ADVERTISEMENT

ಆರ್ಡರ್‌ ಮಾಡಿ ಹೋಳಿಗೆ ತಿನ್ನಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 20:00 IST
Last Updated 5 ಏಪ್ರಿಲ್ 2019, 20:00 IST
ಭಾಸ್ಕರ್ಸ್ ಮನೆ ಹೋಳಿಗೆ
ಭಾಸ್ಕರ್ಸ್ ಮನೆ ಹೋಳಿಗೆ   

ಬಾಗಿಲಿಗೆ ತೋರಣ ಕಟ್ಟಿ, ಹೊಸಿಲಿಗೆ ರಂಗೋಲಿ ಹಾಕಿ, ದೇವರಿಗೆ ಹೂವಿಟ್ಟು ಪೂಜೆ ಮಾಡುವ ನಗರದ ಜನರು ಯುಗಾದಿ ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿಯೇ ಹೋಳಿಗೆ ತಯಾರಿಸಲು ಮಾತ್ರ ಒಲ್ಲೆ ಅನ್ನುತ್ತಾರೆ.

ಹೋಳಿಗೆ ಮಾಡಿದರೆ ಇಡೀ ದಿನ ಅದೇ ಕೆಲಸ ಹಿಡಿಯುತ್ತದೆ, ಸಾಂಬಾರ್ ಮಾಡಬೇಕು, ರಾಶಿ ಪಾತ್ರೆಗಳನ್ನು ತೊಳೆಯಬೇಕು. ಒಂದು ರೀತಿ ಸರ್ಕಸ್‌ ಆಗಿಬಿಡುತ್ತದೆ ಎಂಬ ಅಭಿಪ್ರಾಯವೇ ಹೆಚ್ಚಿದೆ. ಆದ್ದರಿಂದಲೇ ಹತ್ತಾರು ವರ್ಷದಿಂದ ನಗರದಲ್ಲಿ ಹೋಳಿಗೆ ಬ್ಯುಸಿನೆಸ್‌ ತಲೆ ಎತ್ತಿದೆ.

ಗಲ್ಲಿಗಲ್ಲಿಗೊಂದು ಹೋಳಿಗೆ ಅಂಗಡಿಗಳು ನಗರದಲ್ಲಿ ಸಿಗುತ್ತವೆ. ಬಸವನಗುಡಿಯಲ್ಲಿ, ನೂರಾರು ಹೋಳಿಗೆ ಮನೆಗಳಿವೆ.

ADVERTISEMENT

ಮನೆ ಹೋಳಿಗೆ:ಗಾಂಧಿ ಬಜಾರ್‌ನಲ್ಲಿ ‘ಭಾಸ್ಕರ್ಸ್‌ ಮನೆ ಹೋಳಿಗೆ’ ಅಂಗಡಿ ಇದೆ. ಮಲ್ಲೇಶ್ವರ ಸೇರಿದಂತೆ ಹಲವು ಕಡೆ ಇದರ ಬ್ರಾಂಚ್‌ಗಳಿವೆ. ಇಲ್ಲಿ ಆಯಾ ಕಾಲದ ಹಣ್ಣುಗಳ ಹೋಳಿಗೆಗಳನ್ನು ತಯಾರಿಸುತ್ತಾರೆ. ಮಾವಿನ ಹಣ್ಣು, ಹಲಸಿನ ಹಣ್ಣು, ಗೋಡಂಬಿ–ದ್ರಾಕ್ಷಿ, ಅನಾನಸ್‌, ಬಾದಾಮಿ ಹಣ್ಣಿನ ಹೋಳಿಗೆ ಇತ್ಯಾದಿ.

‘ನಮ್ಮಲ್ಲಿ ಹಣ್ಣಿನ ಹೋಳಿಗೆಗಳಿಗೆ ಬೇಡಿಕೆ ಇದೆ. ಆದರೆ ಹಬ್ಬದ ಸಂದರ್ಭದಲ್ಲಿ ಮಾತ್ರ ಇವುಗಳನ್ನು ಕೊಂಡುಕೊಳ್ಳುವುದು ತುಂಬಾ ಕಡಿಮೆ. ಈ ಸಂದರ್ಭದಲ್ಲಿ ಬೇಳೆ ಹೋಳಿಗೆಗೆ ಹೆಚ್ಚು ಬೇಡಿಕೆ ಇರುತ್ತದೆ. ಅಂಗಡಿಗೆ ಬಂದು ತಿನ್ನುವವರು ಕಡಿಮೆ. ಮನೆಗೆ ತೆಗೆದುಕೊಂಡು ಹೋಗಲು ಮೊದಲೇ ಆರ್ಡರ್‌ ಮಾಡುತ್ತಾರೆ’ ಎನ್ನುತ್ತಾರೆ ಮಾಲೀಕ ಭಾಸ್ಕರ್‌.

ಅನ್ನಪೂರ್ಣೇಶ್ವರಿ ಹೋಳಿಗೆ ಮನೆ: ಶ್ರೀನಗರದ ರಾಮಾಂಜನೇಯ ಗುಡ್ಡ ರಸ್ತೆಯಲ್ಲಿ ಅನ್ನಪೂರ್ಣೇಶ್ವರಿ ಹೋಳಿಗೆ ಮನೆ ಇದೆ. ಬಸವನಗುಡಿಯಲ್ಲಿ ಇದು ಹೆಸರುವಾಸಿ.

‘ನಮ್ಮಲ್ಲಿ ಹಬ್ಬದ ಸಂದರ್ಭದಲ್ಲಿ 35 ಸಾವಿರಕ್ಕಿಂತಲೂ ಹೆಚ್ಚು ಹೋಳಿಗೆಗಳು ಮಾರಾಟವಾಗುತ್ತವೆ. ಹೆಚ್ಚು ಆರ್ಡರ್‌ ಸಿಗುತ್ತದೆ. ಆದರೆ ಈ ವೇಳೆ ಹಬ್ಬವನ್ನು ಬಿಟ್ಟು 24 ಗಂಟೆ ಕೆಲಸ ಮಾಡುವವರು ಸಿಗುವುದಿಲ್ಲ. ನಮ್ಮ ಕೈಲಿ ಆದಷ್ಟು ಆರ್ಡರ್‌ ತೆಗೆದುಕೊಂಡು ಮುಗಿಸುತ್ತೇವೆ. ಈ ವೇಳೆ ದೊಡ್ಡ ಆರ್ಡರ್‌ ಕಡಿಮೆ ಮಾಡುತ್ತೇವೆ. ಮನೆಗೆ ತೆಗೆದುಕೊಂಡು ಹೋಗಿ ತಿನ್ನುವವರಿಗೆ ಪ್ರಾಮುಖ್ಯತೆ ಕೊಡುತ್ತೇವೆ. 500, 1000ಕ್ಕಿಂತ ಹೆಚ್ಚು ಹೋಳಿಗೆ ಕೇಳೋರಿಗೆಲ್ಲಾ ಪೂರೈಸುವುದು ಕಷ್ಟ’ ಎನ್ನುತ್ತಾರೆ ಅಂಗಡಿ ಕೆಲಸಗಾರ ಜಯರಾಮ್‌.

ಮಾರುತಿ ಸರ್ಕಲ್‌ನಿಂದ ಸ್ವಲ್ಪ ಮುಂದೆ ಹೋದರೆ ಬಿಎಸ್‌ವಿ ಕಾಂಡಿಮೆಂಟ್ಸ್ ಇದೆ. ಇಲ್ಲಿಯೂ ಹಬ್ಬಕ್ಕಾಗಿ ರುಚಿಕರ ಹೋಳಿಗೆ ತಯಾರಿಸಿ ಕೊಡುತ್ತಾರೆ.

ಕುರುಕುಲು ತಿಂಡಿಗಳಿಗೂ ಬೇಡಿಕೆ: ಹೋಳಿಗೆ ಕೊಳ್ಳಲು ಬಂದವರು ಕುರುಕುಲು ತಿಂಡಿಗಳನ್ನೂ ಕೊಳ್ಳುತ್ತಾರೆ.

ಸಿಹಿ ಜೊತೆ ಖಾರದ ಪದಾರ್ಥಗಳನ್ನೂ ಕೊಳ್ಳುತ್ತಾರೆ. ಬಹುತೇಕ ಎಲ್ಲಾ ಹೋಳಿಗೆ ಮನೆಗಳಲ್ಲಿ ಈಗ ಕುರುಕಲು ತಿಂಡಿಗಳೂ ಸಿಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.