ADVERTISEMENT

ವಿವೇಚನೆಯ ಮದ್ದು ಮತ್ತು ಮಡದಿಯ ಮಡಿಲ ಮುದ್ದು

ಸೆಲೆಬ್ರಿಟಿ ಅ–ಟೆನ್ಷನ್

ಪ್ರಜಾವಾಣಿ ವಿಶೇಷ
Published 19 ಜೂನ್ 2018, 17:36 IST
Last Updated 19 ಜೂನ್ 2018, 17:36 IST
   

ನಾವು ಯಾವ ಕೆಲಸವನ್ನು ಒಪ್ಪಿಕೊಂಡಿರುತ್ತೇವೆಯೋ, ಯಾವ ಕೆಲಸವನ್ನು ಮಾಡಿ ಮುಗಿಸಬೇಕಾಗಿರುತ್ತದೆಯೋ ಆ ಕೆಲಸ ಆಯಾ ಸಮಯಕ್ಕೆ ಆಗದೇ ಇದ್ದಾಗ ನಮಗೆ ಒತ್ತಡ ಉಂಟಾಗುತ್ತದೆ. ಮನಸ್ಸು ಟೆನ್ಶನ್‌ನಿಂದ ಬಳಲುತ್ತದೆ.

ನಾನು ಸಿನಿಮಾ ನಿರ್ದೇಶಕ. ವಿವಿಧ ಗುಣಸ್ವಭಾವಗಳ ಮನುಷ್ಯರ ಜೊತೆ ಕೆಲಸ ಮಾಡುತ್ತಿರುತ್ತೇನೆ. ಬೇರೆ ಕಡೆ ಯಾಂತ್ರಿಕವಾಗಿರುತ್ತದೆ. ಅಲ್ಲಿ ಅಷ್ಟೊಂದು ಭಾವನಾತ್ಮಕ ಸಂಬಂಧ ಇರುವುದಿಲ್ಲ. ಬೇಕು ಅಂದಾಗ ಹೋಗಿ ಪಂಚ್ ಇನ್ ಮಾಡಿದರೆ ಪಂಚ್ ಔಟ್ ಆಗುತ್ತದಷ್ಟೆ. ಆದರೆ ನನ್ನ ಕೆಲಸ ಆ ರೀತಿಯಲ್ಲ. ಮನುಷ್ಯಸಂಬಂಧಗಳ ಕುರಿತಾಗಿಯೇ ಕೆಲಸ ಮಾಡಬೇಕಾಗುತ್ತದೆ.

ಮನುಷ್ಯನ ವರ್ತನೆ ಒಂದು ದಿನ ಇದ್ದ ಹಾಗೆ ಇನ್ನೊಂದು ದಿನ ಇರುವುದಿಲ್ಲ. ಅಂಥ ಸಮಯಗಳಲ್ಲಿ ‘ಮ್ಯಾನ್ ಮ್ಯಾನೇಜ್‌ಮೆಂಟ್‌’ ಅನ್ನು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತೇವೆ ಎನ್ನುವುದು ತುಂಬ ಮುಖ್ಯ. ಸಮಯವನ್ನು ನಿರ್ವಹಣೆಯೂ ಅಷ್ಟೇ ಮುಖ್ಯ. ಇವೆರಡನ್ನೂ ನಿಭಾಯಿಸಿಕೊಂಡು ಒಳ್ಳೆಯ ಫಲಿತಾಂಶವನ್ನು ಪಡೆಯುತ್ತೇವೆ ಎನ್ನುವುದರ ಮೇಲೆ ನಮ್ಮ ಯಶಸ್ಸು ನಿರ್ಧರಿತವಾಗುತ್ತದೆ. ನಿರ್ದೇಶಕನ ಜಾಣ್ಮೆ ಇರುವುದೇ ಈ ನಿರ್ವಹಣೆಯಲ್ಲಿ. ಇಲ್ಲದಿದ್ದರೆ ಕೆಲಸ ಹಿಂದಕ್ಕೆ ಬಿದ್ದು ಮತ್ತೆ ಒತ್ತಡಕ್ಕೆ ಒಳಗಾಗುತ್ತೇವೆ. ಇಂಥ ಸಮಯದಲ್ಲಿ ಹತಾಶರಾದರೆ ಇನ್ನೂ ಅಪಾಯ.

ADVERTISEMENT

ರಂಗಭೂಮಿ ನನಗೆ ಕಲಿಸಿಕೊಟ್ಟ ಪಾಠ ಏನೆಂದರೆ ಸಾಂಘಿಕ ಕೆಲಸ ತುಂಬ ಮಹತ್ವವಾದದ್ದು ಎನ್ನುವುದು. ಇಲ್ಲಿ ಸಂಘದ ಪ್ರತಿಯೊಬ್ಬ ವ್ಯಕ್ತಿಯೂ ಬಹಳ ಮುಖ್ಯ. ಹಾಗಾಗಿ ನಾಯಕನಿಗೆ ಎಲ್ಲರ ಮಾತನ್ನೂ ಕೇಳಿಸಿಕೊಳ್ಳುವ ಕಿವಿ ಇರಬೇಕು. ಸ್ವಂತ ಯೋಚಿಸುವಷ್ಟು ವ್ಯವಧಾನ ಇರಬೇಕು. ಹಾಗಿದ್ದಾಗ ಒಬ್ಬ ನಾಯಕ ಅಥವಾ ಮುಂದಾಳು ಇಡೀ ತಂಡವನ್ನು ಒಂದು ಗುರಿಯತ್ತ ಕರೆದೊಯ್ಯಲು ಸಾಧ್ಯವಾಗುತ್ತದೆ. ಇದನ್ನೇ ನಾನು ನಂಬಿದ್ದೇನೆ ಮತ್ತು ಅನುಸರಿಸಿಕೊಂಡು ಬಂದಿದ್ದೇನೆ.

ಕೆಲವು ಒತ್ತಡಗಳನ್ನು ತಕ್ಷಣವೇ ನಿಭಾಯಿಸಬೇಕಾಗುತ್ತದೆ. ಇನ್ನು ಕೆಲವನ್ನು ಕಾಲವೇ ನಿವಾರಿಸುತ್ತದೆ. ತಂತಾನೆಯೇ ಸರಿಹೋಗಬಹುದಾದ ಸಂಗತಿಗಳನ್ನು ನಾವೇ ನಿಯಂತ್ರಿಸಹೊರಟರೆ ಇನ್ನೇನೋ ಆಗಿ ಒತ್ತಡ ಮತ್ತಷ್ಟು ಹೆಚ್ಚಬಹುದು. ತಕ್ಷಣದ ಪ್ರತಿಕ್ರಿಯೆ ಬಯಸುವ ಒತ್ತಡಗಳು ಮತ್ತು ಸ್ವಲ್ಪ ಕಾಲದ ನಂತರ ಸರಿಯಾಗಬಹುದಾದ ಒತ್ತಡಗಳು ಎಂದು ವಿಭಾಗಿಸಿಕೊಳ್ಳುವುದನ್ನು ಕಲಿತುಕೊಳ್ಳಬೇಕು. ಸ್ವಲ್ಪ ಸಮಯ ಕೊಡಬಹುದು ಎನ್ನುವಂಥ ಒತ್ತಡಗಳನ್ನು ಕೊಂಚ ಕಾಲ ಹಾಗೆಯೇ ಬಿಡುತ್ತೇನೆ. ಹೀಗೆ ಸಮಯ ಕೊಟ್ಟಾಗ ಎಷ್ಟೋ ಸಲ ಅದಕ್ಕೆ ಬೇಕಾದ ಪರಿಹಾರವನ್ನು ಅದೇ ಹುಡುಕಿಕೊಂಡಿರುತ್ತದೆ, ಇಲ್ಲವೇ ನಾವೇ ಸರಿಯಾಗಿ ಯೋಚಿಸಿ ಹುಡುಕಬಹುದು.

ತಕ್ಷಣದ ಒತ್ತಡಗಳನ್ನು ನಿರ್ವಹಿಸುವಾಗ ಮಾತ್ರ ನಾವು ಜಾಗರೂಕರಾಗಿರಬೇಕು. ಸಾಕಷ್ಟು ವಿವೇಚನೆ ಬಳಸಿ, ಅದರ ಹಿಂದುಮುಂದುಗಳನ್ನು ಯೋಚಿಸಿ ಸಾಧ್ಯವಾದಷ್ಟೂ ಸಮರ್ಥವಾದ ಪರಿಹಾರ ಕಂಡುಕೊಳ್ಳಬೇಕು. ನಮ್ಮ ಒತ್ತಡಕ್ಕೆ ಕಾರಣವಾದ ವ್ಯಕ್ತಿ, ವಿಷಯ ಮತ್ತು ಸನ್ನಿವೇಶದಲ್ಲಿ ಈ ಒತ್ತಡ ಉಂಟಾಗಿದೆ – ಎನ್ನುವುದನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಬೇಕು.

ಇಷ್ಟೆಲ್ಲ ಎಚ್ಚರಿಕೆಯಿಂದ ಇದ್ದರೂ ಕೆಲವು ಸಲ ಮನಸ್ಸು ದಣಿಯುತ್ತದೆ. ಆಗೆಲ್ಲ ನಾನು ಕಣ್ಣುಮುಚ್ಚಿಕೊಂಡು ಸಂಗೀತ ಕೇಳುತ್ತೇನೆ. ಇಲ್ಲವೇ ಬಹಳ ಆತ್ಮೀಯವಾದಂಥ ಪುಸ್ತಕಗಳನ್ನು ಓದುತ್ತೇನೆ. ಅದ್ಯಾವುದರಿಂದಲೂ ಸಮಾಧಾನ ಸಿಗಲಿಲ್ಲ ಎಂದಾಗ ಸುಮ್ಮನೇ ಹೋಗಿ ನನ್ನ ಹೆಂಡತಿ ತೊಡೆಯ ಮೇಲೆ ತಲೆಯಿಟ್ಟು ಮಲಗಿಬಿಡುತ್ತೇನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.