ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ, ನವೋದ್ಯಮಗಳ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಟ್ಯಾಗ್‌ಲೈನ್‌ಗೆ ‘ಡ್ರೈವರ್‌ಗಳ ನಗರ’ ಎಂಬ ಮತ್ತೊಂದು ವಿಶೇಷಣ ಹೊಸದಾಗಿ ಸೇರಿಕೊಳ್ಳಲಿದೆ.
ಬೆಂಗಳೂರು ಐ.ಟಿ ಮತ್ತು ಬಿ.ಟಿ ಉದ್ಯೋಗಗಳಿಗಷ್ಟೇ ಅಲ್ಲ, ವಾಹನ ಚಾಲಕರಂತಹ ‘ಬ್ಲೂ ಕಾಲರ್ ಜಾಬ್’ಗಳಿಗೂಪ್ರಶಸ್ತ ತಾಣವಾಗಿ ಹೊರಹೊಮ್ಮುತ್ತಿದೆ.
ಆನ್‌ಲೈನ್‌ಉದ್ಯೋಗ ತಾಣ ‘ಇಂಡೀಡ್’ ಈಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಚಾಲಕರ ಉದ್ಯೋಗಾವಕಾಶ ಸೃಷ್ಟಿಗೆ ಸಂಬಂಧಿಸಿದಂತೆ ದೇಶದ ವಿವಿಧ ನಗರಗಳಲ್ಲಿರುವ ಸ್ಥಿತಿಗತಿಯನ್ನು ಅಂಕಿ, ಅಂಶಗಳ ಸಮೇತ ನೀಡಲಾಗಿದೆ.
ಬೆಂಗಳೂರಿನಲ್ಲಿ ಡ್ರೈವರ್‌ಗಳಿಗೆ ಬೇಡಿಕೆ ಕುದುರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ನವೋದ್ಯಮಗಳ ಪಾತ್ರ ಪ್ರಮುಖವಾದದ್ದು. ಆಹಾರ, ಉತ್ಪನ್ನಗಳ ವಿಲೇವಾರಿ, ಸರಕು ಸಾಗಣೆ, ಸಾರಿಗೆ ವಲಯದಲ್ಲಿ ವಾಹನಗಳ ಸಂಖ್ಯೆ ಏರುತ್ತಿದೆ. ಅದಕ್ಕೆ ತಕ್ಕಂತೆ ಡ್ರೈವರ್ ಉದ್ಯೋಗಗಳಿಗೂ ಬೇಡಿಕೆ ಹೆಚ್ಚುತ್ತಿದೆ ಎಂಬ ಸಂಗತಿಗಳಿವೆ.
ಡ್ರೈವರ್ ಉದ್ಯೋಗ ಅವಕಾಶಗಳಿಗೆ ದೇಶದ ಹತ್ತು ನೆಚ್ಚಿನ ನಗರಗಳ ಪಟ್ಟಿ ಮಾಡಲಾಗಿದೆ. ಆಶ್ಚರ್ಯವೆಂದರೆ ಮುಂಬೈ, ನವದೆಹಲಿ, ಚೆನ್ನೈ ನಗರಗಳನ್ನು ಹಿಂದಿಕ್ಕಿರುವ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಪುಣೆ, ಚಂಡೀಗಡ, ಮೊಹಾಲಿ, ಹೈದರಾಬಾದ್, ಕೊಯಮತ್ತೂರು, ಕೋಲ್ಕತ್ತಾ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.
ಉದ್ಯೋಗ ಸೃಷ್ಟಿ
ಬೆಂಗಳೂರಿನಲ್ಲಿ ವಾಹನ ಚಾಲಕರಿಗೆ ಶೇ15ರಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತಿವೆ. ವಾಣಿಜ್ಯ ನಗರಿ ಮುಂಬೈ ಮತ್ತು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ ಪ್ರಮಾಣ ಶೇ 10 ರಷ್ಟಿದೆ. ಚಂಡೀಗಡ ಮತ್ತು ಮೋಹಾಲಿಯಲ್ಲಿ ಸ್ಥಳೀಯರೇ ಹೆಚ್ಚು ಈ ಉದ್ಯೋಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಹೊರಗಿನವರು ಕಡಿಮೆ.
ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳಿಂದ ವಾಹನ ಚಾಲಕರಿಗೆ, ಅದರಲ್ಲೂ ಕಾರು ಚಾಲಕರಿಗೆ ಬೇಡಿಕೆ ಕುದುರಿದೆ. ಕೇವಲ ಮೆಟ್ರೊ ನಗರಗಳು ಮಾತ್ರವಲ್ಲ, ಸಣ್ಣ ಪುಟ್ಟ ನಗರಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ ಎನ್ನುತ್ತಾರೆ ಇಂಡೀಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಶಿ ಕುಮಾರ್.
ಆ್ಯಪ್ ಆಧಾರಿತ ಟ್ಯಾಕ್ಸಿಗಳ ಕೊಡುಗೆ
ಡ್ರೈವರ್ ಕೆಲಸ ಹುಡುಕಿಕೊಂಡು ರಾಜ್ಯದ ವಿವಿಧ ಮೂಲೆಗಳಿಂದಷ್ಟೇ ಅಲ್ಲ, ಅನ್ಯ ರಾಜ್ಯಗಳ ನಿರುದ್ಯೋಗಿಗಳು ಕೂಡ ಬೆಂಗಳೂರಿಗೆ ಬರುತ್ತಿದ್ದಾರೆ.
ನಗರದಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ, ಬಾಡಿಗೆ ಟ್ಯಾಕ್ಸಿಗಳು ಸಾಕಷ್ಟು ಉದ್ಯೋಗ ಸೃಷ್ಟಿಸುತ್ತಿವೆ. ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ಈಶಾನ್ಯ ರಾಜ್ಯ ಮತ್ತು ಉತ್ತರ ಭಾರತದ ಚಾಲಕರು ಬೆಂಗಳೂರಿನಲ್ಲಿ ಸಿಗುತ್ತಾರೆ.
ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಓಡಿಸುತ್ತಿರುವ ಕೇರಳದ ಜೋಬಿ ಥಾಮಸ್ ‘ಮೆಟ್ರೊ’ ಜತೆ ಮಾತಿಗೆ ಸಿಕ್ಕರು.
‘ಬೆಂಗಳೂರಿಗೆ ಬಂದು 14 ವರ್ಷವಾಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಓಡಿಸುತ್ತಿದ್ದೇನೆ. ಇಲ್ಲಿಗೆ ಬಂದ ನಂತರ ಕನ್ನಡದ ಜತೆಗೆ ಮೂರ್ನಾಲ್ಕು ಭಾಷೆ ಕಲಿತಿದ್ದೇನೆ’ ಎಂದು ಓಲಾ ಕ್ಯಾಬ್ ಚಾಲಕ ಕೇರಳದ ಜೋಬಿ ಥಾಮಸ್ ತನ್ನ ಕತೆ ಹೇಳಿಕೊಂಡ.
‘ಕೊಚ್ಚಿ ಮತ್ತು ತಿರುವನಂತಪುರದಲ್ಲಿ ಇಷ್ಟು ಅವಕಾಶ ಇಲ್ಲ. ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಭಾರಿ ಬೇಡಿಕೆ ಇದೆ. ಹಣ ಸಂಪಾದಿಸುವುದೇ ಗುರಿಯಾಗಿದ್ದರೆ ಹಗಲು, ರಾತ್ರಿ ದುಡಿಯಬಹುದು. 24 ಗಂಟೆಯೂ ಗ್ರಾಹಕರು ಸಿಗುತ್ತಾರೆ. ಕೇರಳದಲ್ಲಿ ಇದು ಸಾಧ್ಯವಿಲ್ಲ. ಅದಕ್ಕಾಗಿ ಇಲ್ಲಿಗೆ ಬಂದೆ’ ಎಂದು ಅನುಭವ ಹಂಚಿಕೊಂಡ.
‘ಎರಡು ಅಥವಾ ಮೂರು ತಿಂಗಳಿಗೊಮ್ಮೆ ಕೇರಳಕ್ಕೆ ಹೋಗಿ ಅಪ್ಪ, ಅಮ್ಮನನ್ನು ನೋಡಿಕೊಂಡು ಬರುತ್ತೇನೆ. ಊರಿನಲ್ಲಿದ್ದ ಐದಾರು ನಿರುದ್ಯೋಗಿ ಸ್ನೇಹಿತರನ್ನು ಕರೆತಂದು ಟ್ಯಾಕ್ಸಿ ಚಾಲಕ ಕೆಲಸ ಕೊಡಿಸಿದ್ದೇನೆ’ ಎಂದು ಹೇಳಿದೆ.
ಮೆಟ್ರೊ ರೈಲು ಸೇವೆ ಆರಂಭವಾದ ನಂತರವೂ ಬೇಡಿಕೆ ತಗ್ಗಿಲ್ಲ. ಮೆಟ್ರೊ ಜಾಲ ಇನ್ನೂ ನಗರದ ಎಲ್ಲ ಕಡೆಯೂ ಹರಡಿಲ್ಲ. ಹೀಗಾಗಿ ತೊಂದರೆ ಇಲ್ಲ. ವಿಮಾನ ನಿಲ್ದಾಣ, ಐ.ಟಿ.,ಬಿ.ಟಿ ಕಂಪನಿಗಳ ಕಾರಣದಿಂದಾಗಿ ಆ್ಯಪ್ ಆಧಾರಿತ ಟ್ಯಾಕ್ಸಿಗಳಿಗೆ ಗ್ರಾಹಕರ ಸಂಖ್ಯೆಗೇನೂ ಕೊರತೆ ಇಲ್ಲ ಎನ್ನುತ್ತಾರೆ ಉಬರ್ ಟ್ಯಾಕ್ಸಿ ಚಾಲಕ ಮಂಡ್ಯದ ಚನ್ನೇಗೌಡ.
‘ಯಾವುದೇ ಕೆಲಸ ಗೊತ್ತಿಲ್ಲದಿದ್ದರೂ ಚಿಂತೆ ಇಲ್ಲ. ಡ್ರೈವಿಂಗ್ ಗೊತ್ತಿದ್ದರೆ ಸಾಕು.ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫೇಲ್ ಆದವರಿಗೂ ಬೆಂಗಳೂರಿನಲ್ಲಿ ಡ್ರೈವರ್ ಉದ್ಯೋಗ ಸುಲಭವಾಗಿ ಸಿಗುತ್ತದೆ. ಶಾಲೆ ಮೆಟ್ಟಿಲು ಕೂಡ ಹತ್ತದ ನನ್ನ ಹಳ್ಳಿಯ (ಮಂಡ್ಯದ ಬಳಿ ಹಳ್ಳಿ) ಕನಿಷ್ಠ ಹತ್ತಾರು ಗೆಳೆಯರು ಬೆಂಗಳೂರಿನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದಾರೆ’ ಎಂದರು.
‘ಮೆಟ್ರೊ ಮತ್ತು ಓಲಾ, ಉಬರ್ ಟ್ಯಾಕ್ಸಿ ಬಂದ ನಂತರ ಆಟೊಗಳಿಗೆ ಹೊಡೆತ ಬಿದ್ದಿದೆ. ಹೀಗಾಗಿ ನಾವೂ ಆ ಕಂಪನಿಗಳ ಜತೆ ಕೈ ಜೋಡಿಸಿದ್ದೇವೆ.ಕೆಲವು ಆಟೊ ಚಾಲಕರಿಂದಾಗಿ ಎಲ್ಲರಿಗೂ ಕೆಟ್ಟ ಹೆಸರು ಬರುತ್ತಿದೆ. ಗ್ರಾಹಕರು ಆಟೊಗಳ ಬದಲು ಕ್ಯಾಬ್ ಏರುತ್ತಿದ್ದಾರೆ’ ಎಂದು ಆಟೊ ಚಾಲಕ ವೆಂಕಟೇಶ್ ಬೇಸರದಿಂದಲೇ ನುಡಿದರು.
‘ಓಲಾ, ಉಬರ್ ಕ್ಯಾಬ್ ಚಾಲಕರು ನಮ್ಮ ಅನ್ನ ಕಸಿದುಕೊಳ್ಳುತ್ತಿದ್ದಾರೆ’ ಎಂಬ ಸಿಟ್ಟು ಅವರ ಮಾತಿನಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.