ADVERTISEMENT

ಬೆಂಗಳೂರು ಬಿಟ್ಟು ಹೋಗಲ್ಲ, ಫೇಸ್‌ಬುಕ್‌‌ನಲ್ಲಿ 'ಐ ಲವ್‌ ಮೈ ಬೆಂಗಳೂರು' ಟ್ರೆಂಡ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 11:53 IST
Last Updated 9 ಜುಲೈ 2020, 11:53 IST
ಐ ಲವ್ ಬೆಂಗಳೂರು
ಐ ಲವ್ ಬೆಂಗಳೂರು   

ಬೆಂಗಳೂರಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಇನ್ನೊಂದು ಕಡೆ ಸಾವಿನ ಸಂಖ್ಯೆ ಭಯಹುಟ್ಟಿಸುತ್ತಿದೆ. ಇಂಥ ಹಲವು ಕಾರಣಗಳಿಂದಾಗಿ ಉದ್ಯೋಗ ಅರಸಿ ಈ ಮಹಾನಗರಕ್ಕೆ ಬಂದವರು ಗಂಟು–ಮೂಟೆ ಸಹಿತವಾಪಸ್ ತಮ್ಮ ತಮ್ಮೂರಿಗೆ ಹಿಂದಿರುತ್ತಿದ್ದಾರೆ. ಊರಿಗೆ ಹೋಗುವಾಗ ಕೆಲವರು ‘ಅಯ್ಯೋ..ಈ ಬೆಂಗಳೂರು ಸಹವಾಸ ಸಾಕಪ್ಪ‘ ಎಂದರೆ, ಕೆಲವರು, ‘ಈ ಮಾಯಾನಗರಿ ಕಡೆಗೆ ತಲೆ ಹಾಕೂ ಮಲಗಲ್ಲ‘ ಎನ್ನುತ್ತಿದ್ದಾರೆ. ಕೆಲವರು ನಗರದ ವ್ಯವಸ್ಥೆಯನ್ನೇ ದೂರುತ್ತಿದ್ದಾರೆ.

ಇಂಥ ಸಂದರ್ಭದಲ್ಲೂ ಅನೇಕರು‘ಐ ಲವ್‌ ಮೈ ಬೆಂಗಳೂರು‘, ನಾವು ಊರು ಬಿಟ್ಟು ಹೋಗಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ‘ಐ ಲವ್‌ ಮೈ ಬೆಂಗಳೂರು‘ ಹ್ಯಾಷ್‌ ಟ್ಯಾಗ್‌ನ ಜತೆಗೆ ನಾನೇಕೆ ಬೆಂಗಳೂರು ಪ್ರೀತಿಸುತ್ತೇನೆ ಎಂಬ ಒಕ್ಕಣೆಯನ್ನೂ ಪೋಸ್ಟ್‌ ಮಾಡುತ್ತಿದ್ದಾರೆ.

‘ಬೆಂಗಳೂರು ಬದುಕು ಕೊಟ್ಟಿದೆ. ವಿದ್ಯಾಭ್ಯಾಸ ಮುಗಿಸಿ, ಉಟ್ಟು ಬಟ್ಟೆಯಲ್ಲೇ ಬಸ್‌ ಹತ್ತಿ ಬಂದವರಿಗೆ ಉದ್ಯೋಗ ನೀಡಿ, ಅನ್ನ ಹಾಕಿದೆ. ಸೂರು ನೀಡಿದೆ.ಹಲವರ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸಿದೆ. ಇಷ್ಟೆಲ್ಲ ಕೊಟ್ಟಿರುವ ಬೆಂಗಳೂರನ್ನು ಕೊರೊನಾ ಬಂತು ಎನ್ನುವ ಕಾರಣಕ್ಕೆ ಬಿಟ್ಟು ಹೋಗುವುದಕ್ಕೆ ಮನಸ್ಸಿಲ್ಲ..ಎನ್ನುತ್ತಾ ತಮ್ಮ ಮನದ ಭಾವನೆಗಳನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿ, ಟ್ರೆಂಡ್‌ ಸೃಷ್ಟಿಸಿದೆ.

ADVERTISEMENT

‘ನಾಳೆ ಕೊರೊನಾ ವೈರಸ್‌ ಹೋದಾಗ ಮಿಲಿಯನ್‌ಗಟ್ಟಲೆ ಜನರು ಬೆಂಗಳೂರಿಗೆ ಬರಬಹುದು. ಈಗ ಊರು ಸೇರಿದವರಿಗೆ ಆಗ ಬೆಂಗಳೂರು ನಮ್ಮ ಊರು ಅನಿಸಿಕೊಳ್ಳುತ್ತದೆ. ಬೆಂಗಳೂರಿಗೆ ಬರಲು ಸಜ್ಜಾಗುತ್ತಾರೆ. ಆಗ ಅದು ವಾಪಸ್‌ ಅವರ ಕನಸಿನ ಸಿಟಿಯಾಗುತ್ತದೆ‘ ಎಂದು ಬೆಂಗಳೂರು ಬಿಟ್ಟು ಊರ ಹಾದಿ ಹಿಡಿದವರ ಬಗ್ಗೆ ಹೇಳಿದ್ದಾರೆ.

‘ಇವತ್ತು ನನ್ನ ಬೆಂಗಳೂರು ಗಾಯಗೊಂಡಿದೆ. ಅದಕ್ಕೆ ಚಿಕಿತ್ಸೆಯ ಅಗತ್ಯವಿದೆ. ಸೋಂಕುಗ್ರಸ್ತವಾಗಿದೆ. ನಿರಾಶೆಗೊಂಡಿದೆ. ಆದರೆ ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ನಾನು ನಿನ್ನೆಯೂ ಇಲ್ಲಿಯೇ ಇದ್ದೆ. ನಾಳೆಯೂ ಇಲ್ಲೇ ಇರುತ್ತೇನೆ. ಇದು ನನ್ನ ಬೆಂಗಳೂರು. ನನ್ನ ಕನಸುಗಳನ್ನು ನನಸಾಗಿಸಿದ ನಗರ. ನಾನು ನನ್ನ ಬೆಂಗಳೂರನ್ನು ಒಂಟಿಯಾಗಿಸುವುದಿಲ್ಲ. ನಾನು ಹೋರಾಡುತ್ತೇನೆ. ಅದಕ್ಕಾಗಿ ಕಷ್ಟಪಡುತ್ತೇನೆ. ಬೆಂಗಳೂರು ಎಂದರೆ ನನಗೆ ಬರೀ ಜನ್ಮ ನೀಡಿದ ಸ್ಥಳ ಅಥವಾ ಉದ್ಯೋಗ ಕಲ್ಪಿಸಿದ ಊರಲ್ಲ. ಅದು ನನ್ನೂರು. ಅದು ಮನಸ್ಸಿನ ಭಾವನೆ. ಪ್ರತಿ ಬೆಂಗಳೂರಿಗನ ಹೃದಯ ಬೆಂಗಳೂರಿಗಾಗಿ ಮಿಡಿಯುತ್ತಿದೆ. ಐ ಲವ್‌ ನಮ್ಮ ಬೆಂಗಳೂರು, ಐ ಲವ್‌ ಮೈ ಬೆಂಗಳೂರು’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿದೆ. ಈ ಪೋಸ್ಟ್‌ನ್ನು ಸಾವಿರಾರು ಜನರು ರಿಪೋಸ್ಟ್‌ ಮಾಡಿ, ಬೆಂಗಳೂರು ಜೊತೆಗಿನ ಸಂಬಂಧ, ನಂಟನ್ನು ಆಪ್ತವಾಗಿ ಹೇಳಿಕೊಂಡಿದ್ದಾರೆ.

‘ಬೆಂಗಳೂರೆಂದಾಗ ನನಗೆ ನೆನೆಪಾಗುವುದೇ ಮಳೆ. ನಾನು ಸಂಜೆ ಸರಿಯಾಗಿ ಇನ್ನೇನು ಕಚೇರಿಯಿಂದ ಹೊರಡಬೇಕು ಎನ್ನುವಾಗ ಮಳೆ ಶುರುವಾಗುತ್ತಿತ್ತು.ಕಚೇರಿಯ ಇತರರು ’ಮಳೆ ನಿಲ್ಲಲಿʼ ಎಂದು ಕಾಯುತ್ತಿದ್ದರೆ, ನಾನು ಮಾತ್ರ ಹೆಲ್ಮೆಟ್‌ ತೊಟ್ಟು, ಹಿತವಾದ ಹನಿಗಳಲ್ಲಿ ಒದ್ದೆಯಾಗುತ್ತಾ, ರೋಮಾಂಚನ ಅನುಭವಿಸುತ್ತಾ, ನನ್ನ ಫೇವರೇಟ್‌ ಹಾಡುಗಳ ಗುನುಗುತ್ತಾ ಬೈಕ್‌ನಲ್ಲಿ ರೂಮ್‌ ಕಡೆ ಹೊರಟುಬಿಡುತ್ತಿದ್ದೆ.ಬೆಂಗಳೂರು ಮತ್ತೆ ನನ್ನ ನಂಟು ಆರಂಭವಾಗಿದ್ದು, 2000ನೇ ಇಸವಿಯಲ್ಲಿ. ಆಗ ನಾನು ಜಿಕೆವಿಕೆಯ ಹಾಸ್ಟೆಲ್‌ನಲ್ಲಿದ್ದೆ. ಬೆಂಗಳೂರಿನ ಚುಮು ಚುಮು ಚಳಿ, ಮುಂಜಾನೆಯ ಮಂಜು, ಹಸಿರು ಚೆಲ್ಲುವ ಮರಗಳು, ಸಂಜೆಯಲ್ಲಿ ರಂಗಿನ ಹಬ್ಬ..ಮರೆಯುವಂತೆಯೇ ಇಲ್ಲ. ಸರ್ವ ಋತುಗಳಲ್ಲೂ ತುಂಬಾ ಹಿತವಾದ ವಾತಾವರಣವುಳ್ಳ ಪ್ರದೇಶವೆಂದರೆ ಅದು ನಮ್ಮ ಬೆಂಗಳೂರೇ ಇರಬೇಕು!! ಏನೇ ಬರಲಿ...ಬೆಂಗಳೂರು ಹಾಗೇ ಇರುತ್ತದೆ’ ಎಂದು ಬೆಂಗಳೂರು ಕುರಿತು ಮನದ ಭಾವನೆಯನ್ನು ಮಾಣಿಕ್ಯ ಸತೀಶ್‌ ಹಂಚಿಕೊಂಡಿದ್ದಾರೆ.

‘ನಾನು ಎಂ.ಎ ಮುಗಿಸಿದ ನಂತರ ಊರಲ್ಲಿಯೇ ಉದ್ಯೋಗಕ್ಕಾಗಿ ತುಂಬಾ ಅಲೆದಾಡಿದೆ. ನಮ್ಮ ಸಂಬಂಧಿಕರೊಬ್ಬರು ಬೆಂಗಳೂರಿಗೆ ಬಂದು ಉದ್ಯೋಗ ಹುಡುಕಲು ಸಲಹೆ ನೀಡಿದರು. ಇಲ್ಲಿ ಆರಂಭದಲ್ಲಿ ನನಗೆ ₹5,500 ಸಂಬಳದ ಕೆಲಸ ಸಿಕ್ಕಿತು. ಒಂದು ವರ್ಷದ ನಂತರ ಸಂಬಳ ಏರಿಕೆಯಾಯಿತು. ಸಣ್ಣಹಳ್ಳಿಯಿಂದ ಬಂದ ನಾನು ಈಗ ಯಾರನ್ನೂ ಅವಲಂಬಿಸದೇ ನನ್ನ ಕಾಲ ಮೇಲೆ ನಿಂತಿದ್ದೇನೆ. ತಂಗಿಯರನ್ನೂ ಓದಿಸಿದೆ. ಇದೆಲ್ಲ ಸಾಧ್ಯವಾಗಿದ್ದು ಬೆಂಗಳೂರಿಗೆ ಬಂದಿದ್ದರಿಂದಲೇ’ ಎಂದು ‘ಐ ಲವ್‌ ಮೈ ಬೆಂಗಳೂರು’ ಪೋಸ್ಟ್‌ ಹಂಚಿಕೊಂಡಿದ್ದಾರೆ ಯಶವಂತಪುರದ ಸುಚಿತ್ರಾ.

ಗುವಾಹಟಿಯ ಇಲ್ಮಾ ಅಮೀನ್‌ ಎಂಬವರು ‘ಬೆಂಗಳೂರು ನನ್ನ ಫಸ್ಟ್‌ ಲವ್‌. ಈಗ ಇಲ್ಲಿ ಕೆಲ ಸಮಸ್ಯೆಗಳಿರಬಹುದು. ಅನೇಕ ನಗರಗಳಲ್ಲಿ ಇಂತಹ ಸಮಸ್ಯೆ ತುಂಬಾ ವರ್ಷಗಳಿಂದ ಇದೆ. ಯಾರಿಗಾದರೂ ಆರಾಮ ಇಲ್ಲದಿದ್ದಾಗ ಊರಿಗೆಹೋಗಬೇಕು. ತಮ್ಮ ಗೂಡಿನ ನೆನಪಾಗುತ್ತದೆ. ಹಾಗಂತ ಬೆಂಗಳೂರಿನ ಬಗ್ಗೆ ನಮ್ಮ ಭಾವನೆ ಬದಲಾಗಿದೆ ಎಂದರ್ಥವಲ್ಲ. ಬಾಡಿಗೆ ಮನೆಯಲ್ಲಿದ್ದ ವಿದ್ಯಾರ್ಥಿಗಳು, ಕೆಲಸ ಕಳೆದುಕೊಂಡ ಕುಟುಂಬದವರಿಗೆ ಇಲ್ಲಿ ಜೀವನ ಸಾಗಿಸುವುದು ಕಷ್ಟವಾಗಿದೆ. ಇನ್ನು ನಾನು ಸರ್ಜರಿಗೆ ಊರಿಗೆ ಬಂದು ಇಲ್ಲೇ ಸಿಕ್ಕಿ ಹಾಕಿಕೊಂಡಿದ್ದೇನೆ. ನಮ್ಮಂಥವರ ಭಾವನೆಯನ್ನು ತಪ್ಪು ತಿಳಿಯಬಾರದು. ನಮಗೂ ಬೆಂಗಳೂರು ಇಷ್ಟ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೆಲವರು ‘ಇಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಊರಿಗೆ ಹೋಗಿ ಸೋಂಕು ಹಬ್ಬಿಸಬೇಡಿ. ಬೆಂಗಳೂರಿನ ಮನೆಯಲ್ಲಿಯೇ ಸುರಕ್ಷಿತವಾಗಿರಿ’ ಎಂದು ಪ್ರತಿಕ್ರಿಯೆ ಹಾಕಿದ್ದಾರೆ.

‘ಬೆಂಗಳೂರಿನ ಸಾಹಸ ಮನೋಭಾವ, ದೊಡ್ಡ ದೊಡ್ಡ ಕಟ್ಟಡಗಳು, ಅವುಗಳ ಆರ್ಕಿಟೆಕ್ಚರ್‌, ಮಾಲ್‌ ಸಂಸ್ಕೃತಿ, ನೈಟ್‌ಲೈಫ್‌ ಎಲ್ಲವೂ ಇಷ್ಟ. ಈಗ ಬೆಂಗಳೂರು ಬಿಟ್ಟು ಹೋಗುವ ಮಾತೇ ಇಲ್ಲ’ ಎಂದೂ ಅನೇಕರು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.