ADVERTISEMENT

‘ಫ್ಯಾಮಿಲಿ ಡೇ ಔಟ್‌’

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:00 IST
Last Updated 12 ಆಗಸ್ಟ್ 2019, 20:00 IST
   

ಶಾಪಿಂಗ್‌ ಮಾಲ್‌ಗಳು ಈಗ ಬರೀ ವ್ಯಾಪಾರಕ್ಕಷ್ಟೇ ಅಲ್ಲ. ಈವೆಂಟ್‌ಗಳಿಗೆ ವೇದಿಕೆಯೂ ಹೌದು. ಒಟ್ಟು ವ್ಯಾಪಾರವೇ ಮೂಲ ಉದ್ದೇಶದ್ದಾದರೂ ಹಲವು ಈವೆಂಟ್‌ಗಳಲ್ಲಿ ಇಡೀ ಕುಟುಂಬ ಪಾಲ್ಗೊಂಡು ಒಂದಷ್ಟು ಕಾಲ ರಿಲ್ಯಾಕ್ಸ್‌ ಆಗಬಹುದು. ಕೊಳ್ಳುಬಾಕ ಸಂಸ್ಕೃತಿಗೂ ಒಂದು ಸೃಜನಶೀಲ ಟಚ್‌ ಕೊಡುವ ಪ್ರಯತ್ನವಿದು ಎನ್ನಬಹುದು.

ಕಳೆದ ವಾರಾಂತ್ಯದಲ್ಲಿ ನಾಗವಾರ ಜಂಕ್ಷನ್‌ನಲ್ಲಿರುವ ‘ಎಂಎಸ್‌ಆರ್‌ ಎಲಿಮೆಂಟ್ಸ್‌ ಮಾಲ್‌’ನಲ್ಲಿ ‘ಫ್ಯಾಮಿಲಿ ಡೇ ಔಟ್‌’ ಎನ್ನುವ ವಿಶೇಷ ಈವೆಂಟ್‌ ಆಯೋಜನಗೊಂಡಿತ್ತು. ಇದರಲ್ಲಿ ಮಾಲ್‌ನ ಹಜಾರವನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗಿತ್ತು. ತರಹೇವಾರಿ ವಸ್ತುಗಳ ಅದರಲ್ಲೂ ಕರಕುಶಲ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳಿಗೆ ಶಾಲಾ ಅಗತ್ಯಗಳನ್ನು ಪೂರೈಸುವ ಪರಿಕರಗಳಿಂದ ಹಿಡಿದು ಅವರ ಡಾನ್ಸ್‌, ಪೇಂಟಿಂಗ್‌, ಆಟೋಟಗಳು, ಫನ್‌ ಇತ್ಯಾದಿ ಚಟುವಟಿಕೆಗೂ ಇಂಬು ನೀಡಲಾಗಿತ್ತು.

ಮ್ಯಾಜಿಕ್‌ ಶೋ ಮತ್ತು ಪೇಂಟಿಂಗ್‌ನಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿ ತೋರಿದರು. ಕೆಲವು ಕಲಾವಿದರು ಮಕ್ಕಳ ಕಲಾ ಆಸಕ್ತಿ ಮತ್ತು ಅವರ ಸೂಕ್ಷ್ಮ ಸಂವೇದನೆಗಳಿಗೆ ಪೂರಕವಾದ ಕಲಾಕೃತಿಗಳನ್ನು ಮಕ್ಕಳಿಂದಲೇ ರೂಪಿಸಿ, ಅವುಗಳಿಗೆ ತಮ್ಮ ಕಲಾ ಸ್ಪರ್ಶ ನೀಡಿ ಅವರಿಗೇ ಮಾರಾಟ ಮಾಡುವ ವಿಶೇಷ ಪ್ರಯೋಗ ಮಾಡಿದರು.

ADVERTISEMENT

ದೇಶದ ವಿವಿಧ ಭಾಗದ, ವಿಶೇಷವಾಗಿ ಉತ್ತರ ಭಾರತೀಯರ ಸ್ಟಾಲ್‌ಗಳೇ ಹೆಚ್ಚು ರಾರಾಜಿಸಿದವು. ಸರ್ದಾರ್‌ಜೀ ಒಬ್ಬರ ಬುಕ್‌, ಪೆನ್ಸಿಲ್‌ ಅಂಗಡಿಯಂತೂ ಭರ್ಜರಿ ವ್ಯಾಪಾರದಲ್ಲಿ ತೊಡಗಿತ್ತು. ಮಕ್ಕಳ ಕಲರವ, ಮ್ಯಾಜಿಕ್‌ ಕಲಿಯುವ, ಪೇಂಟಿಂಗ್‌ನಲ್ಲಿ ತೋರುವ ಆಸಕ್ತಿ ಗಮನ ಸೆಳೆಯುವಂತಿತ್ತು. ತಮ್ಮ ಮಕ್ಕಳು ಈ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ನೋಡುವ ಖುಷಿ ಪಾಲಕರಲ್ಲಿ ಮನೆ ಮಾಡಿದಂತಿತ್ತು.

ಮಾಲ್‌ಗಳು ಬರೀ ಶಾಪಿಂಗ್‌ ಏರಿಯಾಗಳಲ್ಲ, ಸೃಜನಶೀಲ ಚಟುವಟಿಕೆಯ ತಾಣ ಕೂಡ ಎನ್ನುವುದನ್ನು ಸಾಬೀತುಪಡಿಸಲು ಇಂಥ ಈವೆಂಟ್‌ಗಳನ್ನು ಹಮ್ಮಿಕೊಳ್ಳುತ್ತಿರುವುದು ಇತ್ತೀಚಿನ ಬಿಜಿನೆಸ್‌ ಟ್ರೆಂಡ್‌. ಬ್ರಾಂಡ್‌ ಅಲ್ಲದ ವಸ್ತುಗಳ ವ್ಯಾಪಾರಿಗಳು, ಕರಕುಶಲ ವಸ್ತುಗಳ ತಯಾರಿಕೆಗೆ ಉತ್ತೇಜನ ನೀಡುವ ಎನ್‌ಜಿಒ ಸದಸ್ಯರು ಹೆಚ್ಚಿಗೆ ಕಾಣಿಸಿಕೊಂಡರು. ಹೀಗೊಂದು ಪರ್ಯಾಯ ಬಯಸುವ ವ್ಯಾಪಾರ ಚಟುವಟಿಕೆಗೆ ಪ್ರೋತ್ಸಾಹ ನೀಡಿದ್ದು ಮಾಲ್‌ನ ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.