ಮಳೆಗಾಲದಲ್ಲಿ ಚರ್ಮದಷ್ಟೇ ಕೂದಲಿನ ಕಾಳಜಿ ವಹಿಸುವುದು ಅತ್ಯಗತ್ಯ. ಬಹಳಷ್ಟು ಮಂದಿ ಮಳೆಗಾಲದಲ್ಲಿ ಕೂದಲಿನ ಸೂಕ್ತ ಆರೈಕೆ ಮಾಡಲಾರದೇ ತೊಂದರೆಗಳನ್ನು ಅನುಭವಿಸುತ್ತಾರೆ. ಕೂದಲಿನ ಬುಡದ ಸ್ವಚ್ಛತೆಯ ಕೊರತೆಯಿಂದಾಗ ತಲೆಹೊಟ್ಟು, ಕಡಿತ ಇತ್ಯಾದಿ ಸಮಸ್ಯೆಗಳು ತಲೆದೋರುತ್ತವೆ. ತುಸು ಮುಂಜಾಗ್ರತೆ ವಹಿಸಿದರೆ ಮಳೆಗಾಲದಲ್ಲಿ ಆಕರ್ಷಕ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.
* ಮಳೆಗಾಲದಲ್ಲಿ ತಲೆಸ್ನಾನ ಮಾಡಿದರೆ ಕೂದಲು ಬೇಗ ಒಣಗದು ಅನ್ನುವ ಕಾರಣಕ್ಕಾಗಿ ತಲೆಸ್ನಾನ ಮುಂದೂಡದಿರಿ. ಇದರಿಂದ ಕೂದಲ ಬುಡದಲ್ಲಿ ಅನಗತ್ಯ ಎಣ್ಣೆಯಂಶ ಸೇರಿಕೊಂಡು ಕಡಿತ, ಹೊಟ್ಟು, ಶಿಲಿಂಧ್ರದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಳೆಗಾಲದಲ್ಲೂ ಕೂದಲ ಬುಡವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಅಗತ್ಯ.
* ಕೂದಲಿಗೆ ನೈಸರ್ಗಿಕ ಶ್ಯಾಂಪೂ ಮತ್ತು ಕಂಡೀಷನರ್‌ಗಳನ್ನೇ ಬಳಸಿ
* ಕೂದಲಿಗೆ ನೇರವಾಗಿ ಶ್ಯಾಂಪೂ ಹಚ್ಚದೇ ನೀರಿನಲ್ಲಿ ತುಸು ಮಿಶ್ರಣ ಮಾಡಿಕೊಂಡು ಹಚ್ಚಿಕೊಳ್ಳುವುದು ಉತ್ತಮ. ಕಂಡೀಷನರ್ ಅನ್ನು ಅಪ್ಪಿತಪ್ಪಿಯೂ ತಲೆಕೂದಲ ಬುಡಕ್ಕೆ ಹಚ್ಚದಿರಿ. ಕೂದಲಿನ ಮಧ್ಯ ಅಥವಾ ಕೊನೆ ಭಾಗದಲ್ಲಿ ಮಾತ್ರ ಕಂಡೀಷನರ್ ಹಚ್ಚುವುದು ಸರಿಯಾದ ಕ್ರಮ.
* ಕಂಡೀಷನರ್ ಹಚ್ಚಿಕೊಂಡ ಎರಡ್ಮೂರು ನಿಮಿಷದೊಳಗೆ ಕೂದಲನ್ನು ತೊಳೆಯಿರಿ. ಜಾಸ್ತಿ ಹೊತ್ತು ಬಿಡದಿರಿ.
* ಮಳೆಗಾಲದಲ್ಲಿ ಕೂದಲನ್ನು ಜಾಸ್ತಿ ಹೊತ್ತು ಗಾಳಿ ಬಿಡಬೇಡಿ. ಇದರಿಂದ ಕೂದಲು ಸಿಕ್ಕಾಗುತ್ತದೆ. ನಿರ್ಜೀವವಾಗುತ್ತದೆ. ಉದ್ದ ಕೂದಲಿದ್ದರೆ ತುಸು ಸಡಿಲವಾಗಿಯೇ ಜಡೆ ಹಾಕಿಕೊಳ್ಳಿ
* ಮಳೆಗಾಲದಲ್ಲಿ ಶೀತವಾಗುವ ಭಯದಿಂದ ಬಹುತೇಕರು ತಲೆಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದಿಲ್ಲ. ಆದರೆ, ಮಳೆಗಾಲದಲ್ಲೂ ತಲೆಗೆ ಕೊಬ್ಬರಿಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬಹುದು. ಆದರೆ, ಎಣ್ಣೆ ಹಚ್ಚಿಕೊಂಡ ಒಂದೆರಡು ಗಂಟೆಯೊಳಗೆ ತಲೆಸ್ನಾನ ಮಾಡುವುದು ಉತ್ತಮ
* ತಲೆಗೆ ಎಣ್ಣೆ ಹಚ್ಚಿಕೊಂಡಾಗ ಕೂದಲನ್ನು ಬಿಗಿಯಾಗಿ ಕಟ್ಟದಿರಿ.
* ಬಿಳಿಕೂದಲು ಇದ್ದವರು ಕೂದಲಿಗೆ ಡೈ ಮಾಡಬಹುದು. ಆದರೆ, ಯಾವ ಭಾಗ ಬಿಳಿ ಆಗಿರುತ್ತದೋ ಅಷ್ಟಕ್ಕೇ ಡೈ ಮಾಡುವುದು ಒಳ್ಳೆಯದು. ಗುಣಮಟ್ಟದ ಡೈ ಬಳಸಿ. ಕೆಲ ಡೈಗಳು ಅಡ್ಡಪರಿಣಾಮ ಬೀರುವುದರಿಂದ, ಬಳಸುವ ಮುನ್ನ ಪರೀಕ್ಷೆ ಮಾಡಿ ಬಳಸುವುದು ಕ್ಷೇಮಕರ.
* ಕೂದಲಿಗೆ ಹೆಚ್ಚು ಬಿಸಿನೀರು ಬಳಸಬೇಡಿ. ಮಳೆಯಲ್ಲಿ ಕೂದಲು ನೆನೆದಿದ್ದರೆ ಕಾಟನ್ ಟವೆಲ್‌ನಲ್ಲಿ ಕೂದಲನ್ನು ಚೆನ್ನಾಗಿ ಒರೆಸಿಕೊಳ್ಳಿ.
* ಕೂದಲು ಬೇಗ ಒಣಗಲೆಂದು ಹೇರ್ ಡ್ರೈಯರ್ ಬಳಸುವುದನ್ನು ಆದಷ್ಟು ತಡೆಗಟ್ಟಿ. ತೀರಾ ಅನಿವಾರ್ಯವಿದ್ದಲ್ಲಿ ಮಾತ್ರ ಡ್ರೈಯರ್ ಬಳಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.