗಳ ಕಲರವ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಚಂಪಕ ಎಂದರೆ ಸಂಪಿಗೆ ಹೂವು. ಎಲ್ಲರಿಗೂ ಚಿರಪರಿಚಿತ ಹಾಗೂ ಸುವಾಸನೆಯಿಂದ ಎಲ್ಲರನ್ನೂ ಆಕರ್ಷಿಸುವ ಗುಣ ಇರುವ ಸಂಪಿಗೆಯ ಗುಣವನ್ನೇ ಈ ಕೆಫೆಗೂ ಬರಲಿ ಎಂಬ ಉದ್ದೇಶದಿಂದ ಈ ಹೆಸರನ್ನೇ ಇಟ್ಟಿದ್ದಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.