ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯು ರಾಯಚೂರಿನ ಎಂಟು ವರ್ಷದ ಬಾಲಕನ ಯಕೃತ್ (ಲಿವರ್) ಕಸಿ ಮಾಡಿ ಯಶಸ್ವಿಯಾಗಿದ್ದು, ಮಗು ಆರೋಗ್ಯವಾಗಿದೆ. ಮಗುವಿನ ತಾಯಿಯೇ ಯಕೃತ್ ದಾನ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯು ದಾನಿಗಳಿಂದ (ಕ್ರೌಡ್ ಫಂಡಿಂಗ್) ಹಣ ಸಂಗ್ರಹಿಸಿತ್ತು. ಈ ಮೂಲಕ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಯಕೃತ್ ಕಸಿಯನ್ನು ಸಾಧ್ಯವಾಗಿಸುವ ಯತ್ನ ಫಲ ನೀಡಿದೆ.
ಮೂರು ತಿಂಗಳು ಮಗುವಾಗಿದ್ದರಾಯಚೂರು ಜಿಲ್ಲೆಯ ಸಂತೋಷ್‌ನ ಕೈಗೆ ಆಗಿದ್ದ ಗಾಯ ಬೇಗ ಗುಣವಾಗಲಿಲ್ಲ. ರಕ್ತ ಹೆಪ್ಪುಗಟ್ಟದ ಕಾರಣ ಹೀಗಾಗಿರಬಹುದು ಎಂದು ಸ್ಥಳೀಯ ವೈದ್ಯರ ಚಿಕಿತ್ಸೆ ನೀಡಿದರು. ಮಗುವಿನ ಪರಿಸ್ಥಿತಿ ಸುಧಾರಣೆಯಾಗಲಿಲ್ಲ. ಆರೋಗ್ಯ ಸಮಸ್ಯೆ ಉಲ್ಬಣಿಸಿದಾಗ ಪೋಷಕರು ಮಗುವನ್ನು ಸಮೀಪದ ಹೈದರಾಬಾದ್ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೂ ಪರಿಹಾರ ದೊರೆಯಲಿಲ್ಲ. ಆರೋಗ್ಯ ಮತ್ತಷ್ಟು ಬಿಗಡಾಯಿಸಿತು.
ಪೋಷಕರು ಮಗುವನ್ನುವಿಜಯಪುರದಲ್ಲಿ ಆರೋಗ್ಯ ಶಿಬಿರ ನಡೆಸುತ್ತಿದ್ದ ಆಸ್ಟರ್ ಆಸ್ಪತ್ರೆಯ ಸಮಗ್ರ ಕರಳು ಆರೈಕಾ ತಂಡದ (ಇಂಟಿಗ್ರೇಟೆಡ್ ಲಿವರ್ ಕೇರ್) ಬಳಿ ಕರೆದೊಯ್ದರು. ಕರಳು ಸಮಸ್ಯೆಯನ್ನು ಪತ್ತೆ ಹಚ್ಚಿದ ಆಸ್ಟರ್ ಆಸ್ಪತ್ರೆಯ ವೈದ್ಯರು, ಯಕೃತ್ ಕಸಿಯಿಂದ ಮಾತ್ರ ಪರಿಹಾರ ಸಾಧ್ಯ ಎಂದು ಹೇಳಿದರು.
ಆದರೆ ದುಬಾರಿ ವೆಚ್ಚವನ್ನು ಭರಿಸುವ ಶಕ್ತಿ ಕುಟುಂಬಕ್ಕೆ ಇರಲಿಲ್ಲ. ಆಸ್ಪತ್ರೆಯೇ ಮುತುವರ್ಜಿ ವಹಿಸಿ ಕ್ರೌಡ್ ಫಂಡಿಂಗ್ ಮೂಲಕ ₹5 ಲಕ್ಷ, ಆಸ್ಪತ್ರೆ ಹಾಗೂ ಕಾರ್ಪೊರೇಟ್ ವಲಯದಿಂದ ₹5 ಲಕ್ಷ ಸಂಗ್ರಹಿಸಿತು. ಮಗುವಿನ ಪೋಷಕರು ₹2.5 ಲಕ್ಷ ಭರಿಸಿದ್ದಾರೆ.
ಎಂಟು ವರ್ಷದ ಸಂತೋಷ್‌ನಿಗೆಆಸ್ಟರ್ ಆಸ್ಪತ್ರೆಯ ಐಎಲ್‌ಸಿ ಹಾಗೂ ಸಿಎಂಐ ಜಂಟಿ ಅಭಿಯಾನದಡಿ ಐದು ತಿಂಗಳ ಹಿಂದೆ ಯಕೃತ್ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇದೀಗ ಮಗು ಆರೋಗ್ಯವಾಗಿದ್ದು, ಶಸ್ತ್ರಚಿಕಿತ್ಸೆ ಫಲ ನೀಡಿದೆ.ಮಕ್ಕಳಲ್ಲಿ ಯಕೃತ್ ಸಮಸ್ಯೆ ಗಂಭೀರ ಸ್ವರೂಪದ್ದಾಗಿದ್ದು, ಕಸಿ ಬಳಿಕ ಆರೈಕೆ ತುಂಬಾ ಮುಖ್ಯ ಎನ್ನುತ್ತಾರೆ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಚೇತನ್ ಗಿಣಿಗೇರಿ.ಡಾ. ಸೋನಲ್ ಆಸ್ಥಾನಾ, ಡಾ. ರಾಜೀವ್ ಲೋಚನ್, ಡಾ. ಮಲ್ಲಿಕಾರ್ಜುನ ಸಕ್ಪಾಲ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.