ಕಬ್ಬನ್‌ಪೇಟೆಯ ಮಗ್ಗದ ಲಟಪಟ ಸದ್ದು ಕ್ಷೀಣಿಸುತ್ತಿದೆ. ಒಂದು ಕಾಲದಲ್ಲಿ ವೈಭವ ಮೆರೆದಿದ್ದ ಇಲ್ಲಿನ ಸೀರೆಗಳು, ಈಗ ಉತ್ಪಾದನಾ ವೆಚ್ಚ ಹೆಚ್ಚಳ, ಬಾಡಿಗೆ ಏರಿಕೆ, ಜಿಎಸ್‌ಟಿಯಿಂದಾಗಿ ಮಾರುಕಟ್ಟೆಯಲ್ಲಿ ನೆಲೆ ಕಾಣಲಾಗದೆ ತತ್ತರಿಸಿವೆ.
‘ಸುಮಾರು 500 ಕುಟುಂಬಗಳು ನೇಕಾರಿಕೆಯನ್ನು ನೇರವಾಗಿ ನೆಚ್ಚಿಕೊಂಡಿವೆ. ಇಷ್ಟೇ ಪ್ರಮಾಣದ ಮಂದಿ ಇದಕ್ಕೆ ಬೇಕಾದ ಪೂರಕ ಸಾಮಗ್ರಿಗಳನ್ನು ಪೂರೈಸುವ ಕಾಯಕ ನಂಬಿಕೊಂಡಿದ್ದಾರೆ.ಸಾವಿರಕ್ಕೂ ಮಿಕ್ಕಿ ಕಾರ್ಮಿಕರಿಗೆ ಮಗ್ಗ ಬದುಕು ಕೊಟ್ಟಿದೆ. ಬೇಡಿಕೆ ಇಲ್ಲದ ಕಾರಣಕ್ಕೆ ವಹಿವಾಟು ಶೇ 40ರಷ್ಟು ಕುಸಿದಿದೆ’ ಎಂದು ಸಂಕಟ ತೆರೆದಿಟ್ಟರು ತೇಜಸ್ವಿ ಫ್ಯಾಬ್ರಿಕ್ಸ್‌ನ ಆರ್. ಪುಟ್ಟರಾಜು.
‘1997ರಿಂದ 2004ರವರೆಗೆ ಈ ಪ್ರದೇಶದಲ್ಲಿ ಸುಮಾರು 10 ಸಾವಿರ ಮಗ್ಗಗಳಿದ್ದವು. ಈಗ ಅವು 800ಕ್ಕೆ ಇಳಿದಿವೆ. ನಗರ ಬೆಳೆದಂತೆ ಇಲ್ಲಿ ಬಾಡಿಗೆಯೂ ಏರಿತು. ಸಹಜವಾಗಿ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಿತು. ಉತ್ಪನ್ನಗಳಿಗೆ ಬೇಡಿಕೆ ಕುಸಿಯಿತು. ಉತ್ಪಾದನಾ ವೆಚ್ಚ ಸರಿದೂಗಿಸಲು ಸಾಲ ಮಾಡಬೇಕಾಯಿತು. ಹಾಗಿದ್ದರೂ ಪರಿಸ್ಥಿತಿ ಸರಿಹೋಗಲಿಲ್ಲ. ಮಾಡಿದ ಸಾಲ ತೀರಿಸಲು ಮಗ್ಗ, ಮನೆ ಮಾರಿದರು. ಇದ್ದಬದ್ದ ಹಣವನ್ನೆಲ್ಲಾ ಸಾಲಗಾರರಿಗೆ ವಾಪಸ್ ಕೊಟ್ಟು ಊರು ತೊರೆದರು. ಈ ಕಾರಣದಿಂದ ಹಂತಹಂತವಾಗಿ ಇಲ್ಲಿನ ಮಂದಿ ಆನೇಕಲ್, ನೆಲಮಂಗಲ, ಗೊಟ್ಟಿಗೆರೆ, ಅಗ್ರಹಾರ ಲೇಔಟ್‌ಗೆ ಸ್ಥಳಾಂತರಗೊಂಡರು. ಹಳ್ಳಿಗಳಿಗೆ ವಲಸೆ ಹೋದವರೂ ಇದ್ದಾರೆ. ಹಾಗೆಂದು ಅಲ್ಲಿಯೂ ಅವರ ಸ್ಥಿತಿಗತಿಯೇನೂ ಅತ್ಯುತ್ತಮವಾಗಿದೆ ಎಂದು ಹೇಳಲಾಗದು’ ಎಂದರು ಅವರು.
ಜಿಎಸ್‌ಟಿ ಹೊಡೆತ ಹೇಗೆ?
‘ಈ ಹಿಂದೆ ಮಗ್ಗದ ಉತ್ಪನ್ನಗಳಿಗೆ ತೆರಿಗೆ ಇರಲಿಲ್ಲ. ಉತ್ಪನ್ನಗಳು ನೇರ ಮಾರುಕಟ್ಟೆಗೆ ಸೇರುತ್ತಿದ್ದವು. ವ್ಯಾಟ್ ಪದ್ಧತಿ ಇದ್ದಾಗಲೂ ನಾವು ಸಮಸ್ಯೆ ಎದುರಿಸಲಿಲ್ಲ. ಈಗ ಪ್ರತಿಯೊಂದಕ್ಕೂ ಜಿಎಸ್‌ಟಿ ಶೇ 5ರಷ್ಟು ಪಾವತಿಸಬೇಕಿದೆ. ಪಾವತಿ ಸಮಸ್ಯೆ ಅಲ್ಲ. ಆದರೆ, ಆ ಹಣ ನಮಗೆ ಬರಬೇಕಾದರೆ ಸುಮಾರು ಮೂರು ತಿಂಗಳು ಕಾಯಬೇಕಾಗುತ್ತದೆ. ಇತ್ತ ಉತ್ಪನ್ನವನ್ನು ಮಾರುಕಟ್ಟೆಗೆ ಸಾಲ ರೂಪದಲ್ಲಿ (ಕ್ರೆಡಿಟ್) ಕೊಟ್ಟಿರುತ್ತೇವೆ. ಅವರು ಮಾಲು ಮಾರಾಟವಾದ ಮೇಲೆ ನಮಗೆ ಹಣ ಕೊಡುತ್ತಾರೆ. ಅವರು ಹಣ ಕೊಡುವವರೆಗೆ ಜಿಎಸ್‌ಟಿಯವರು ಕಾಯುವುದಿಲ್ಲ. ನಾವು ಇಲ್ಲಿ ಉದ್ರಿ ಕೊಟ್ಟ ಮಾಲಿಗೆ ತೆರಿಗೆ ಕಟ್ಟಬೇಕು. ಇದನ್ನು ಸಂಭಾಳಿಸುವುದು ಕಷ್ಟ’ ಎಂದರು ಅವರು.
‘ನೋಟು ನಿಷೇಧದ ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಅದುವರೆಗೆ ಹೆಚ್ಚುವರಿ ಹಣ ಇರಿಸಿಕೊಂಡಿದ್ದ ಮಾರ್ವಾಡಿ ವ್ಯಾಪಾರಿಗಳು ನಮ್ಮಿಂದ ಹೆಚ್ಚುವರಿಯಾಗಿ ಮಾಲು ತೆಗೆದುಕೊಂಡು ಹೋಗುತ್ತಿದ್ದರು. ಆಗ ಕ್ರೆಡಿಟ್ ಕೊಡುವ ಪ್ರಮಾಣ ಕಡಿಮೆ ಇತ್ತು. ಈಗ ಹಾಗಲ್ಲ. ಅವರು ತಮ್ಮ ಮಾರುಕಟ್ಟೆಯ ಬೇಡಿಕೆಯಷ್ಟೇ ಮಾಲನ್ನು ತೆಗೆದುಕೊಂಡು ಹೋಗುತ್ತಾರೆ. ಹೆಚ್ಚುವರಿ ಬೇಡಿಕೆ ಕೊಡುವುದಿಲ್ಲ. ಮಾಲು ಸಂಗ್ರಹಿಸಿಟ್ಟರೂ ತೊಂದರೆ ಎಂಬ ಆತಂಕ ಸಗಟು ವ್ಯಾಪಾರಿಗಳನ್ನು ಕಾಡುತ್ತಿದೆ’ ಎಂದರು ಇನ್ನೊಬ್ಬ ಮಗ್ಗ ಮಾಲೀಕ ಗಂಗರಾಜು.
ಇದನ್ನೂ ಓದಿ...ಕೈಮಗ್ಗ ಉಳಿಸಲು ಗಾಳಿಮಗ್ಗ
ಮಗ್ಗದ ಭೇದವೂ ಕಾರಣ
ಕಿರಣ್ ಟೆಕ್ಸ್‌ಟೈಲ್ಸ್‌ನ ಕಿರಣ್ ಸಮಸ್ಯೆಯ ಇನ್ನೊಂದು ಮುಖವನ್ನು ತೆರೆದಿಟ್ಟರು.‘ಮೊದಲು ಕೈಮಗ್ಗ ಇಟ್ಟುಕೊಂಡು ಗುಡಿ ಕೈಗಾರಿಕೆಯಾಗಿ ಸೀರೆ ನೇಯುತ್ತಿದ್ದ ನಮಗೆ ವಿದ್ಯುತ್ ಮಗ್ಗಗಳನ್ನು ಅಳವಡಿಸಿಕೊಳ್ಳುವಂತೆ ಸರ್ಕಾರವೇ ಪ್ರೋತ್ಸಾಹ ನೀಡಿತು. ಈಗ ಕೈಮಗ್ಗದ ಉತ್ಪನ್ನಗಳನ್ನು ತೆರಿಗೆ ಮುಕ್ತಗೊಳಿಸಿತು. ಹಾಗಿದ್ದರೆ ನಾವು ಹೊಸತನಕ್ಕೆ ತೆರೆದುಕೊಳ್ಳಬಾರದೇ? ಇದು ಯಂತ್ರ ಚಾಲಿತ ಮಗ್ಗ ಅಷ್ಟೇ. ಉತ್ಪನ್ನ ಅದೇ ಅಲ್ಲವೇ? ಏಕೆ ಹೀಗೆ’ ಎಂದು ಪ್ರಶ್ನಿಸಿದರು ಅವರು.
‘ನಗದು ಪಾವತಿಸಿ ಉತ್ಪನ್ನ ತೆಗೆದುಕೊಂಡು ಹೋಗಿ ಎಂದು ಕೇಳಿದರೆ ಸಗಟು ವ್ಯಾಪಾರಿಗಳು ತೀರಾ ಅಗ್ಗದ ದರಕ್ಕೆ ಕೇಳುತ್ತಾರೆ. ಹೀಗಾದಾಗ ನಮಗೆ ಅಸಲು ಬರಬೇಕಾದರೆ ಸಾಲ ನೀಡಿ ಕಾಯಲೇಬೇಕಾಗುತ್ತದೆ. ಜಿಎಸ್‌ಟಿ ಲೆಕ್ಕಾಚಾರ ನಿರ್ವಹಿಸಲು ಒಬ್ಬರು ಲೆಕ್ಕಪರಿಶೋಧಕರನ್ನು ಅವಲಂಬಿಸಬೇಕು. ಅವರಿಗೂ ಶುಲ್ಕ ಪಾವತಿಸಬೇಕು. ಹೀಗೆ ಜಿಎಸ್‌ಟಿ ನೇಕಾರರನ್ನು ಹಲವು ರೀತಿ ಸುತ್ತಿಕೊಳ್ಳುತ್ತಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಇದನ್ನೂ ಓದಿ...ವಿದ್ಯುತ್ ಮಗ್ಗ ಸಹಾಯಧನ ಹೆಚ್ಚಿಸಿ
ಸೂರತ್ ಸ್ಪರ್ಧೆ: ‘ಮಾರುಕಟ್ಟೆಗೆ ವ್ಯಾಪಕ ಪ್ರಮಾಣದಲ್ಲಿ ಎಲ್ಲ ಬಗೆಯ ಬಟ್ಟೆಗಳು ಸೂರತ್‌ನಿಂದ ಬರುತ್ತಿವೆ. ತೀರಾ ಅಗ್ಗವೂ ಹೌದು. ಅವು ತಡೆಯಲಾರದ ಹೊಡೆತ ಕೊಟ್ಟಿವೆ. ಹಾಗೆಂದು ಅಲ್ಲಿನ ಸ್ಥಿತಿಯೂ ಉತ್ತಮ ಎಂದು ಹೇಳಲಾಗದು’ ಎಂದರು ಗಂಗರಾಜು.
ಹೊಸಬರು ಬರುತ್ತಿಲ್ಲ...
‘ಹೊಸಬರು ನೇಕಾರಿಕೆಯತ್ತ ಆಸಕ್ತಿ ವಹಿಸುತ್ತಿಲ್ಲ. ನಾವೂ ನೇಮಿಸಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದ್ದವರಲ್ಲೇ ಮಗ್ಗ ನಿಭಾಯಿಸುತ್ತಿದ್ದೇವೆ. ಮಾರುಕಟ್ಟೆ ಸ್ಥಿತಿ ಹೀಗೇ ಮುಂದುವರಿದರೆ ನಾವೂ ಆಟೊಮೊಬೈಲ್ ಕ್ಷೇತ್ರದವರ ಹಾದಿ ಹಿಡಿಯಬೇಕಾದೀತು’ ಎಂದು ಪುಟ್ಟರಾಜು ಆತಂಕ ವ್ಯಕ್ತಪಡಿಸಿದರು.
ಇಲ್ಲಿ ತಯಾರಾಗುವ ಸೀರೆಗಳು ಇಲ್ಲಿನ ಸಗಟು ಮಾರುಕಟ್ಟೆಯನ್ನೇ ಅವಲಂಬಿಸಿವೆ. ಚಿಕ್ಕಪೇಟೆ, ಅವೆನ್ಯೂ ರಸ್ತೆ, ಜೆಎಂ ರಸ್ತೆಯಲ್ಲೇ ಸಗಟು ವ್ಯಾಪಾರಿಗಳು ಖರೀದಿಸುತ್ತಾರೆ.
ಉತ್ಪನ್ನಗಳು: ಆರ್ಟ್ ಸಿಲ್ಕ್, ಡಿಸೈನ್ ಬ್ರೊಕೆಟ್, ಬ್ರೊಕೆಟ್ ಬುಟ್ಟ, ಜರಿ ಬುಟ್ಟ, ಕ್ರೇಪ್ ಸಿಲ್ಕ್ ಪಂಚೆ, ಶಲ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.