ADVERTISEMENT

ಕ್ಯಾನ್ಸರ್‌ ರೋಗಿಗಳಿಗೆ ವಿಗ್‌ ಮಕ್ಕಳ ತಲೆಗೂದಲು ದಾನ!

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 19:45 IST
Last Updated 18 ಅಕ್ಟೋಬರ್ 2019, 19:45 IST
ಕೂದಲು ದಾನ ಮಾಡಿದ ವಿದ್ಯಾರ್ಥಿನಿ ನಿಧಿ
ಕೂದಲು ದಾನ ಮಾಡಿದ ವಿದ್ಯಾರ್ಥಿನಿ ನಿಧಿ   

ಮಹಿಳೆಯರಿಗೆ ತಮ್ಮ ತಲೆಗೂದಲ ಮೇಲೆ ಎಲ್ಲಿಲ್ಲದ ವ್ಯಾಮೋಹ! ನೀಳ ಕೇಶರಾಶಿಗಾಗಿ ಅವರು ಏನೆಲ್ಲಾ ಸಾಹಸ ಮಾಡುತ್ತಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಆದರೆ, ಇಲ್ಲೊಂದು ಶಾಲೆಯ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಒಳ್ಳೆಯ ಉದ್ದೇಶಕ್ಕಾಗಿತಮ್ಮ ತಲೆಗೂದಲನ್ನೇ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸೋಫಿಯಾ ಹೈಸ್ಕೂಲ್‌ ಇಂಟರ‍್ಯಾಕ್ಟ್‌ ಕ್ಲಬ್‌ನ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರು ಕ್ಯಾನ್ಸರ್‌ ಪೀಡಿತ ರೋಗಿಗಳ ವಿಗ್‌ ತಯಾರಿಸಲು ತಲೆಗೂದಲು ದಾನ ನೀಡಿದ್ದಾರೆ. ಸೋಫಿಯಾ ಹೈಸ್ಕೂಲ್‌ ಇಂಟರ‍್ಯಾಕ್ಟ್‌ ಕ್ಲಬ್‌ ಶಿಕ್ಷಕಿ ಸ್ನೇಹಾ ರಾಮ್‌ ತಮ್ಮ 12 ಇಂಚಿನ ಉದ್ದದ ಜಡೆಯನ್ನು ಕೊಟ್ಟಿದ್ದಾರೆ.

ಬೆಂಗಳೂರಿನ ಶ್ರೀಶಂಕರ ಹಾಸ್ಪಿಟಲ್‌ ಮತ್ತು ಕ್ಯಾನ್ಸರ್‌ ರಿಸರ್ಚ್‌ ಸೆಂಟರ್‌ನಲ್ಲಿ ಕೆಲವು ತಿಂಗಳ ಹಿಂದೆ ಚೆನ್ನೈನ ಚೆರಿಯನ್‌ ಫೌಂಡೇಶನ್‌ ಹಮ್ಮಿಕೊಂಡಿದ್ದ ವಿಗ್‌ ಡೊನೇಷನ್‌ ಕ್ಯಾಂಪ್‌ಗೆ ಶಾಲೆಯ ಇಂಟರ‍್ಯಾಕ್ಟ್‌ ಕ್ಲಬ್‌ ಪದಾಧಿಕಾರಿಗಳು ಭೇಟಿ ನೀಡಿದ್ದರು. ಈ ಕ್ಯಾಂಪ್‌ ತೆಲೆಗೂದಲು ದಾನ ಮಾಡಲು ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಯಿತು.

ADVERTISEMENT

ಕ್ಯಾಂಪ್‌ಗೆ ಹೋಗಿದ್ದ ಕೆಲವು ವಿದ್ಯಾರ್ಥಿನಿಯರು ತಲೆಗೂದಲು ದಾನ ಮಾಡುವ ನಿರ್ಧಾರ ತೆಗೆದುಕೊಂಡರು. ವಿದ್ಯಾರ್ಥಿನಿಯರು ನೀಡಿದ ಕೂದಲುಗಳಿಂದ ತಯಾರಿಸಿದ ವಿಗ್‌ಗಳು ಬಡ ಮಹಿಳಾ ಕ್ಯಾನ್ಸರ್‌ ರೋಗಿಗಳ ಬೊಕ್ಕತಲೆಯನ್ನು ಅಲಂಕರಿಸಿದವು.ಇದು ಇನ್ನುಳಿದ ವಿದ್ಯಾರ್ಥಿನಿಯರಿಗೂ ಪ್ರೇರಣೆ ನೀಡಿತು.

ಕ್ಯಾನ್ಸರ್‌ ರೋಗಿಗಳಿಗೆ ನೀಡುವ ಕೀಮೊಥೆರಪಿ ಚಿಕಿತ್ಸೆಯ ಬಲವಾದ ವಿಕಿರಣಗಳಿಂದ ಕೂದಲು ಉದುರಿ ತಲೆ ಬೊಕ್ಕವಾಗುತ್ತದೆ. ಬಡ ಮಹಿಳಾ ರೋಗಿಗಳಿಗೆ ವಿಗ್‌ ಖರೀದಿಸುವಷ್ಟು ಆರ್ಥಿಕ ಶಕ್ತಿ ಇರುವುದಿಲ್ಲ. ಅಂಥವರಿಗಾಗಿ ಚೆರಿಯನ್‌ ಪೌಂಡೇಶನ್‌ ಉಚಿತವಾಗಿ ವಿಗ್‌ ತಯಾರಿಸಿ ನೀಡುತ್ತದೆ.

ಬಾಲಕಿಯರು ಮತ್ತು ಯುವತಿಯರ ತಲೆಗೂದಲನ್ನು ಮಾತ್ರ ವಿಗ್‌ ತಯಾರಿಕೆಗೆ ಬಳಸುತ್ತಾರೆ. ರಾಸಾಯನಿಕಗಳಿಂದ ಸಂಸ್ಕರಿಸಿದ ಮತ್ತು ಹೇರ್‌ ಡೈ ಬಳಸುವ ಕೂದಲನ್ನು ಚೆರಿಯನ್‌ ಫೌಂಡೇಶನ್‌ ಸ್ವೀಕರಿಸುವುದಿಲ್ಲ. ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿ ಸ್ನೇಹಾ ರಾಮ್‌ ಅವರುಅಂಚೆಯಲ್ಲಿ ಚೆನ್ನೈಗೆ ಕೂದಲು ಕಳಿಸಿದ್ದಾರೆ ಎಂದು ಇಂಟರ‍್ಯಾಕ್ಟ್‌ ಕ್ಲಬ್‌ ಸಂಯೋಜಕಿ ಅಲ್ಫೋನ್ಸಾ ಮಹೇಶ್‌ ‘ಮೆಟ್ರೊ’ಗೆ ತಿಳಿಸಿದರು.

ವಿದ್ಯಾರ್ಥಿನಿಯರ ಮೇಲ್ಪಂಕ್ತಿ

ಸೋಫಿಯಾ ಶಾಲೆಯ ವಿದ್ಯಾರ್ಥಿನಿಯರಾದ ವೈಶಾಲಿ, ಊರ್ವಿ, ನಿಧಿ, ಮೇದಿನಿ ಕೂದಲು ನೀಡಿ ಇತರರಿಗೂ ಮೇಲ್ಪಂಕ್ತಿ ಹಾಕಿದ್ದಾರೆ. ಇಲ್ಲಿ ಸ್ವತಃ ಶಿಕ್ಷಕಿಯರೇ ವಿದ್ಯಾರ್ಥಿನಿಯರನ್ನೇ ಅನುಸರಿಸಿದ್ದಾರೆ.

12ನೇ ತರಗತಿಯ ವಿದ್ಯಾರ್ಥಿನಿ ವೈಶಾಲಿ ರಣಬೀರ್‌ ರಾಠಿ ಎರಡು ತಿಂಗಳ ಹಿಂದೆ ಈ ಮಹತ್ವದ ಉದ್ದೇಶಕ್ಕಾಗಿಇಡೀ ಮುಡಿಯನ್ನೇ ನೀಡಿದ್ದಾಳೆ. ‘8 ಇಂಚು ಕೂದಲು ನೀಡಿದ ಬಳಿಕ ನನ್ನ ಸಂಪೂರ್ಣ ತಲೆ ಬೋಳಾಗಿದೆ. ಆದರೆ, ಈ ಕೆಲಸ ನನ್ನನ್ನು ಹೆಮ್ಮೆಯಿಂದ ತಲೆ ಎತ್ತಿ ತಿರುಗುವಂತೆ ಮಾಡಿದೆ.ಮಾನವೀಯತೆಯ ಈ ಪಯಣ ನನ್ನ ಒಳಗಣ್ಣು ತೆರೆಸಿದೆ. ಧನ್ಯತಾ ಭಾವ ಮೂಡಿದೆ’ ಎಂದು ವೈಶಾಲಿ ಅನುಭವ ಹಂಚಿಕೊಂಡಿದ್ದಾಳೆ.

ಇಂಥದೊಂದು ಕೆಲಸಕ್ಕೆ ಪ್ರೇರಣೆ ನೀಡಿದ ಶಾಲೆಯ ಪ್ರಾಚಾರ್ಯೆ ಸಿಸ್ಟರ್‌ ಅಲ್ಪನಾ, ಇಂಟರ‍್ಯಾಕ್ಟ್‌ ಕ್ಲಬ್‌ ಸಂಯೋಜಕಿ ಅಲ್ಫೋನ್ಸಾ ಮಹೇಶ್‌ ಮತ್ತು ಪದಾಧಿಕಾರಿಗಳಾದ ಪೃಥ್ವಿ ಶಾಸ್ತ್ರಿ, ಅನಿತಾ ಸಲ್ಡಾನಾ ಮತ್ತು ಸ್ನೇಹಾ ರಾಮ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾಳೆ.

ವಿದ್ಯಾರ್ಥಿಗಳು ಮಾದರಿ

ನಮ್ಮ ಶಾಲೆಗೆ ಬಂದಿದ್ದ ಚೆರಿಯನ್‌ ಪೌಂಡೇಶನ್‌ನಿಂದ ಈ ವಿಷಯ ನನಗೆ ತಿಳಿಯಿತು. ಇದೊಂದು ಒಳ್ಳೆಯ ಕೆಲಸ ಎಂದು ಅನಿಸಿತು. ಮಹತ್ವದ ಕಾರ್ಯಕ್ಕೆ ನನ್ನದೊಂದು ಚಿಕ್ಕ ಕಾಣಿಕೆ ಇರಲಿ ಎಂದು ಅಂದೇ ನಿರ್ಧರಿಸಿದೆ. ಸಹಜವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾದರಿಯಾಗಿರುತ್ತಾರೆ. ಆದರೆ, ನನಗೆ ನನ್ನ ವಿದ್ಯಾರ್ಥಿನಿಯರಾದ ವೈಶಾಲಿ, ಊರ್ವಿ, ನಿಧಿ, ಮೇದಿನಿ ಮತ್ತು ಇತರರು ಮಾದರಿಯಾಗಿದ್ದಾರೆ ಎನ್ನುತ್ತಾರೆಶಿಕ್ಷಕಿ ಸ್ನೇಹಾ ರಾಮ್‌.

ನಗು ಅರಳಿಸಿದ ಕೆಲಸ

ಮಹಿಳೆಯರ ಜೀವನದಲ್ಲಿ ಕೂದಲಿಗೆ ಎಷ್ಟು ಮಹತ್ವ ಎಂಬುವುದು ಹೆಣ್ಣಾಗಿರುವ ನನಗೆ ಚೆನ್ನಾಗಿ ಗೊತ್ತು. ವಿಗ್‌ ಧರಿಸಿದ ಕ್ಯಾನ್ಸರ್‌ ಪೀಡಿತ ಮಹಿಳೆಯರ ಮೊಗದಲ್ಲಿ ಅರಳಿದ ನಗು ಮತ್ತು ಧನ್ಯತಾ ಭಾವ ಚಿರಕಾಲ ನೆನಪಿನಲ್ಲಿ ಉಳಿಯುವಂತಹದ್ದು. ನನ್ನ ಕೂದಲು ಬಗ್ಗೆ ತುಂಬಾ ಹೆಮ್ಮೆ ಮತ್ತು ಕಾಳಜಿ ಇತ್ತು. ಕ್ಯಾನ್ಸರ್‌ ಪೀಡಿತ ರೋಗಿಗಳ ಮೊಗದಲ್ಲಿ ನಗು ಅರಳಿಸಿದ ನನ್ನ ಕೂದಲು ಬಗ್ಗೆ ಮತ್ತಷ್ಟು ಹೆಮ್ಮೆ ಎನಿಸುತ್ತಿದೆ. ನಮ್ಮಒಂದು ಪುಟ್ಟ ತ್ಯಾಗ ಮತ್ತೊಬ್ಬರ ಬದುಕನ್ನು ಹೇಗೆ ಬೆಳಗಬಲ್ಲದು ಎಂಬ ಅರಿವು ಮೂಡಿದೆ. ನನ್ನಲ್ಲಿಯ ಈ ಬದಲಾವಣೆಯ ಬಗ್ಗೆ ಪೋಷಕರು ಮತ್ತು ಸ್ನೇಹಿತರು ಹೆಮ್ಮೆ ಪಡುತ್ತಿದ್ದಾರೆ ಎನ್ನುತ್ತಾರೆ 8ನೇ ತರಗತಿ ವಿದ್ಯಾರ್ಥಿನಿ ನಿಧಿ.

ಮನಸ್ಸು ಮರುಗಿದೆ

‘ಗಿಫ್ಟ್‌ ಹೇರ್‌, ಗಿಫ್ಟ್‌ ಕಾನ್ಫಿಡೆನ್ಸ್‌’ ಅಭಿಯಾನದ ಅಡಿ ಚೆರಿಯನ್‌ ಫೌಂಡೇಶನ್‌ಗೆ 18 ಇಂಚು ಕೂದಲು ನೀಡಿದ್ದೇನೆ. ಬಡ ರೋಗಿಗಳ ಕಷ್ಟ ಕಂಡು ಮನಸ್ಸು ಮರಗಿದೆ. ಇದು ನನ್ನ ಕಣ್ಣು ತೆರೆಸಿದೆ. ಸಣ್ಣದೊಂದು ಕೆಲಸ ಎಂಥ ದೊಡ್ಡ ಬದಲಾವಣೆ ತರಬಲ್ಲದು ಅಲ್ಲವೇ? ಎಂದವರು 10 ನೇ ತರಗತಿ ವಿದ್ಯಾರ್ಥಿನಿ ಊರ್ವಿರಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.